ಸದ್ಯದ ಪರಿಸ್ಥಿತಿಯಲ್ಲಿ ಬಹಳಷ್ಟು ಮಂದಿಗೆ ತೂಕ ಇಳಿಸಿಕೊಳ್ಳೋದು ಗೇಗೆ ಎನ್ನುವುದೇ ದೊಡ್ಡ ಸವಾಲು. ಬಹಳ ಸಾರಿ ಮೈಮರೆತು ನಾಲಿಗೆ ಚಪಲಕ್ಕೆ ಆಫೀಸಿನಿಂದ ಬರ್ತಾ ಇವತ್ತು ಮನೆಯೂಟ ಬೇಡ ಅನಿಸಿ, ಪಿಜ್ಜಾ ತಿಂದೋ, ಆರ್ಡರ್ ಮಾಡಿಯೋ, ಅಥವಾ ಗೆಳೆಯರ್ಯಾರೋ ಸಿಕ್ಕರು ಎಂದು ಅವರೊಂದಿಗೆ ಪಾರ್ಟಿ ಮಾಡಿ ಸಿಕ್ಕಿದ್ದೆಲ್ಲ ಹೊಟ್ಟೆ ತುರುಕಿಯೋ, ಮಳೆಯ ಚಳಿಗೆ ಆಗಾಗ ಮನೆಯಲ್ಲಿ ಕರಿದ ತಿಂಡಿಗಳನ್ನು ಮಾಡಿ ತಿಂದೋ, ಅಥವಾ ಅವರಿವ ಬರ್ಥ್‌ಡೇ ಪಾರ್ಟಿ, ಚೆನ್ನಾಗಿತ್ತು ಅಂತ ಎರಡು ಹೆಚ್ಚೇ ಸಮೋಸ, ಕೇಕು ಹೊಟ್ಟೆಗಿಳಿಸಿಕೊಂಡೋ, ಅಮ್ಮ ಮನೆಯಿಂದ ಪ್ರೀತಿಯಿಂದ ಮಾಡಿ ಪಾರ್ಸೆಲ್ ಕಳಿಸಿದ ತಿಂಡಿಗಳನ್ನೆಲ್ಲ ಒಂದೇ ವಾರದಲ್ಲಿ ಟಿವಿ ನೋಡುತ್ತಾ ಖಾಲಿ ಮಾಡಿಯೋ, ತೂಕ ಅನ್ನೋದು ಯಾವಾಗ ಎಷ್ಟೊತ್ತಿಗೆ ಏರಿತ್ತೋ ಗೊತ್ತೇ ಆಗುವುದಿಲ್ಲ. ಮೂರ್ನಾಲ್ಕು ತಿಂಗಳು ಬಿಟ್ಟು ಅಪರೂಪಕ್ಕೆ ಸಿಕ್ಕ ಗೆಳತಿಯೋ, ನೆಂಟರೋ, ಅರೆ ಗುಂಡಗಾಗಿ ಬಿಟ್ಟಿದ್ದಿ ಅನ್ನುವಾಗಲೇ ಜ್ಞಾನೋದಯವಾಗೋದು!
ಜಿಮ್‌ನಲ್ಲಿ ಸದಸ್ಯತ್ವ ತೆಗೆದುಕೊಳ್ಳೊಣ ಎಂದುಕೊಂಡರೂ ಬೆಳಗ್ಗೆ ಬೇಗ ಏಳಲಾಗೋದಿಲ್ಲ, ಸಂಜೆ ಆಫೀಸಿನಿಂದ ಬಂದರೆ ಸುಸ್ತು, ವಾಕಿಂಗ್ ಮಾಡಿದರೆ ಅಂದುಕೊಂಡ ಹಾಗೆ ತೂಕ ಇಳಿಯುವುದಿಲ್ಲ, ಇನ್ನೇನು ಮಾಡೋಣ ಎಂದು ತಲೆ ಕೆಟ್ಟು ಚಿತ್ರಾನ್ನವಾಗುತ್ತದೆ. ಹಲವು ಡಯಟ್ ಮಂತ್ರತಂತ್ರಗಳನ್ನು ಅನುಸರಿಸಿ ಸರಿಯಾಗಿ ತಿನ್ನದೆ, ಒಮ್ಮೆ ಸ್ವಲ್ಪ ತೂಕ ಇಳಿಯುತ್ತಿದೆ ಅನಿಸಿದರೂ, ಆಮೇಲೆ ಹಸಿವು ನಿಯಂತ್ರಿಸಲಾಗದೆ, ಮತ್ತೆ ಸಿಕ್ಕಿಸಿಕ್ಕಿದ್ದನ್ನು ತಿಂದು, ತೂಕ ಇಳಿಸಿಕೊಳ್ಳುವ ಕಾರ್ಯಕ್ರಮಕ್ಕೆ ಮಂಗಳ ಹಾಡಲಾಗುತ್ತದೆ. ಹಾಗಾದರೆ ಕಡಿಮೆ ಸಮಯ ಸಾಕಾಗುವ, ಹೆಚ್ಚು ಕ್ಯಾಲರಿ ಬರ್ನ್ ಮಾಡುವ ಆದರೆ, ಮನೆಯಲ್ಲೇ ಮಾಡಿಕೊಳ್ಳಬಹುದಾದ ವ್ಯಾಯಾಮವೊಂದರ ಅಗತ್ಯ ನಿಮಗಿದೆ ಎಂದಾದರೆ ಖಂಡಿತವಾಗಿಯೂ ನಿಮಗೆ ಸ್ಕಿಪ್ಪಿಂಗ್ (ಹಗ್ಗ ಜಿಗಿತ) ಬೆಸ್ಟ್.
