Site icon Vistara News

Turmeric In Winter: ಚಳಿಗಾಲದಲ್ಲಿ ನೆರವಾಗುವ ಅರಿಶಿನವೆಂಬ ಸಂಜೀವಿನಿ

Turmeric In Winter

ತನ್ನ ಗಾಢವಾದ ಹೊಂಬಣ್ಣದಿಂದ ಅಡುಗೆಗಳ ಬಣ್ಣ ವರ್ಧಿಸುವ, ಗುಣ ಹೆಚ್ಚಿಸುವ, ಘಮ ಮತ್ತು ರುಚಿಯನ್ನೂ ಅಧಿಕಗೊಳಿಸುವ ಅರಿಶಿನ, ಸಾವಿರಾರು ವರ್ಷಗಳಿಂದ ಭಾರತೀಯ ಅಡುಗೆ ಮನೆಗಳಲ್ಲಿ ಬಳಕೆಯಲ್ಲಿದೆ. ಸಾಮಾನ್ಯವಾಗಿ ವರ್ಷವಿಡೀ ಮಸಾಲೆಯಾಗಿ ಮತ್ತು ಔಷಧವಾಗಿ ನಮ್ಮ ಆಹಾರದ ಭಾಗವಾಗಿರುವ ಅರಿಶಿನವನ್ನು ಚಳಿಗಾಲದಲ್ಲಿ (Turmeric In Winter) ಕೆಲವು ನಿರ್ದಿಷ್ಟ ಕಾರಣಗಳಿಗಾಗಿ ಬಳಕೆ ಮಾಡಬಹುದು. ಏನು, ಹೇಗೆ ಎಂಬುದನ್ನು ಅರಿಯೋಣ.

ಅರಿಶಿನದಲ್ಲಿರುವ ಕರ್ಕುಮಿನ್‌ ಎಂಬ ಪ್ರಬಲ ಉತ್ಕರ್ಷಣ ನಿರೋಧಕದಲ್ಲಿ ಶಿಲೀಂಧ್ರ ನಿರೋಧಕ, ವೈರಸ್‌ ನಾಶಕ ಮತ್ತು ಬ್ಯಾಕ್ಟೀರಿಯಾ ನಾಶಕ ಗುಣಗಳಿವೆ. ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ಸಾಮರ್ಥ್ಯವೂ ಅರಿಶಿನಕ್ಕಿದೆ. ಈ ಎಲ್ಲಾ ಕಾರಣಗಳಿಂದಾಗಿ ಚಳಿಗಾಲದ ದಿನಗಳಲ್ಲಿ ಹೆಚ್ಚಾಗಿ ಕಾಡುವ ನೆಗಡಿ, ಕೆಮ್ಮು, ಗಂಟಲು ನೋವು, ಸೈನಸ್‌ ಸಮಸ್ಯೆ, ಕೀಲು ನೋವಿನಂಥ ತೊಂದರೆಗಳಿಗೆ ಇದರಿಂದ ಒಳ್ಳೆಯ ಉಪಶಮನ ದೊರೆಯುತ್ತದೆ. ಅದರಲ್ಲೂ ಕೆಮ್ಮು-ಕಫದಂಥ ಶ್ವಾಸಕೋಶ ಸಂಬಂಧಿ ತೊಂದರೆಗಳಲ್ಲಿ ಅರಿಶಿನ ಪರಿಣಾಮಕಾರಿ ಉಪಶಮನ ನೀಡುತ್ತದೆ.

