Site icon Vistara News

How To Look Younger: ನಲವತ್ತು ದಾಟಿದರೂ ʼಯಂಗ್‌ʼ ಆಗಿ ಇರಬೇಕಾ? ಈ ಟಿಪ್ಸ್‌ ಫಾಲೋ ಮಾಡಿ!

Group of Men

ನಲವತ್ತು ವರ್ಷ ಹತ್ತಿರ ಬರುತ್ತಿದ್ದಂತೆ, ಇಷ್ಟರವರೆಗೆ ಖುಲ್ಲಂಖುಲ್ಲಾ ಇದ್ದವರಿಗೆಲ್ಲ ವಯಸ್ಸಾಗುತ್ತಿರುವ ಸೂಚನೆ ಕಾಣಿಸತೊಡಗುತ್ತದೆ. ಚರ್ಮದಲ್ಲಿ ನಿರಿಗೆ, ಚರ್ಮದಲ್ಲಿ ಕಪ್ಪು ಚುಕ್ಕೆಗಳು, ಎಷ್ಟೇ ಪ್ರಯತ್ನ ಪಟ್ಟರೂ ತೂಕ ಇಳಿಸಲು ಸಾಧ್ಯವಾಗದಿರುವುದು, ಹಾರ್ಮೋನಿನ ಸಮಸ್ಯೆಗಳು ಇತ್ಯಾದಿ ಇತ್ಯಾದಿ. ಹೆಣ್ಣುಮಕ್ಕಳಿಗೆ ಕೆಲವು ಸಮಸ್ಯೆಗಳಾದರೆ, ಗಂಡು ಮಕ್ಕಳ ಸಮಸ್ಯೆ ಮತ್ತೊಂದು ಬಗೆಯದು. ಜೀವನದ ಜವಾಬ್ದಾರಿಗಳನ್ನು ನಿರ್ವಹಿಸುವ ಗಡಿಬಿಡಿಯಲ್ಲಿ, ಎಡೆಬಿಡದ ಕೆಲಸದ ನಡುವೆ ವಯಸ್ಸು ನಲವತ್ತು ಬಿಡಿ, ಐವತ್ತು ದಾಟುವುದೂ ಕೂಡಾ ಗೊತ್ತಾಗದು. ಅಷ್ಟರಲ್ಲಿ ಸಮಯ ಮೀರಿರುತ್ತದೆ ಅಷ್ಟೆ. ಯಾರೋ ಕಾಲೇಜು ಗೆಳೆಯನೋ ಗೆಳತಿಯೋ ಅಚಾನಕ್ಕಾಗಿ ಎಷ್ಟೋ ವರ್ಷಗಳ ನಂತರ ಸಿಕ್ಕಿ, ಅರೆ, ಈತ/ಈಕೆ ಈಗಲೂ ಅದ್ಹೇಗೆ ಕಾಲೇಜಿನಲ್ಲಿದ್ದ ಹಾಗೇ ಇದ್ದಾನಲ್ಲಾ/ಳಲ್ಲಾ, ನಾನ್ಯಾಕೆ ಸಂಸಾರ ಸಾಗರದದಲ್ಲಿ ಮುಳುಗಿ ಹೀಗಾಗಿಬಿಟ್ಟೆ ಎಂದೂ ಅನಿಸುವ ಸನ್ನಿವೇಶವೂ ಬರುವುದುಂಟು. ಅದಕ್ಕಾಗಿಯೇ, ಇಂಥ ಸನ್ನಿವೇಶ ಬರುವ ಮೊದಲೇ ಎಚ್ಚೆತ್ತುಕೊಂಡು ನಲುವತ್ತಾಗುವಾಗಲೇ ನಮ್ಮ ದೇಹ, ಆರೋಗ್ಯವನ್ನು ಕಾಳಜಿ ಮಾಡಿಕೊಂಡರೆ (how to look younger), ಖಂಡಿತವಾಗಿಯೂ ವಯಸ್ಸಾಗಿರುವುದು ಗೊತ್ತೇ ಆಗದು! ಲವಲವಿಕೆಯ ದೇಹ, ನಳನಳಿಸುವ ಚರ್ಮ, ನಲವತ್ತರ ನಂತರವೂ ನಿಮ್ಮದಾಗಬೇಕಿದ್ದರೆ ಇವಿಷ್ಟು ನೆನಪಿಡಿ ಸಾಕು.

