Site icon Vistara News

Seeds For Weight Loss: ತೂಕ ಇಳಿಸಿಕೊಳ್ಳಬೇಕೆ? ಈ 7 ಬೀಜಗಳನ್ನು ನಿಯಮಿತವಾಗಿ ಸೇವಿಸಿ

Seeds For Weight Loss

ತೂಕ ಇಳಿಸುವುದು ಎಂಬುದು ಅತ್ಯಂತ ಶಿಸ್ತು ಬೇಡುವ ಪಯಣ. ಎಷ್ಟೇ ಶಿಸ್ತಿನಿಂದ ಇದ್ದರೂ ನಾಲಿಗೆ ರುಚಿಯನ್ನು ಬೇಡುತ್ತದೆ. ರುಚಿಯ ಜೊತೆಗೂ ದೇಹವನ್ನು ಆರೋಗ್ಯವಾಗಿಡಬಹುದು ಹಾಗೂ ದೇಹದ ತೂಕವನ್ನು ಹತೋಟಿಗೆ ತರಬಹುದು ಎಂದರೆ ಆಗ ನೆನಪಾಗುವುದು ಈ ಬೀಜಗಳು. ಹೌದು ಬೀಜಗಳ ಸೇವನೆಯಿಂದಲೂ ತೂಕ ಇಳಿಸಬಹುದು (seeds for weight loss). ಆದರೆ, ಯಾವ ಬೀಜಗಳನ್ನು ತಿನ್ನುವುದರಿಂದ ತೂಕವನ್ನು ನಿಮ್ಮ ಹತೋಟಿಗೆ ತರಲು ಪ್ರಯತ್ನಿಸಬಹುದು ಎಂಬುದು ಮಾತ್ರ ತಿಳಿದಿರಬೇಕು. ಅಷ್ಟೇ ಅಲ್ಲ, ಈ ಬೀಜಗಳಲ್ಲಿರುವ ಎಲ್ಲ ಬಗೆಯ ಪೋಷಕಾಂಶಗಳಿಂದ ಆರೋಗ್ಯಕರ ವಿಧಾನದಲ್ಲಿಯೇ ತೂಕ ಇಳಿಸುವುದು ಬಹಳ ಮುಖ್ಯವಾದದ್ದು. ಬನ್ನಿ, ಯಾವ ಬೀಜಗಳ ಸೇವನೆಯಿಂದ ನಿಮ್ಮ ತೂಕ ಆರೋಗ್ಯಕರವಾಗಿಯೇ ಇಳಿಯುತ್ತದೆ ಎಂಬುದನ್ನು ನೋಡೋಣ.

ಚಿಯಾ ಬೀಜಗಳು

ಚಿಯಾ ಬೀಜಗಳು ಪೋಷಕಾಂಶಗಳ ಪವರ್‌ ಹೌಸ್‌ ಇದ್ದ ಹಾಗೆ. ಇವುಗಳಲ್ಲಿ ಬಹುತೇಕ ಎಲ್ಲ ಪೋಷಕಾಂಶಗಳೂ ಇದ್ದು, ನಾರಿನಂಶವೂ ಇರುವುದರಿಂದ ತೂಕ ಇಳಿಕೆಗೆ ನೆರವಾಗುತ್ತದೆ, ನೀರಿನಲ್ಲಿ ನೆನೆ ಹಾಕಿದಾಗ ಚಿಯಾ ಬೀಜಗಳು ಉಬ್ಬಿಕೊಂಡು ಜೆಲ್‌ನಂತ ಕವಚವನ್ನು ಪಡೆದುಕೊಳ್ಳುತ್ತದೆ. ಹಾಗೆಯೇ ತಿಂದರೂ ದೇಹದಲ್ಲಿರುವ ನೀರಿನಂಶವನ್ನು ಪಡೆದುಕೊಂಡು ಉಬ್ಬುತ್ತದೆ. ಹಾಗಾಗಿ ಇದು ಹೊಟ್ಟೆ ತುಂಬಿದ ಭಾವವನ್ನು ನೀಡುತ್ತದೆ. ಇದರಲ್ಲಿರುವ ಕರಗಬಲ್ಲ ನಾರಿನಂಶವು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ.

