Site icon Vistara News

Suicide prevention | ಈ ಸೂಚನೆಗಳನ್ನು ಗಮನಿಸಿದರೆ ಆತ್ಮಹತ್ಯೆ ತಡೆಯಬಹುದು

sucide prevention

ʻಈಸಬೇಕು, ಇದ್ದು ಜಯಿಸಬೇಕುʼ ಎಂಬ ದಾಸವಾಣಿ ಎಲ್ಲ ಕಾಲಕ್ಕೂ ನಿಜ. ಅದರಲ್ಲೂ, ಭಾರತದಲ್ಲಿ ೨೦೨೧ರಲ್ಲಿ ೧.೧೬ ಲಕ್ಷ ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಎನ್‌ಸಿಆರ್‌ಬಿ ವರದಿಯನ್ನು ನೋಡಿದ ಮೇಲೆ, ಈ ದಾಸವಾಣಿ ಇನ್ನಷ್ಟು ಅರ್ಥ ಹೊಳೆಯಿಸುತ್ತದೆ. ಹೀಗೆ ಜೀವ ತೆಗೆದುಕೊಂಡವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು ಮತ್ತು ಯುವಕರು ಎಂಬುದು ಘೋರ ಸತ್ಯ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಆತ್ಮಹತ್ಯೆಗೆ ಶರಣಾದವರ ನಿಕಟವರ್ತಿಗಳು ಗಮನಿಸಿದರೆ, ಈ ದುರಂತವನ್ನು ತಡೆಯಲು ಪೂರ್ವ ಸೂಚನೆಗಳು ದೊರೆಯುತ್ತವೆ ಎನ್ನುತ್ತಾರೆ ಮನೋವಿಜ್ಞಾನಿಗಳು.

ವೃತ್ತಿಯ ಒತ್ತಡಗಳು, ಆರ್ಥಿಕ ಕಾರಣಗಳು, ಕೌಟುಂಬಿಕ ಹಿಂಸೆ, ಏಕಾಂಗಿತನ, ಆರೋಗ್ಯ ಸಮಸ್ಯೆಯಂಥ ನಾನಾ ಕಾರಣಗಳಿಗಾಗಿ ಜನ ಜೀವತೆಗೆದುಕೊಳ್ಳುವ ಕ್ರೂರ ನಿರ್ಧಾರ ಮಾಡುತ್ತಾರೆ. ಕೆಲವೊಮ್ಮೆ ಖಿನ್ನತೆ, ಒತ್ತಡ, ಆತಂಕ, ಅನಿಶ್ಚಿತತೆಯಂಥ ಮಾನಸಿಕ ಕಾರಣಗಳೂ ಇದಕ್ಕೆ ಕಾರಣವಾಗಬಹುದು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಇಂಥ ವ್ಯಕ್ತಿಗಳು ಜೀವನ ಕೊನೆಗೊಳಿಸುವ ಸೂಚನೆಯನ್ನು ತಮ್ಮ ಸಮೀಪವರ್ತಿಗಳಿಗೆ ನೀಡುವ ಸಾಧ್ಯತೆಯಿದೆ. ಇವುಗಳನ್ನು ಗಮನಿಸಿದರೆ ಸಂಭವನೀಯ ಅನಾಹುತವನ್ನು ತಪ್ಪಿಸಬಹುದು.

ಹಾನಿಮಾಡಿಕೊಂಡ ಚರಿತ್ರೆ: ತಮಗೆ ತಾವೇ ಹಾನಿಮಾಡಿಕೊಂಡ ಅಥವಾ ಆತ್ಮಹತ್ಯೆಗೆ ಪ್ರಯತ್ನಿಸಿದ ಇತಿಹಾಸ ಆ ವ್ಯಕ್ತಿಗಿದ್ದರೆ ಅಥವಾ ಅವರ ಕುಟುಂಬದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮನೋಸ್ಥಿತಿ ಕಂಡುಬಂದರೆ ಈ ಬಗ್ಗೆ ಎಚ್ಚರಿಕೆ ವಹಿಸುವುದು ಸೂಕ್ತ. ಅದರಲ್ಲೂ ಅವರ ಕೈ-ಮೈ ಮೇಲೆ ಅರ್ಥವಾಗದ ಗಾಯಗಳು ಕಂಡುಬಂದರೆ ಜಾಗ್ರತೆ ಬೇಕೇಬೇಕು.

ಕುಡಿತ ಹೆಚ್ಚಾದರೆ: ಸರಿ-ತಪ್ಪುಗಳ ವಿವೇಚನೆ ಇಂಥವರಲ್ಲಿ ಎಲ್ಲಿಂದ ಬರಬೇಕು? ಅಲ್ಕೋಹಾಲ್‌ ಮಾತ್ರವಲ್ಲ, ತಂಬಾಕು, ಡ್ರಗ್ಸ್‌ ಸೇವನೆ ಮಾಡುವವರಲ್ಲೂ ಯೋಚನಾ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ. ಇಂಥ ಯಾವುದೇ ಅತಿರೇಕಗಳು ಕಂಡುಬಂದರೂ ಅವರ ಸಮೀಪವರ್ತಿಗಳು ವೈದ್ಯರ ನೆರವು ಕೋರುವುದು ಉತ್ತಮ.