ಇದನ್ನೂ ಓದಿ | Fitness motivation | ಬರೋಬ್ಬರಿ ತೂಕ ಇಳಿಸಿಕೊಂಡ ಬಾಲಿವುಡ್ ನಟೀಮಣಿಯರ ಸ್ಫೂರ್ತಿಕತೆ!
ಖರ್ಚೇ ಇಲ್ಲದ, ಓಡಿದ್ದಕ್ಕಿಂತಲೂ ಹೆಚ್ಚು ವೇಗವಾಗಿ ಕ್ಯಾಲರಿ ಬರ್ನ್ ಮಾಡಬಹುದಾದ ವ್ಯಾಯಾಮ ಎಂದರೆ ಸ್ಕಿಪ್ಪಿಂಗ್. ಒಂದು ಸ್ಕಿಪ್ಪಿಂಗ್ ಹಗ್ಗವಿದ್ದರೆ ಸಾಕು ಜೊತೆಗೆ ಒಂದಿಷ್ಟು ಸಮಯ, ಜೊತೆಗೆ ಡೆಡಿಕೇಷನ್, ಅಷ್ಟೇ.
ಹೊಟ್ಟೆ ಬಂದಿದೆ, ಕೈ ದಪ್ಪವಾಗಿದೆ, ಕಾಲು ದಪ್ಪ ಅನಿಸುತ್ತಿದೆ ಎಂದಾದಲ್ಲಿ, ಇಡೀ ದೇಹಕ್ಕೆ ಬೇಕಾದ ಬೆಸ್ಟ್ ಕಾರ್ಡಿಯೋ ಅಂದರೆ ಸ್ಕಿಪ್ಪಿಂಗ್. ಇದು ಇಡೀ ದೇಹಕ್ಕೆ ಏಕಪ್ರಕಾರದಲ್ಲಿ ವ್ಯಾಯಾಮ ನೀಡುವುದಲ್ಲದೆ, ಚರ್ಮವನ್ನು ಜೋತು ಬೀಳದಂತೆ, ಬಿಗಿತವನ್ನು ಕಾಪಾಡುತ್ತಲೇ, ಇಡೀ ದೇಹವನ್ನೇ ಟೋನ್ ಆಗಿಸುತ್ತದೆ.
ಹಾರ್ವರ್ಡ್ ಯುನಿವರ್ಸಿಟಿ ಲೇಖನದ ಪ್ರಕಾರ, ದಿನಕ್ಕೆ ಅರ್ಧ ಗಂಟೆ ಸ್ಕಿಪ್ಪಿಂಗ್ ಮಾಡುವುದರಿಂದ ೪೪೪ ಕ್ಯಾಲರಿ ಬರ್ನ್ ಮಾಡಬಹುದು. ಇದು ನಿಮ್ಮ ತೂಕದ ಮೇಲೆ ಅವಲಂಬಿತವಾಗಿದ್ದು, ಉದಾಹರಣೆಗೆ, ನೀವು ೫೬ ಕೆಜಿ ತೂಕವನ್ನು ಹೊಂದಿದ್ದರೆ ಸುಮಾರು ೩೦೦ ಕ್ಯಾಲರಿ, ೭೦ ಕೆಜಿ ತೂಕದವರು ಸುಮಾರು ೩೭೨ ಕ್ಯಾಲರಿ ಹಾಗೂ ೮೫ ಕಿಲೋ ತೂಗುವವರು ೪೪೪ ಕ್ಯಾಲರಿಗಳಷ್ಟನ್ನು ಬರ್ನ್ ಮಾಡಬಹುದು ಎನ್ನುತ್ತದೆ. ಪ್ರತಿದಿನ ಫೋನ್‌ನಲ್ಲಿ ಟೈಮರ್ ಆನ್ ಮಾಡಿಟ್ಟುಕೊಂಡು ಮಧ್ಯದಲ್ಲಿ ಕೆಲವು ನಿಗದಿತ ಸೆಕೆಂಡುಗಳ ವಿಶ್ರಾಂತಿ ತೆಗೆದುಕೊಳ್ಳುತ್ತಾ ಸ್ಕಿಪ್ಪಿಂಗನ್ನು ನಿಧಾನವಾಗಿ ಆರಂಭಿಸಿ, ದಿನದಿಂದ ದಿನಕ್ಕೆ ಸಮಯವನ್ನು ಏರಿಸುತ್ತಾ ಹೋದಲ್ಲಿ, ಈ ವ್ಯಾಯಾಮವನ್ನೇ ಚಾಲೆಂಜ್ ರೀತಿಯಲ್ಲಿ ಪರಿಗಣಿಸಿ, ತಿಂಗಳಲ್ಲಿ ತೂಕ ಇಳಿಕೆಯ ಗುರಿಯನ್ನು ತಲುಪಬಹುದು. ಹಾಗಾದರೆ, ಸ್ಕಿಪ್ಪಿಂಗ್ ಮಾಡುವುದರ ಉಪಯೋಗಗಳೇನು ಎಂಬುದನ್ನು ನೋಡೋಣ.
