ಎಲ್ಲೆಡೆ ಸೂಪರ್ ಫುಡ್‌ಗಳ ಸಡಗರ. ಒಂದೇ ಆಹಾರದಲ್ಲಿ ಅತಿ ಹೆಚ್ಚಿನ ಪ್ರಯೋಜನ ಪಡೆಯಬಹುದು ಎಂದಾದರೆ ಅಂಥ ಆಹಾರಗಳಿಗೆ ಆದ್ಯತೆ. ದೇಹಕ್ಕೆ ಬೇಕಾದ ಹಲವು ಸತ್ವಗಳಿಗಾಗಿ ನಾನಾ ರೀತಿಯ ಆಹಾರಗಳನ್ನು ತಿನ್ನುವುದಕ್ಕೆ ಅಥವಾ ತಯಾರಿಸುವುದಕ್ಕೆ ಈಗ ಯಾರಿಗೂ ಹೊತ್ತಿಲ್ಲ. ಅದಕ್ಕಾಗಿಯೇ ಖಂಡಾಂತರ ಪ್ರವಾಸ ಮಾಡಿ ಬಂದ ಹಣ್ಣು-ತರಕಾರಿಗಳು ಮಾರುಕಟ್ಟೆಯ ದುಬಾರಿ ಬೆಲೆಯ ವಿಭಾಗದಲ್ಲಿ ಕುಳಿತುಕೊಳ್ಳುತ್ತವೆ. ತುಟ್ಟಿಬೆಲೆಯ ಧಾನ್ಯಗಳದ್ದೂ ಅದೇ ಕತೆ. ಇಂಥವೆಲ್ಲ ಪೌಷ್ಟಿಕ ಹೌದಾಗಿದ್ದರೂ, ಸತ್ವಗಳಿಗಾಗಿ ಅವುಗಳನ್ನೇ ಅವಲಂಬಿಸಬೇಕೆಂದಿಲ್ಲ. ನಮ್ಮ ಹಿತ್ತಲಲ್ಲಿ ಬೆಳೆಯಬಲ್ಲ ತರಕಾರಿಗಳಲ್ಲೂ ಪೌಷ್ಟಿಕಾಂಶ ಕಡಿಮೆಯೇನಿಲ್ಲ. ಉದಾಹರಣೆಗೆ, ಬೀನ್ಸ್ ಎಂದು ಕರೆಸಿಕೊಳ್ಳುವ ಹುರುಳಿಕಾಯನ್ನೇ ತೆಗೆದುಕೊಳ್ಳಿ. ನಂನಮ್ಮ ಹಿತ್ತಲಲ್ಲಿ ಅಥವಾ ಬಾಲ್ಕನಿಯ ಕುಂಡಗಳಲ್ಲೇ ನಾಲ್ಕು ಬೀಜ ಬಿತ್ತಿದರೆ ಬೆಳೆಯಬಹುದಾದರೆ ಬಳ್ಳಿಯೂ ಸಾಕು ಹುರುಳಿಕಾಯಿ ಕೊಯ್ಯುವುದಕ್ಕೆ. ಏನೀ ತರಕಾರಿ (health benefits of green beans) ತಿನ್ನುವುದರ ಲಾಭಗಳು?
ಸತ್ವಗಳು ಬಹಳ
ನಾರು ಹೆಚ್ಚು, ಕ್ಯಾಲರಿ ಕಡಿಮೆ ಎನ್ನುವಂಥ ಈ ತರಕಾರಿಯಲ್ಲಿ ಸತ್ವಗಳೂ ಸಾಕಷ್ಟಿವೆ. ಎ, ಸಿ, ಮತ್ತು ಕೆ ಜೀವಸತ್ವಗಳು ಇದರಲ್ಲಿ ಹೇರಳವಾಗಿವೆ. ಜೊತೆಗೆ ಮ್ಯಾಂಗನೀಸ್, ಕ್ಯಾಲ್ಶಿಯಂ, ಮೆಗ್ನೀಶಿಯಂ, ಪೊಟಾಶಿಯಂ, ಫಾಸ್ಫರಸ್ ಹಾಗೂ ಫೋಲೇಟ್‌ನಂಥವು ಇದರಿಂದ ವಿಫುಲವಾಗಿ ದೇಹಕ್ಕೆ ದೊರೆಯುತ್ತವೆ. ಪಿಷ್ಟ ಮತು ಪ್ರೊಟೀನ್‌ಗಂತೂ ಕೊರತೆಯೇ ಇಲ್ಲ.
