Site icon Vistara News

Sweating And Body Odor: ಅತಿಯಾಗಿ ಬೆವರುತ್ತಿದ್ದೀರಾ? ಈ ಆಹಾರಗಳು ನಿಮ್ಮ ಬೆವರ ದುರ್ಗಂಧಕ್ಕೆ ಮುಖ್ಯ ಕಾರಣ!

Sweating And Body Odor

ಬೇಸಿಗೆಯೇ ಇರಲಿ (Sweating and body odor), ಮಳೆಯೇ ಇರಲಿ, ಎಲ್ಲೋ ಹೋಗಲು ನೀವು ಹೊರಟು ಮನೆ ದಾಟಿ ಹೊರಗೆ ಬಂದ ತಕ್ಷಣ ನೀವು ಬೆವರಲು ಆರಂಭಿಸುತ್ತೀರಿ. ಬಹುಬೇಗನೆ ನೀವು ಹಾಕಿಕೊಂಡ ಅಂಗಿಯ ಕಂಕುಳು ಒದ್ದೆಯಾಗುತ್ತದೆ. ಇನ್ನೂ ಕೆಲವರಿಗೆ ಬೆನ್ನಿನ ಹಿಂಭಾಗ, ಕುತ್ತಿಗೆ, ಪಾದಗಳು, ಕೈಗಳು ಹೀಗೆ ದೇಹದ ಎಲ್ಲೆಡೆ ಬಹುಬೇಗನೆ ಬೆವರುತ್ತದೆ. ಹೊರಗೆ ಹಿತವಾಗಿ ಬೀಸುವ ತಂಗಾಳಿಗೂ ನಿಮ್ಮ ಬೆವರಿಗೂ ಯಾವುದೇ ಸಂಬಂಧವಿಲ್ಲ ಅನಿಸಬಹುದು. ಅಥವಾ, ಹಿತವಾದ ತಂಗಾಳಿಯಲ್ಲಿ ನಿಮ್ಮ ಬೆವರ ಗಂಧ ಹತ್ತಿರ ಕೂತವರಿಗೆ ಕಿರಿಕಿರಿಯುಂಟು ಮಾಡಬಹುದು. ಯಾಕಿಷ್ಟು ಬೆವರು ಎಂಬ ಸಂಗತಿ ನಿಮ್ಮನ್ನು ಹಿಂಡಿ ಹಿಪ್ಪೆ ಮಾಡಬಹುದು. ಕೆಟ್ಟ ವಾಸನೆಯ ಬೆವರು ಹಲವು ಸಂದರ್ಭಗಳಲ್ಲಿ ಮುಜುಗರವನ್ನೂ ತರಬಹುದು. ಆದರೆ, ನೀವು ಮನಸ್ಸು ಮಾಡಿದರೆ ಹೀಗೆ ಬೆವರುವುದನ್ನು ಕಡಿಮೆ ಮಾಡಬಹುದು. ಯಾಕೆಂದರೆ ನಿಮ್ಮ ಬೆವರು ನಿಮ್ಮ ಕೈಯಲ್ಲೇ ಇದೆ. ಹೇಗೆ ಅಂತೀರಾ? ನೀವು ಅತಿಯಾಗಿ ಬೆವರುವುದಕ್ಕೂ ನೀವು ತಿನ್ನುವ ಆಹಾರಕ್ಕೂ ಗಳಸ್ಯ ಕಂಠಸ್ಯ ಸಂಬಂಧವಿದೆ. ಬನ್ನಿ ಯಾವೆಲ್ಲ ಆಹಾರಗಳನ್ನು ಕಡಿಮೆ ಮಾಡುವ ಮೂಲಕ ಬೆವರನ್ನೂ ಕಡಿಮೆ ಮಾಡಬಹುದು ಎಂಬುದನ್ನು ನೋಡೋಣ.

ಕಾಫಿ

ಬಹಳಷ್ಟು ಮಂದಿಗೆ ಬೆಳಬೆಳಗ್ಗೇ ಕಾಫಿ ಬೇಕು. ದಿನ ಆರಂಭವಾಗುವುದೇ ಕಾಫಿಯ ಜೊತೆಗೆ. ಆಗಾಗ ಅರ್ಧ ಕಪ್‌ ಕಾಫಿ ಹೊಟ್ಟೆ ಸೇರಬೇಕು. ಕಾಫಿ ಅಂತಲ್ಲ, ಕೆಫೀನ್‌ನ ಪೇಯಗಳನ್ನು ಜಾಸ್ತಿ ಕುಡಿಯುವ ಮಂದಿಗೆ ಜಾಸ್ತಿ ಬೆವರುತ್ತದೆ. ಹಾಗಾಗಿ ನೀವು ಕೆಫಿನ್‌ಯುಕ್ತ ಪೇಯಗಳನ್ನು ಹೆಚ್ಚು ಕುಡಿಯುವ ಅಭ್ಯಾಸವಿದ್ದರೆ, ನೀವು ಜಾಸ್ತಿ ಬೆವರುತ್ತೀರಾದರೆ, ನಿಮ್ಮ ಹತ್ತಿರದವರು ನಿಮಗೊಂದು ಹಗ್‌ ಕೊಡಲು ಹಿಂದೆ ಮುಂದೆ ನೋಡುತ್ತಾರೆಂದರೆ ಖಂಡಿತವಾಗಿ ನೀವು ನಿಮ್‌ ಕಾಫಿಪ್ರಿಯತೆಗೆ ಕಡಿವಾಣ ಹಾಕಲೇಬೇಕು.

