ಕಣ್ಣಿಗೆ ಕಾಣುವಂಥ ರೋಗಗಳಿಗೆ ಮದ್ದರೆಯಬಹುದು. ಆದರೆ ಕಾಣದೆಯೆ ಕಾಡುವಂಥ ಸಮಸ್ಯೆಗಳಿಗೆ ಔಷಧ ಮಾಡುವುದು ಕಷ್ಟ. ಮಾನಸಿಕ ಒತ್ತಡ ಮತ್ತು ಚಿಂತೆಯಂಥವು ಕಾಣದೆಯೇ ಆರೋಗ್ಯವನ್ನು ಹದಗೆಡಿಸುತ್ತವೆ. ಇವುಗಳಿಂದಲೇ ಇನ್ನಷ್ಟು ಆರೋಗ್ಯ ಸಮಸ್ಯೆಗಳಿಗೆ ದಾರಿಯಾಗುತ್ತದೆ. ಹಾಗೆಂದು ಮನಸ್ಸಿನ ರೋಗಗಳಿಗೆಂದು ದೇಹಕ್ಕೆ ಮದ್ದು ಮಾಡಬಹುದೇ? ಹೌದೆನ್ನುತ್ತಾರೆ ಆಹಾರ ಮತ್ತು ಜೀವನಶೈಲಿಯ ತಜ್ಞರು. ಏನು ಮಾಡುವುದರ ಅಥವಾ ಮಾಡದಿರುವುದರ ಮೂಲಕ ನಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಂಡು, ದೈಹಿಕವಾಗಿ ಆರೋಗ್ಯದಿಂದ ಇರಬಹುದು? ಮೊದಲಿಗೆ, ನಿದ್ದೆ. ನಿದ್ದೆಗೆಟ್ಟರೆ ಬುದ್ಧಿಗೆಟ್ಟಂತೆ ಎನ್ನುತ್ತದೆ ಹಳೆಯ ಗಾದೆ. ದಿನಕ್ಕೆ ಎಂಟು ತಾಸುಗಳ ನಿಯಮಿತ ನಿದ್ದೆ ಬದುಕಿನ ಗುಣಮಟ್ಟದಲ್ಲಿ ಮಹತ್ತರ ಬದಲಾವಣೆಗಳನ್ನು ತರಬಲ್ಲದು. ಶಿಸ್ತುಬದ್ಧ ವ್ಯಾಯಾಮ ನಿತ್ಯದ ಅಗತ್ಯಗಳಲ್ಲಿ ಒಂದು. ಅದರಲ್ಲೂ ಯೋಗ, ಪ್ರಾಣಾಯಾಮದಂಥ ಉಸಿರಾಟದ ವ್ಯಾಯಾಮಗಳು ಒತ್ತಡ ನಿವಾರಣೆ ಮಾಡುವಲ್ಲಿ ಮಾಯಾ ಮದ್ದಿನಂತೆಯೇ ಕೆಲಸ ಮಾಡುತ್ತವೆ. ಸಿಗರೇಟ್, ಆಲ್ಕೊಹಾಲ್ ದೂರ ಮಾಡಿದರೆ ಇನ್ನಷ್ಟು ಒತ್ತಡಗಳು ತಾನಾಗಿಯೇ ದೂರಾಗುತ್ತವೆ. ಆದರೆ ಇವೆಲ್ಲ ಹೇಳಿದಷ್ಟು ಸುಲಭವಲ್ಲ. ಇದರೊಂದಿಗೆ ನೆರವಾಗುವುದಕ್ಕೆ ಕೆಲವು ಆಹಾರಗಳು (stress relieving foods) ನಮ್ಮೊಂದಿಗಿವೆ.
ಬೆಣ್ಣೆ ಹಣ್ಣು
ಅವಕಾಡೊದಲ್ಲಿರುವ ಒಮೇಗಾ 3 ಕೊಬ್ಬಿನಾಮ್ಲ ಮತ್ತು ವಿಟಮಿನ್ ಸಿ ನಮಗೆ ಬಹಳಷ್ಟು ರೀತಿಯಲ್ಲಿ ಸಹಾಯ ಮಾಡಬಲ್ಲದು. ಜೊತೆಗೆ ಇದರಲ್ಲಿರುವ ವಿಟಮಿನ್ ಬಿ ಅಂಶವು ಒತ್ತಡ ಮತ್ತು ಚಿಂತೆಯನ್ನು ದೂರ ಮಾಡುವಂಥ ಗುಣವನ್ನು ಹೊಂದಿದೆ.
