ಹಳ್ಳಿಗಳಲ್ಲಿ ಬೆಳೆದ ನಮ್ಮ ಬಾಲ್ಯಗಳನ್ನು ನೆನೆಪಿಸಿಕೊಂಡರೆ ಅನೇಕರಿಗೆ ಬೇಸಿಗೆ ಬಂದೊಡನೆ ಅಜ್ಜಿಮನೆಯ ಕೆರೆ ಕೊಳ್ಳ, ಹೊಳೆಗಳಲ್ಲೆಲ್ಲ ಈಜಾಡಿಕೊಂಡು ಮಜವಾಗಿ ಕಾಲ ಕಳೆದದ್ದು ನೆನಪಿಗೆ ಬರಬಹುದು. ಆಗೆಲ್ಲ, ಈಜುವ ತರಗತಿ ಹೋಗದೆ, ಹಳ್ಳಿಗಳಲ್ಲೇ ಬಹುತೇಕರು ಬಾಲ್ಯದ ಭಾಗವಾಗಿ ಈಜು ಕಲಿತುಕೊಳ್ಳುತ್ತಿದ್ದರು. ಈಗ ನಗರಗಳಲ್ಲಿ ಎಲ್ಲರಿಗೂ ಈಜು ಬೇಕಾದ ಸಮಯಕ್ಕೆ ಕಲಿತುಕೊಳ್ಳಬಹುದು. ಈಜು ಗೊತ್ತಿದ್ದವರು ಈಜುಕೊಳಗಳಲ್ಲಿ ದುಡ್ಡುಕೊಟ್ಟು ನಿತ್ಯವೂ ಈಜಿ ಬರಬಹುದು. ಈಜಲು ತಿಳಿದಿದ್ದರೆ ಅದು ಒಳಳೆಯದು. ಫಿಟ್ನೆಸ್ನ ಭಾಗವಾಗಿ ಈಜುತ್ತಿದ್ದರೆ ಅದೂ ಕೂಡಾ ಒಳ್ಳೆಯದೇ. ಇತ್ತೀಚೆಗಿನ ದಿನಗಳಲ್ಲಿ ಈಜು ಮಕ್ಕಳಾದಿಯಾಗಿ ಹಿರಿಯರೂ ಕೂಡಾ ಕಲಿತು ತಮ್ಮ ಫಿಟ್ನೆಸ್ನ ಭಾಗವಾಗಿ ರೂಪಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಹಾಗೆ ನೋಡಿದರೆ, ಈಜುವುದು ಎಲ್ಲದಕ್ಕಿಂತ ಅತ್ಯುತ್ತಮವಾದ ಕಾರ್ಡಿಯೋ ವ್ಯಾಯಾಮ. ಬನ್ನಿ, ಈಜುವುದರಿಂದ ನಮ್ಮ ಆರೋಗ್ಯಕ್ಕೆ, ಫಿಟ್ನೆಸ್ಗೆ ಯಾವೆಲ್ಲ ಉಪಯೋಗಗಳಿವೆ ಎಂಬುದನ್ನು (swim benefits) ನೋಡೋಣ.
- ಈಜು ಸುಲಭ ಖಂಡಿತ ಅಲ್ಲ ನಿಜ. ಆದರೆ, ಈಜಲು ಗೊತ್ತಿದ್ದರೆ, ಈಜುತ್ತಿದ್ದರೆ, ನೀವು ಬೇರೆ ವ್ಯಾಯಾಮಕ್ಕೆ ಹಾಕಿದ ಶ್ರಮವನ್ನು ಈಜಲು ಹಾಕಬೇಕಿಲ್ಲ. ಆದರೂ, ಇಡೀ ದೇಹಕ್ಕೆ ಅತ್ಯುತ್ತಮ ವ್ಯಾಯಾಮ ಇದರಿಂದ ದೊರೆಯುತ್ತದೆ. ಮಂಡಿ ನೋವು, ಸಂಧಿವಾತ, ಬೊಜ್ಜು ಇತ್ಯಾದಿ ಸಮಸ್ಯೆಗಳಿರುವ ಮಂದಿಯೂ ನಿರಾಯಾಸವಾಗಿ ಈಜಿ ಇದರಿಂದ ಲಾಭ ಪಡೆಯಬಹುದು.
- ಈಜುವುದರಿಂದ ಹೃದಯ ಗಟ್ಟಿಯಾಗಿರುತ್ತದೆ. ಇದು ಕೊಲೆಸ್ಟೆರಾಲ್ ಮಟ್ಟವನ್ನು ಸರಿಯಾಗಿಟ್ಟು, ಅಧಿಕ ರಕ್ತದೊತ್ತಡವನ್ನೂ ಸಮತೋಲನಕ್ಕೆ ತಂದು, ಹೃದಯ ಅಚ್ಚುಕಟ್ಟಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುತ್ತದೆ.