ಏನು ತಿನ್ನುತ್ತಿದ್ದೀರಿ ಎಂಬ ಗಮನ ಇರಲಿ

ಚೆನ್ನಾಗಿ ಹಣ್ಣು ಹಂಪಲು, ತರಕಾರಿ, ಸೊಪ್ಪು ಎಲ್ಲವನ್ನೂ ನಿತ್ಯದ ಆಹಾರದಲ್ಲಿ ಬಳಸಿ. ಧಾನ್ಯಗಳು, ಬೇಳೆಕಾಳುಗಳೂ ಇರಲಿ. ಪ್ರೊಟೀನ್‌ ಸರಿಯಾಗಿ ಸೇವಿಸುತ್ತಿದ್ದೀರಾ ಗಮನಿಸಿ. ಆಂಟಿ ಆಕ್ಸಿಡೆಂಟ್‌ ಹೇರಳವಾಗಿರುವ ಆಹಾರ ಸೇವಿಸಿ.

ಚೆನ್ನಾಗಿ ನೀರು ಕುಡಿಯಿರಿ

ಪ್ರತಿದಿನವೂ ಆಗಾಗ ನೀರು ಕುಡಿಯುತ್ತಿರಿ. ಒಂದು ಬಾಟಲಿಯಲ್ಲಿ ನೀರು ತುಂಬಿಸಿಕೊಂಡು ಪಕ್ಕದಲ್ಲೇ ಇಟ್ಟುಕೊಂಡು ಕುಡಿಯಿರಿ. ಆಗ ಚರ್ಮಕ್ಕೂ ಸರಿಯಾಗಿ ನೀರು ದೊರಕಿ, ಚರ್ಮದಲ್ಲಿ ಸುಕ್ಕು, ನಿರಿಗೆಗಳು ಬೇಗ ಉಂಟಾಗುವುದಿಲ್ಲ. ಚರ್ಮ ಕಳೆಕಳೆಯಾಗಿ ಇರುತ್ತದೆ.

ಚರ್ಮದ ರಕ್ಷಣೆಗ ಕಡೆ ಗಮನ ಕೊಡಿ

ನಿತ್ಯವೂ ಮುಖವನ್ನು ಚೆನ್ನಾಗಿ ತೊಳೆಯುವುದು, ಮಾಯ್‌ಶ್ಚರೈಸರ್‌ ಹಚ್ಚುವುದು ಹಾಗೂ ಹಗಲು ಹೊತ್ತು ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸಿಕೊಳ್ಳಲು ಸನ್‌ಸ್ಕ್ರೀನ್‌ ಲೋಶನ್‌ ಹಚ್ಚುವುದು ಇತ್ಯಾದಿಗಳನ್ನು ತಪ್ಪದೆ ಮಾಡಿ. ಸನ್‌ಸ್ಕ್ರೀನ್‌ ಹಚ್ಚಿಕೊಳ್ಳುವುದು ಬಹಳ ಮುಖ್ಯ. ಯಾಕೆಂದರೆ, ಮುಖದ ಮೇಲಿನ ಕಪ್ಪು ಕಲೆಗಳು, ನಿರಿಗೆಗಳು ಸೂರ್ಯನ ಹಾನಿಕಾರಕ ಕಿರಣಗಳಿಂದ ಹೆಚ್ಚಾಗುತ್ತದೆ. ಹಾಗಾಗಿ ಎಸ್‌ಪಿಎಫ್‌ ೩೦ಕ್ಕಿಂತ ಹೆಚ್ಚು ಸಾಮರ್ಥ್ಯದ ಕ್ರೀಂನ್ನು ಹೊರಗೆ ಹೋಗುವ ಸ್ವಲ್ಪ ಸಮಯಕ್ಕೂ ಮೊದಲು ಹಚ್ಚಿಕೊಳ್ಳಿ.

ನಿಮ್ಮ ಚರ್ಮಕ್ಕೆ ಸೂಕ್ತವಾಗಿ ಹೊಂದಿಕೊಳ್ಳುವ ಕ್ರೀಂ, ಸೀರಂಗಳನ್ನು ಬಳಸಿ

ಮುಖದಲ್ಲಿರುವ ಸಮಸ್ಯೆಗಳಿಗೆ ಅನುಗುಣವಾಗಿ ರೆಟಿನಾಲ್‌, ಹ್ಯಲುರಾನಿಕ್‌ ಆಸಿಡ್‌ ಅಥವಾ ವಿಟಮಿನ್‌ ಸಿ ಸೀರಂ, ಪೆಪ್ಟೈಡ್‌ ಗಳಿರುವ ಕ್ರೀಂ, ಸೀರಂ ಬಳಸಿ.

