ನಮ್ಮದೇನಿದ್ದರೂ ಇಂದು ಧಾವಂತದ ಬದುಕು. ಎಲ್ಲವೂ ಫಟಾಫಟ್ ಆಗಬೇಕು. ತೂಕವೂ ಫಟಾಫಟ್ ಇಳಿಯಬೇಕು. ಆದರೆ, ತೂಕ ಇಳಿಕೆ ಎಂಬುದು ನಿಧಾನವಾಗಿ ಆಗಬೇಕಾದ ಕ್ರಿಯೆ. ಆರೋಗ್ಯಕರವಾಗಿ ನೀವು ತೂಕ ಇಳಿಸುತ್ತೀರಿ ಎಂದಾದಲ್ಲಿ, ಖಂಡಿತವಾಗಿಯೂ ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಆದರೆ, ಕಚೇರಿಯ ಒತ್ತಡ, ನೂರಾರು ಜವಾಬ್ದಾರಿಗಳಲ್ಲಿ, ಕೆಲಸಗಳಲ್ಲಿ, ಆರೋಗ್ಯಕರ ಶೈಲಿ ಸಾಧ್ಯವಾಗುವುದು ಕಡಿಮೆಯೇ. ಆದರೆ, ಕೆಲವು ಸರಳ ಅಭ್ಯಾಸಗಳನ್ನು ನಿತ್ಯ ಜೀವನದಲ್ಲಿ, ಕಚೇರಿಯ ಕೆಲಸಗಳ ಒತ್ತಡದ ಮಧ್ಯೆಯೂ ಅಳವಡಿಸಿಕೊಳ್ಳುವ ಮೂಲಕ ನಮ್ಮ ಆರೋಗ್ಯವನ್ನು ಫಿಟ್‌ನೆಸ್ಸನ್ನು ಕಾಫಾಡಿಕೊಳ್ಳಬಹುದು. ತೂಕ ಹೆಚ್ಚಾಗದಂತೆ ಕಾಪಾಡಿಕೊಳ್ಳುತ್ತಾ, ನಿತ್ಯವೂ ಒಂದಷ್ಟು ನಿಯಮಿತ ಯೋಗಾಭ್ಯಾಸವೋ, ನಡಿಗೆ, ಸೈಕ್ಲಿಂಗ್, ವ್ಯಾಯಾಮಗಳಂತಹುಗಳನ್ನು ರೂಢಿ ಮಾಡಿಕೊಳ್ಳುವುದರಿಂದ ಈ ಬಗ್ಗೆ ಶಿಸ್ತಿನಿಂದಿರುವುದನ್ನು ಅಭ್ಯಾಸ ಮಾಡಿಕೊಂಡರೆ, ಖಂಡಿತವಾಗಿಯೂ ಆರೋಗ್ಯ ವೃದ್ಧಿಸುತ್ತದೆ. ಶಕ್ತಿ ಸಾಮರ್ಥ್ಯವೂ ಕೂಡಾ. ಬನ್ನಿ ಕಚೇರಿ ಕೆಲಸದ ಮಧ್ಯೆಯೂ ತೂಕ ಇಳಿಸುವ ಪ್ರಿಕ್ರಿಯೆಯನ್ನು ಹೇಗೆ ಜಾರಿಯಲ್ಲಿಟ್ಟುಕೊಳ್ಳಬಹುದು (Weight loss tips) ಎಂಬುದನ್ನು ನೋಡೋಣ.
