Site icon Vistara News

Health Tips: ನಮ್ಮ ಅನಾರೋಗ್ಯದಲ್ಲಿ ನಾವು ಬಳಸುವ ಪಾತ್ರೆಗಳ ಪಾತ್ರವೇ ಮುಖ್ಯ!

Cooking utensils Health Tips

ಅಡುಗೆ ಮನೆಯ ಸ್ವರೂಪಗಳು ಹಿಂದಿನ ಕಾಲಕ್ಕಿಂತ ಇಂದಿಗೆ ನೂರಕ್ಕೆ ನೂರರಷ್ಟು ಬದಲಾಗಿವೆ. ಮಾಡುವ ಅಡುಗೆಯ ವಿಷಯದಲ್ಲಿ ಅಲ್ಲ ಇಲ್ಲಿ ಹೇಳುತ್ತಿರುವುದು; ಅಡುಗೆ ಮನೆಯ ಕಾಣುವ-ಮನಗಾಣುವ ವಿಷಯಕ್ಕೆ ಇದು ಅನ್ವಯ. ಉದಾ, ಸ್ಟೀಲ್‌ ಪಾತ್ರೆಗಳು, ಗಾಜಿನ ಅಥವಾ ನಾನ್‌ಸ್ಟಿಕ್‌ ಪಾತ್ರೆಗಳು ಮಾತ್ರವೇ ಈಗಿನ ಅಡುಗೆ ಮನೆಗಳಲ್ಲಿ ಕಾಣಸಿಗುತ್ತವೆ. ಕಾಲಕ್ಕೆ ತಕ್ಕಂತೆ ನಡೆಯುವುದರಲ್ಲಿ ತಪ್ಪೇನಿಲ್ಲ. ಇದರರ್ಥ ಹಳೆಯದನ್ನೆಲ್ಲಾ ಬಿಡಬೇಕೆಂದೂ ಅಲ್ಲ. ಹಳೆಯ ಕಾಲದ ತಾಮ್ರ, ಹಿತ್ತಾಳೆಯ ಪಾತ್ರೆಗಳನ್ನು ನಿಭಾಯಿಸುವುದು ಕಷ್ಟ. ಫಳಫಳ ಎನಿಸುವುದಕ್ಕೆ ಪದೇಪದೆ ಹುಳಿ ಹಾಕಿ ಉಜ್ಜಬೇಕು, ಮೊದಲಿನಂತೆ ಕಲಾಯಿ ಹಾಕುವವರೂ ಇಲ್ಲ ಈಗ- ಇಂಥ ಎಲ್ಲಾ ತಕರಾರುಗಳೂ ಸಮ್ಮತವೇ. ಆದರೆ ಆರೋಗ್ಯಕ್ಕೆ ಆಗುವ ಅನುಕೂಲಗಳ ಬಗ್ಗೆ ನಾವೀಗ ಒಮ್ಮತಕ್ಕೆ ಬರಬಹುದಲ್ಲ. ಅದರಲ್ಲೂ ಇತ್ತೀಚೆಗೆ ದೊರೆಯುವ ತಾಮ್ರ, ಪಿಂಗಾಣಿ ಮತ್ತು ಹಿತ್ತಾಳೆಯ ಪಾತ್ರೆಗಳು ಬಳಕೆಗೆ ಸರಳ ಮತ್ತು ನೋಡುವುದಕ್ಕೆ ಸುಂದರ. ಕೆಲವು ಅಡುಗೆಗಳಿಗೆ ಕಬ್ಬಿಣ ಅಥವಾ ಮಣ್ಣಿನ ಪಾತ್ರೆಗಳು ಸೂಕ್ತ. ಏನು (Health Tips) ಅವುಗಳ ಮಹತ್ವ?