- ಶ್ವಾಸಕೋಶಕ್ಕೆ ಈಜು ಅತ್ಯಂತ ಒಳ್ಳೆಯದು. ಈಜಿನ ಜೊತೆ ಉಸಿರಾಟದ ಗಮನವೂ ಇರಬೇಕಾದ್ದರಿಂದ ಇಲ್ಲಿ ಶ್ವಾಸಕೋಶಕ್ಕೆ ಅತ್ಯಂತ ಹೆಚ್ಚು ವ್ಯಾಯಾಮ ದೊರೆಯುತ್ತದೆ. ಅಸ್ತಮಾ, ಅಥವಾ ಶ್ವಾಸಕೋಶದ ಸಮಸ್ಯೆ ಇರುವ ಮಂದಿ ತಮ್ಮ ಶ್ವಾಸಕೋಶಕ್ಕೆ ನೀಡಬಹುದಾದ ಉತ್ತಮ ವ್ಯಾಯಾಮ ಇದು.
- ಈಜುವುದರಿಂದ ಹೆಚ್ಚು ಕ್ಯಾಲರಿ ಕರಗಿಸಬಹುದು. ಅರ್ಧ ಗಂಟೆ ಈಜುವುದರಿಂದ ೨೫೦ ಕ್ಯಾಲರಿಯಷ್ಟನ್ನು ಕರಗಿಸಬಹುದು. ಬೇರೆ ಯಾವ ವ್ಯಾಯಾಮದಲ್ಲಿಯೂ ಇಷ್ಟು ಕಡಿಮೆ ಸಮಯದಲ್ಲಿ ಇಷ್ಟು ಕ್ಯಾಲರಿ ಕರಗದು.
- ಮಾಂಸಖಂಡಗಳ ಬಲವರ್ಧನೆಗೆ, ನಿಮ್ಮ ದೇಹದ ತೂಕ ಇಳಿಸಿ ಟೋನ್ ಮಾಡಲು ಈಜುವುದು ಒಳ್ಳೆಯ ವ್ಯಾಯಾಮ. ಇದರಿಂದ ಮಾಂಸಖಂಡಗಳು ದೃಢವಾಗುತ್ತದೆ.
- ಈಜುವುದರಿಂದ ಮಿದುಳು ಚುರುಕಾಗುತ್ತದೆ. ವಯಸ್ಸಾದಂತೆ ಮಿದುಳಿಗೂ ವ್ಯಾಯಾಮ ನೀಡಲು ಈಜಬಹುದು.
- ಆರೋಗ್ಯಕರವಾಗಿ ವಯಸ್ಸಾಗಬೇಕೆಂಬ ಆಸೆ ನಿಮಗಿದ್ದರೆ ನಿತ್ಯವೂ ಈಜಲು ಸಮಯ ಮೀಸಲಿಡಿ. ದೇಹದ ಎಲ್ಲ ಕೆಲಸವೂ ಸಮತೋಲನದಲ್ಲಿ ಇರಲು ಈಜುವುದರಿಂದ ಸಹಾಯವಾಗುತ್ತದೆ.
- ಮೆನೋಪಾಸ್ ಹತ್ತಿರ ಬರುತ್ತಿದ್ದಂತೆ ಮಹಿಳೆಯರ ಎಲುಬಿನ ಸಾಂದ್ರತೆ ಕಡಿಮೆಯಾಗತೊಡಗುತ್ತದೆ. ಇಂಥ ಸಮಯದಲ್ಲಿ ಈಜುವುದರಿಂದ ಎಲುಬಿನ ಮೇಲೆ ಸಕಾರಾತ್ಮಕ ಪ್ರಭಾವ ಬೀಳುವುದರಿಂದ ಎಲುಬು ಸವೆತದಂಥ ಸಮಸ್ಯೆ ಬಹುಬೇಗನೆ ಬಾರದು.
- ನೀವು ಈಗಷ್ಟೇ ವ್ಯಾಯಾಮದ ಬಗ್ಗೆ ಆಸಕ್ತಿ ತೋರಿಸುತ್ತಿದ್ದೀರಿ ಎಂದಾದಲ್ಲಿ, ಈಜು ನಿಮಗೆ ಅತ್ಯುತ್ತಮ ವ್ಯಾಯಾಮ. ಇಡೀ ದೇಹಕ್ಕೆ ಏಕಕಾಲದಲ್ಲಿ ವ್ಯಾಯಾಮ ದೊರೆಯುವುದು ಈಜಿನಿಂದ ಮಾತ್ರ.
- ಕೇವಲ ಈಜಷ್ಟೇ ಅಲ್ಲ, ಈಜುಕೊಳದೊಳಗೆ ನಡೆಯುವುದರಿಂದ, ಕೈಬೀಸುವುದರಿಂದ ಹೊರಗೆ ನಡಿಗೆ ಮಾಡಿದ್ದರಿಂದ ಹೆಚ್ಚು ಫಲ ದೊರೆತುತ್ತದೆ. ಅದಕ್ಕಾಗಿಯೇ ವಾಟರ್ ಏರೋಬಿಕ್ಸ್ ಇತ್ಯಾದಿಗಳೂ ಕೂಡಾ ಈಗ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿವೆ.
ಇದನ್ನೂ ಓದಿ: Weight Loss Tips: ಕಪ್ಪು ಬಣ್ಣದ ಆಹಾರಗಳಿಂದ ತೂಕ ಇಳಿಸಿ!