Site icon Vistara News

Healthy Drinks For Summer: ಬೇಸಿಗೆ ಬರುತ್ತಿದ್ದಂತೆ ನಮ್ಮ ದೇಹ ಬಯಸುವ ಆರೋಗ್ಯಕರ ಪೇಯಗಳಿವು!

summer drinks

ಚಳಿಗಾಲದ ಚಳಿಯಲ್ಲಿ ಬೆಚ್ಚಗೆ ಇದ್ದು, ಈಗ ಇದ್ದಕ್ಕಿದ್ದಂತೆ ಹವಾಮಾನ ಬದಲಾಗುತ್ತಾ ದೇಹ ಮನಸ್ಸು ಅದಕ್ಕೆ ಒಗ್ಗಿಸಿಕೊಳ್ಳಬೇಕಾಗುತ್ತದೆ. ಪ್ರಕೃತಿಯಲ್ಲಿ ಋತು ಬದಲಾವಣೆ ಸಾಮಾನ್ಯ. ಮುಖ್ಯವಾಗಿ ಚಳಿಯಲ್ಲಿ ಮುದುಡಿದ್ದ ದೇಹಕ್ಕೆ ಸೂರ್ಯನ ಬಿಸಿಲನ್ನು ಸರಿಯಾಗಿ ಕಾಣದೆ ಇದ್ದ ಮಂದಿಗೆ ಸ್ವಲ್ಪ ಸ್ವಲ್ಪವೇ ಸೂರ್ಯನ ಬಿಸಿಲು ಮೈ ಸೋಕಿದಾಗ ಆಗುವ ಖುಷಿ ಬೇರೆಯೇ. ಆದರೆ, ಇದ್ದಕ್ಕಿದ್ದಂತೆ ಬದಲಾಗುವ ಹವಾಮಾನದಿಂದಾಗಿ ದೇಹದ ರೋಗ ನಿರೋಧಕ ಶಕ್ತಿಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ನಮ್ಮ ದೇಹ ಒಂದು ಋತುವಿನಿಂದ ಇನ್ನೊಂದು ಋತುವಿಗೆ ಬದಲಾಗುವ ಸಂದರ್ಭ ಸಹಜವಾಗಿಯೇ ಕೊಂಚ ಹೆಚ್ಚಿನ ಕಾಳಜಿಯನ್ನು ಬಯಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಪೇಯಗಳ ಸೇವನೆ, ಆಹಾರ ಸೇವನೆ ಎಲ್ಲವೂ ಅತ್ಯಂತ ಅಗತ್ಯವಾಗಿರುತ್ತದೆ. ಬನ್ನಿ, ಬೇಸಿಗೆ ಹತ್ತಿರ ಬರುತ್ತಿದ್ದಂತೆ ಯಾವೆಲ್ಲ ಪೇಯಗಳನ್ನು ನಾವು ಸೇವಿಸುವುದು ಆರೋಗ್ಯದ ದೃಷ್ಠಿಯಿಂದ ಅತ್ಯಂತ ಒಳ್ಳೆಯದು (Healthy Drinks For Summer) ಎಂಬುದನ್ನು ನೋಡೋಣ.

ಎಳನೀರು

ಬೇಸಿಗೆ ಬರುತ್ತಿದ್ದಂತೆ ಎಳನೀರು ಕುಡಿಯುವುದು ಅತ್ಯಂತ ಒಳ್ಳೆಯದು. ಎಳನೀರಿನಲ್ಲಿ ಸಾಕಷ್ಟು ಖನಿಜಾಂಶಗಳೂ ಸೇರಿದಂತೆ ಪೋಷಕಾಂಶಗಳು ಸಮೃದ್ಧವಾಗಿರುವುದರಿಂದ, ಬೇಸಗೆಯ ಕಾವು ಹೆಚ್ಚುತ್ತಿದ್ದಂತೆ ದೇಹಕ್ಕೆ ಬೇಕಾದ ತೇವಾಂಶವನ್ನು ನೀಡಿ ದೇಹವನ್ನು ತಂಪಾಗಿರಿಸುತ್ತದೆ. ಅಷ್ಟೇ ಅಲ್ಲ, ಬೇಸಗೆಯಲ್ಲಿ ಕಾಡುವ ಎದೆಯುರಿ, ಹೊಟ್ಟೆಯುಬ್ಬರ, ಗ್ಯಾಸ್‌, ಅಸಿಡಿಟಿ ಮತ್ತಿತರ ಸಮಸ್ಯೆಗಳಿಗೂ ಎಳನೀರಿನಲ್ಲಿ ಉತ್ತರವಿದೆ. ಜೀರ್ಣಕ್ರಿಯೆಯನ್ನೂ ಇದು ಸರಾಗವಾಗಿಸುತ್ತದೆ. ಬೆಳಗ್ಗಿನ ವಾಕಿಂಗ್‌ ಅಥವಾ ವರ್ಕೌಟ್‌ನ ಮೊದಲೇ ಎಳನೀರನ್ನು ಕುಡಿದರೆ, ಇದರ ಸಂಪೂರ್ಣ ಲಾಭಗಳನ್ನು ಪಡೆಯಬಹುದು ಎನ್ನುತ್ತಾರೆ, ಪೋಷಕಾಂಶಗಳ ತಜ್ಞರು.