ಪೌಷ್ಟಿಕಾಂಶ ಕಾಪಾಡುತ್ತದೆ

ತಾಮ್ರ, ಹಿತ್ತಾಳೆಯ ಪಾತ್ರೆಗಳು ಒಮ್ಮೆ ಬಿಸಿಯಾದರೆ ದೀರ್ಘಕಾಲದವರೆಗೆ ಬಿಸಿ ಕಾಯ್ದುಕೊಂಡಿರುತ್ತವೆ. ಮಾತ್ರವಲ್ಲ, ಇಡೀ ಪಾತ್ರೆ ಒಂದೇಸಮ ಬಿಸಿಯಾಗುತ್ತದೆ, ಹೆಚ್ಚು-ಕಡಿಮೆ ಇಲ್ಲದಂತೆ. ಇದರಿಂದ ಇಂಥ ಪಾತ್ರೆಗಳಲ್ಲಿ ಮಾಡುವ ಅಡಿಗೆಗಳನ್ನು ದೀರ್ಘಕಾಲ ಬೆಂಕಿಯಲ್ಲಿ ಇಡುವುದು ಬೇಡ. ಸ್ವಲ್ಪ ಕಾಲ ಉರಿಯಲ್ಲಿಟ್ಟರೂ ಸಾಕು, ಉಳಿದಂತೆ ಪಾತ್ರೆಯ ಶಾಖಕ್ಕೇ ಬೇಯುವ ಪ್ರಕ್ರಿಯೆ ಜಾರಿಯಲ್ಲಿರುತ್ತದೆ. ಒಲೆಯ ಕಾವಿನಲ್ಲಿ ಹಾಗೆಯೇ ಬಿಟ್ಟರೆ ದೀರ್ಘಕಾಲದವರೆಗೆ ಬಿಸಿ ಕಾಪಾಡಿಕೊಂಡು, ಮತ್ತೆಮತ್ತೆ ಬಿಸಿ ಮಾಡುವ ಸಮಸ್ಯೆಯನ್ನು ನಿವಾರಿಸುತ್ತದೆ. ಹಾಗಾಗಿ ಪೌಷ್ಟಿಕಾಂಶ ಮತ್ತು ಇಂಧನ- ಎರಡೂ ಉಳಿಯುತ್ತವೆ.

ಸೋಂಕುಗಳಿಗೆ ಕಡಿವಾಣ

ತಾಮ್ರ ಮತ್ತು ಹಿತ್ತಾಳೆಯಲ್ಲಿಟ್ಟ ಆಹಾರದ ಸೇವನೆಯಿಂದ ದೇಹದ ರೋಗನಿರೋಧಕ ಶಕ್ತಿ ವರ್ಧಿಸುತ್ತದೆ. ಅದರಲ್ಲೂ ನೆಗಡಿ-ಕೆಮ್ಮು-ದಮ್ಮಿನಂಥ ಸಮಸ್ಯೆಗಳಿಗೆ ಪದೇಪದೆ ತುತ್ತಾಗುವವರಿಗೆ ಬೆಳ್ಳಿ, ತಾಮ್ರ ಅಥವಾ ಹಿತ್ತಾಳೆ ಪಾತ್ರೆಯಲ್ಲಿಟ್ಟ ನೀರು ಕುಡಿಸುವ ಪದ್ಧತಿ ಹಿಂದಿನಿಂದಲೂ ಜಾರಿಯಲ್ಲಿದೆ. ಹಿತ್ತಾಳೆ ಪಾತ್ರೆಗಳಲ್ಲಿ ಅಡುಗೆ ಮಾಡುವುದರಿಂದ, ರಕ್ತದಲ್ಲಿ ಹಿಮೋಗ್ಲೋಬಿನ್‌ ವೃದ್ಧಿಗೆ ಸಹಾಯಕವಾಗುತ್ತದೆ. ತಾಮ್ರದ ಪಾತ್ರೆಯ ನೀರು ಕುಡಿಯುವುದರಿಂದ ದೇಹದಲ್ಲಿ ಉರಿಯೂತಗಳು ಕಡಿಮೆಯಾಗುತ್ತವೆ. ಕೀಲುನೋವಿನಂಥ ಸಮಸ್ಯೆಗಳಿಗೆ ಇದು ಉಪಯುಕ್ತ.

