ಸಾಮಾನ್ಯವಾಗಿ ಹುಳಿ ತಿನ್ನಲು ಆಸೆ ಎಂದು ಹುಡುಗಿ ಬಯಸಿದರೆ ಎಲ್ಲರೂ ಕಣ್ಣರಳಿಸಿ ನೋಡುವವರೇ! ಇನ್ನು, ಹೇಳಿದ ಹುಡುಗಿಗೆ ಈಗಷ್ಟೇ ಮದುವೆಯಾಗಿದ್ದರೆ ಆಕೆಯ ಕಥೆ ಮುಗಿದಂತೆಯೇ. ಎಲ್ಲರ ಪ್ರಶ್ನೆಗಳ ದಾಳಿಯಲ್ಲಿ ಆಕೆ ನಿರಾಳವಾಗಿ ಉಸಿರಾಡಿ, ಅಂಥಾ ವಿಶೇಷ ಏನಿಲ್ಲ ಎಂದು ಒಪ್ಪಿಸುವಲ್ಲಿ ಆಕೆಗೆ ಸಾಕುಬೇಕಾಗಬಹುದು. ಯಾಕೆಂದರೆ, ಹುಳಿ ಎಂದ ಕೂಡಲೇ ಎಲ್ಲರ ಲೆಕ್ಕಾಚಾರ, ʻಗುಡ್ ನ್ಯೂಸ್ ಬಗೆಗಿನದೇ. ಹುಣಸೇಹಣ್ಣು, ಮಾವಿನಕಾಯಿ, ಉಪ್ಪಿನಕಾಯಿಯಂತಹವುಗಳೆಲ್ಲ ಬಸುರಿ ಬಯಕೆಯವು ಎಂದೇ ಲೆಕ್ಕ. ಗರ್ಭಿಣಿಯಾದವಳಿಗಷ್ಟೇ ಇಂತಹುಗಳೆಲ್ಲ ಇದ್ದಕ್ಕಿದ್ದಂತೆ ತಿನ್ನಲು ಆಸೆಯಾಗುವುದು ಎಂಬ ನಂಬಿಕೆ ತಲೆತಲಾಂತರಗಳಿಂದ ನೋಡಿ, ತಿಳಿದು, ಅನುಭವಿಸಿ ಬಂದಂಥವುಗಳು. ಹಾಗಾದರೆ, ಗರ್ಭಿಣಿಯರಿಗೂ ಹುಣಸೇಹಣ್ಣಿಗೂ ಏನು ಸಂಬಂಧ? ಗರ್ಭಿಣಿಯರು ಹುಣಸೇಹಣ್ಣು ತಿಂದರೆ ಒಳ್ಳೆಯದೋ ಕೆಟ್ಟದ್ದೋ ನೋಡೋಣ.
ಪೋಷಕಾಂಶಗಳ ವಿಷಯಕ್ಕೆ ಬಂದರೆ ಹುಣಸೇಹಣ್ಣು ಒಂದು ಪವರ್ ಪ್ಯಾಕ್ ಆಹಾರ. ಇದರಲ್ಲಿ ಇಲ್ಲದ ಸತ್ವವಿಲ್ಲ. ಕ್ಯಾಲ್ಶಿಯಂ, ವಿಟಮಿನ್ ಎ, ಸಿ, ಕೆ, ಕಬ್ಬಿಣಾಂಶ, ಪೊಟಾಶಿಯಂ, ನಾರಿನಂಶ ಎಲ್ಲವೂ ಇದರಲ್ಲಿದೆ. ಬಹುಮುಖ್ಯವಾಗಿ ಹುಣಸೇಹಣ್ಣಿನಲ್ಲಿ ಕೊಲೆಸ್ಟೆರಾಲ್ ಆಗಲೀ, ಸ್ಯಾಚುರೇಟೆಡ್ ಕೊಬ್ಬಾಗಲೀ ಇಲ್ಲ. ಇದರಿಂದ ತೂಕದ ಬಗ್ಗೆ ಯೋಚನೆ ಇರುವ ಮಂದಿಯಂತೂ ಆರಾಮವಾಗಿ ಯಾವ ಯೋಚನೆಯೂ ಇಲ್ಲದೆ ಹುಣಸೇಹಣ್ಣು ತಿನ್ನಬಹುದು. ಹಾಗಾಗಿ, ಗರ್ಭಿಣಿಯರೇಕೆ, ಎಲ್ಲರಿಗೂ ಹುಣಸೇಹಣ್ಣು ಬಹಳ ಒಳ್ಳೆಯದು!