ಹಸಿ ಅರಿಶಿನ

ಸಹಜವಾಗಿ ಗಡ್ಡೆ-ಗೆಣಸುಗಳು ದೊರೆಯುವಂಥ ಕಾಲವಿದು. ಹಸಿ ಅರಿಶಿನದ ಗೊನೆಯಂಥ ಗಡ್ಡೆಗಳಿಗೂ ಈಗ ಕಾಲ. ಚಳಿ ಹೆಚ್ಚಿರುವ ಮಲೆನಾಡಿನಂಥ ಪ್ರದೇಶಗಳಲ್ಲಿ ಹಲವು ರೀತಿಯ ಅಡುಗೆಗಳಲ್ಲಿ ಶುಂಠಿಯಂತೆ ಕವಲುಕವಲಾಗಿರುವ ಹಸಿ ಅರಿಶಿನ ಬಳಕೆಯಾಗುತ್ತದೆ. ರುಚಿ, ಬಣ್ಣ ಮತ್ತು ಪರಿಮಳದಲ್ಲಿ ಅರಿಶಿನ ಪುಡಿಗಿಂತ ಕಟುವಾಗಿರುವ ಹಸಿ ಅರಿಶಿನ ಪರಿಣಾಮದಲ್ಲಿಯೂ ಅಷ್ಟೇ ತೀವ್ರತೆಯನ್ನು ನೀಡುತ್ತದೆ. ಹೆಬ್ಬೆರಳು ಗಾತ್ರಕ್ಕಿಂತ ಸಣ್ಣದಾದ ಒಂದು ಕವಲನ್ನು ತೆಗೆದು ಚೆನ್ನಾಗಿ ತೊಳೆದುಕೊಂಡು, ಸಿಪ್ಪೆ ಇರುವಂತೆಯೇ ತಾಳಿಯಂತೆ ಹೆಚ್ಚಿಕೊಳ್ಳಿ. ಇದನ್ನು ಒಂದು ದೊಡ್ಡ ಕಪ್‌ ನೀರಿನಲ್ಲಿ ಚೆನ್ನಾಗಿ ಕುದಿಸಿ. ಆರೆಂಟು ನಿಮಿಷ ಕುದಿಸಿದ ನಂತರ, ಅದರ ನೀರನ್ನು ಸೋಸಿಕೊಂಡು ಬೇಕಿದ್ದರೆ ಒಂದೆರಡು ಹನಿ ನಿಂಬೆರಸ ಅಥವಾ ಕಿತ್ತಳೆರಸ ಸೇರಿಸಿ ಬೆಚ್ಚಗಿರುವಾಗಲೇ ಕುಡಿಯಿರಿ.

ನೆಗಡಿ-ಕೆಮ್ಮಿನಂಥ ಸಮಸ್ಯೆಗೆ

ಅರಿಶಿನದ ಹಾಲನ್ನು ಮಕ್ಕಳಿಂದ ವೃದ್ಧರವರೆಗೆ ಎಲ್ಲರಿಗೂ ನೀಡಲಾಗುತ್ತದೆ. ಒಂದು ಲೋಟ ಬೆಚ್ಚಗಿನ ಹಾಲಿಗೆ ಅರ್ಧ ಚಮಚ ಅರಿಶಿನ ಹಾಕಿ, ಅದನ್ನು ಬೆಚ್ಚಗಿರುವಾಗಲೇ ಕುಡಿಯಬೇಕು. ಗಂಟಲಲ್ಲಿ ನೋವಿದ್ದರೆ, ಬೆಚ್ಚಗಿನ ನೀರಿಗೆ ಉಪ್ಪಿನೊಂದಿಗೆ ಚಿಟಿಕೆ ಅರಿಶಿನವನ್ನೂ ಹಾಕಿ ಗಾರ್ಗಲ್‌ ಮಾಡುವುದು ಒಳ್ಳೆಯ ಪರಿಹಾರ. ನೆಗಡಿಯಿಂದ ಮೂಗು ಕಟ್ಟಿದ್ದರೆ, ನೀರಿಗೆ ಅರಿಶಿನ ಹಾಕಿ ಚೆನ್ನಾಗಿ ಕುದಿಸಿ, ಅದರ ಬಿಸಿ ಆವಿಯನ್ನು ತೆಗೆದುಕೊಳ್ಳುವುದು ಪರಿಣಾಮಕಾರಿ.