ಇದನ್ನೂ ಓದಿ | ದಿಢೀರನೆ ತೂಕ ಏರಿಕೆ ಸಮಸ್ಯೆ ನಿಮ್ಮದೂ ಹೌದೇ? ಇಲ್ಲಿದೆ ನೋಡಿ ಪರಿಹಾರ!
೧. ಸ್ಕಿಪ್ಪಿಂಗ್ ಒಂದು ಪರಿಣಾಮಕಾರಿ ಬೊಜ್ಜು ಕರಗಿಸಬಲ್ಲ ಉಪಾಯ. ಒಂದು ಗಂಟೆಗಳ ಕಾಲ ಸ್ಕಿಪ್ಪಿಂಗ್ ಮಾಡಿದರೆ, ೧,೩೦೦ ಕ್ಯಾಲರಿ ಬರ್ನ್ ಮಾಡಬಹುದಂತೆ!
೨. ಇದು ಓಡುವುದಕ್ಕಿಂತಲೂ ವೇಗವಾಗಿ ಬೊಜ್ಜು ಕರಗಿಸುವ ವಿಧಾನ. ಮುಖ್ಯವಾಗಿ ಇದನ್ನು ಎಲ್ಲಿಗಾದರೂ ಹೊರಗೆ ಹೋಗಿಯೇ ಮಾಡಬೇಕೆಂದಿಲ್ಲ. ಮನೆಯಲ್ಲೇ ಮಾಡಬಹುದು.
೩. ಯಾವುದೇ ಖರ್ಚಿಲ್ಲದೆ ಮಾಡಬಹುದಾದ ಸರಳ ವ್ಯಾಯಾಮ.
೪. ಭಾರ ಎತ್ತುವಿಕೆಯಿಂದ ಪಡೆಯಬಹುದಾದಂಥ ಟೋನ್ಡ್ ದೇಹವನ್ನು ಸ್ಕಿಪ್ಪಿಂಗ್ ಮೂಲಕ ಪಡೆಯಬಹುದು.
೫. ಕಾಲಿನ ಬಲವರ್ಧನೆ, ಸಮತೋಲನ ಇದರಿಂದ ವೃದ್ಧಿಯಾಗುತ್ತದೆ. ಎಲ್ಲ ಓಟಗಾರರಿಗೂ ಅದಕ್ಕಾಗಿಯೇ ಸ್ಕಿಪ್ಪಿಂಗನ್ನು ಮುಖ್ಯವಾಗಿ ಮಾಡಿಸಲಾಗುತ್ತದೆ.
೬. ಇಡೀ ದೇಹಕ್ಕೆ ಒಂದೇ ಸಲಕ್ಕೆ ಏಕಪ್ರಕಾರವಾಗಿ ಸಿಗಬಹುದಾದ ವ್ಯಾಯಾಮವಿದು. ತೊಡೆಯ ಮಾಂಸಖಂಡಗಳು, ತೋಳು ಸೇರಿದಂತೆ ದೇಹದ ಎಲ್ಲ ಭಾಗಗಳನ್ನೂ ಏಕಪ್ರಕಾರವಾಗಿ ಟೋನ್ ಮಾಡುತ್ತದೆ.
೭. ಓಡುವುದರಿಂದ ಆಗಬಹುದಾದ ಕೀಲುನೋವಿನ ಸಮಸ್ಯೆ ಈ ವ್ಯಾಯಾಮದಲ್ಲಿ ತಲೆದೋರುವುದು ಕಡಿಮೆ.
೯. ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಹೃದಯಬಡಿತವನ್ನು ಹೆಚ್ಚಿಸುತ್ತದೆ. ಅಧಿಕ ರಕ್ತದೊತ್ತಡ ಇರುವ ಮಂದಿಗೆ ಓಳ್ಳೆಯದು. ಆದರೂ, ಆರಂಬಿಸುವ ಮುನ್ನ ವಯಸ್ಸಿಗೆ ಅನುಗುಣವಾಗಿ ವೈದ್ಯರನ್ನು ಸಂಪರ್ಕಿಸಿ ಆರಂಭಿಸುವುದು ಉತ್ತಮ.
೧೦. ಮೂಳೆಯ ಸಾಂದ್ರತೆಯನ್ನು ಉತ್ತಮಗೊಳಿಸುತ್ತದೆ.