ಅಗಸೆ ಬೀಜಗಳು

ಅಗಸೆ ಬೀಜ ಅಥವಾ ಫ್ಲ್ಯಾಕ್‌ಸೀಡ್‌ಗಳಲ್ಲಿ ಒಮೆಗಾ ೩ ಫ್ಯಾಟಿ ಆಸಿಡ್‌ಗಳಿದ್ದು, ಜೊತೆಗೆ ಕರಗಬಲ್ಲ ನಾರಿನಂಶವೂ ಇದೆ. ಇದು ತೂಕ ಇಳಿಕೆಗೆ ಪೂರಕ. ಒಮೆಗಾ ೩ ಫ್ಯಾಟಿ ಆಸಿಡ್‌ಗಳು ದೇಹದ ಉರಿಯೂತವನ್ನೂ ಕಡಿಮೆಕೊಳಿಸಿದರೆ, ಕರಗಬಲ್ಲ ನಾರಿನಂಶವು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಹೀಗಾಗಿ ಹಸಿವು ನಿಯಂತ್ರಣದಲ್ಲಿದ್ದು ಅತಿಯಾಗಿ ತಿನ್ನುವುದು ಹತೋಟಿಗೆ ಬರುತ್ತದೆ.

ಹೆಂಪ್‌ ಬೀಜಗಳು

ಹೆಂಪ್‌ ಬೀಜಗಳಲ್ಲಿ ಸಾಕಷ್ಟು ಪ್ರೊಟೀನ್‌ ಇರುವುದರಿಂದ ತೂಕ ಇಳಿಸುವ ಮಂದಿಗೆ ಇದು ಪೂರಕ. ಪ್ರೊಟೀನ್‌ ಕರಗಲು ಹೆಚ್ಚು ಶಕ್ತಿ ಬೇಕು. ಹೀಗಾಗಿ ನಿಮ್ಮ ಕ್ಯಾಲರಿ ಇಲ್ಲಿ ಹೆಚ್ಚು ಬಳಸಲ್ಪಡುತ್ತದೆ. ಪ್ರೊಟೀನ್‌ನಿಂದ ಮಾಂಸಖಂಡಗಳು ಬಲವರ್ಧನೆಗೊಳ್ಳುವ ಜೊತೆಗೆ, ಈ ಬೀಜಗಳಲ್ಲಿರುವ ಫ್ಯಾಟಿ ಆಸಿಡ್‌ನ ಪರಿಣಾಮ ಹಸಿವೂ ಕೂಡಾ ನಿಯಂತ್ರಣದಲ್ಲಿರುತ್ತದೆ.

ಕುಂಬಳಕಾಯಿ ಬೀಜ

ಕುಂಬಳಕಾಯಿ ಬೀಜದಲ್ಲಿ ಪ್ರೊಟೀನ್‌, ನಾರಿನಂಶ ಹಾಗೂ ಆರೋಗ್ಯಕರ ಕೊಬ್ಬು ಶ್ರೀಮಂತವಾಗಿದೆ. ಇದರಿಂದ ಹೊಟ್ಟೆ ತುಂಬಿದ ಅನುಭವವಾಗಿ ಹಸಿವು ನಿಯಂತ್ರಣದಲ್ಲಿರುತ್ತದೆ. ಪರಿಣಾಮ ಅತಿಯಾಗಿ ತಿನ್ನುವುದಕ್ಕೆ ಬ್ರೇಕ್‌ ಬಿದ್ದು ತೂಕ ಇಳಿಯುತ್ತದೆ. ಇದರಲ್ಲಿ ಮೆಗ್ನೀಶಿಯಂ ಕೂಡಾ ಇದ್ದು, ಇದರಿಂದ ಇನ್ಸುಲಿನ್‌ ಮಟ್ಟವು ಸಮತೋಲನದಲ್ಲಿರುತ್ತದೆ.