ಕಬ್ಬಿಣದ ಪಾತ್ರೆಗಳು

ಇಂಥವು ಬಳಕೆಯಲ್ಲಿರುವುದೇ ಬೆರಳೆಣಿಕೆಯಷ್ಟು. ಅದರಲ್ಲೂ ಬಾಣಲೆ ಮತ್ತು ತವಾಗಳು ಕಬ್ಬಿಣದ್ದಾದರೆ ಸೂಕ್ತ. ದೋಸೆ, ರೊಟ್ಟಿ, ಪಡ್ಡು ಇಂಥ ಕಾವಲಿಗಳು ಮೊದಲಿನಿಂದಲೂ ಕಬ್ಬಿಣದ್ದೇ ಇರುತ್ತಿದ್ದವು. ಇವುಗಳನ್ನೆಲ್ಲ ನಾನ್‌ಸ್ಟಿಕ್‌ಗೆ ಬದಲಾಯಿಸಿ ಹಲವು ಕಾಲ ಸಂದಿದೆ. ಆದರೆ ಹುರಿಯುವ, ಕರಿಯುವ, ಬೇಯಿಸುವ ಪಾತ್ರೆ ಕಬ್ಬಿಣದ್ದಾದರೆ ದೇಹದಲ್ಲಿ ಕಬ್ಬಿಣಾಂಶದ ಕೊರತೆಯನ್ನು ನೀಗಿಸಲು ಸಹಾಯವಾಗಬಹುದು. ರಕ್ತಹೀನತೆಯಂಥ ತೊಂದರೆಗಳು ಗಂಟಿಕ್ಕಿಕೊಳ್ಳದಂತೆ ಕಾಪಾಡಿಕೊಳ್ಳಬಹುದು.

ತೂಕ ಇಳಿಕೆ

ನಮ್ಮ ದೇಹದ ಜೀರ್ಣಾಂಗವನ್ನು ಚುರುಕುಗೊಳಿಸುವಂಥ ಅಂಶಗಳು ಈ ಲೋಹಗಳಿಗಿವೆ. ಹಾಗಾಗಿ ಆಸಿಡಿಟಿ, ಅಜೀರ್ಣ, ವಾಯುಪ್ರಕೋಪ, ಮಲಬದ್ಧತೆಯಂಥ ಸಮಸ್ಯೆಗಳನ್ನು ದೂರಮಾಡಲು ನೆರವಾಗುತ್ತದೆ. ಹೊಟ್ಟೆಯನ್ನು ಸ್ವಚ್ಛವಾಗಿಟ್ಟು, ಪೌಷ್ಟಿಕಾಂಶಗಳನ್ನು ಹೀರಿಕೊಳ್ಳಲು ದೇಹಕ್ಕೆ ನೆರವಾಗುತ್ತದೆ. ಜೀರ್ಣಾಂಗದ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮೂಲಕ, ದೇಹದಲ್ಲಿ ಕೊಬ್ಬು ಶೇಖರವಾಗುವುದನ್ನು ತಡೆದು, ತೂಕ ಇಳಿಸುವುದಕ್ಕೂ ಸಹಕಾರಿಯಾಗುತ್ತದೆ. ಮಾತ್ರವಲ್ಲ, ನಮ್ಮ ಕಣ್ಣು ಮತ್ತು ಚರ್ಮದ ಆರೋಗ್ಯವನ್ನೂ ಉತ್ತಮಪಡಿಸುತ್ತದೆ.

