Site icon Vistara News

Sudden cardiac death | ಮೊದಲೇ ತಿಳಿಯುವುದು, ತಪ್ಪಿಸುವುದು ಹೇಗೆ?

Sudden cardiac death

ಚಿಕ್ಕ ವಯೋಮಾನದವರು, ಆರೋಗ್ಯದ ಬಗ್ಗೆ ಕಾಳಜಿ ವಹಿಸುವವರು, ಜಿಮ್‌ ಉತ್ಸಾಹಿಗಳು, ಕ್ರೀಡಾಪಟುಗಳು- ಇಂಥ ಹಲವರು ಇದ್ದಕ್ಕಿದ್ದಂತೆ ಹೃದಯಾಘಾತದಿಂದ ನಿಧನರಾಗಿದ್ದು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ. ಅದರಲ್ಲೂ ನಟರು, ಕ್ರೀಡಾಪಟುಗಳಂಥ ಖ್ಯಾತನಾಮರು ಹೀಗೆ ಸಾವನ್ನಪ್ಪಿದ್ದಾಗ ಈ ದುರದೃಷ್ಟಕರ ಘಟನೆಯನ್ನು ಹಳಿಯುವುದು ಕೇಳಿಬರುತ್ತದೆ. ಜೊತೆಗೆ, ಕಳ್ಳನಂತೆ ಬಂದು ಜೀವ ಕಸಿಯುವ ಈ ಅವಸ್ಥೆಯ ಬಗ್ಗೆ ಜನರಲ್ಲಿ ಆತಂಕ, ಶಂಕೆ ಸಹಜವಾಗಿ ಮೂಡಿಬರುತ್ತಿದೆ. ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಸಡನ್‌ ಕಾರ್ಡಿಯಾಕ್‌ ಡೆತ್‌ (ಎಸ್‌ಸಿಡಿ) ಎಂದು ಹೇಳಲಾಗುತ್ತದೆ.

ಏನಿದು?: ತನ್ನ ಆಗಮನದ ಸೂಚನೆಯನ್ನು ನೀಡಿದ ಒಂದು ತಾಸಿನೊಳಗೇ ಸಂಭವಿಸುವ ಹೃದಯಾಘಾತವಿದು. ಹಾಗಾಗಿ ಈ ಸೂಚನೆಯನ್ನು ಸ್ಪಷ್ಟವಾಗಿ ಗ್ರಹಿಸಿದ ವ್ಯಕ್ತಿಗೂ ಜೀವ ಉಳಿಸಿಕೊಳ್ಳುವುದಕ್ಕೆ ಸ್ವಲ್ಪವೇ ಹೊತ್ತು ಕೈಯಲ್ಲಿರುತ್ತದೆ. ಸೂಚನೆ ಗ್ರಹಿಕೆಗೇ ಬಾರದಿದ್ದರೆ, ಕಥೆ ಮುಗಿಯುತ್ತದೆ. “ಇಂಥ ಘಟನೆಗಳು ಹೊಸದೂ ಅಲ್ಲ, ಮೊದಲೂ ಅಲ್ಲ. ಎಷ್ಟೋ ಬಾರಿ ವ್ಯಕ್ತಿಗಳು ನಿದ್ದೆಯಲ್ಲೇ ನಿಧನರಾಗಿರುತ್ತಾರೆ. ಆಗಲೂ ಯಾವ ಸೂಚನೆಯೂ ದೊರೆಯುವುದಿಲ್ಲ. ಕೆಲವೊಮ್ಮೆ ವ್ಯಾಯಾಮ ಮಾಡುವಾಗ ಅಥವಾ ಕ್ರೀಡೆಯಲ್ಲಿರುವಾಗಲೂ ಇದು ಸಂಭವಿಸಬಹುದು. ಇಂಥ ಘಟನೆಗಳಲ್ಲಿ ಶೇ. ೮೦ರಷ್ಟು ಪ್ರಕರಣಗಳಲ್ಲಿ ಮೊದಲೇ ಇದ್ದ ಹೃದಯ ತೊಂದರೆ ತಿಳಿದಿರುವುದಿಲ್ಲ. ಕೆಲವೊಮ್ಮೆ ಆನುವಂಶಿಕ ಕಾರಣಗಳಿದ್ದು, ಪತ್ತೆಯಾಗಿರುವುದಿಲ್ಲ. ಸ್ಥೂಲಕಾಯ, ಕುಡಿತ ಅಥವಾ ಫೈಬ್ರೋಸಿಸ್‌ ಸಮಸ್ಯೆಗಳೂ ಇದ್ದಿರಬಹುದು” ಎನ್ನುವುದು ಹೃದಯ ತಜ್ಞ ಡಾ. ಪ್ರದೀಪ್‌ ಕುಮಾರ್‌ ಅವರ ಅಭಿಪ್ರಾಯ.

