ಕೆಲವರ ಅತೀ ದೊಡ್ಡ ಸಮಸ್ಯೆ ಎಂದರೆ ಕೂದಲು ಉದ್ದ ಬೆಳೆಯದೆ ಇರುವುದು. ನನ್ನ ಕೂದಲು ಬಹಳ ನಿಧಾನವಾಗಿ ಬೆಳೆಯುತ್ತದೆ, ಅಷ್ಟೇ ಅಲ್ಲ, ಒಂದು ಹಂತದ ನಂತರ ಬೆಳವಣಿಗೆ ನಿಂತಂತೆ ಭಾಸವಾಗುತ್ತದೆ. ಭುಜದವರೆಗೆ ಬೆಳೆದ ನಂತರ ಬೆಳೆಯುವುದೇ ಇಲ್ಲ ಅನಿಸುತ್ತದೆ ಎಂಬುದು ಹಲವರ ದೂರು. ಇಂಥವರಿಗೆ ತಮ್ಮ ಕೂದಲ ಬಗ್ಗೆ ಇನ್ನಾವುದೇ ಕಂಪ್ಲೇಂಟುಗಳಿರುವುದಿಲ್ಲ. ಬದಲಾಗಿ ಕೂದಲು ಬೆಳೆಯುವುದಿಲ್ಲ ಎಂಬುದೇ ದೊಡ್ಡ ಸಮಸ್ಯೆ.
ಕೂದಲು ಬೆಳೆಯುತ್ತಿಲ್ಲ, ತೆಳ್ಳಗಾಗುತ್ತಿದೆ ಎಂದರೆ ಅದಕ್ಕೆ ನಾನಾ ಕಾರಣಗಳಿರುತ್ತವೆ. ಹಾರ್ಮೋನಿನ ವೈಪರೀತ್ಯ, ಪೋಷಕಾಂಶಗಳ ಕೊರತೆ, ಹೊರಗಿನ ಮಾಲಿನ್ಯಯುಕ್ತ ಹವಾಮಾನ, ತಲೆಗೆ ಸೂಕ್ತವಲ್ಲದ ನೀರಿನ ಬಳಕೆ, ರಾಸಾಯನಿಕಯುಕ್ತ ಶಾಂಪೂ ಬಳಕೆ ಹೀಗೆ ಕಾರಣಗಳು ಹಲವಾರು. ಹೀಗಾಗಿ ದಟ್ಟವಾದ ಉದ್ದ ಕೂದಲು ಬೆಳೆಯಲು ಈ ಎಲ್ಲವುಗಳ ಪೂರಕ ವ್ಯವಸ್ಥೆ ನಿರ್ಮಾಣವಾಗಬೇಕು. ನಮ್ಮ ಕೂದಲ ಸಮಸ್ಯೆಗೆ ಏನು ಕಾರಣವಿರಬಹುದು, ಏನು ಮಾಡಬೇಕು ಎಂಬ ಬಗ್ಗೆ ಅರಿವಿರಬೇಕು. ಇಲ್ಲದಿದ್ದಲ್ಲಿ, ಒಂದು ಸಮಸ್ಯೆಯಿಂದ ಇನ್ನೊಂದು ಸಮಸ್ಯೆಯತ್ತ ಮುಖ ಮಾಡಬೇಕಾಗುತ್ತದೆ. ಹಾಗಾದರೆ ಬನ್ನಿ, ಕೂದಲು ಬಹಳ ವೇಗವಾಗಿ ದಟ್ಟವಾಗಿ, ಉದ್ದವಾಗಿ ಬೆಳೆಯಲು ಯಾವ ಪದಾರ್ಥಗಳಿಂದ ಕೂದಲ ಪೋಷಣೆ (Hair growth tips) ಮಾಡಬೇಕು ಎಂಬುದನ್ನು ನೋಡೋಣ.
