Site icon Vistara News

Sleep Apnea: ಗೊರಕೆಯೆಂದು ನಿರ್ಲಕ್ಷಿಸಬೇಡಿ, ಇದು ಜೀವಕ್ಕೂ ಎರವಾದೀತು!

Sleep Apnea

ನಾವೆಲ್ಲ ನಿದ್ದೆ ಮಾಡುವವರೇ (sleep apnea) ಆದರೂ, ನಮ್ಮಲ್ಲಿ ನಿದ್ದೆ ಸರಿಯಾಗಿ ಬಾರದೆ ಒದ್ದಾಡುವವರದ್ದು ಒಂದು ವರ್ಗ. ನಿದ್ದೆ ಬಂದ ಮೇಲೂ ಒದ್ದಾಡುವವರದ್ದು ಇನ್ನೊಂದು ವರ್ಗ. ಈ ಎರಡನೇ ಸಾಲಿಗೆ ಸೇರಿದವರು, ನಿದ್ದೆ ಬಂದ ಮೇಲೆ ತಾವು ಒದ್ದಾಡುವುದಿಲ್ಲ, ಆಚೀಚಿನವರನ್ನು ಒದ್ದಾಡಿಸುತ್ತಾರೆ- ಗೊರಕೆ ಹೊಡೆಯುವ ಮೂಲಕ. ಅರೆ! ಗೊರೆಯುವುದು ನಿದ್ದೆಯ ಅವಿಭಾಜ್ಯ ಅಂಗ ಎಂದು ತಿಳಿದವರೇ ಭಾರತದಲ್ಲಿ ಹೆಚ್ಚಿರುವಾಗ, ಗೊರೆದು ಒರಗುವವರ ಬಗ್ಗೆ ಹೀಗೆ ತಕರಾರು ತೆಗೆಯಬಹುದೇ ಎನ್ನಬಹುದು. ಬೇರೆ ದೇಶಗಳಲ್ಲಿ ಹಾಗಲ್ಲ, ಗೊರೆದು ನಿದ್ದೆಗೆಡಿಸುವ ಸಂಗಾತಿ ಬೇಡವೆಂದು ಸೋಡಾಚೀಟಿ ಕೊಟ್ಟ ನಿದರ್ಶನಗಳು ಸಾಕಷ್ಟಿವೆ. ಇರಲಿ, ಗೊರೆದರೆ ಪಕ್ಕದಲ್ಲಿ ಮಲಗಿದವರ ನಿದ್ದೆ ಹಾಳು ಎನ್ನುವುದು ದೊಡ್ಡ ವಿಷಯವೇ ಅಲ್ಲ. ಹಾಗೆ ಗಂಟಲು ಬಿರಿಯುವಂತೆ ಗೊರೆದರೆ, ಗೊರೆಯುವವರದ್ದೇ ಆರೋಗ್ಯ ಹಾಳು ಎನ್ನುವುದು ಮುಖ್ಯ ಸಂಗತಿ.

ಸ್ಲೀಪ್‌ ಅಪ್ನಿಯ

ಗೊರಕೆ ಹೊಡೆಯುವ ಮತ್ತು ಹಾಗೆ ಮಾಡುವಾಗ ಕೆಲವು ಕ್ಷಣಗಳ ಕಾಲ ಉಸಿರಾಟ ನಿಲ್ಲಿಸುವ ಈ ಪ್ರಕ್ರಿಯೆಯನ್ನು ಅಬ್‌ಸ್ಟ್ರಕ್ಟಿವ್‌ ಸ್ಲೀಪ್‌ ಅಪ್ನಿಯ (ಒಎಸ್‌ಎ) ಎಂದು ಕರೆಯಲಾಗುತ್ತದೆ. ಸಣ್ಣ ಪ್ರಮಾಣದಲ್ಲಿ ಗೊರೆಯುವವರು, ಆಯಾಸವಾದಾಗ, ನಿದ್ದೆಗೆಟ್ಟಾಗ ಗೊರೆಯುವವರು ಬಹಳಷ್ಟು ಜನರಿದ್ದಾರೆ. ಆದರೆ ಇಂಥ ಸಂದರ್ಭಗಳಲ್ಲದೆ, ಸದಾ ಕಾಲ ಗೊರೆಯುವುದು, ಜೋರಾದ ಕರ್ಕಶವಾದ ಗೊರಕೆಗಳು, ಆಗಾಗ ಉಸಿರುಗಟ್ಟುವಂಥದ್ದು- ಇವೆಲ್ಲ ದೀರ್ಘ ಕಾಲದಲ್ಲಿ ಆರೋಗ್ಯಕ್ಕೆ ಸಮಸ್ಯೆಗಳನ್ನು ತರುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಈ ಸ್ಥಿತಿಯನ್ನು ಸರಿಯಾಗಿ ನಿರ್ವಹಿಸದೇ ಹೋದಲ್ಲಿ, ಹೃದಯ ರೋಗಗಳು ಬರುವ ಸಾಧ್ಯತೆಯನ್ನು ಶೇ. 30ರಷ್ಟು ಮತ್ತು ಪಾರ್ಶ್ವವಾಯು ಬಡಿಯುವ ಸಾಧ್ಯತೆಯನ್ನು ಶೇ. 60ರಷ್ಟು ಹೆಚ್ಚಿಸುತ್ತದಂತೆ. ಅಂದರೆ ನಿದ್ರಿಸಿದವರು ಏಳದಿರುವ ಸಾಧ್ಯತೆ ಈ ಪ್ರಮಾಣದಲ್ಲಿದೆ.

