Site icon Vistara News

Fox Nuts: ಮಖನಾ ತಿಂದರೆ ಆಗುವ ಪ್ರಯೋಜನಗಳು ಹಲವು

Fox Nuts

ಮಖನಾ ಅಥವಾ ತಾವರೆ ಬೀಜ ಅಥವಾ ಫಾಕ್ಸ್‌ ನಟ್‌ (Fox nuts) ಎಂಬೆಲ್ಲಾ ಹೆಸರುಗಳಿಂದ ಕರೆಸಿಕೊಳ್ಳುವ ಪಾಪ್‌ ಕಾರ್ನ್‌ನಂತೆಯೇ ಕಾಣುವ ಈ ತಿನಿಸು ಸಾಕಷ್ಟು ಜನಪ್ರಿಯವಾಗುತ್ತಿದೆ. ಇದನ್ನು ಅಂಗಡಿಯಿಂದ ತಂದಾಗ ಇರುವಂತೆಯೇ ಬಾಯಾಡುವವರು, ಹುರಿದು ಗರಿಗರಿ ಮಾಡಿ ಬಾಯಿಗೆಸೆದುಕೊಳ್ಳುವವರು, ಪುಡಿ ಮಾಡಿ ಇತರ ಆಹಾರಗಳೊಂದಿಗೆ ಸೇವಿಸುವವರು… ಹೀಗೆ ಹಲವು ರೀತಿಗಳಲ್ಲಿ ಮಖನಾ ಮೆಲ್ಲುವವರಿದ್ದಾರೆ. ಉಪವಾಸದ ದಿನಗಳಲ್ಲಿ ಶಕ್ತಿಗಾಗಿ, ಸುಮ್ಮನೆ ಬಾಯಾಡುವುದಕ್ಕೆ, ಕುರಕಲು ತಿನ್ನುವ ಚಟ ಇಳಿಸಿಕೊಳ್ಳುವುದಕ್ಕೆ- ಮಖನಾ ತಿನ್ನುವ ಕಾರಣಗಳು ಇಂಥವು ಯಾವುದೂ ಇರಬಹುದು. ಆದರೆ ಅದನ್ನು ತುಪ್ಪದಲ್ಲೇ ಹುರಿದು ತಿನ್ನುವುದು ಸರಿಯಾದ ಕ್ರಮ ಎನ್ನುತ್ತಾರೆ ಆಹಾರ ತಜ್ಞರು. ಏನು ಕಾರಣ?

ಇದಕ್ಕೂ ಮೊದಲು ಮಖನಾದಲ್ಲಿ ಇರುವಂಥ ಪೌಷ್ಟಿಕಾಂಶಗಳೇನು ಎಂಬುದನ್ನು ನೋಡೋಣ. ಕಡಿಮೆ ಕ್ಯಾಲರಿ ಮತ್ತು ಕನಿಷ್ಟ ಕೊಬ್ಬು ಇರುವಂಥ ಈ ತಿನಿಸು ಹೆಚ್ಚಿನ ಸತ್ವಗಳನ್ನು ದೇಹಕ್ಕೆ ನೀಡಬಲ್ಲದು. ದೇಹಕ್ಕೆ ಅಗತ್ಯವಾದ ಪ್ರೊಟೀನ್‌ ಮತ್ತು ನಾರಿನ ಕಣಜವಿದು. ಜೊತೆಗೆ, ಕಬ್ಬಿಣ, ಕ್ಯಾಲ್ಶಿಯಂ, ಮೆಗ್ನೀಶಿಯಂ, ಪೊಟಾಶಿಯಂ, ಫಾಸ್ಫರಸ್‌ ಮುಂತಾದ ಸೂಕ್ಷ್ಮ ಪೋಷಕಾಂಶಗಳು ಬಹಳಷ್ಟಿವೆ. ಉತ್ಕೃಷ್ಟ ಫ್ಲೆವನಾಯ್ಡ್‌ಗಳಿದ್ದು, ದೇಹವನ್ನು ಉರಿಯೂತಗಳಿಂದ ರಕ್ಷಿಸುತ್ತವೆ. ಇವೆಲ್ಲ ಮಖನಾದ ಸದ್ಗುಣಗಳು, ಸರಿ. ಆದರೆ ಅದನ್ನು ತುಪ್ಪದಲ್ಲಿ ಹುರಿದು ತಿನ್ನುವ ಮರ್ಮವೇನು?