ಹೆಚ್ಚು ನೀರು ಕುಡಿಯಿರಿ
ಕಚೇರಿಯಲ್ಲಿ ಕೆಲಸ ಮಾಡುವ ಸಂದರ್ಭ ಪಕ್ಕದಲ್ಲೊಂದು ನೀರಿನ ಬಾಟಲಿ ಇಟ್ಟಿರಿ. ಸದಾ ಅಗತ್ಯ ಬಿದ್ದಾಗ ನೀರು ಕುಡಿಯುತ್ತಿರಿ. ತೂಕ ಇಳಿಸುವಲ್ಲಿ ನೀವು ನೀರು ಕುಡಿಯುವುದು ಅತ್ಯಂತ ಮುಖ್ಯ ಎಂಬುದು ನೆನಪಿನಲ್ಲಿದ್ದರೆ ಸಾಕು. ನೀರು ಕುಡಿಯುವುದರಿಂದ ದೇಹದಲ್ಲಿ ಸದಾ ತೇವಾಂಶವಿದ್ದು, ದೇಹದ ಕಶ್ಮಲಗಳು ಆಗಾಗ ಹೊರತಳ್ಳಲ್ಪಡುತ್ತದೆ. ಜೀರ್ಣಕ್ರಿಯೆ ಸುಧಾರಿಸುತ್ತದೆ. ಆಗಾಗ ತಿನ್ನಬೇಕೆಂಬ ತುಡಿತ ಕಡಿಮೆಯಾಗುತ್ತದೆ. ಅಗತ್ಯವಿದ್ದಷ್ಟೇ ಆಹಾರ ಸೇವನೆಯನ್ನು ದೇಹ ತೆಗೆದುಕೊಳ್ಳುತ್ತದೆ.
ಆರೋಗ್ಯಕರ ಸ್ನ್ಯಾಕ್ಸ್ ಮನೆಯಿಂದಲೇ ತೆಗೆದುಕೊಂಡು ಹೋಗಿ
ಕಚೇರಿಗೆ ಹೋದರೆ, ಅಲ್ಲಿನ ವಾತಾವರಣದಿಂದಾಗಿ, ಗೆಳೆಯರ ಜೊತೆ ಆಗಾಗ ಸ್ನ್ಯಾಕ್ಸ್‌ಗಾಗಿ, ಚಹಾ ಕಾಫಿಗಾಗಿ ಹೊರಗಡೆ ಹೋಗುವುದು ಸಾಮಾನ್ಯ. ಗೆಳೆಯರ ಗುಂಪಿಗೆ ನೋ ಹೇಳುವುದು ಕಷ್ಟ ನಿಜವೇ. ಆದರೆ, ಮನೆಯಿಂದ ಆರೋಗ್ಯಕರ ಆಹಾರ ತೆಗೆದುಕೊಂಡು ಹೋಗುವುದನ್ನು ರೂಢಿ ಮಾಡಿಕೊಂಡರೆ, ಇಂಥ ಅಭ್ಯಾಸ ತಪ್ಪುತ್ತದೆ. ಸಂಜೆಯ ಹೊತ್ತು ವೃಥಾ ಹೊರಗಡೆ ಅನಗತ್ಯ ತಿನ್ನುವುದು ಕಡಿಮೆಯಾಗುತ್ತದೆ. ಆರಂಭದಲ್ಲಿ ಕಷ್ಟವೆನಿಸಿದರೂ ಕ್ರಮೇಣ ಅಭ್ಯಾಸವಾಗುತ್ತದೆ.
ಮನೆಯಿಂದಲೇ ಆಹಾರ ಪ್ಯಾಕ್ ಮಾಡಿ
ಮಧ್ಯಾಹ್ನದೂಟವನ್ನು ಆದಷ್ಟೂ ಮನೆಯಿಂದ ತೆಗೆದುಕೊಂಡು ಹೋಗುವುದನ್ನು ರೂಢಿ ಮಾಡಿಕೊಳ್ಳಿ. ಹೆಚ್ಚು ತರಕಾರಿಗಳು, ಪ್ರೊಟೀನ್ ಹಾಗೂ ಸಾಕಷ್ಟು ಪೋಷಕಾಂಶಯುಕ್ತ ಆಹಾರವನ್ನು ನಿತ್ಯವೂ ಮನೆಯಿಂದ ಕೊಂಡು ಹೋಗುವುದನ್ನು ರೂಢಿ ಮಾಡಿಕೊಂಡರೆ, ಹೊರಗೆ ರೆಸ್ಟೋರೆಂಟ್ ಹಾಗೂ ಕ್ಯಾಂಟೀನ್ ಊಟ ತಪ್ಪುತ್ತದೆ. ಸಹಜವಾಗಿಯೇ ನಿಮ್ಮ ಆರೋಗ್ಯ, ತೂಕ ಎರಡೂ ನಿಮ್ಮ ಕೈಗೆ ಬರುತ್ತದೆ. ಪ್ರಯತ್ನಪಟ್ಟರೆ ಕಷ್ಟದ ಕೆಲಸ ಇದಲ್ಲ.