೧. ಗರ್ಭಿಣಿಯರಲ್ಲಿ ಮೊದಲ ಮೂರು ತಿಂಗಳಲ್ಲಿ ಬಹುತೇಕ ಎಲ್ಲರನ್ನೂ ಕಾಡುವ ವಾಂತಿ ತಲೆಸುತ್ತಿನಂತಹ ಮಾರ್ನಿಂಗ್ ಸಿಕ್‌ನೆಸ್ ತೊಂದರೆಗೆ ಹುಣಸೇಹಣ್ಣು ಒಳ್ಳೆಯದು. ಹುಣಸೇಹಣ್ಣಿನ ಜೊತೆಗೆ ಸ್ವಲ್ಪ ಉಪ್ಪು ಸೇರಿಸಿ ಸೇವಿಸದರೆ, ಇದರಿಂದ ಆರಾಮ ದೊರಕಬಹುದು. ಹುಣಸೇಹಣ್ಣಿನ ಜ್ಯೂಸ್ ಇತ್ಯಾದಿ ಮಾಡಿ ಕುಡಿಯಲೂ ಬಹುದು.
೨. ಅನುವಂಶೀಯವಾಗಿ ಬಂರುವ ಹೈಪರ್‌ಟೆನ್ಶನ್‌ನಂತಹ ಸಮಸ್ಯೆ ಇರುವ ಗರ್ಭಿಣಿಯರು ಅಧಿಕ ರಕ್ತದೊತ್ತಡದಂತಹ ಸಮಸ್ಯೆಗೀಡಾಗಬಹುದು. ಇಂಥವರಿಗೆ ಹುಣಸೇಹಣ್ಣು ಒಳ್ಳೆಯದು. ಇದರಲ್ಲಿರುವ ಪೊಟಾಶಿಯಂ ಅಂಶ, ಗರ್ಭಿಣಿಯಾಗಿದ್ದಾಗ ರಕ್ತದೊತ್ತಡವನ್ನು ಸಮತೋಲನದಲ್ಲಿ ಇಡಲು ನೆರವಾಗುತ್ತದೆ.
೩. ಗರ್ಭಿಣಿಯಾಗಿದ್ದಾಗ ಶೇ.೧೬-೩೯ರಷ್ಟು ಮಹಿಳೆಯರ ಸಮಸ್ಯೆ ಎಂದರೆ ಮಲಬದ್ಧತೆ. ಮಲಬದ್ಧತೆ ಇರುವ ಮಂದಿ ಹುಣಸೇಹಣ್ಣು ಸೇವಿಸಬಹುದು. ಇನ್ನು, ಶೇ.೧೪.೩ರಷ್ಟು ಮಂದಿ ಅಜೀರ್ಣದ ಸಮಸ್ಯೆಯಿಂಧ ಕಷ್ಟಪಡುತ್ತಾರೆ. ಹುಣಸೇ ಹಣ್ಣು ಹೊಟ್ಟೆಯ ಸಂಬಂಧೀ ತೊಂದರೆಗಳಿಗೆ ಪರಿಹಾರ ನೀಡುತ್ತದೆ.
೪. ಮುಖ್ಯವಾಗಿ, ಗರ್ಭಿಣಿಯರಿಗೆ ಗರ್ಭಪಾತವಾಗದಂತೆ ರಕ್ಷಿಸುವ ಗುಣ ಹುಣಸೇಹಣ್ಣಿಗಿದೆ. ಇದು ರಕ್ತಕಣಗಳ ಸಂಖ್ಯಾವೃದ್ಧಿಯಲ್ಲಿ ಸಹಾಯ ಮಾಡುವ ಜೊತೆಗೆ ಕಬ್ಬಿಣಾಂಶವನ್ನು ಹೊಟ್ಟೆಯಲ್ಲಿರುವ ಭ್ರೂಣಕ್ಕೆ ಅಗತ್ಯವಿರುವಷ್ಟನ್ನು ಪೂರೈಸಿ ಅವಧಿಗೆ ಮುನ್ನವೇ ಮಗು ಜನಿಸುವುದನ್ನು ತಪ್ಪಿಸುತ್ತದೆ.