ಲಕ್ಷಣಗಳೇನು?

ವಿಶ್ವದೆಲ್ಲೆಡೆಯ ಅಂಕಿ-ಅಂಶಗಳನ್ನು ನೋಡಿದರೆ, ಸುಮಾರು 936 ದಶಲಕ್ಷ ಮಂದಿ ಒಎಸ್‌ಎ ಹೊಂದಿದವರಿದ್ದಾರೆ. ಇವರಲ್ಲಿ ಹೆಚ್ಚಿನವರ ಲಕ್ಷಣಗಳು ಸೌಮ್ಯವಾದದ್ದು. ಈ ಲಕ್ಷಣಗಳು ತೀವ್ರವಾಗಿ ಇದ್ದವರಲ್ಲಿ, ನಿದ್ದೆಯಲ್ಲಿ ಆಗಾಗ ಉಸಿರುಗಟ್ಟುವುದು, ಕೆಮ್ಮುವುದು, ನಿದ್ದೆಯಿಂದ ಆಗಾಗ ಎಚ್ಚರವಾಗುವುದು, ಬಾತ್‌ರೂಂ ಓಡಾಟಗಳು, ನಿದ್ದೆಯಲ್ಲಿ ಬೆವರುವುದು ಇತ್ಯಾದಿಗಳು ಸಾಮಾನ್ಯ. ಇದರಿಂದಾಗಿ ಹಗಲಿಗೂ ಇವರು ಸುಸ್ತು, ಆಯಾಸ, ಏಕಾಗ್ರತೆಯ ಕೊರತೆ, ತಲೆನೋವು, ಎದೆ ಉರಿ, ಮೂಡ್‌ ಬದಲಾವಣೆ, ತೂಕಡಿಕೆಗಳಿಂದ ಮುಕ್ತರಾಗಿ ಇರುವುದಿಲ್ಲ. ಇದನ್ನು ವೈದ್ಯಕೀಯವಾಗಿ ನಿರ್ವಹಿಸದಿದ್ದರೆ ಮುಂದೆ ಗಂಭೀರ ಸಮಸ್ಯೆಗಳು ಬರಬಹುದು ಎನ್ನುವುದು ತಜ್ಞರ ಅಭಿಮತ.
ಬ್ರೆಜಿಲ್‌ ದೇಶದ ಸಾವೊ ಪೌಲೊ ವಿಶ್ವವಿದ್ಯಾಲಯದ ಅಧ್ಯಯನಕಾರರು ಹೇಳುವ ಪ್ರಕಾರ, ಒಂದು ಸರಳವಾದ ರಕ್ತ ಪರೀಕ್ಷೆಯ ಮೂಲಕ ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದು. ಇದನ್ನು ವಿವರಿಸಿ ಹೇಳುವುದಾದರೆ, ರಕ್ತದಲ್ಲಿರುವ ಹೋಮೋಸಿಸ್ಟೀನ್‌ ಎಂಬ ಅಮೈನೊ ಆಮ್ಲದ ಮಟ್ಟ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿದ್ದರೆ ರಕ್ತ ಮತ್ತು ಹೃದಯದ ಸಮಸ್ಯೆಗಳು ಹೆಚ್ಚಾಗಬಹುದು. ಸರಿ, ಆದರೆ ಹೋಮೋಸಿಸ್ಟೀನ್‌ಗೂ ಗೊರೆಯುವುದಕ್ಕೂ ಎತ್ತಣಿದೆಂತ್ತ ಸಂಬಂಧ? ಇದಕ್ಕಾಗಿ ಈ ತಜ್ಞರು ನಡೆಸಿದ್ದ ಅಧ್ಯಯನದ ಬಗ್ಗೆ ಚುಟುಕಾಗಿ ಹೇಳಬೇಕಿದೆ.