ಶುಂಠಿ ಹಾಗೂ ನೆಲ್ಲಿಕಾಯಿ ಶಾಟ್‌

ನಿಮ್ಮ ಏರಿದ ಮಧುಮೇಹದ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ನಿಮಗೆ ಬೇಸಗೆಯಲ್ಲಿ ಕುಡಿಯಬಹುದಾದ ಡ್ರಿಂಕ್‌ ಎಂದರೆ ಅದು ನೆಲ್ಲಿಕಾಯಿ ಹಾಗೂ ಶುಂಠಿಯ ಶಾಟ್‌. ಬೆಳಗ್ಗೆ ಎದ್ದ ಕೂಡಲೇ, ನೆಲ್ಲಿಕಾಯಿ ಹಾಗೂ ಸ್ವಲ್ಪ ಶುಂಠಿಯನ್ನು ತುರಿದು, ಜ್ಯೂಸ್‌ ತೆಗೆದು ಹಾಗೆಯೇ ಕುಡಿಯುವುದು ಒಳ್ಲೆಯದು. ಇದರಿಂದ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುವುದಲ್ಲದೆ, ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವೂ ಹತೋಟಿಗೆ ಬರುತ್ತದೆ. ಸುಮಾರು 30 ಎಂಎಲ್‌ಗಳಾಗುವಷ್ಟು ನೆಲ್ಲಿಕಾಯಿ ಶುಂಠಿ ಶಾಟ್‌ ನಿತ್ಯವೂ ಕುಡಿಯಬಹುದು. ನೆಲ್ಲಿಕಾಯಿಗೆ ಒಂದು ಚಮಚ ಶುಂಠಿರಸ ಸೇರಿಸಿದರೆ ಸಾಕು. ಪ್ರತಿದಿನ ಹೀಗೆ ಮಾಡಿ ಕುಡಿಯುವುದರಿಂದ ನಿಮ್ಮ ಆರೋಗ್ಯದಲ್ಲಿ ಗಣನೀಯ ಸುಧಾರಣೆಯನ್ನು ನೀವು ಕಾಣಬಹುದು.

ಬೂದುಗುಂಬಳ ಜ್ಯೂಸ್‌

ಬೇಸಿಗೆ ಹತ್ತಿರ ಬರುತ್ತಿದ್ದಂತೆ ಹಾಗೂ ಬೇಸಿಗೆಯ ಧಗೆಯಲ್ಲಿ ಕುಡಿಯಬಹುದಾದ ಹಾಗೂ ಕುಡಿಯಬೇಕಾದ ಡ್ರಿಂಕ್‌ ಎಂದರೆ ಅದು ಬೂದುಗುಂಬಳ ಜ್ಯೂಸ್‌. ಇದರಲ್ಲಿ ಅತೀ ಹೆಚ್ಚು ನೀರನಂಶ ಇರುವಿದರಿಂದ ದೇಹಕ್ಕೆ ಉತ್ತಮ ಪ್ರಮಾಣದಲ್ಲಿ ತೇವಾಂಶ ನೀಡುತ್ತದೆ. ಸೊಪ್ಪು ತರಕಾರಿಗಳಲ್ಲೇ ಅತ್ಯಂತ ಆರೋಗ್ಯಕರ ಸರ್ವಗುಣ ಸಂಪನ್ನ ತಾಜಾ ಜ್ಯೂಸ್‌ ಮಾತಬಹುದಾದ ತರಕಾರಿ ಎಂದರೆ ಬೂದುಕುಂಬಳಕಾಯಿ. ಇದು ದೇಹವನ್ನು ಒಳಗಿನಿಂದಲೇ ತಂಪು ಮಾಡಿ, ಇಡೀ ದಿನ ದೇಹವನ್ನು ಉಲ್ಲಾಸದಾಯಕವನ್ನಾಗಿ ಮಾಡುತ್ತದೆ. ನಿಮಗೆ ಆಗಾಗ ಮಲಬದ್ಧತೆ, ಹೊಟ್ಟೆಯುಬ್ಬರ, ಎದುಯುರಿಯಂತಹ ಸಮಸ್ಯೆಗಳಿದ್ದರೆ, ನೀವು ನಿತ್ಯವೂ ಬೂದುಗುಂಬಳ ಜ್ಯೂಸ್‌ ಮಾಡಿ ಕುಡಿಯುವ ಮೂಲಕ ನಿಮ್ಮ ದಿನವನ್ನು ಆರಂಭಿಸಿ. ಖಂಡಿತವಾಗಿಯೂ ಈ ಸಮಸ್ಯೆಗಳಿಂದ ಮುಕ್ತರಾಗುವಿರಿ.

Exit mobile version