ಸೂರ್ಯಕಾಂತಿ ಬೀಜ

ಸೂರ್ಯಕಾಂತಿ ಬೀಜಗಳಲ್ಲಿ ಪ್ರೊಟೀನ್‌, ನಾರಿನಂಶ, ಖನಿಜಾಂಶಗಳ ಜೊತೆಗೆ ಎಲ್ಲ ಬಗೆಯ ಪೋಷಕಾಂಶಗಳೂ ಇವೆ. ಇದರಲ್ಲಿರುವ ಪ್ರೊಟೀನ್‌ ಹಾಗೂ ನಾರಿನಂಶ ಹೆಚ್ಚು ಹಸಿವಾಗದಂತೆ ತಡೆಯುವುದರಿಂದ ತೂಕ ಇಳಿಯುತ್ತದೆ. ಇದರಲ್ಲಿರುವ ವಿಟಮಿನ್‌ ಇ ಹಾಗೂ ಸೆಲೆನಿಯಂ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ. ಜೊತೆಗೆ ಚಯಾಪಚಯ ಕ್ರಿಯೆ ಸರಾಗವಾಗಿ ಆಗುತ್ತದೆ.

ಎಳ್ಳು

ಎಳ್ಳಿನಲ್ಲಿ ಲಿಗ್ನೆನ್‌ ಎಂಬ ಸಸ್ಯಾಧಾರಿತ ಕಾಂಪೌಂಡ್‌ ಇದ್ದು ಇದು ದೇಹದಲ್ಲಿರುವ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ. ಎಳ್ಳಿನಲ್ಲಿ ಕ್ಯಾಲ್ಶಿಯಂ ಹಾಗೂ ಪ್ರೊಟೀನ್‌ ಹೇರಳವಾಗಿದೆ. ಒಳ್ಳೆಯ ಕೊಬ್ಬು ಕೂಡಾ ಇದ್ದು, ಇದರಿಂದ ಹೊಟ್ಟೆ ತುಂಬಿದ ಭಾವ ನೀಡುತ್ತದೆ.

ಪಪ್ಪಾಯಿ ಬೀಜ

ಪಪ್ಪಾಯಿ ಬೀಗಳಲ್ಲಿ ಜೀರ್ಣಕಾರಿ ಕಿಣ್ವಗಳು ಹೇರಳವಾಗಿದ್ದು, ಇದು ತೂಕ ಇಳಿಕೆಗೆ ಸಾಕಷ್ಟು ಸಹಾಯ ಮಾಡುತ್ತದೆ. ಈ ಕಿಣ್ವಗಳು ದೇಹದಲ್ಲಿರುವ ಪ್ರೊಟೀನ್‌ ಅನ್ನು ಕರಗಿಸಲು ಸಹಾಯ ಮಾಡುವ ಮೂಲಕ ಆರೋಗ್ಯಕಾರಿ ಜೀರ್ಣಕ್ರಿಯೆಗೆ ಸಹಕಾರ ನೀಡುತ್ತದೆ. ಹೊಟ್ಟೆಯುಬ್ಬರವನ್ನೂ ಇದು ಕಡಿಮೆ ಮಾಡುತ್ತದೆ. ಕಡಿಮೆ ಕ್ಯಾಲರಿಯ ಪಪ್ಪಾಯ ಬೀಜಗಳು ತೂಕ ಇಳಿಕೆಗೆ ತಮ್ಮದೇ ಆದ ಕಾಣಿಕೆ ನೀಡುತ್ತವೆ.

ಇದನ್ನೂ ಓದಿ: Oats For Weight Loss: ಓಟ್ಸ್‌ ತಿನ್ನುವುದರಿಂದ ತೂಕ ಇಳಿಯುತ್ತದೆಯೇ? ಉತ್ತರ ಇಲ್ಲಿದೆ

Exit mobile version