ಬೇಸಿಗೆ ಬಂತೆಂದರೆ ಮುಗಿಯದ ದಾಹ. ಎಷ್ಟು ನೀರು ಕುಡಿದರೂ ಬಾಯಾರಿಕೆ ತಣಿಯುವುದಿಲ್ಲ. ಇದರಲ್ಲೇ ಹೊಟ್ಟೆ ತುಂಬಿದಂತಾಗಿ ಸುಸ್ತು, ಆಯಾಸ ಶುರುವಾಗುತ್ತದೆ. ಇದಕ್ಕಾಗಿ ನಾನಾ ರೀತಿಯ ಆರೋಗ್ಯಕರ ಪೇಯಗಳನ್ನು ಹುಡುಕಿಕೊಳ್ಳದಿದ್ದರೆ, ಬೇಸಿಗೆಯಲ್ಲಿ ಅಕಾರಣವಾಗಿ ದಣಿಯುವುದು ಖಚಿತ. ಮಕ್ಕಳಿಗಂತೂ ಬೆಳಗ್ಗೆ ಏಳುತ್ತಿದ್ದಂತೆಯೇ ಸೆಕೆ ಎನಿಸಿ, ತಿಂಡಿ ಬೇಡ ಎನ್ನುವುದೂ ಇದೆ. ಇಂಥ ಸಂದರ್ಭಗಳಲ್ಲಿ ನೆರವಿಗೆ ಬರುವುದು ತರಹೇವಾಗಿ ಸ್ಮೂದಿಗಳು. ಈ ಸ್ಮೂದಿಗಳಿಗೆ ಹಲವು ರೀತಿಯಲ್ಲಿ ಪ್ರೊಟೀನ್ ಅಂಶಗಳನ್ನು ಸೇರಿಸುತ್ತಾ ಬಂದರೆ ದಾಹವೂ ಇಂಗುತ್ತದೆ, ಹೊಟ್ಟೆಯೂ ತುಂಬುತ್ತದೆ. ಸ್ಮೂದಿಗಳನ್ನು ತಯಾರಿಸುವಾಗ (Homemade protein smoothie) ಹೆಚ್ಚುವರಿ ಸಕ್ಕರೆಯನ್ನು ಸೇರಿಸದಂತೆ ಎಚ್ಚರ ವಹಿಸಬೇಕು. ಹಾಗಿಲ್ಲದಿದ್ದರೆ ತೂಕ ಹೆಚ್ಚುವುದರ ಜೊತೆಗೆ ಅಧಿಕ ಸಕ್ಕರೆಯಿಂದಾಗಿ ದಾಹವೂ ಹೆಚ್ಚುತ್ತದೆ. ಸಕ್ಕರೆಯಂಶದ ಬದಲು ನಾರು ಮತ್ತು ಪ್ರೊಟೀನ್ ಸೇರಿಸುತ್ತಾ ಬಂದರೆ ಹೆಚ್ಚು ಸಮಯದವರೆಗೆ ಹಸಿವಾಗದಂತೆ ತಡೆಯುವುದೂ ಸಾಧ್ಯ. ಸ್ಮೂದಿಗಳಿಗೆ ಪ್ರೊಟೀನ್ ಪೂರಕಗಳನ್ನು ಸೇರಿಸುವುದು ಸುಲಭದ ಕೆಲಸವೇನೋ ಹೌದು. ಆದರೆ ಅವುಗಳ ಬದಲಿಗೆ ನಿಸರ್ಗದತ್ತ ವಸ್ತುಗಳನ್ನೇ ಆಯ್ದುಕೊಂಡರೆ ಆರೋಗ್ಯ ಕ್ಷೇಮ. ಹಾಗಾದರೆ ಏನು ಮಾಡಬಹುದು?