ಹೃದಯಾರೋಗ್ಯ

ರಕ್ತದೊತ್ತಡವನ್ನು ಕಡಿಮೆ ಮಾಡುವ ಗುಣ ತಾಮ್ರಕ್ಕಿದೆ. ಈ ಲೋಹಗಳನ್ನು ನಿಯಮಿತವಾಗಿ ಬಳಸಿದಲ್ಲಿ ಕೊಲೆಸ್ಟ್ರಾಲ್‌ ಮತ್ತು ರಕ್ತದೊತ್ತಡ ನಿಯಂತ್ರಣಕ್ಕೆ ನೆರವು ದೊರೆತು ಹೃದಯಾರೋಗ್ಯ ಉತ್ತಮಪಡಿಸಲು ಅನುಕೂಲವಾಗಲಿದೆ. ದೇಹಕ್ಕೆ ಅಗತ್ಯವಿರುವ ಸೂಕ್ಷ್ಮ ಪೋಷಕಾಂಶಗಳನ್ನು ಒದಗಿಸಿ, ಆಹಾರದ ಗುಣಮಟ್ಟ ಮತ್ತು ರುಚಿಯನ್ನು ಹೆಚ್ಚಿಸುವಲ್ಲಿ ತಾಮ್ರ ಮತ್ತು ಹಿತ್ತಾಳೆಯ ಪಾತ್ರೆಗಳು ಉತ್ತಮ ಆಯ್ಕೆ.

ಗಾಜು, ಪಿಂಗಾಣಿ

ಕೆಲವು ಆಹಾರಗಳ ತಯಾರಿಕೆ ಮತ್ತು ಶೇಖರಣೆಗೆ ಈ ಪಾತ್ರೆಗಳು ಸೂಕ್ತ. ಉದಾ, ತುಪ್ಪವನ್ನು ಗಾಜು ಅಥವಾ ಪಿಂಗಾಣಿಯ ಪಾತ್ರೆಗಳಲ್ಲಿ ಇಡಬಹುದು. ಇದೇ ರೀತಿಯಲ್ಲಿ ಉಪ್ಪು, ಖಾರ ಮುಂದಿರುವಂಥ ಉಪ್ಪಿನ ಕಾಯಿ, ತೊಕ್ಕುಗಳಿಗೂ ಈ ಪಾತ್ರೆಗಳೇ ಯೋಗ್ಯ. ಆದರೆ ಇವುಗಳು ಕೈತಪ್ಪಿ ಬೀಳದಂತೆ ಜಾಗ್ರತೆ ಮಾಡುವುದು ಸವಾಲಿನದ್ದು. ಮಣ್ಣಿನ ಪಾತೆರಗಳು ಸಹ ಇತ್ತೀಚೆಗೆ ಜನಪ್ರಿಯವಾಗಿವೆ. ಮೆಗ್ನೀಶಿಯಂ, ಫಾಸ್ಫರಸ್‌, ಕ್ಯಾಲ್ಶಿಯಂನಂಥ ಖನಿಜಗಳು ನಮಗೆ ದಕ್ಕಬೇಕೆಂದರೆ ಮಣ್ಣಿನ ಗಡಿಗೆಗಳಲ್ಲಿ ಅಡುಗೆ ಮಾಡುವುದು ಒಳ್ಳೆಯದು. ಇವುಗಳನ್ನು ಸುಟ್ಟು ಒಮ್ಮೆ ಹದಗೊಳಿಸಿಕೊಂಡರೆ (ಅಂಥದ್ದೇ ದೊರೆಯುತ್ತದೆ) ಮತ್ತೆ ವರ್ಷಾನುವರ್ಷಗಳ ಕಾಲ ಬಳಸಬಹುದು.

ಇದನ್ನೂ ಓದಿ: Weight Loss Tips: ದಾಲ್ಚಿನ್ನಿ ಚಕ್ಕೆಯ ನೀರು ಸೇವಿಸಿ, ನಿರಾಯಾಸವಾಗಿ ತೂಕ ಇಳಿಸಿ!

Exit mobile version