ರುಚಿ ಹೆಚ್ಚಿಸುತ್ತದೆ

ಬಾಯಿಗೆ ರುಚಿಯೆನಿಸುವ ತಿನಿಸುಗಳು ಯಾರಿಗೆ ಬೇಡ? ಅದೇ ಗುಂಗಿನಲ್ಲಿ ಸಂಜೆಯಾಗುತ್ತಿದ್ದಂತೆ ಚಾಟ್‌ ಕಾರ್ನರ್‌ಗಳಿಗೆ ಎಡತಾಕಿ, ಆರೋಗ್ಯದ ಕಾಳಜಿಯನ್ನು ಆಚೆ ಬಿಸಾಕಿ, ಸಿಕ್ಕಿದ್ದೆಲ್ಲ ಹೊಟ್ಟೆಗಿಳಿಸುವುದಿಲ್ಲವೇ? ಇಂಥ ಆನಾರೋಗ್ಯಕರ ಆಹಾರಗಳ ಬದಲಿಗೆ, ತುಪ್ಪದಲ್ಲಿ ಸ್ವಲ್ಪವೇ ಉಪ್ಪು ಮತ್ತು ಇಷ್ಟದ ಮಸಾಲೆ ಪುಡಿಗಳೊಂದಿಗೆ ಹುರಿದ ಮಖನಾ ನಿಜಕ್ಕೂ ಒಳ್ಳೆಯ ಆಯ್ಕೆ.

ಸತ್ವ ಮತ್ತು ಸ್ವಾದ

ತುಪ್ಪದಲ್ಲಿರುವ ಆರೋಗ್ಯಕರ ಕೊಬ್ಬು ಸೊಲ್ಪವೇ ಪ್ರಮಾಣದಲ್ಲಿ ಮಖನಾದೊಂದಿಗೆ ಸೇರಿದರೆ ಲಾಭವಿದೆ. ವಿಟಮಿನ್‌ ಎ, ಡಿ, ಇ ಮತ್ತು ಕೆ ಸತ್ವಗಳು ಮಖನಾದೊಂದಿಗೆ ಸೇರುತ್ತವೆ. ಮಖನಾದಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಕೊಬ್ಬು ಇರುವುದರಿಂದ ತುಪ್ಪದ ಒಗ್ಗರಣೆ ಅದನ್ನು ತೂಗಿಸುತ್ತದೆ.

ಪಚನಕ್ಕೆ ಅನುಕೂಲ

ತುಪ್ಪದಲ್ಲಿರುವ ಬಟೈರಿಕ್‌ ಆಮ್ಲವು ಜೀರ್ಣಕ್ರಿಯೆಗೆ ಸಹಕಾರಿ. ಹಾಗಾಗಿ ಹೆಚ್ಚು ನಾರುಭರಿತವಾದ ಮಖನಾಗಳನ್ನು ತುಪ್ಪದಲ್ಲಿ ಹುರಿದು ತಿನ್ನುವುದರಿಂದ, ಪಚನಕ್ರಿಯೆ ಕಡಿಮೆಯಿರುವವರಿಗೆ ಅನುಕೂಲಕರ. ಅವರಿಗಷ್ಟೇ ಅಲ್ಲ, ನಾರುಭರಿತ ಆಹಾರ ಬಹಳಷ್ಟು ಮಂದಿಗೆ ಹೊಟ್ಟೆಯ ತೊಂದರೆಗಳನ್ನು ಕೊಡುತ್ತದೆ. ಅಂಥ ಎಲ್ಲರಿಗೂ ಇದು ಉಪಯುಕ್ತ.

