ನಮ್ಮ ದೇಹದ ವ್ಯವಸ್ಥೆಯೇ ಬಹಳ ಸಂಕೀರ್ಣ. ಇದು ಎಲ್ಲ ಬಗೆಯ ಪೋಷಕಾಂಶಗಳು, ಖನಿಜಾಂಶಗಳಿಂದ ಪೋಷಣೆ ಬಯಸುತ್ತದೆ. ನಮ್ಮ ಆರೋಗ್ಯದ ಕೀಲಿ ಕೈ ಇರುವುದು ಪೋಷಕಾಂಶಗಳಲ್ಲಿಯೇ. ನಾವು ಸರಿಯಾದ ಆಹಾರ, ಸರಿಯಾದ ಸಮಯಕ್ಕೆ ಸೇವಿಸುತ್ತಿದ್ದರೆ, ದೇಹಕ್ಕೆ ಬೇಕಾದ ಎಲ್ಲ ಪೋಷಕ ತತ್ವಗಳೂ ಸಿಗುತ್ತದೆ. ಆದರೆ, ಯಾವುದಾದರೊಂದರ ಕೊರತೆಯೂ ಸಾಕು, ಆರೋಗ್ಯ ಹದಗೆಡಲು. ನಮ್ಮ ದೇಹಕ್ಕೆ ಹೀಗೆ ಬೇಕಾಗುವ ಖನಿಜಾಂಶಗಳ ಪೈಕಿ ಸೋಡಿಯಂ ಕೂಡಾ ಒಂದು. ಸೋಡಿಯಂ ನಾವು ನಿತ್ಯವೂ ಸೇವಿಸುವ ಉಪ್ಪಿನ ಮೂಲಕ ನಮಗೆ ಲಭ್ಯವಾಗುತ್ತದೆ. ಈ ಖನಿಜಾಂಶ ಹೆಚ್ಚಾದರೂ ಸಮಸ್ಯೆಯೇ. ಕಡಿಮೆಯಾದರೂ ಸಮಸ್ಯೆಯೇ. ಇವುಗಳಲ್ಲಿ ಸ್ವಲ್ಪ ಹೆಚ್ಚುಕಡಿಮೆಯಾದರೂ ದೇಹ ಅದನ್ನು ನಮಗೆ ತೋರಿಸುತ್ತದೆ. ದೇಹಕ್ಕೆ ಉಪ್ಪಿನ ಸೇವನೆ ಕಡಿಮೆಯಾದಾಗ ಏನಾಗುತ್ತದೆ ಗೊತ್ತೇ? ಬನ್ನಿ, ನಮ್ಮ ದೇಹದಲ್ಲಿ ಸೋಡಿಯಂ ಕಡಿಮೆಯಾದರೆ ಏನೆಲ್ಲ ಸಮಸ್ಯೆಗಳ ಮೂಲಕ ಅದು ನಮಗೆ ತಿಳಿಯುತ್ತದೆ ಎಂಬುದನ್ನು ನೋಡೋಣ. ಸೋಡಿಯಂ ನಮ್ಮ ದೇಹಕ್ಕೆ ಬೇಕಾದ ಅತ್ಯಂತ ಮುಖ್ಯವಾದ ಎಲೆಕ್ಟ್ರೋಲೈಟ್. ಇದು ಉತ್ತಮ ಆರೋಗ್ಯಕ್ಕೆ ಬಹಳ ಮುಖ್ಯ.ದು ನಮ್ಮ ದೇಹದಲ್ಲಿ ತಾನೇ ತಾನಾಗಿ ಉತ್ಪತ್ತಿಯಾಗುವುದಿಲ್ಲ. ಮೊಟ್ಟೆ, ಮಾಂಸ, ಹಾಲು ಇತ್ಯಾದಿಗಳ ಮೂಲಕ ದೇಹಕ್ಕೆ ಸೋಡಿಯಂ ಲಭ್ಯವಾದರೂ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ನಮಗೆ ಸೋಡಿಯಂ ಸಿಗುವುದು ನಿತ್ಯವೂ ಆಹಾರದ ಮೂಲಕ ನಾವು ಸೇವಿಸುವ ಉಪ್ಪಿನ ಮೂಲಕ. ಸೋಡಿಯಂ ಕ್ಲೋರೈಡ್ ಆಗಿರುವ ಉಪ್ಪಿನಲ್ಲಿ ಶೇಕಡಾ ೪೦ರಷ್ಟು ಸೋಡಿಯಂ ಹಾಗೂ ಶೇಕಡಾ 60ರಷ್ಟು ಕ್ಲೋರೈಡ್ ಇದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಒಂದು ಚಮಚ ಉಪ್ಪಿನಲ್ಲಿ ಸುಮಾರಿ ೨೩೦೦ ಎಂಜಿ ಗಿಂತಲೂ ಹೆಚ್ಚು ಸೋಡಿಯಂ ಇದೆ ಎನ್ನುತ್ತದೆ. ಅತಿಯಾದ ಉಪ್ಪಿನ ಸೇವನೆ ಸಮಸ್ಯೆಗಳನ್ನು ತಂದೊಡ್ಡುವುದು ನಿಜವೇ ಆದರೂ, ಉಪ್ಪು ದೇಹಕ್ಕೆ ಕಡಿಮೆಯೂ ಆಗಬಾರದು. ಇದು ಕಡಿಮೆಯಾದರೆ, ಮಾನಿಸಕ ಒತ್ತಡ, ಖಿನ್ನತೆ, ಸುಸ್ತು, ವಾಂತಿ, ತಲೆನೋವು, ಗೊಂದಲ ಇತ್ಯಾದಿ ಸಮಸ್ಯೆಗಳನ್ನು ತಂದೊಡ್ಡುತ್ತದೆ.