ಹೃದಯದ ಮಿತ್ರ
ಇದರಲ್ಲಿರುವ ನಾರು ಹೃದಯದ ಆರೋಗ್ಯಕ್ಕೆ ಪೂರಕವಾದದ್ದು. ದೇಹದಲ್ಲಿ ಜಮೆಯಾಗಿರುವ ಕೊಬ್ಬು ಕಡಿತ ಮಾಡಿ, ಕೊಲೆಸ್ಟ್ರಾಲ್ ತಗ್ಗಿಸುವುದಕ್ಕೆ ಇದು ಅಗತ್ಯ. ಜೊತೆಗೆ ಇದರ ಪೊಟಾಶಿಯಂ ಅಂಶವು ರಕ್ತದೊತ್ತಡ ತಗ್ಗಿಸಿ, ಹೃದಯ ರೋಗಗಳು ಕಾಡದಂತೆ ಕಾಪಾಡುವಲ್ಲಿ ನೆರವಾಗುತ್ತದೆ.
ಜೀರ್ಣಾಂಗಗಳು ಸಬಲ
ನಮ್ಮ ಜೀರ್ಣಾಂಗಗಳನ್ನು ಸುಸ್ಥಿತಿಯಲ್ಲಿ ಇರಿಸುವುದಕ್ಕೆ ಆಹಾರದಲ್ಲಿ ನೀರು-ನಾರು ಅಗತ್ಯವಾಗಿ ಬೇಕು. ಹುರುಳಿಕಾಯಲ್ಲಿರುವ ಕರಗದಿರುವ ನಾರಿನಂಶವು ಮಲಬದ್ಧತೆಯನ್ನು ನಿವಾರಿಸುತ್ತದೆ. ಜೊತೆಗೆ ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಗಳ ಸಂಖ್ಯೆಯನ್ನು ಹೆಚ್ಚಿಸಿ, ಪಚನಾಂಗಗಳನ್ನು ಸುಸ್ಥಿತಿಯಲ್ಲಿ ಇರಿಸುತ್ತದೆ.
ಮಧುಮೇಹಿಗಳಿಗೆ ಸ್ನೇಹಿತ
ಹುರುಳಿಕಾಯಿಯ ಗ್ಲೈಸೆಮಿಕ್ ಸೂಚಿ ಕಡಿಮೆ ಇರುವುದರಿಂದ ಮಧುಮೇಹಿಗಳಿಗೆ ಇದು ಸೇವನೆಗೆ ಯೋಗ್ಯವಾದದ್ದು. ಇದರಲ್ಲಿರುವ ಗ್ಲೂಕೋಸ್ ಅಂಶ ತ್ವರಿತವಾಗಿ ರಕ್ತ ಸೇರುವುದಿಲ್ಲ. ಇದರಿಂದ ರಕ್ತದಲ್ಲಿ ಸಕ್ಕರೆಯಂಶ ದಿಢೀರ್ ಏರಿಳಿತ ಆಗದಂತೆ ಕಾಪಾಡುವುದು ಸಾಧ್ಯವಾಗುತ್ತದೆ.
ತೂಕ ನಿರ್ವಹಣೆ
ನಾರು ಮತ್ತು ಪ್ರೊಟೀನ್ ಹೆಚ್ಚಿರುವ ಆಹಾರಗಳು ದೇಹದ ತೂಕ ನಿಯಂತ್ರಣದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಈ ಎರಡು ಅಂಶಗಳಿಂದ ಹೊಟ್ಟೆ ತುಂಬಿದಂತೆ ಭಾಸವಾಗುತ್ತದೆ ಮತ್ತು ಬೇಗಸೆ ಹಸಿವಾಗುವುದಿಲ್ಲ. ಇದರಿಂದ ಮತ್ತೆ ಮತ್ತೆ ತಿನ್ನುವುದನ್ನು ತಪ್ಪಿಸಿ, ಹಸಿವನ್ನು ಮುಂದೂಡಬಹುದು. ಹಾಗಾಗಿ ತೂಕ ಇಳಿಕೆಗೆ ಇದು ನೆರವಾಗುತ್ತದೆ.
