Site icon Vistara News

Shikakai For Hair: ತಲೆ ಕೂದಲಿಗೆ ಶ್ಯಾಂಪೂ ಒಳ್ಳೆಯದೋ ಸೀಗೆಕಾಯಿ ಸೂಕ್ತವೋ?

Shikakai For Hair

ಹಳೆಯ ಕಾಲದಿಂದಲೂ ತಲೆಗೂದಲ ಆರೈಕೆಗೆ ಸೀಗೆಕಾಯಿ ಅಥವಾ ಶಿಕಾಕಾಯಿ ಬಳಕೆಯಲ್ಲಿದೆ. ಈಗಿನಂತೆ ಕಡಿಮೆ ಜಿಡ್ಡಿನ ಎಣ್ಣೆಗಳು ಇಲ್ಲದ ಕಾಲದಲ್ಲಿ, ದಿನವೂ ಎಣ್ಣೆಯನ್ನು ನಿಯಮಿತವಾಗಿ ಕೂದಲಿಗೆ ಲೇಪಿಸುತ್ತಿದ್ದ ಕಾಲದಲ್ಲಿ ತಲೆಯ ಸ್ವಚ್ಛತೆಯ ಹೊಣೆಯನ್ನು ಶತಮಾನಗಳ ಕಾಲ ನಿರ್ವಹಿಸಿದ್ದು ಸೀಗೆಕಾಯಿಯೆ. ಯಾವುದೇ ಜಾಹೀರಾತುಗಳ ಪ್ರಚಾರವಿಲ್ಲದೆ, ಬಣ್ಣದ ಪ್ಯಾಕಿಂಗ್‌ಗಳ ಅಬ್ಬರವಿಲ್ಲದೆ ಅಜ್ಜಿ-ಅಮ್ಮಂದಿರು ತುಂಬಿಡುತ್ತಿದ್ದ ಡಬ್ಬಿಗಳಿಂದ ನೇರವಾಗಿ ತರಳೆಯರ ಹೆರಳನ್ನು ಶುಚಿ ಮಾಡಿ, ಕೇಶರಾಶಿಯನ್ನು ಆರೋಗ್ಯವಾಗಿ ಇರಿಸುತ್ತಿತ್ತು. ಬ್ಯಾಕ್ಟೀರಿಯ ವಿರೋಧಿ, ಫಂಗಸ್‌ ನಿರೋಧಕ ಸಾಮರ್ಥ್ಯವಿರುವ ಇದು ಉರಿಯೂತ ಶಾಮಕ ಗುಣವನ್ನು ಸಹ ಹೊಂದಿಗೆ. ಹಾಗಾಗಿ ತಲೆಯ ಚರ್ಮವನ್ನು ತುರಿಕೆ, ಹೊಟ್ಟು, ಸೋಂಕುಗಳಿಂದ ಮುಕ್ತವಾಗಿರಿಸುವುದಕ್ಕೆ ಸೀಗೆಕಾಯಿಗೆ ಸಾಧ್ಯ. ಇನ್ನೂ ಏನೆಲ್ಲಾ ಗುಣಗಳಿವೆ ಇದರಲ್ಲಿ (Shikakai For Hair) ಕೇಶಗಳ ಆರೈಕೆಗೆ ಬೇಕಾಗುವಂಥದ್ದು.

ಸ್ವಚ್ಛತೆಯಲ್ಲಿ ಮುಂದೆ

ʻಎಣ್ಣೆ ಸೀಗೆಕಾಯಿ ಸಂಬಂಧʼ ಎಂಬ ನುಡಿಗಟ್ಟೇ ನಮಗೆ ಇದರ ಸ್ವಚ್ಛತೆಯ ಸಾಮರ್ಥ್ಯಕ್ಕೆ ನೀಡಿದ ಪ್ರಮಾಣಪತ್ರದಂತಿದೆ. ವಾತಾವರಣದ ಧೂಳು, ಮಣ್ಣು, ಹೊಗೆಯಂಥ ಕೊಳೆಗಳನ್ನು ನಾಜೂಕಾಗಿಯೇ ಸ್ವಚ್ಛಗೊಳಿಸುವ ಕ್ಷಮತೆ ಇದರದ್ದು. ತಲೆಯ ಚರ್ಮದ ನೈಸರ್ಗಿಕ ತೈಲದಂಶವನ್ನು ತೆಗೆಯದಂತೆ, ಕೊಳೆಯನ್ನಷ್ಟೇ ತೆಗೆದು ಕೂದಲಿಗೆ ಸ್ವಚ್ಛ ಮತ್ತು ತಾಜಾ ಅನುಭವ ನೀಡುತ್ತದೆ.

