ಭಾರತದಲ್ಲಿ ಚಹಾ ಎಂಬುದೇ ಒಂದು ಸಂಸ್ಕೃತಿ. ಪೂರ್ವ ದಿಕ್ಕಿನಲ್ಲಿ ಸೂರ್ಯ ಮೇಲೆ ಬಂದರೂ, ಒಂದು ಕಪ್ ಚಹಾ ಇಲ್ಲದೆ ನಮಗೆ ಬೆಳಗೇ ಆಗುವುದಿಲ್ಲ. ಚಹಾಕ್ಕೂ ಬೆಳಗಿಗೂ ಅಷ್ಟು ನಂಟು. ಅದರಲ್ಲೂ ಚಳಿಯೂರುಗಳಲ್ಲಿ ಹಬೆಯಾಡುವ ಚಹಾ ಕುಡಿಯುತ್ತಿದ್ದರೆ ನಮಗೆ ಬೇರೆ ಜಗತ್ತೇ ಬೇಡ. ಚಹಾ ಎಂಬುದೊಂದು ಜಗತ್ತಿನಲ್ಲಿ ಕಳೆದುಹೋಗಲು ಬಯಸದ ಜೀವಗಳೇ ಇಲ್ಲ. ಚಹಾ ಕೆಟ್ಟದ್ದೋ ಒಳ್ಳೆಯದೋ, ಅದಕ್ಕೆಲ್ಲ ತಲೆಕೆಡಿಸದೆ, ಚಹಾ ಕೊಡುವ ಬೆಚ್ಚಗಿನ ಅಪ್ಪುಗೆಯನ್ನು ಬಯಸದವರೇ ಇಲ್ಲ. ಹಾಗಾಗಿ ಇಂತಹ ಚಹಾ ಪ್ರೀತಿಯ ಮಂದಿ ನಮ್ಮ ದೇಶದಲ್ಲಿದ್ದುಕೊಂಡು ಕೆಲವು ವಿಚಿತ್ರ ನಮೂನೆಯ ಚಹಾಗಳನ್ನು ಜೀವನದಲ್ಲೊಮ್ಮೆಯಾದರೂ ಟ್ರೈ ಮಾಡದಿದ್ದರೆ ಬದುಕಿದ್ದೂ ವ್ಯರ್ಥ!
೧. ಕೇಸರ್ ಮಸಾಲಾ ಚಹಾ: ಮಸಾಲೆಗಳಲ್ಲೇ ದುಬಾರಿಯಾದ, ಶ್ರೀಮಂತವಾದ ಕೇಸರಿ ಹಾಕಿದ ಚಹಾ ಎಂದಾದರೂ ಸವಿದಿದ್ದೀರಾ? ಇಲ್ಲ ಎಂದಾದರೆ ಒಮ್ಮೆ ಕೇಸರ್ ಮಸಾಲಾ ಚಹಾ ಕುಡಿಯಬೇಕು. ನಮ್ಮ ನಿತ್ಯದ ಚಹಾಕ್ಕೆ ಕೇಸರಿ ಎಸಳುಗಳನ್ನೂ ಸೇರಿಸಿ ಮಾಡುವ ಚಹಾವಿದು. ಕೇಳಲು ಕೊಂಚ ವಿಚಿತ್ರ ಎನಿಸಿದರೂ ಇದರ ರುಚಿ ಒಮ್ಮೆ ಸವಿಯಬೇಕು. ಮನಸ್ಸಿಗೆ ಉಲ್ಲಾಸವನ್ನು ನೀಡುವ ಈ ಚಹಾ ಖಿನ್ನತೆ, ಒತ್ತಡವನ್ನು ದೂರ ಸರಿಸಿ ನಮ್ಮನ್ನು ರಿಲ್ಯಾಕ್ಸ್ ಮಾಡುತ್ತದೆ.