ಚರ್ಮಕ್ಕೆ

ಚಳಿಗಾಲದಲ್ಲಿ ಚರ್ಮವೆಲ್ಲಾ ಒಣಗಿ ಮೈಯೆಲ್ಲಾ ಬಿರಿದಂತಾಗುವುದು ಸಾಮಾನ್ಯ. ಇದಕ್ಕಾಗಿ ಕೊಬ್ಬರಿ ಎಣ್ಣೆಗೆ ಚಿಟಿಕೆ ಅರಿಶಿನ ಹಾಕಿ, ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಬೇಕು. ಎಣ್ಣೆ ಬೆಚ್ಚಗಿದ್ದಾಗಲೇ ಇದನ್ನು ಮುಖ-ಮೈಯೆಲ್ಲಾ ಲೇಪಿಸಬಹುದು. ಸ್ವಲ್ಪ ಹೊತ್ತು ಬಿಟ್ಟು ಬಿಸಿ ನೀರು ಮತ್ತು ಕಡಲೆ ಹಿಟ್ಟಿನಿಂದ ಸ್ನಾನ ಮಾಡಬಹುದು.

ಸೌಂದರ್ಯವರ್ಧಕ

ಮುಖದ ಕಾಂತಿ ಹೆಚ್ಚಿಸಲು ಅರಿಶಿನದ ಬಳಕೆ ವ್ಯಾಪಕವಾಗಿದೆ. ಹಲವು ರೀತಿಯ ಫೇಸ್‌ ಪ್ಯಾಕ್‌ಗಳಲ್ಲಿ ಇದನ್ನು ಉಪಯೋಗಿಸಲಾಗುತ್ತದೆ. ಮೊಡವೆ, ಸಣ್ಣ ದದ್ದುಗಳು, ಸೋಂಕು ಗುಳ್ಳೆಗಳು ಮುಂತಾದ ಚರ್ಮದ ತೊಂದರೆಗಳನ್ನು ನಿವಾರಿಸಿ ಮುಖದ ಕಾಂತಿ ಹೆಚ್ಚಿಸುತ್ತವೆ. ಸೋರಿಯಾಸಿಸ್‌, ಎಕ್ಸಿಮಾದಂಥ ಚರ್ಮ ರೋಗಗಳಲ್ಲಿ ಅರಿಶಿನದ ಸತ್ವಗಳನ್ನು ಹೊಂದಿರುವ ಕ್ರೀಮ್‌ಗಳು ಬಳಕೆಯಲ್ಲಿವೆ.

ಮಧುಮೇಹಕ್ಕೆ ಮದ್ದು

ರಕ್ತದಲ್ಲಿನ ಸಕ್ಕರೆ ಮಟ್ಟ ದಿಢೀರ್‌ ಏರದಂತೆ ತಡೆಯುವ ಸಾಮರ್ಥ್ಯ ಅರಿಶಿನಕ್ಕಿದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಇನ್‌ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುತ್ತವೆ. ಹಾಗಾಗಿ ಮಧುಮೇಹದಿಂದ ಬಳಲುತ್ತಿರುವವರು ಇದನ್ನು ಅಡುಗೆಯಲ್ಲಿ ನಿಯಮಿತವಾಗಿ ಬಳಸಬಹುದು.

ಜೀರ್ಣಾಂಗಗಳ ರಕ್ಷಣೆ

ನಿತ್ಯದ ಆಹಾರದಲ್ಲಿ ನಿಯಮಿತವಾಗಿ ಅರಿಶಿನವನ್ನು ಬಳಸುವುದರಿಂದ ಪಚನಶಕ್ತಿಯನ್ನು ಕ್ರಮೇಣ ಹೆಚ್ಚಿಸಬಹುದು. ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿದಾಗ ಚಯಾಪಚಯ ಹೆಚ್ಚಿ, ಕೊಬ್ಬು ಕರಗುತ್ತದೆ. ದೇಹದ ತೂಕವೂ ಇಳಿಯಬಹುದು. ಕರುಳಿನಲ್ಲಿ ಕ್ರಿಮಿಗಳ ಸಮಸ್ಯೆಯಿದ್ದರೆ, ಇದಕ್ಕೂ ಮದ್ದಾಗಬಲ್ಲದು.

ಇದನ್ನೂ ಓದಿ: Health Tips for Winter: ಚಳಿಗಾಲದಲ್ಲಿ ನ್ಯುಮೋನಿಯಾ, ಶ್ವಾಸಕೋಶದ ಸಮಸ್ಯೆಗಳಿಂದ ದೂರ ಇರಲು ಹೀಗೆ ಮಾಡಿ…

Exit mobile version