ದೃಷ್ಟಿಗೆ ಪೂರಕ
ಇದರಲ್ಲಿರುವ ಕೆರೊಟಿನಾಯ್ಡ್‌ಗಳು ದೃಷ್ಟಿಯನ್ನು ಚುರುಕಾಗಿಸುತ್ತವೆ. ಇದರ ಬೀಟಾ ಕ್ಯಾರೊಟಿನ್‌ನಂಥ ಉತ್ಕರ್ಷಣ ನಿರೋಧಕಗಳು ವಯಸ್ಸಾದಂತೆ ದೃಷ್ಟಿ ಮಂದವಾಗುವ ಸಮಸ್ಯೆಯನ್ನು ಮುಂದೂಡುತ್ತವೆ. ವಿಟಮಿನ್ ಎ ಇರುವಂಥ ಆಹಾರಗಳೆಲ್ಲವೂ ಸಾಮಾನ್ಯವಾಗಿ ದೃಷ್ಟಿಯನ್ನು ಕಾಪಾಡುವಂಥ ಗುಣವನ್ನು ಹೊಂದಿರುತ್ತವೆ.
ಉತ್ಕರ್ಷಣ ನಿರೋಧಕಗಳು
ದೇಹದಲ್ಲಿ ಉರಿಯೂತ ಹೆಚ್ಚದಂತೆ, ಒಂದೊಮ್ಮೆ ಹೆಚ್ಚಿದ್ದರೆ ಕ್ರಮೇಣ ತಗ್ಗುವಂತೆ ಮಾಡುವ ಸಾಧ್ಯತೆ ಹುರುಳಿಕಾಯನ್ನು ನಿಯಮಿತವಾಗಿ ಸೇವಿಸುವುದರಲ್ಲಿ ಇದೆ. ಇದರ ಫ್ಲೆವನಾಯ್ಡ್‌ಗಳು ದೇಹದಲ್ಲಿರುವ ಮುಕ್ತ ಕಣಗಳನ್ನು ನಿರ್ಬಂಧಿಸಿ, ಮಾರಕ ರೋಗಗಳಿಂದ ರಕ್ಷಿಸುತ್ತವೆ. ಉರಿಯೂತದಿಂದಲೇ ವಕ್ಕರಿಸುವ ಆರ್ಥರೈಟಿಸ್‌ನಂಥ ರೋಗಗಳ ನಿಯಂತ್ರಣಕ್ಕೆ ನೆರವಾಗುತ್ತದೆ.
ಪಾಕ ವೈವಿಧ್ಯ
ಹುರುಳಿಕಾಯನ್ನು ಹಲವು ರೀತಿಯ ಅಡುಗೆಗಳಲ್ಲಿ ಉಪಯೋಗಿಸಬಹುದು. ಎಳೆಯದಾಗಿದ್ದಾಗ ಹಸಿಯಾಗಿ ಸಲಾಡ್ ಮಾಡಿ ತಿಂದರೂ ರುಚಿ. ಭಾತ್‌ಗಳಲ್ಲಿ ಪಲ್ಯ, ಹುಳಿ, ಗ್ರೇವಿಗಳಲ್ಲಿ, ಬೇಕ್ ಮಾಡಿದ ತರಕಾರಿಗಳ ಜೊತೆಗೆ, ಗ್ರಿಲ್ಲಿಂಗ್‌ನಲ್ಲೂ ಇದನ್ನು ಬಳಸಬಹುದು. ಯಾವುದೇ ಪಾಕಪದ್ಧತಿಗೆ ಹೊಂದಿಕೊಳ್ಳಬಲ್ಲದು ಈ ತರಕಾರಿ.
ಇದನ್ನೂ ಓದಿ: Coriander Benefits: ಕೊತ್ತಂಬರಿ ಸೊಪ್ಪು ಎಂಬ ಮಾಂತ್ರಿಕ: ಚರ್ಮದ ಯಾವುದೇ ಸಮಸ್ಯೆಗಳಿಗೂ ಇದರಿಂದ ಪರಿಹಾರ!