೨. ಕಾಶ್ಮೀರಿ ನೂನ್ ಚಹಾ: ಇದು ಕಾಶ್ಮೀರದ ವಿಶೇಷ ಚಹಾ. ಕಾಶ್ಮೀರಕ್ಕೆ ಭೇಟಿಕೊಟ್ಟವರು ಅಲ್ಲಿವ ವಿಶೇಷತೆಗಳನ್ನು ನೋಡುವ ಜೊತೆಗೆ ಅಲ್ಲಿನ ಕೆಲವು ತಿನಿಸು ಹಾಗೂ ಪೇಯಗಳನ್ನೂ ಟ್ರೈ ಮಾಡಲೇಬೇಕು. ಅವುಗಳಲ್ಲಿ ಕಾಶ್ಮೀರಿ ನೂನ್ ಚಹಾ ಕೂಡಾ ಒಂದು. ಕೊಂಚ ಉಪ್ಪಿನ ರುಚಿಯಿರುವ ಈ ಚಹಾ ಪಿಂಕ್ ಬಣ್ಣದಿಂದಲೇ ನಮ್ಮನ್ನು ಕಟ್ಟಿಹಾಕುತ್ತದೆ. ಚಹಾಸೊಪ್ಪು, ಹಾಲು, ಬೇಕಿಂಗ್ ಸೋಡಾ, ಉಪ್ಪು, ಏಲಕ್ಕಿಯನ್ನು ಹಾಕಿ ಮಾಡುವ ಚಹಾವಿದು. ವಿಶೇಷವೆಂದರೆ ಈ ಚಹಾ ಎಲ್ಲರಿಗೂ ಇಷ್ಟವಾಗಬೇಕೆಂದೇನಿಲ್ಲ. ಆದರೂ, ಜೀವನದಲ್ಲೊಮ್ಮೆ ಕಾಶ್ಮೀರದಲ್ಲಿ ತಿರುಗಾಡಿ ನೂನ್ ಚಹಾ ಕುಡಿಯಬೇಕು.
೩. ಗೋಲ್ಡನ್ ಅರಿಶಿನ ಚಹಾ: ಅರಿಶಿನ ಪುಡಿ ಹಾಕಿ ಮಾಡುವ ಅನಾರೋಗ್ಯದ ಸಮಯದಲ್ಲಿ ದೇಹಕ್ಕೆ ಅತ್ಯಂತ ಒಳ್ಳೆಯದನ್ನು ಮಾಡುವ ಚಹಾವಿದು. ಚಳಿಗಾಲದಲ್ಲಿ, ಮಳೆಗಾಲದಲ್ಲಿ ಕಾಡುವ ಎಲ್ಲ ಬಗೆಯ ರೋಗಗಳನ್ನೂ ದೂರ ಮಾಡುವ, ರೋಗ ನಿರೋಧಕ ಶಕ್ತಿ ನೀಡುವ ಈ ಚಹಾ ನಿಜಕ್ಕೂ ಆಗಾಗ ಕುಡಿಯುತ್ತಿರಬೇಕು.
೪. ಸುಲೈಮಾನಿ ಚಹಾ: ಇದೇನಿದು ಇಂಥ ಹೆಸರು ಎಂದು ಹುಬ್ಬೇರಿಸಬೇಡಿ. ಕೇರಳದಲ್ಲಿ ಅತ್ಯಂತ ಜನಪ್ರಿಯವಾಗಿರುವ ಸುಲೈಮಾನಿ ಚಹಾ ನಾಲಿಗೆ ಚಪ್ಪರಿಸಬಹುದಾದ ಚಹಾ. ಬಿಸಿಬಿಸಿ ಹಬೆಯಾಡುವ ಹಾಲು ಹಾಕದ ಈ ಚಹಾ ಚಳಿ, ಮಳೆಗೆ ಪರ್ಫೆಕ್ಟ್ ಕಾಂಬಿನೇಶನ್ನು. ಏಲಕ್ಕಿ ಪಟ್ಟೆ ಲವಂಗಗಳಂತಹ ಮಸಾಲೆಗಳನ್ನು ಹಾಕಿ ಮಾಡಿದ ಈ ಚಹಾಕ್ಕೆ ಮಲಬಾರ್ ಮಸಾಲೆ ಚಹಾ ಎಂಬ ಹೆಸರೂ ಇದೆ. ಮಸಾಲೆ ಪದಾರ್ಥಗಳನ್ನು ಬೆಳೆಯುವ ಕೇರಳದಲ್ಲೇ ಇದನ್ನು ಸವಿದರೆ ಬಹಳ ರುಚಿ.