ಚೆನ್ನಾಗಿ ವ್ಯಾಯಾಮ ಮಾಡಿ

ಎಷ್ಟೇ ಕೆಲಸಗಳಿರಲಿ, ನಿಮಗಾಗಿ ನೀವು ಸಮಯ ತೆಗೆದಿರಿಸುವುದನ್ನು ಮರೆಯಬೇಡಿ. ನಿಮ್ಮ ವ್ಯಾಯಾಮಕ್ಕೆ, ನಿಮ್ಮ ಆರೋಗ್ಯಕ್ಕೆ ದಿನಕ್ಕೆ ಒಂದು ಗಂಟೆಯಾದರೂ ತೆಗೆದಿರಿಸಲು ಅಭ್ಯಾಸ ಮಾಡಿ. ವ್ಯಾಯಾಮ, ಯೋಗ, ನಡಿಗೆ, ಓಡುವುದು, ಸೈಕ್ಲಿಂಗ್‌, ಈಜು ಹೀಗೆ ಏನೇ ಇರಲಿ, ನಿಮ್ಮಿಷ್ಟದ ವ್ಯಾಯಾಮಕ್ಕೆ ನಿತ್ಯವೂ ಸಮಯ ಕೊಡಿ.

ಚೆನ್ನಾಗಿ ನಿದ್ದೆ ಮಾಡಿ

ರಾತ್ರಿ ಬೇಗ ಮಲಗಿ ಬೇಗ ಏಳುವುದನ್ನು ಅಭ್ಯಾಸ ಮಾಡಿ. ದಿನಕ್ಕೆ ಕನಿಷ್ಠ ಎಂಟು ಗಂಟೆಗಳ ಕಾಲ ನಿದ್ದೆ ಮಾಡಿ. ನಿದ್ದೆ ನಿಮ್ಮನ್ನು ರಿಲ್ಯಾಕ್ಸ್‌ ಅಷ್ಟೇ ಮಾಡಿಸುತ್ತದೆ ಅಂದುಕೊಂಡರೆ ಅದು ನಿಮ್ಮ ಮೂರ್ಖತನ. ನಿದ್ದೆ ಹೊಸ ಅಂಗಾಂಶಗಳ ಬೆಳವಣಿಗೆಗೆ ಸಹಾಯ ಮಾಡುವುದಲ್ಲದೆ, ನಮ್ಮನ್ನು ಹೆಚ್ಚು ಉಲ್ಲಾಸದಾಯಕವಾಗಿ, ಯಂಗ್‌ ಆಗಿ ಕಾಣಿಸುವಂತೆ ಮಾಡುತ್ತದೆ.

ಕೆಟ್ಟ ಅಭ್ಯಾಸಗಳನ್ನು ಆದಷ್ಟೂ ಕಡಿಮೆ ಮಾಡಿ

ಧೂಮಪಾನ, ಮದ್ಯಪಾನದಂತಹ ಚಟುವಟಿಕೆಗಳಿಂದ ದೂರವಿರಿ. ಡಿಜಿಟಲ್‌ ದಾಸರಾಗಿದ್ದರೆ, ಅದರಿಂದ ಹೊರಗೆ ಬರಲು ಪ್ರಯತ್ನಿಸಿ.

ಕುರುಕಲು, ಜಂಕ್‌ ತಿನ್ನುವುದರಿಂದ ದೂರವಿರಿ

ಆದಷ್ಟೂ ಆರೋಗ್ಯಕರ ಆಹಾರ ಸೇವಿಸಿ. ಆರೋಗ್ಯಕರ ಆಹಾರದಿಂದ ಚರ್ಮವೂ ಆರೋಗ್ಯವಾಗಿರುತ್ತದೆ, ನೀವು ನಿಮ್ಮ ವಯಸ್ಸಿಗಿಂತಲೂ ಯಂಗ್‌ ಆಗಿ ಕಾಣಿಸುವಿರಿ ಎಂಬುದರಲ್ಲಿ ಡೌಟೇ ಇಲ್ಲ!

ಇದನ್ನೂ ಓದಿ: Bone Health: 40ರ ನಂತರ ಮೂಳೆಗಳನ್ನು ಕಾಪಾಡಿಕೊಳ್ಳುವುದು ಹೇಗೆ?

Exit mobile version