ಯುವಕರಲ್ಲಿ ಹೆಚ್ಚೇಕೆ?: ಹೃದಯದ ಸ್ನಾಯುಗಳು ಸ್ಥೂಲವಾಗುವ ಸಮಸ್ಯೆ ಕೆಲವರಲ್ಲಿ ಇರಬಹುದು. ಬೇರೆ ಆನುವಂಶಿಕ ತೊಂದರೆಗಳು ಇರುವುದಕ್ಕೂ ಸಾ‍ಧ್ಯ. ಹೃದಯದ ಸ್ನಾಯುಗಳು ಸ್ಥೂಲವಾದಾಗ ರಕ್ತವನ್ನು ಪಂಪ್‌ ಮಾಡುವ ಹೃದಯದ ಸಾಮರ್ಥ್ಯಕ್ಕೆ ತೊಡಕಾಗುತ್ತದೆ. ಇದರಿಂದ ಹೃದಯಾಘಾತ ಸಂಭವಿಸಬಹುದು. ಇದಲ್ಲದೆ, ಬೇರೆ ರೀತಿಯ ತೊಂದರೆಗಳೂ ಹೃದಯದಲ್ಲಿ ಇದ್ದು, ಆ ವ್ಯಕ್ತಿಯ ಅರಿವಿಗೆ ಬಾರದೇ ಹೋಗಿರಬಹುದು. ಕುಟುಂಬದಲ್ಲಿ ಹೃದ್ರೋಗದ ಇತಿಹಾಸವಿದ್ದರೆ ಹೆಚ್ಚಿನ ಎಚ್ಚರಿಕೆ ವಹಿಸುವುದು ಎಂದೆಂದಿಗೂ ಕ್ಷೇಮ.

ಇದನ್ನೂ ಓದಿ | Gym death | ಜಿಮ್‌ ಮಾಡುವಾಗ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವುದು ಏಕೆ?

ಸೂಚನೆಗಳೇನು?: ಹೆಚ್ಚಿನ ಬಾರಿ ಗಮನಾರ್ಹ ಸೂಚನೆಗಳೇ ಕಾಣಿಸಿಕೊಳ್ಳುವುದಿಲ್ಲ. ಕೆಲವೊಮ್ಮೆ ತಲೆ ಸುತ್ತು, ಎಚ್ಚರ ತಪ್ಪಿದಂತಾಗುವುದು, ಸುಸ್ತು, ಆಯಾಸ, ಉಸಿರುಕಟ್ಟಿದ ಅನುಭವ, ಎದೆ ನೋವು- ಇಂಥ ಯಾವುದಾದರೂ ಕೆಲವು ಸೂಚನೆಗಳು ಕಂಡುಬರಬಹುದು. ಇಂಥ ಯಾವುದೇ ಸೂಚನೆಗಳು ಕಂಡುಬಂದರೂ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಕ್ಷೇಮ. ಸಿಪಿಆರ್‌ ಮಾಡುವುದನ್ನು ತಿಳಿದವರು ಜೊತೆಗಿದ್ದರೆ, ವೈದ್ಯಕೀಯ ನೆರವು ದೊರೆಯುವವರೆಗೂ ಇದನ್ನು ಜಾರಿ ಇಡುವುದು ಸೂಕ್ತ.

ತಡೆಯುವುದು ಹೇಗೆ?: ಮುನ್ನೆಚ್ಚರಿಕೆಯೇ ಈ ಸಮಸ್ಯೆಗೆ ಮದ್ದು. ಕಾಲಕಾಲಕ್ಕೆ ತಪಾಸಣೆಗೆ ಒಳಗಾಗುವುದು, ಜೀವನಶೈಲಿಯಲ್ಲಿ ಅಗತ್ಯ ಬದಲಾವಣೆ ಮಾಡಿಕೊಳ್ಳುವುದು, ಸಮತೋಲಿತ ಆಹಾರ ಸೇವನೆ, ದಿನವೂ ತಪ್ಪದಂತೆ ವ್ಯಾಯಾಮ, ರಕ್ತದೊತ್ತಡ ಮತ್ತು ತೂಕ ನಿರ್ವಹಣೆ, ಮಧುಮೇಹವಿದ್ದರೆ ಆ ಬಗ್ಗೆ ಎಚ್ಚರಿಕೆ ವಹಿಸುವುದು ಮತ್ತು ದೈನಂದಿನ ಮಾನಸಿಕ ಒತ್ತಡವನ್ನು ಹಿಡಿತದಲ್ಲಿಡುವುದು- ಇಂಥ ಕ್ರಮಗಳು ನಮ್ಮ ಹೃದಯದ ಆರೋಗ್ಯವನ್ನು ಉತ್ತಮವಾಗಿ ಇಡಬಲ್ಲವು.

ಇದನ್ನೂ ಓದಿ | Winter Health Care | ಚಳಿಗಾಲದಲ್ಲಿ ತಣ್ಣೀರು ಸ್ನಾನ ಹೃದಯಾಘಾತಕ್ಕೆ ಕಾರಣ ಆಗಬಹುದು; ಹೇಗೆ?

Exit mobile version