ಮಸಾಲೆಯುಕ್ತ ಆಹಾರ

ನೀವು ಬೇಕಾದರೆ ಗಮನಿಸಿ. ಬಿಸಿಬಿಸಿ ಮಸಾಲೆಯುಕ್ತ ಕರಿಯೊಂದಕ್ಕೆ ಚಪಾತಿಯೊಂದರ ಜೊತೆ ಅದ್ದಿ ಬಾಯಿಗಿಡುವಷ್ಟರಲ್ಲಿ ನಿಮ್ಮ ಹಣೆಯ ಮೇಲೆ ಬೆವರ ಸಾಲುಗಳು ಮುತ್ತಿನಂತೆ ಶೇಖರವಾಗುವುದನ್ನು ನೀವು ಗಮನಿಸಿರಬಹುದು. ಅದರಲ್ಲೊಂದಿಷ್ಟು ಹಸಿ ಮೆಣಸಿದ್ದರೆ ಕತೆ ಮುಗಿದಂತೆಯೇ. ನಿಮ್ಮ ಬೆವರಹನಿ ಸಾಲುಗಳು ಕರಗಿ ನೀರಾಗಿ ಹಣೆಯಿಂದ ಇಳಿದೀತು. ಹಾಗಾಗಿ, ಅತಿಯಾಗಿ ಬೆವರುವುದರಿಂದ ದೂರವಿರಬೇಕಾದರೆ, ಮಸಾಲೆಯುಕ್ತ ಪದಾರ್ಥಗಳಿಂದಲೂ ದೂರವಿರಿ.

ಸಿಹಿತಿಂಡಿಗಳು

ಯಾವುದಾದರೂ ಸಮಾರಂಭಕ್ಕೆ ಹೋಗಿ ಅಲ್ಲಿ ಭರ್ಜರಿ ಭೋಜನ ಮಾಡಿದ ಕೂಡಲೇ ಬೆವರಿಳಿಯಲು ಶುರುವಾಗುತ್ತದೆ. ಅಲ್ಲಿ ನೀವು ಭರ್ಜರಿಯಾಗಿ ಹೊಟ್ಟೆಗಿಳಿಸಿದ ಸಿಹಿತಿಂಡಿಗಳು, ಪರಮಾನ್ನ ಭಕ್ಷ್ಯಗಳು ಇತ್ಯಾದಿಗಳ ಪರಿಣಾಮ ಅದು. ಸಿಹಿತಿಂಡಿ ಅತಿಯಾಗಿ ತಿನ್ನುತ್ತಿದ್ದರೆ ನೀವು ಬೆವರುವುದೂ ಹೆಚ್ಚು.

ಆಲ್ಕೋಹಾಲ್

ಅತಿಯಾದ ಆಲ್ಕೋಹಾಲ್‌ ಸೇವನೆ ನಿಮ್ಮ ದೇಹದ ಉಷ್ಣತೆಯನ್ನು ಏರಿಸುವ ಮೂಲಕ ಬೆವರಿಳಿಸುತ್ತದೆ. ಎಲ್ಲೋ ಅಪರೂಪಕ್ಕೊಮ್ಮೆ ಗೆಳೆಯರ ಜೊತೆ, ಅಥವಾ ಒಂದು ಖುಷಿಯ ಸನ್ನಿವೇಶಕ್ಕೆ ಇವೆಲ್ಲ ಇದ್ದರೂ, ನಿತ್ಯವೂ ಅಥವಾ ಆಗಾಗ ಇದು ಚಟವಾಗಿಬಿಟ್ಟರೆ ಇದು ಕೇವಲ ಬೆವರಷ್ಟೇ ಅಲ್ಲ, ಆನೇಕ ಆರೋಗ್ಯದ ಸಮಸ್ಯೆಗಳನ್ನೂ ತಂದೊಡ್ಡುತ್ತದೆ ಎಂಬ ಸತ್ಯ ಯಾರಿಗೂ ತಿಳಿಯದ್ದೇನಲ್ಲ. ಹಾಗಾಗಿ ಆಲ್ಕೋಹಾಲ್‌ ಹಿತಮಿತವಾಗಿರಲಿ.

ಸೋಡಾ

ಬೇಸಿಗೆಯ ಬಿಸಿಲಲ್ಲಿ ಬೆವರಿಳಿಸಿ ನಡೆವಾಗ, ನಿಂಬೆಹಣ್ಣಿನ ಸೋಡಾ ಯಾರಿಗೆ ತಾನೇ ಇಷ್ಟವಾಗದು ಹೇಳಿ. ಆದರೆ, ಬಿಸಿಲಲ್ಲಿ ತಂಪು ತಂಪು ನಿಂಬೆಹಣ್ಣಿನ ಸೋಡಾ, ದೇಹವನ್ನು ತಂಪು ಮಾಡೀತು ಅಂದುಕೊಂಡರೆ ಅದು ತಪ್ಪಾದೀತು. ಸೋಡಾ ಹಾಗೂ ಅದರಲ್ಲಿ ಸೇರಿರುವ ರಾಶಿ ಸಕ್ಕರೆ ದೇಹವನ್ನು ಪ್ರವೇಶಿಸಿದ ಕೂಡಲೇ ಬೆವರಿಳಿಯುವುದು ಇನ್ನೂ ಹೆಚ್ಚುತ್ತದೆ!

ಇದನ್ನೂ ಓದಿ: Cardamom Benefits: ಏಲಕ್ಕಿ ಕೇವಲ ಘಮದಲ್ಲಷ್ಟೇ ಅಲ್ಲ, ಇದರ ಪ್ರಯೋಜನಗಳು ಎಷ್ಟೊಂದು!

Exit mobile version