Site icon Vistara News

Suhani Bhatnagar: ಸುಹಾನಿಯ ಜೀವ ಕಸಿದ ಡರ್ಮಟೊಮೈಯೋಸಿಟಿಸ್‌; ಈ ಕಾಯಿಲೆ ಹೇಗೆ ಕಾಣಿಸಿಕೊಳ್ಳುತ್ತದೆ? ಲಕ್ಷಣಗಳೇನು?

suhani

suhani

ಮುಂಬೈ: 2016ರಲ್ಲಿ ತೆರೆಕಂಡ ʼದಂಗಲ್‌ʼ (Dangal) ಬಾಲಿವುಡ್‌ ಚಿತ್ರದಲ್ಲಿ ಆಮೀರ್‌ ಖಾನ್‌ (Aamir Khan) ಮಗಳಾಗಿ ಅಭಿನಯಿಸಿದ್ದ ಯುವ ನಟಿ, 19 ವರ್ಷದ ಸುಹಾನಿ ಭಟ್ನಾಗರ್‌ (Suhani Bhatnagar) ಫೆಬ್ರವರಿ 17ರಂದು ಮೃತಪಟ್ಟಿದ್ದಾರೆ. ಚರ್ಮದ ದದ್ದು ಮತ್ತು ಸ್ನಾಯು ದೌರ್ಬಲ್ಯಕ್ಕೆ ಕಾರಣವಾಗುವ ಅಪರೂಪದ ಉರಿಯೂತದ ಕಾಯಿಲೆ ಡರ್ಮಟೊಮೈಯೋಸಿಟಿಸ್‌ (Dermatomyositis)ನಿಂದ ಬಳಲುತ್ತಿದ್ದ ಸುಹಾನಿ ಭಟ್ನಾಗರ್‌ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಅವರ ತಂದೆ ಸುಮಿತ್ ಭಟ್ನಾಗರ್ (Sumit Bhatnagar) ತಿಳಿಸಿದ್ದಾರೆ. ಡರ್ಮಟೊಮೈಯೋಸಿಟಿಸ್‌ ಎಂದರೇನು? ಇದು ಯಾಕೆ ಅಪಾಯಕಾರಿ? ಎನ್ನುವ ವಿವರ ಇಲ್ಲಿದೆ.

ಏನಿದು ಡರ್ಮಟೊಮೈಯೋಸಿಟಿಸ್‌?

ಡರ್ಮಟೊಮೈಯೋಸಿಟಿಸ್ ಎಂದರೆ ದೀರ್ಘಕಾಲದ ಸ್ನಾಯು ಉರಿಯೂತ, ಸ್ನಾಯು ದೌರ್ಬಲ್ಯ ಮತ್ತು ಕೆಲವು ಸಂದರ್ಭಗಳಲ್ಲಿ ಸ್ನಾಯು ನೋವನ್ನು ಒಳಗೊಂಡಿರುವ ಉರಿಯೂತದ ಮಯೋಪತಿಗಳು (Myopathy) ಎಂದು ಕರೆಯಲ್ಪಡುವ ಅಪರೂಪದ ಕಾಯಿಲೆಗಳ ಗುಂಪಿನ ಭಾಗ. ಸ್ನಾಯುಗಳ ಮೇಲೆ ಪರಿಣಾಮ ಬೀರುವ ಹಲವು ಪರಿಸ್ಥಿತಿಗಳನ್ನು ವಿವರಿಸಲು ಬಳಸುವ ಸಾಮಾನ್ಯ ಪದ ಮಯೋಪತಿ. ಎಲ್ಲ ಮಯೋಪತಿಗಳು ಸ್ನಾಯು ದೌರ್ಬಲ್ಯಕ್ಕೆ ಕಾರಣವಾಗಬಹುದು. ಮಕ್ಕಳು ಮತ್ತು ವಯಸ್ಕರ ಮೇಲೆ ಇದು ಪರಿಣಾಮ ಬೀರುತ್ತದೆ.