ಇದನ್ನೂ ಓದಿ: Hair Oil Tips: ರಾತ್ರಿ ಕೂದಲಿಗೆ ಎಣ್ಣೆ ಹಚ್ಚಿ ಬೆಳಗ್ಗೆ ಸ್ನಾನ ಮಾಡಿದರೆ ಲಾಭವೋ ನಷ್ಟವೋ?

ವಿಷಯ ಏನೆಂದರೆ…

ಇದಕ್ಕಾಗಿ ಸುಮಾರು 20-80 ವರ್ಷ ವಯಸ್ಸಿನ ೮೦೦ಕ್ಕೂ ಹೆಚ್ಚಿನವರ ದತ್ತಾಂಶಗಳ ಅಧ್ಯಯನವನ್ನು ಈ ತಂಡ ನಡೆಸಿತು. ಇದರ ಪ್ರಕಾರ, ರಕ್ತದಲ್ಲಿ ಹೋಮೋಸಿಸ್ಟೀನ್‌ ಎಷ್ಟಿದೆ ಎನ್ನುವ ಆಧಾರದ ಮೇಲೆ ಕಡಿಮೆ, ಮಧ್ಯಮ, ಹೆಚ್ಚು ಎಂಬ ಮೂರು ಗುಂಪುಗಳನ್ನಾಗಿ ವಿಂಗಡಿಸಿದ್ದರು. ಈ ಗುಂಪುಗಳ ನಿದ್ದೆಯನ್ನು ಅಧ್ಯಯನಕ್ಕೆ (ಪಾಲಿಸೋಮ್ನೋಗ್ರಾಂ) ಒಳಪಡಿಸಿದಾಗ ಅಚ್ಚರಿಯ ಅಂಶಗಳು ಕಂಡವು. ಒಂದು ತಾಸಿನ ಸರಾಸರಿ ನಿದ್ದೆಯ ಹೊತ್ತಿನಲ್ಲಿ ಎಷ್ಟು ಬಾರಿ ಉಸಿರು ಕಡಿಮೆಯಾಗುತ್ತದೆ ಅಥವಾ ನಿಲ್ಲುತ್ತದೆ (ಒಎಸ್‌ಎ) ಎಂಬುದನ್ನು ಪರಿಶೀಲಿಸಲಾಯಿತು. ತಾಸಿಗೆ ಐದಕ್ಕಿಂತ ಕಡಿಮೆ ಬಾರಿ ಹೀಗಾದರೆ ಸಾಮಾನ್ಯ. 5-15 ಬಾರಿ ಹೀಗಾದರೆ ಸೌಮ್ಯ ಪ್ರಮಾಣದಲ್ಲಿ ಒಎಸ್‌ಎ ಇದೆ; 15-30 ಬಾರಿ ಹೀಗಾದರೆ ಮಧ್ಯಮ ಪ್ರಮಾಣದ ಒಎಸ್‌ಎ ಇದೆ; 30ಕ್ಕಿಂತ ಹೆಚ್ಚು ಬಾರಿ ಹೀಗಾದರೆ ತೀವ್ರ ತೆರನಾಗಿದೆ ಎಂಬುದು ಅಳತೆಗೋಲು. ಕಡಿಮೆ ಪ್ರಮಾಣದ ಒಎಸ್‌ಎ ಇದ್ದವರ ರಕ್ತದಲ್ಲಿ ಹೋಮೋಸಿಸ್ಟೀನ್‌ ಮಟ್ಟ ಕಡಿಮೆ ಇತ್ತು; ಮಧ್ಯಮ ಒಎಸ್‌ಎ ಇದ್ದವರಲ್ಲಿ ಹೋಮೋಸಿಸ್ಟೀನ್‌ ಮಟ್ಟವೂ ಮಧ್ಯಮ ಪ್ರಮಾಣದಲ್ಲೇ ಇತ್ತು; ಉಳಿದವರಲ್ಲಿ ಎರಡೂ ತೀವ್ರವಾಗಿಯೇ ಇದ್ದವು. ಹಾಗಾಗಿ ಇದೊಂದು ರಕ್ತ ಪರೀಕ್ಷೆ ಮುಂದಾಗುವುದನ್ನು ತಪ್ಪಿಸೀತು ಎನ್ನುವುದು ಅಧ್ಯಯನಕಾರರ ನಿಲುವು.

Exit mobile version