ತಲೆನೋವು
ದೇಹದಲ್ಲಿ ಸೋಡಿಯಂ ಕಡಿಮೆಯಾದಾಗ ಕಾಣುವ ಲಕ್ಷಣಗಳಲ್ಲಿ ಪ್ರಮುಖವಾದದ್ದು ಇದು. ತಲೆನೋವು ಪದೇ ಪದೇ ಕಾಡುತ್ತಿದ್ದರೆ, ನಿಮ್ಮ ಸೋಡಿಯಂ ಮಟ್ಟ ಸರಿಯಾಗಿದೆಯೇ ಎಂಬುದನ್ನೂ ನೀವು ಪರಿಗಣಿಸಬೇಕು.
ವಾಂತಿ, ತಲೆಸುತ್ತು
ದೇಹದಲ್ಲಿ ಸೋಡಿಯಂ ಮಟ್ಟ ಕಡಿಮೆಯಾದಾಗ ದೇಹದಲ್ಲಿರುವ ನೀರಿನ ಮಟ್ಟದಲ್ಲೂ ಏರುಪೇರಾಗುತ್ತದೆ. ಇದರಿಂದ ತಲೆಸುತ್ತು, ವಾಂತಿಯೂ ಸಾಮಾನ್ಯ.
ಗೊಂದಲ
ನಮ್ಮ ನರಮಂಡಲ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಣೆ ಮಾಡಲು ಸೋಡಿಯಂ ಬೇಕೇ ಬೇಕು. ಇದು ಸರಿಯಾದ ಮಟ್ಟದಲ್ಲಿದ್ದರೆ ನರಮಂಡಲ ಚುರುಕಾಗಿ ಕಾರ್ಯ ನಿರ್ವಹಿಸುತ್ತದೆ. ಸೋಡಿಯಂ ಮಟ್ಟ ಕಡಿಮೆಯಾದಾಗ, ಮಿದುಳಿಗೆ ನರಮಂಡಲ ಸರಿಯಾದ ಸಂದೇಶಗಳನ್ನು ಕಳುಹಿಸಲು ಅಸಮರ್ಥವಾಗಿ ಹೀಗೆ ಗೊಂದಲಗಳನ್ನು ಹುಟ್ಟುಹಾಕುತ್ತದೆ.
ಮಾಂಸಖಂಡಗಳಲ್ಲಿ ಸೆಳೆತ
ಸೋಡಿಯಂ ಮಟ್ಟ ದೇಹದಲ್ಲಿ ಕಡಿಮೆಯಾದಾಗ, ದೇಹದಿಂದ ಬೇಡವಾದ ಕಶ್ಮಲಗಳೂ ಹೊರಹೋಗುವುದು ಕಡಿಮೆಯಾಗುತ್ತದೆ. ಇದರಿಂದ ಈ ಕಶ್ಮಲಗಳು ದೇಹದಲ್ಲಿ ಮಾಂಸಖಂಡಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನೋವು, ಸೆಳೆತ ಇತ್ಯಾದಿಗಳು ಕಾಣಿಸಿಕೊಳ್ಳುತ್ತದೆ.
ಇದನ್ನೂ ಓದಿ: How Much Protein in an Egg: ನಮಗೆ ಏಕೆ ಪ್ರೊಟಿನ್ ಬೇಕು? ಒಂದು ಮೊಟ್ಟೆಯಿಂದ ಎಷ್ಟು ಪ್ರೊಟೀನ್ ಪಡೆಯಬಹುದು?
ಶಕ್ತಿಹೀನತೆ
ಸೋಡಿಯಂ ದೇಹದಲ್ಲಿ ಕಡಿಮೆಯಾದಾಗ, ರಕ್ತವು ದೇಹದ ಅಂಗಾಂಗಗಳಿಗೆ ಪೋಷಕಾಂಶಗಳನ್ನು ಹಂಚುವಿಕೆಯ ಕೆಲಸವನ್ನೂ ನಿಧಾನ ಮಾಡುತ್ತದೆ. ಇದರಿಂದ ಪೋಷಕಾಂಶಗಳು ಸರಿಯಾಗಿ ತಲುಪದೆ, ಶಕ್ತಿಹೀನತೆ ಬರುತ್ತದೆ. ಸುಸ್ತು, ನಿಶಃಕ್ತಿ ಕಾಡುತ್ತದೆ.