ಲಕ್ಷಣಗಳು

ಚರ್ಮದಲ್ಲಿ ದದ್ದುಗಳು ಕಂಡು ಬರುವುದು ಡರ್ಮಟೊಮೈಯೋಸಿಟಿಸ್‌ನ ಮುಖ್ಯ ಲಕ್ಷಣ. ಇದು ಸ್ನಾಯು ನೋವಿಗೆ ಮುಂಚಿತವಾಗಿ ಅಥವಾ ಅದರೊಂದಿಗೇ ಕಂಡು ಬರುತ್ತದೆ. ದದ್ದು ನೇರಳೆ ಅಥವಾ ಕೆಂಪು ಬಣ್ಣದಿಂದ ಕೂಡಿರುತ್ತದೆ. ಕಣ್ಣು ರೆಪ್ಪೆ, ಬೆರಳು, ಮೊಣಕೈ, ಮೊಣಕಾಲು, ಕಾಲ್ಬೆರಳು, ಕುತ್ತಿಗೆ, ಮುಖ, ಎದೆ, ಭುಜ ಸೇರಿದಂತೆ ಚರ್ಮದಲ್ಲಿ ಇದು ಬೆಳೆಯುತ್ತದೆ. ಇದು ಕಂಡು ಬರುವ ಜಾಗದಲ್ಲಿ ಊತ ಇರಬಹುದು. ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರೊಂದಿಗೆ ಇದು ಹೆಚ್ಚು ಸ್ಪಷ್ಟವಾಗುತ್ತದೆ.

ಎಚ್ಚರಿಕೆ ಅಗತ್ಯ

ಡರ್ಮಟೊಮೈಯೋಸಿಟಿಸ್ ಬಾಧಿಸಿದ ವಯಸ್ಕರ ತೂಕ ಕ್ರಮೇಣ ಕಡಿಮೆಯಾಗುತ್ತ ಹೋಗುತ್ತದೆ. ಜತೆಗೆ ಆಗಾಗ ಕಡಿಮೆ ತೀವ್ರತೆಯ ಜ್ವರ ಕಾಣಿಸಿಕೊಳ್ಳುತ್ತದೆ. ಬೆಳಕಿಗೆ ಮೈ ಒಡ್ಡಲು ಕಷ್ಟವಾಗುತ್ತದೆ. ಡರ್ಮಟೊಮೈಯೋಸಿಟಿಸ್ ಹೊಂದಿರುವ ಮಕ್ಕಳು ಮತ್ತು ವಯಸ್ಕರಲ್ಲಿ ಕ್ಯಾಲ್ಸಿಯಂ ಗಟ್ಟಿಯಾಗಿ ಚರ್ಮದ ಕೆಳಗೆ ಅಥವಾ ಸ್ನಾಯುಗಳಲ್ಲಿ ಉಬ್ಬುಗಳು (ಕ್ಯಾಲ್ಸಿನೋಸಿಸ್) ಕಾಣಿಸಿಕೊಳ್ಳುತ್ತದೆ. ಕ್ಯಾಲ್ಸಿನೋಸಿಸ್ ಸಾಮಾನ್ಯವಾಗಿ ರೋಗ ಪ್ರಾರಂಭವಾದ ಒಂದರಿಂದ ಮೂರು ವರ್ಷಗಳ ನಂತರ ಕಂಡು ಬರುತ್ತದೆ. ಇದು ಬಾಲ್ಯದ ಡರ್ಮಟೊಮೈಯೋಸಿಟಿಸ್‌ನಲ್ಲಿ ಕಾಣಿಸಿಕೊಳ್ಳುವುದು ಅಧಿಕ ಎಂದು ತಜ್ಞರು ಹೇಳುತ್ತಾರೆ. ಡರ್ಮಟೊಮೈಯೋಸಿಟಿಸ್‌ ಕೆಲವು ಸಂದರ್ಭಗಳಲ್ಲಿ ಡಿಸ್ಟಲ್ ಸ್ನಾಯುಗಳ (ಮುಂಗೈಗಳಲ್ಲಿನ ಸ್ನಾಯುಗಳು ಮತ್ತು ಪಾದಗಳು, ಮಣಿಕಟ್ಟುಗಳ ಸುತ್ತಲಿನ ಸ್ನಾಯುಗಳು) ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಕಾರಣಗಳೇನು?

ಇದುವರೆಗೆ ಡರ್ಮಟೊಮೈಯೋಸಿಟಿಸ್ ಕಾಣಿಸಿಕೊಳ್ಳಲಿರುವ ನಿಖರ ಕಾರಣಗಳನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಅದಾಗ್ಯೂ ವಿಜ್ಞಾನಿಗಳು ಕೆಲವು ಸಾಧ್ಯತೆಗಳ ಗ್ಗೆ ಬೆಳಕು ಚೆಲ್ಲುತ್ತಾರೆ.

ಸುಮಿತ್ ಭಟ್ನಾಗರ್ ಹೇಳೋದೇನು?

ʼʼರೋಗ ಲಕ್ಷಣ ಹೊಂದಿದ್ದ ಸುಹಾನಿಯನ್ನು ಫೆಬ್ರವರಿ 7ರಂದು ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್ ಮೆಡಿಕಲ್ ಸೈನ್ಸಸ್‌ (AIIMS)ಗೆ ದಾಖಲಿಸಲಾಯಿತು. ಆಕೆಯ ಕೈ ಮೇಲೆ ಎರಡು ತಿಂಗಳ ಹಿಂದೆ ಕೆಂಪು ಕಲೆಗಳು ಕಾಣಿಸಿಕೊಂಡಿದ್ದವು. ಅಲರ್ಜಿ ಎಂದು ಭಾವಿಸಿ ನಾವು ಚರ್ಮ ವೈದ್ಯರ ಬಳಿ ತೋರಿಸಿದ್ದೆವು. ಆದರೆ ರೋಗ ಪತ್ತೆಯಾಗಿರಲಿಲ್ಲ. ಪರಿಸ್ಥಿತಿ ಕೈ ಮೀರಿದ ಬಳಿಕ AIIMSಗೆ ಸೇರಿಸಿದ್ದೆವು. ಆದರೆ ಯಾವುದೇ ಸುಧಾರಣೆ ಕಂಡುಬಂದಿರಲಿಲ್ಲ. ಹೆಚ್ಚುವರಿ ದ್ರವ ಸಂಗ್ರಹದಿಂದಾಗಿ ಆಕೆಯ ಶ್ವಾಸಕೋಶಕ್ಕೆ ಹಾನಿಯಾಗಿದೆ” ಎಂದು ಸುಮಿತ್ ಭಟ್ನಾಗರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: Suhani Bhatnagar: ಆಮೀರ್‌ ಖಾನ್‌ ಜತೆ ತೆರೆ ಹಂಚಿಕೊಂಡಿದ್ದ 19 ವರ್ಷದ ಯುವ ನಟಿ ಇನ್ನಿಲ್ಲ

ತಾಯಿ ಹೇಳಿದ್ದೇನು?

ಇನ್ನು ಸುಹಾನಿ ಅವರ ತಾಯಿ ಮಾತನಾಡಿ, ‌ʼʼಆಕೆ ಪದವಿ ಮುಗಿಸಿದ ಬಳಿಕ ನಟನೆಗೆ ಮರಳಲು ಚಿಂತನೆ ನಡೆಸಿದ್ದಳುʼʼ ಎಂದು ಹೇಳಿದ್ದಾರೆ. ʼʼಸುಹಾನಿ ಓದಿನಲ್ಲಿ ಮುಂದಿದ್ದಳು. ಕೊನೆಯ ಸೆಮಿಸ್ಟರ್‌ನಲ್ಲಿ ಟಾಪರ್‌ ಆಗಿದ್ದಳು. ಆಕೆ ಓದಿನ ಜತೆಗೆ ಪ್ರತಿಯೊಂದು ವಿಚಾರದಲ್ಲಿಯೂ ಮುಂದಿದ್ದಳು. ನಾವು ಹೆಮ್ಮೆ ಪಡುವಂತೆ ಮಾಡಿದ್ದಾಳೆʼʼ ಎಂದು ಸುಹಾನಿ ತಾಯಿ ಭಾವುಕರಾಗಿ ನುಡಿದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version