ಹಸಿವು ತಣಿಸುತ್ತದೆ

ಉಪವಾಸ ವ್ರತಗಳನ್ನು ಮಾಡುವಂಥ ಬಹಳಷ್ಟು ಮಂದಿ ನಡುವೆ ಮಖನಾ ತಿನ್ನುವ ಕ್ರಮ ಇರಿಸಿಕೊಂಡಿರುತ್ತಾರೆ. ತೂಕ ಇಳಿಸುವವರಿಗೂ ಇದು ಅಚ್ಚುಮೆಚ್ಚು. ಕಾರಣ, ನಾರು ಮತ್ತು ಪ್ರೊಟೀನ್‌ ಹೆಚ್ಚಿರುವ ಇದರಲ್ಲಿ ಕ್ಯಾಲರಿ ಕಡಿಮೆ. ತುಪ್ಪದಲ್ಲಿ ಹುರಿದು ಗರಿಯಾಗಿಸಿಕೊಂಡು ಬಾಯಿಗೆಸೆದರೆ ರುಚಿಯಾದ ತಿನಿಸೊಂದನ್ನು ತಿಂದ ತೃಪ್ತಿಯೂ ಉಳಿಯುತ್ತದೆ. ಹೆಚ್ಚು ಕ್ಯಾಲರಿಯನ್ನು ದೇಹಕ್ಕೆ ಸೇರಿಸುವ ಭೀತಿಯೂ ಕಾಡುವುದಿಲ್ಲ.

ಶಕ್ತಿವರ್ಧಕ

ಸರಳ ಕಾರ್ಬ್‌ಗಳಂತೆ ಥಟ್ಟನೆ ಉರಿದು ಖರ್ಚಾಗುವಂಥ ಸತ್ವಗಳಲ್ಲ ಮಖನಾದಲ್ಲಿರುವುದು. ಇದರಲ್ಲಿರುವ ಪೋಷಕಾಂಶಗಳು ದೀರ್ಘಕಾಲದವರೆಗೆ ದೇಹಕ್ಕೆ ಶಕ್ತಿ ನೀಡುತ್ತಿರುತ್ತವೆ. ಇದರಿಂದ ಹೆಚ್ಚಿನ ಸಮಯದವರೆಗೆ ಹಸಿವಾಗದಂತೆ ತಡೆದು, ದೇಹವನ್ನೂ ಬಳಲದಂತೆ ರಕ್ಷಿಸಿಕೊಳ್ಳಬಹುದು.

ಉತ್ಕರ್ಷಣ ನಿರೋಧಕಗಳಿವೆ

ತುಪ್ಪದಲ್ಲಿ ಉರಿಯೂತವನ್ನು ತಡೆಯುವಂಥ ಉತ್ತಮ ಸತ್ವಗಳಿವೆ. ಮಖನಾದಲ್ಲಿರುವ ಫ್ಲೆವನಾಯ್ಡ್‌ಗಳು ಸಹ ಉತ್ಕರ್ಷಣ ನಿರೋಧಕಗಳೇ. ಈ ಎರಡನ್ನೂ ಸೇರಿಸಿದಾಗ ಉತ್ಕರ್ಷಣವನ್ನು ತಡೆಯುವ ಸಾಮರ್ಥ್ಯ ವೃದ್ಧಿಸುತ್ತದೆ.

ಯಕೃತ್‌ ರಕ್ಷಣೆ

ತುಪ್ಪದೊಂದಿಗೆ ಜೀರಿಗೆ, ಇಂಗು, ಕಾಳುಮೆಣಸು ಮುಂತಾದವುಗಳನ್ನು ಹಾಕಿ ಮಖನಾ ಹುರಿಯಬಹುದು. ಇದರಿಂದ ದೇಹದಲ್ಲಿ ಬೇಡದ ಕೊಬ್ಬನ್ನು ತಗ್ಗಿಸಲು ಅನುಕೂಲವಾಗುತ್ತದೆ. ಕೊಬ್ಬು ಕಡಿಮೆಯಾದರೆ ಯಕೃತ್‌ಗೂ ಫ್ಯಾಟಿ ಲಿವರ್‌ನಂಥ ಕಾಯಿಲೆಯಿಂದ ರಕ್ಷಣೆ ದೊರೆತಂತೆ.

ಇದನ್ನೂ ಓದಿ: Winter Health Tips: ಬಂದೇ ಬಿಡ್ತು ಚಳಿಗಾಲ! ಇರಲಿ ಆರೋಗ್ಯದ ಕಡೆಗೆ ಎಚ್ಚರ!

Exit mobile version