ಕೇಶವರ್ಧನೆ

ಕೂದಲಿನ ಬೆಳವಣಿಗೆಗೆ ಸೀಗೆಕಾಯಿ ನೆರವು ನೀಡುತ್ತದೆ. ವಿಟಮಿನ್‌ ಎ, ಸಿ ಮತ್ತು ಕೆ ಜೀವಸತ್ವದ ಅಂಶಗಳು ಇದರಲ್ಲಿವೆ. ಇವುಗಳು ಕೂದಲಿನ ಬುಡವನ್ನು ಬಿಗಿ ಮಾಡಿ, ಕೂದಲೆಳೆಗಳನ್ನು ಸುದೃಢಗೊಳಿಸುತ್ತವೆ. ಇದರಿಂದ ಕೂದಲು ಉದುರುವುದು ಕಡಿಮೆಯಾಗಿ, ಬೆಳವಣಿಗೆ ಹೆಚ್ಚುತ್ತದೆ. ಜಾಹೀರಾತುಗಳಲ್ಲಿ ತೋರಿಸಿದಷ್ಟು ಅಲ್ಲದಿದ್ದರೂ, ಆರೋಗ್ಯಕರವಾದ ಉದ್ದ ಕೂದಲನ್ನಂತೂ ಹೊಂದಬಹುದು.

ಹೊಟ್ಟು ನಿವಾರಣೆ

ಒಮ್ಮೆ ತಲೆ ಹೊಟ್ಟಿನ ಸಮಸ್ಯೆ ಪ್ರಾರಂಭವಾದರೆ, ಅದರಿಂದ ಪಾರಾಗುವುದಕ್ಕೆ ಏನೇನೋ ಒದ್ದಾಟಗಳನ್ನು ಮಾಡಬೇಕಾಗುತ್ತದೆ. ಹೊಟ್ಟು ಹೋಗಿಸುವಂಥ ಹತ್ತಾರು ಶಾಂಪೂಗಳನ್ನು ಬಳಸುತ್ತೇವೆ. ಕೆಲವೊಮ್ಮೆ ವೈದ್ಯರ ಬಳಿ ಔಷಧಿಯನ್ನೂ ತೆಗೆದುಕೊಳ್ಳುವ ಪ್ರಮೇಯ ಬರುತ್ತದೆ. ಇಷ್ಟಾಗಿ ಹೊಟ್ಟು ದೂರ ಮಾಡಲು ಆಗದೇ ಇರಬಹುದು. ಆದರೆ ಫಂಗಸ್‌ ವಿರೋಧಿ ಗುಣವನ್ನು ಹೊಂದಿರುವ ಸೀಗೆಕಾಯಿಯ ನಿಯಮಿತವಾದ ಬಳಕೆಯಿಂದ ಹೊಟ್ಟು ಕ್ರಮೇಣ ಮಾಯವಾಗುತ್ತದೆ.

ಕಂಡೀಶನರ್

ಸೀಗೆಕಾಯಿಯಲ್ಲಿರುವ ಸಪೋನಿನ್‌ ಎಂಬ ಅಂಶವು ಕೂದಲಿನ ಕಂಡೀಶನರ್‌ ರೀತಿಯಲ್ಲಿ ಕೆಲಸ ಮಾಡುತ್ತದೆ. ಕೂದಲುಗಳ ಪಿಎಚ್‌ ಸಹ ಸಮತೋಲನದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ. ಯಾವುದೇ ರಾಸಾಯನಿಕವಿಲ್ಲದ ಈ ನೈಸರ್ಗಿಕ ಕಂಡೀಶನರ್‌ ಬಳಕೆಯಿಂದ ಕೂದಲಿನ ಹೊಳಪು ಹೆಚ್ಚಿ, ಮೃದುವಾಗುತ್ತದೆ. ಇದರಿಂದ ಕೂದಲು ಒರಟಾಗಿ ಬಾಚುವಾಗ ತುಂಡಾಗುವುದನ್ನು ತಪ್ಪಿಸಬಹುದು.