ಇದನ್ನೂ ಓದಿ | World Suicide Prevention Day | ಮನವ ತಿನ್ನುವ ಚಿಂತೆ ಬದುಕು ಮುಗಿಸದಿರಲು ಹೀಗೆ ಮಾಡಿ

ವರ್ತನೆಯಲ್ಲಿ ವಿಚಿತ್ರವಾದರೆ: ಇದು ಇನ್ನೊಂದು ಪ್ರಮುಖ ಸೂಚನೆ. ಸದಾ ಚಟುವಟಿಕೆಯಲ್ಲಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಮೌನವಾದರೆ, ಸಾಮಾಜಿಕವಾಗಿ ಹಿಂದೆ ಸರಿದರೆ, ಯಾರೊಂದಿಗೂ ಮಾತಾಡಲು ಹಿಂದೇಟು ಹಾಕಿದರೆ ಅಥವಾ ಹಿಂದಿನ ಯಾವುದೋ ತಪ್ಪಿಗಾಗಿ ಪರಿತಪಿಸುತ್ತಾ ಮತ್ತೆ ಮತ್ತೆ ಕ್ಷಮೆ ಕೋರುತ್ತಿದ್ದರೆ, ಇದನ್ನು ಖಂಡಿತಾ ಎಚ್ಚರಿಕೆಯ ಗಂಟೆ ಎಂದು ಪರಿಗಣಿಸಬಹುದು.

ಹಾಗೆ ಮಾತಾಡುತ್ತಿದ್ದರೆ: ʻಜೀವನ ಸಾಕು ಅಥವಾ ಸತ್ತರೇ ಸುಖʼ ಎಂಬಂತೆ ಮಾತನಾಡುತ್ತಿದ್ದರೆ, ಆತ್ಮಹತ್ಯೆಯ ಬಗ್ಗೆ ಮಾಹಿತಿ ಅಥವಾ ವಸ್ತುಗಳನ್ನು (ಉದಾ, ನಿದ್ದೆ ಮಾತ್ರೆ) ಕಲೆ ಹಾಕುವುದು, ಏನಾದರೂ ಬರೆದಿಡುವುದು ಮುಂತಾದವು ಕಂಡುಬಂದರೆ ತಕ್ಷಣವೇ ಮನೋಚಿಕಿತ್ಸಕರ ನೆರವು ಅಗತ್ಯ. ಈ ಬಗ್ಗೆ ಅತ್ಯಂತ ಜಾಗರೂಕತೆಯಿಂದ ನಿಕಟವರ್ತಿಗಳು ವ್ಯವಹರಿಸಬೇಕು.

ಆಪ್ತರು ಏನು ಮಾಡಬಹುದು?: ಇಂಥ ವರ್ತನೆಗಳು ಕಂಡುಬಂದಾಗ, ಅವರನ್ನು ಒಂಟಿಯಾಗಿ ಬಿಡುವುದು ಸರಿಯಲ್ಲ. ಎಲ್ಲಾ ಸಂದರ್ಭಗಳಲ್ಲೂ ಯಾರಾದರೂ ಅವರ ಜೊತೆಗಿರುವುದು ಅಗತ್ಯ. ಆದಷ್ಟೂ ಶೀಘ್ರ ಮನೋಚಿಕಿತ್ಸಕರ ನೆರವು ಪಡೆಯಲು ಪ್ರೋತ್ಸಾಹಿಸಿ. ಎಲ್ಲರಿಗಿಂತ ಅವರು ಸಾಂತ್ವನದ ನುಡಿಗಳು ಸಂತ್ರಸ್ತರನ್ನು ಹೆಚ್ಚು ಜೀವನ್ಮುಖಿಯಾಗಿಸಬಹುದು. ಬದುಕು ಎಂದಿಗೂ ಹೀಗೆಯೇ ಇರುವುದಿಲ್ಲ, ಬದಲಾಗುತ್ತದೆ. ಈಗಿರುವ ಕಷ್ಟ ಕಳೆದು ಒಳ್ಳೆಯ ದಿನಗಳು ಬರುತ್ತವೆ ಎಂಬ ಭರವಸೆಯನ್ನು ಅವರಲ್ಲಿ ಬಿತ್ತುವುದು ಮುಖ್ಯ. ನೆನಪಿಡಿ, ಮುಳುಗುತ್ತಿರುವವನಿಗೆ ಹುಲ್ಲಿನಾಸರೆ ಎಂಬಂತೆ ಸಣ್ಣ ನೆರವೂ ಅವರನ್ನು ಬದುಕಿನತ್ತ ನಡೆಯಲು ಪ್ರೇರೇಪಿಸಬಹುದು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಆತ್ಮಹತ್ಯೆ ಮಾಡ್ಕೊಬೇಕು ಅನ್ನೋ ಯೋಚನೆ ಇದ್ದರೆ ಅದಕ್ಕಿಂತ ಮೊದಲು ಒಮ್ಮೆ ಇದನ್ನು ಓದಿ!

Exit mobile version