ನೆಲ್ಲಿಕಾಯಿ
ಕೂದಲ ಆರೋಗ್ಯಕ್ಕೆ ನೆಲ್ಲಿಕಾಯಿಯಷ್ಟು ಸಮೃದ್ಧ ಆಹಾರ ಇನ್ನೊಂದಿಲ್ಲ. ನೆಲ್ಲಿಕಾಯಿಯ ಸೇವನೆ ಹಾಗೂ ಕೂದಲ ಮೇಲಿನ ಬಳಕೆ ಎರಡೂ ಕೂಡಾ ಕೂದಲನ್ನು ಸಮೃದ್ಧವಾಗಿ ಉದ್ದ ಬೆಳೆಯುವಂತೆ ಮಾಡುತ್ತದೆ ಎಂಬುದನ್ನು ಆಯುರ್ವೇದವೂ ಹೇಳುತ್ತದೆ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ಇದು ಕೂದಲ ಬುಡವನ್ನೇ ಗಟ್ಟಿ ಮಾಡುವುದಲ್ಲದೆ, ಕೂದಲಿಗೆ ಶಕ್ತಿಯನ್ನು ನೀಡುತ್ತದೆ. ಜೊತೆಗೆ ಕೂದಲ ಬೆಳವಣಿಗೆಗೆ ಸೂಕ್ತ ಅವಕಾಶ ಕಲ್ಪಿಸುತ್ತದೆ. ಅಷ್ಟೇ ಅಲ್ಲ, ಕೂದಲು ಕಪ್ಪಾಗಿರುವಂತೆ ಮಾಡುತ್ತದೆ. ಸಣ್ಣ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವುದಕ್ಕೆ ನೆಲ್ಲಿಕಾಯಿ ಬಹಳ ಒಳ್ಳೆಯ ಔಷಧಿ. ನೆಲ್ಲಿಕಾಯಿಯ ಎಣ್ಣೆ, ಪುಡಿಗಳ ಬಳಕೆ ಅಥವಾ ನೆಲ್ಲಿಕಾಯಿಯನ್ನು ಆಗಾಗ ಆಹಾರದಲ್ಲಿ ಬಳಕೆ ಮಾಡುವುದು ಮಾಡುತ್ತಾ ಬಂದಲ್ಲಿ ಕೂದಲು ಬೆಳೆಯುತ್ತದೆ. ಕೂದಲ ಆರೋಗ್ಯವೂ ವೃದ್ಧಿಸುತ್ತದೆ.
ಭೃಂಗರಾಜ
ಕೂದಲ ವಿಚಾರ ಬಂದಾಗಲೆಲ್ಲ ಭೃಂಗರಾಜ ಎಂಬ ಗಿಡಮೂಲಿಕೆಯ ಹೆಸರು ಬಳಕೆ ಮಾಡುವುದನ್ನು ನೀವು ಕೇಳಿರಬಹುದು. ಗಿಡಮೂಲಿಕೆಗಳಿಗೇ ರಾಜ ಎಂಬ ಹೆಸರಿಂದ ಕರೆಯಲ್ಪಡುವ ಭೃಂಗರಾಜ ಎಂಬ ಗಿಡಕ್ಕೆ ಕೂದಲಿಗೆ ಸಮಸ್ತ ಪೋಷಣೆಯನ್ನೂ ನೀಡುವ ಶಕ್ತಿಯಿದೆ. ಕೂದಲನ್ನು ಬುಡದಿಂದಲೇ ಶಕ್ತಿಯುತಗೊಳಿಸುವುದಷ್ಟೇ ಅಲ್ಲ, ಬಹುಬೇಗನೆ ಕೂದಲು ಉದ್ದ ಬೆಳೆಯುವಂತೆಯೂ ಮಾಡುತ್ತದೆ. ಭೃಂಗರಾಜದ ಎಣ್ಣೆ ಕೂದಲಿಗೆ ಅತ್ಯುತ್ತಮ ಪೋಷಣೆ ನೀಡುತ್ತದೆ.