ಚಟುವಟಿಕೆಯಿಂದಿರಿ
ಒಂದೇ ಜಾಗದಲ್ಲಿ, ಒಂದೇ ಕುರ್ಚಿಯಲ್ಲಿ ಗಂಟೆಗಟ್ಟಲೆ ಕೂರುವುದರಿಂದ ತೂಕ ಹೆಚ್ಚಾಗುವ ಸಮಸ್ಯೆ ಸಾಮಾನ್ಯ. ಅದಕ್ಕಾಗಿಯೇ, ಕುಳಿತ ಕುರ್ಚಿಯಿಂದ ಆಗಾಗ ಎದ್ದು ಓಡಾಡಿ. ಅರ್ಧ ಅಥವಾ ಒಂದು ಗಂಟೆಗೊಂದು ಬ್ರೇಕ್ ತೆಗೆದುಕೊಳ್ಳಿ. ಒಮ್ಮೆ ಕುರ್ಚಿಯಿಂದೆದ್ದು ಓಡಾಡಿ. ಲಿಫ್ಟ್ ಬದಲು ಮೆಟ್ಟಿಲು ಬಳಸಿ. ಸಣ್ಣ ಬಾಟಲ್‌ನಲ್ಲಿ ನೀರು ತೆಗೆದುಕೊಂಡು ಪಕ್ಕದಲ್ಲಿಡಿ. ಆಗಾಗ ನೀರು ತುಂಬಿಸಲು ಎದ್ದು ಹೋಗಿ. ಆದಷ್ಟೂ ನಡೆದಾಡುವ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ. ಆಗಾಗ, ಕೈಕಾಲುಗಳನ್ನು ಸ್ಟ್ರೆಚ್ ಮಾಡಿ.
ತಿನ್ನುವ ಆಹಾರದ ಬಗ್ಗೆ ಯೋಚಿಸಿ
ತಿನ್ನುವ ಮೊದಲು ತಾನೇನು ತಿನ್ನುತ್ತಿದ್ದೇನೆ ಎಂಬ ಬಗ್ಗೆ ಯೋಚನೆಯಿರಲಿ. ಹೊಟ್ಟೆ ತುಂಬುವಷ್ಟು ಅತಿಯಾಗಿ ತಿನ್ನಬೇಡಿ. ಹೊಟ್ಟೆಯಲ್ಲಿ ಇನ್ನೊಂದಿಷ್ಟು ಜಾಗವಿದೆ ಎಂಬಲ್ಲಿಗೆ ಎಷ್ಟೇ ಇಷ್ಟದ ತಿನಿಸಾಗಿದ್ದರೂ ತಿನ್ನುವುದನ್ನು ನಿಲ್ಲಿಸಿ. ನಿಧಾನವಾಗಿ ಅನುಭವಿಸಿಕೊಂಡು ಊಟ ಮಾಡಿ. ಇದರಿಂದ ಜೂರ್ಣಕ್ರಿಯೆ ಚುರುಕಾಗುತ್ತದೆ. ಅಗತ್ಯಕ್ಕಿಂತ ಹೆಚ್ಚು ತಿನ್ನುವುದು ತಪ್ಪುತ್ತದೆ.
ಇದನ್ನೂ ಓದಿ: Benefits of Kasoori Methi: ಕಸೂರಿ ಮೇಥಿ ರುಚಿ ಹೆಚ್ಚಿಸಲು ಮಾತ್ರವಲ್ಲ, ಆರೋಗ್ಯ ವೃದ್ಧಿಗೂ ಸೂಕ್ತ