ಹಾಲು, ಮೊಸರು
ಹೆಚ್ಚಿನ ಬಾರಿ ಸ್ಮೂದಿಗೆ ದಪ್ಪನೆಯ ಹಾಲು ಸೇರಿಸುವ ಕ್ರಮವಿರುತ್ತದೆ. ಬೆಳಗಿನ ತಿಂಡಿಯ ಬದಲಿಗೆ ಸ್ಮೂದಿ ಹೀರುವ ಅಭ್ಯಾಸವಿದ್ದರೆ, ಜೊತೆಗೆ ಹಾಲು ಸೇರಿಸಿಕೊಳ್ಳುವುದು ಆರೋಗ್ಯಕರ ಆಯ್ಕೆ. ಇದರಿಂದ ಪೇಯದ ಪ್ರೊಟೀನ್ ಅಂಶವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಬಹುದು. ಆದರೆ ಹುಳಿ ಹಣ್ಣುಗಳ ಸ್ಮೂದಿಯಲ್ಲಿ ಹಾಲು ಸೇರಿಸಲಾಗದು. ಅಂಥ ಸಂದರ್ಭದಲ್ಲಿ ಹುಳಿಯಿಲ್ಲದ ಮೊಸರು ಸೇರಿಸುವುದು ಸೂಕ್ತ. ಇದಕ್ಕಾಗಿ ಸಕ್ಕರೆಭರಿತ ಫ್ಲೇವರ್ಡ್ ಯೋಗರ್ಟ್ ಗಳನ್ನು ಆಶ್ರಯಿಸಬೇಕಿಲ್ಲ. ಮನೆಯಲ್ಲಿರುವ ಮಾಮೂಲಿ ಮೊಸರೇ ಸಾಕಾಗುತ್ತದೆ. ಆ ಮೊಸರು ಹುಳಿಯಿಲ್ಲದಿದ್ದರೆ ಆಯಿತಷ್ಟೆ.
ಬಾದಾಮಿ ಬೆಣ್ಣೆ
ಸಾಮಾನ್ಯವಾಗಿ ಪೀನಟ್ ಬಟರ್ ಅಥವಾ ಶೇಂಗಾ ಬೆಣ್ಣೆಯನ್ನು ಕೇಳಿರುತ್ತೇವೆ. ಆದರೆ ಬಾದಾಮಿ ಬೆಣ್ಣೆಯನ್ನು ಕೇಳಿರುವುದು ಕಡಿಮೆ. ಒಂದು ಟೇಬಲ್ ಚಮಚ ಬೆಣ್ಣೆಯಲ್ಲಿ ೪ ಗ್ರಾಂಗಳಷ್ಟು ಪ್ರೊಟೀನ್ ದೊರೆಯುತ್ತದೆ. ಜೊತೆಗೆ, ಬಾದಾಮಿಯಲ್ಲಿರುವ ಆರೋಗ್ಯಕರ ಅಂಶಗಳು ಮತ್ತು ಉತ್ತಮ ಕೊಬ್ಬು ಸಹ ಸುಲಭದಲ್ಲಿ ದೊರೆಯುತ್ತದೆ. ಈ ಮೂಲಕ ಸ್ಮೂದಿಗಳ ರುಚಿಯನ್ನೂ ಹೆಚ್ಚಿಸಿ, ಮಕ್ಕಳನ್ನು ಮೆಚ್ಚಿಸಲು ಸಾಧ್ಯವಿದೆ.
ಚಿಯಾ ಬೀಜ
ಇವುಗಳನ್ನು ಸ್ವಲ್ಪ ಹೊತ್ತಿಗೆ ಮುಂಚೆ ನೆನೆಸಿಕೊಳ್ಳಬೇಕಷ್ಟೆ. ಸ್ಮೂದಿ ಸಿದ್ಧವಾದ ಮೇಲೆಯೂ ಇದನ್ನು ಮೇಲಿನಿಂದಲೂ ಸೇರಿಸಬಹುದು. ಈ ಮೂಲಕ ಪ್ರೊಟೀನ್, ಆರೋಗ್ಯಕರ ಕೊಬ್ಬು ಮಾತ್ರವಲ್ಲ, ಸಾಕಷ್ಟು ನಾರೂ ಹೊಟ್ಟೆ ಸೇರುತ್ತದೆ. ಇದನ್ನು ಯಾವುದೇ ಹಣ್ಣಿನ ಸ್ಮೂದಿಯ ಜೊತೆಗೆ ಸೇರಿಸಿದರೂ, ಬಾಯಲ್ಲಿ ಕರುಂಕುರುಂ ರುಚಿ ಉಳಿಯುವುದು ಖಾತ್ರಿ.