ಮೆಂತ್ಯಕಾಳು
ಕಹಿ ರುಚಿಯ ಮೆಂತ್ಯ ಗುಣದಲ್ಲಿ ಯಾವತ್ತೂ ಸಿಹಿಯೇ. ಇದರಲ್ಲಿ ನೈಕೋಟಿನಿಕ್ ಆಸಿಡ್ ಎಂಬ ಪ್ರೊಟೀನ್ ಶ್ರೀಮಂತವಾಗಿದ್ದು ಇದು ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕೂದಲು ತುಂಡಾಗದಂತೆ ಪೋಷಣೆ ನೀಡಿ, ಹೊಳಪನ್ನೂ ನೀಡುತ್ತದೆ. ಮೆಂತ್ಯವನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ ಅದನ್ನು ಮೊಳಕೆ ಬರಿಸಿ ತಿನ್ನುವ ಮೂಲಕ, ಜೊತೆಗೆ ಅದನ್ನು ಪೇಸ್ಟ್ ಮಾಡಿ ತಲೆಗೆ ಹಚ್ಚುವ ಮೂಲಕ ಇದರ ಪ್ರಯೋಜನ ಪಡೆಯಬಹುದು.
ಆಲೋವೆರಾ
ಆಲೋವೆರಾ ಜೆಲ್ ಅನ್ನು ತಲೆಗೆ ಹಚ್ಚುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಇದು ತಲೆಯ ಭಾಗದ ಚರ್ಮದ ತೇವಾಂಶವನ್ನು ಸಮತೋಲನಗೊಳಿಸಿ, ಕೂದಲ ಬುಡವನ್ನು ಸಂರಕ್ಷಣೆ ಮಾಡುತ್ತದೆ. ನೈಸರ್ಗಿಕ ಕಂಡೀಷನರ್ ಆಗಿ ಕೆಲಸ ಮಾಡುವ ಇದು ಕೂದಲ್ನು ದಟ್ಟವಾಗಿಸುತ್ತದೆ. ನಯವಾಗಿಸುತ್ತದೆ.
ದಾಸವಾಳ
ದಾಸವಾಳದ ಎಲೆ ಹಾಗೂ ಹೂವು ಎರಡೂ ಕೂಡಾ ಕೂದಲ ಕಾಳಜಿ ಅತ್ಯಂತ ಒಳ್ಳೆಯದು. ಇದರಲ್ಲಿ ವಿಟಮಿನ್ ಹಾಗೂ ಅಮೈನೋ ಆಸಿಡ್ ಹೇರಳವಾಗಿ ಇರುವುದರಿಂದ ಕೂದಲು ಉದುರುವಿಕೆಯನ್ನು ತಡೆದು ಕೂದಲಿಗೆ ಹೊಳಪನ್ನು ನೀಡೀ ಸೊಂಪಾಗಿ ಉದ್ದ ಬೆಳೆಯುವಂತೆ ಮಾಡುತ್ತದೆ.
ಕಹಿಬೇವು
ಕಹಿಬೇವಿನಲ್ಲಿ ಆಂಟಿ ಬ್ಯಾಕ್ಟೀರಿಯಲ್ ಹಾಗೂ ಆಂಟಿ ಫಂಗಲ್ ಗುಣಗಳಿದ್ದು ಇವುಗಳು ಕೂದಲ ಬಹುತೇಕ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ತಲೆಹೊಟ್ಟು, ಕಜ್ಜಿ, ತುರಿಕೆ, ನಿಸ್ತೇಜ ಒಣಗಿದಂತಾಗುವ ಕೂದಲು, ಕೂದಲುರುವುದು ಇತ್ಯಾದಿ ಎಲ್ಲ ಸಮಸ್ಯೆಗಳಿಗೂ ಕಹಿಬೇವಿನಲ್ಲಿ ಉತ್ತರವಿದೆ. ಈ ಎಲ್ಲ ಸಮಸ್ಯೆಗಳಿಂದ ಕೂದಲನ್ನು ದೂರವಿಟ್ಟು ಕೂದಲ ಬೆಳವಣಿಗೆಗೆ ನೆರವಾಗುತ್ತದೆ.
ಇದನ್ನೂ ಓದಿ: Health Tips For Lungs: ಈ ಆಹಾರ ತಿನ್ನಿ, ನಿಮ್ಮ ಶ್ವಾಸಕೋಶದ ಆರೋಗ್ಯ ಹೆಚ್ಚಿಸಿಕೊಳ್ಳಿ