ತುದಿ ಕವಲಿಲ್ಲ

ಕೂದಲಿಗೆ ಅಗತ್ಯ ಪೋಷಣೆ ದೊರೆಯದಿದ್ದರೆ, ಕೇಶಗಳ ತುದಿ ಕವಲಾಗಬಹುದು. ಇದರಿಂದ ಕೂದಲು ನಿರ್ಜೀವವಾದಂತಾಗಿ, ತುಂಡಾಗುತ್ತವೆ. ಸೀಗೆಕಾಯಿಯ ಬಳಕೆಯಿಂದ ಕೂದಲಿಗೆ ಸೂಕ್ತ ಆರೈಕೆ ದೊರೆತು, ತುದಿ ಸೀಳಿದಂತಾಗಿ ಕೂದಲು ತುಂಡಾಗುವುದು ಕಡಿಮೆಯಾಗುತ್ತದೆ. ಜೊತೆಗೆ ಕೂದಲೆಳೆಗಳು ದಪ್ಪವಾಗಿಯೂ ಬೆಳೆದು, ಕೂದಲಿನ ಒಟ್ಟಾರೆ ಗಾತ್ರ ಹೆಚ್ಚುತ್ತದೆ.

ಎಲ್ಲರಿಗೂ ಸೂಕ್ತ

ರಾಸಾಯನಿಕ ಭರಿತ ಶಾಂಪೂ ಮತ್ತು ಕಂಡೀಶನರ್‌ಗಳು ಎಲ್ಲ ರೀತಿಯ ಚರ್ಮ ಮತ್ತು ಕೂದಲುಗಳಿಗೆ ಹೊಂದುವಂಥವಲ್ಲ. ಸೂಕ್ಷ್ಮ ಕೂದಲಿನವರು ಯಾವ ಶಾಂಪೂ ತಮಗೆ ಹೊಂದುತ್ತದೆ ಎಂಬ ಪ್ರಯೋಗದಲ್ಲಿಯೇ ಕೂದಲು ಕಳೆದುಕೊಳ್ಳುವುದು ಸಾಮಾನ್ಯ. ಆದರೆ ಸೌಮ್ಯ ಮತ್ತು ನೈಸರ್ಗಿಕವಾದ ಸೀಗೇಕಾಯಿ ಬಳಕೆಯಿಂದ ಇಂಥ ಸಮಸ್ಯೆಗಳಿಗೆ ಅವಕಾಶವಿಲ್ಲ.

ಇದನ್ನೂ ಓದಿ: 5:2 Diet: ಏನಿದು 5:2 ಮಧ್ಯಂತರ ಉಪವಾಸ? ಇದರ ಪ್ರಯೋಜನಗಳೇನು?

ಪರಿಸರ ಸ್ನೇಹಿ ಆಯ್ಕೆ

ಯಾವುದೇ ರಾಸಾಯನಿಕ, ಪ್ಲಾಸ್ಟಿಕ್‌ಗಳ ಹಾವಳಿಯಿಲ್ಲ ಸೀಗೆಕಾಯಿಯ ಬಳಕೆಯಲ್ಲಿ. ಪರಿಸರಕ್ಕೆ ಮಾರುಕವಾಗುವಂಥ ಯಾವುದೇ ಅಂಶ ಇದರಲ್ಲಿ ಇಲ್ಲ. ಇದನ್ನು ಬಳಸಿನ ನಂತರ ಉಳಿವಂಥ ಶೇಷವೆಲ್ಲ ವಾತಾವರಣದಲ್ಲಿ ಕರಗುವಂಥವು. ಹಾಗಾಗಿ ಕೂದಲಿನ ಸ್ವಚ್ಛತೆಗೆ ಅತ್ಯಂತ ಸೂಕ್ತವಾದ ಆಯ್ಕೆಯೆಂದರೆ ಸೀಗೆಕಾಯಿ.

Exit mobile version