ಕುಂಬಳಕಾಯಿ ಬೀಜ
ಪ್ರೊಟೀನ್ ಪೂರಕಗಳ ಬದಲೀ ಆಯ್ಕೆಗಳನ್ನು ನೋಡುತ್ತಿರುವವರು ನೀವಾಗಿದ್ದರೆ, ನಾನಾ ರೀತಿಯ ಬೀಜದ ಪುಡಿಗಳು ಅತ್ತ್ಯುತ್ತಮ ಆಯ್ಕೆಗಳು. ಒಂದೋ ಈ ಬೀಜಗಳನ್ನು ನೆನೆಸಿ ಪೇಸ್ಟ್ ಮಾಡಿಕೊಳ್ಳಬಹುದು. ಅದಿಲ್ಲದಿದ್ದರೆ, ಅವುಗಳನ್ನು ಮೊದಲೇ ಪುಡಿ ಮಾಡಿಸಿಕೊಂಡು ಸ್ಮೂದಿಗಳಿಗೆ ಸೇರಿಸಿಕೊಳ್ಳಬಹುದು. ಮೂರು ಟೇಬಲ್ ಚಮಚ ಕುಂಬಳ ಬೀಜದ ಪುಡಿಯಲ್ಲಿ ಸುಮಾರು ೮ ಗ್ರಾಂ ಪ್ರೊಟೀನ್ ದೊರೆಯುತ್ತದೆ. ಜೊತೆಗೆ ಬಹಳಷ್ಟು ರೀತಿಯ ಖನಿಜಗಳು ಮತ್ತು ವಿಟಮಿನ್‌ಗಳು ಲಭ್ಯವಾಗುತ್ತವೆ.
ಶೇಂಗಾ ಬೆಣ್ಣೆ
ಇದರಲ್ಲೂ ಪ್ರೊಟೀನ್ ಸಾಂದ್ರತೆ ಉತ್ತಮವಾಗಿದೆ. ಒಂದು ಟೇಬಲ್ ಚಮಚ ಶೇಂಗಾ ಬೆಣ್ಣೆಯಲ್ಲಿ ೪ ಗ್ರಾಂನಷ್ಟು ಪ್ರೊಟೀನ್ ದೊರೆಯುತ್ತದೆ. ಈ ಮಾರುಕಟ್ಟೆಯಲ್ಲಿ ದೊರೆಯುವ ಉತ್ಪನ್ನಗಳು ಬೇಡ ಎನಿಸಿದರೆ, ಇವುಗಳನ್ನು ಮನೆಯಲ್ಲೇ ಪುಡಿ ಮಾಡಿ ಸ್ಮೂದಿಗಳಿಗೆ ಸೇರಿಸಿಕೊಳ್ಳಬಹುದು.
ಸೂರ್ಯಕಾಂತಿ ಬೀಜ, ಅಗಸೆ ಬೀಜ, ಎಳ್ಳು
ಇಂಥ ಸಣ್ಣ ಬೀಜಗಳು ಸಹ ಸ್ಮೂದಿಗಳ ರುಚಿಯನ್ನು ಹೆಚ್ಚಿಸುವುದರ ಜೊತೆಗೆ, ಪ್ರೊಟೀನ್ ಅಂಶವನ್ನೂ ಏರಿಸಬಲ್ಲವು. ಈ ಬೀಜಗಳನ್ನು ರಾತ್ರಿ ನೀರಿಗೆ ಹಾಕಿ, ಬೆಳಗ್ಗೆ ರುಬ್ಬಿಕೊಳ್ಳಬಹುದು. ಹಾಗೆ ಬೇಡದಿದ್ದರೆ ಮೊದಲೇ ಪುಡಿ ಮಾಡಿರಿಸಿಕೊಂಡು, ಸ್ಮೂದಿಗೆ ಸೇರಿಸಿಕೊಳ್ಳಬಹುದು. ಯಾವುದೇ ಕೃತಕ ವಸ್ತುಗಳಿಲ್ಲ ಇಂಥ ಆಯ್ಕೆಗಳಿಂದ ಆರೋಗ್ಯಕರ ಸ್ಮೂದಿಗಳನ್ನು ಮಾಡಿ ಬೇಸಿಗೆಯ ಬಿಸಿಯನ್ನು ತಣಿಸಿಕೊಳ್ಳಬಹುದು.
ಇದನ್ನೂ ಓದಿ: Harmful Effects Of Cotton Candy: ಕಾಟನ್ ಕ್ಯಾಂಡಿಯ ಅಸಲಿ ಬಣ್ಣ ಭಯಾನಕ!