೫. ಅದ್ರಕ್‌ವಾಲಿ ಚಹಾ: ಉತ್ತರ ಭಾರತದಲ್ಲಿ ತಿರುಗಾಡಿದವರಿಗೆ ಮಟ್ಕಾ ಚಹಾ ಕುಡಿದು ಖಂಡಿತ ಗೊತ್ತಿರುತ್ತದೆ. ರಸ್ತೆಬದಿಯಲ್ಲಿ ಚಹಾ ಮಾಡುವ, ಚೆನ್ನಾಗಿ ಶುಂಠಿ ಹಾಕಿ ಕುದಿಸಿ ಕುದಿಸಿ ಮಾಡಿದ ಈ ಚಹಾವನ್ನು ಹಾಕಿ ಕೊಡುವ ಮಣ್ಣಿನ ಪುಟ್ಟ ಲೋಟಗಳಲ್ಲಿ ಕುಡಿಯುವ ಸುಖವೇ ಬೇರೆ. ಶುಂಠಿಯ ಖಾರ, ಚಹಾದ ಸಿಹಿ ಎಲ್ಲವೂ ಕೊಡುವ ಅನಿವರ್ಚನೀಯ ಆನಂದವೇ ಬೇರೆ!
ಇದನ್ನೂ ಓದಿ | Healthy breakfast | ಬೆಳಗಿನ ತಿಂಡಿಗಳು: ನಮ್ಮಲ್ಲೇ ಇದೆ, ನಮ್ಮ ಆರೋಗ್ಯದ ಸೀಕ್ರೆಟ್!
೬. ಇರಾನಿ ಚಹಾ: ಇದು ಎಲ್ಲ ಚಹಾಗಳಂತಲ್ಲ. ಪರ್ಷಿಯಾ ಮೂಲದ ಈ ಚಹಾ ಮಾಡುವ ಸಂಪ್ರದಾಯ ಸುಮಾರು ೧೮೯ನೇ ಶತಮಾನದಲ್ಲಿ ಭಾರತಕ್ಕೆ ಬಂತು ಎಂದು ಹೇಳಲಾಗುತ್ತದೆ. ಖೋವಾ ಹಾಕಿ ಮಾಡುವ ಈ ಚಹಾಕ್ಕೊಂದು ವಿಶೇಷ ರುಚಿಯಿದೆ. ಚಕ್ಕೆ ಹಾಗೂ ಏಲಕ್ಕಿಯನ್ನೂ ಹಾಕಿ ಮಾಡಲಾಗುವ ಈ ಚಹಾವನ್ನು ಹೈದರಾಬಾದಿನಲ್ಲೇ ಕುಡಿಯಬೇಕು!
ಕೇವಲ ಇಷ್ಟೇ ಅಲ್ಲ. ಭಾರತದ ಪ್ರತಿಯೊಂದು ಊರಿನಲ್ಲೂ ಸಿಗು ಚಹಾಕ್ಕೊಂದು ತನ್ನದೇ ಆದ ವಿಶೇಷ ರುಚಿಯಿರುತ್ತದೆ. ಅದಕ್ಕೇ ಎಲ್ಲಿಗೇ ಹೋದರೂ ಆ ಊರಿನ ಗೂಡಂಗಡಿಯಲ್ಲಿಯೋ, ರಸ್ತೆ ಬದಿಯಲ್ಲೋ ಕೂತು ಒಮ್ಮೆ ಚಹಾ ಕುಡಿಯಬೇಕು. ಅದರ ಮಜಾವೇ ಬೇರೆ!
ಇದನ್ನೂ ಓದಿ | Dosa for breakfast | ದೋಸೆ ಎಂಬ ಆಪತ್ಬಾಂಧವ: ದೋಸೆ ತಿಂದರೆ ದೋಷವಿಲ್ಲ!