೫. ಹುಣಸೇಹಣ್ಣು ಹೊಟ್ಟೆಯಲ್ಲಿರುವ ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಬಿ೩ ಹಾಗೂ ೪, ಕ್ಯಾಲ್ಶಿಯಂ, ಝಿಂಕ್, ಮೆಗ್ನೀಶಿಯಂ, ಹಾಗೂ ಪ್ರೊಟೀನ್‌ನ ಆಗರವಾಗಿರುವುದರಿಂದ ಹೊಟ್ಟೆಯಲ್ಲಿರುವ ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿದೆ.
ಇದನ್ನೂ ಓದಿ: Health Tips | ತೂಕ ಇಳಿಸಿ, ಹಸಿವು ನಿಯಂತ್ರಿಸಲು ಬೇಕು ಮಸಾಲೆ ಚಹಾ!
೬. ಗರ್ಭಿಣಿಯರಿಗೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಮಾಂಸಖಂಡಗಳ ನೋವು, ಕಾಲುಗಳಲ್ಲಿ ನೀರು ತುಂಬಿದಂತಾಗುವುದು ಮತ್ತಿತರ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
೭. ಗರ್ಭಿಣಿಯರಿಗೆ ಆಂಟಿ ಆಕ್ಸಿಡೆಂಟ್‌ಗಳ ಪ್ರಮುಖ ಮೂಲವಿದು. ಮಗುವಿನಲ್ಲಿ ಹುಟ್ಟುವಾಗ ಯಾವುದೇ ದೈಹಿಕ ನ್ಯೂನ್ಯತೆಗಳಿಲ್ಲದಂತೆ ಕಾಪಾಡುವ, ಮಗು ಹಾಗೂ ಅಮ್ಮನಿಗೆ ಕೆಲವು ಬಗೆಯ ಕ್ಯಾನ್ಸರ್ ಬಾರದಂತೆ ತಡೆಯುವ ಗುಣವಿದೆ.
ಇಷ್ಟೆಲ್ಲ ಉಪಯೋಗಗಳಿರುವ ಹುಣಸೇಹಣ್ಣು ಎಂದಾಕ್ಷಣ ಹುಬ್ಬು ಹಾರಿಸಿ ಕಣ್ಣು ಮಿಟುಕಿಸುವ ಮಂದಿಯೆಲ್ಲ ಹುಣಸೇಹಣ್ಣಿನ ನಿಜವಾದ ಉಪಯೋಗವನ್ನು ಇಲ್ಲಿ ಅರಿತುಕೊಳ್ಳಬಹುದು. ಆದರೆ, ಒಳ್ಳೆಯದೆಂದರೂ ತಿನ್ನುವಾಗ ಜಾಗ್ರತೆ ವಹಿಸುವುದು ಕೂಡಾ ಅಗತ್ಯ. ಅನುವಂಶೀಯವಾಗಿ ಮಧುಮೇಹದ ತೊಂದರೆ ಇದ್ದರೆ, ಗರ್ಭಿಣಿಯಾದಾಗ ಬಂದಿದ್ದರೆ, ಅಂಥವರು ಕೊಂಚ ಜಾಗರೂಕತೆ ವಹಿಸುವುದು ಉತ್ತಮ. ಹಿತಮಿತವಾಗಿ ಬಳಸಿದಲ್ಲಿ, ಎಲ್ಲ ಆಹಾರದ ಅನುಕೂಲವೂ ಶ್ರೇಷ್ಠವೇ ಆಗಿದೆ ಎಂಬುದನ್ನು ಮಾತ್ರ ಅರಿಯಬೇಕು. ಜೊತೆಗೆ, ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ.
ಇದನ್ನೂ ಓದಿ: Health Tips | ಈ ಕಾಂಬಿನೇಷನ್ ಆಹಾರಗಳು ತೊಂದರೆ ತರಬಹುದು, ಜಾಗ್ರತೆ!