ಬೆರ್ರಿಗಳು
ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾದ ಬೆರ್ರಿಗಳು, ಅದರಲ್ಲೂ ಮುಖ್ಯವಾಗಿ ಬ್ಲೂಬೆರಿ ಹಣ್ಣು, ಒತ್ತಡ ನಿವಾರಣೆ ಮಾಡುವಲ್ಲಿ ಅತ್ತ್ಯುತ್ತಮ ಕೆಲಸವನ್ನು ಮಾಡುತ್ತವೆ. ಒತ್ತಡದಿಂದ ದೇಹದ ಕೋಶಗಳ ಮಟ್ಟದಲ್ಲಿ ಆಗುವಂಥ ಹಾನಿಯನ್ನು ಇವು ಕಡಿಮೆ ಮಾಡುತ್ತವೆ. ಯಾವುದೇ ರೀತಿಯ ಉತ್ಕರ್ಷಣ ನಿರೋಧಕಗಳು ದೇಹ ಮತ್ತು ಮನಸ್ಸಿನ ಒತ್ತಡ ಕಡಿಮೆ ಮಾಡಬಲ್ಲವು.
ಕ್ಯಾಲ್ಶಿಯಂ ಅಹಾರಗಳು
ಸಾಮಾನ್ಯವಾಗಿ ಡೇರಿ ಉತ್ಪನ್ನಗಳು ನಮ್ಮ ಮುಖ್ಯವಾದ ಕ್ಯಾಲ್ಶಿಯಂ ಮೂಲಗಳು. ಇದಲ್ಲದೆ ಪಾಲಕ್ ಸೊಪ್ಪು, ಬ್ರೊಕೊಲಿಯಂಥವು ನಮ್ಮ ಮೂಡ್ ಸುಧಾರಣೆಗೆ ನೆರವಾಗುತ್ತವೆ. ಪರೀಕ್ಷೆಯ ಸಮಯದಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಆಹಾರ ಸೇವಿಸುವ ಮಕ್ಕಳು, ಕಡಿಮೆ ಕ್ಯಾಲ್ಶಿಯಂ ಆಹಾರ ಸೇವಿಸುವ ಮಕ್ಕಳಿಗಿಂತ ಒತ್ತಡರಹಿತರಾಗಿರುತ್ತಾರೆ ಎನ್ನುತ್ತವೆ ಅಧ್ಯಯನಗಳು.
ಮೊಟ್ಟೆ
ಮೊಟ್ಟೆಯಲ್ಲಿರುವ ವಿಟಮಿನ್ ಡಿ ಮತ್ತು ಟ್ರಿಪ್ಟೊಫ್ಯಾನ್ ಅಂಶಗಳು ದೇಹದಲ್ಲಿ ಹ್ಯಾಪಿ ಹಾರ್ಮೋನುಗಳ ಬಿಡುಗಡೆಗೆ ಚೋದನೆಯನ್ನು ನೀಡುವುದಾಗಿ ಹೇಳುತ್ತವೆ ಅಧ್ಯಯನಗಳು. ಯಾವುದೇ ರೀತಿಯಲ್ಲಿ ವಿಟಮಿನ್ ಡಿ ದೇಹಕ್ಕೆ ದೊರೆಯುವುದರಿಂದ ಒತ್ತಡ ನಿವಾರಣೆಗೆ ನೆರವಾಗುತ್ತದೆ. ಖಿನ್ನತೆ ನಿವಾರಣೆಗೆ ಬೆಳಕಿನ ಚಿಕಿತ್ಸೆ ವ್ಯಾಪಕವಾಗಿ ಬಳಕೆಯಲ್ಲಿದೆ.
ಬೀಜಗಳು
ಮೆಗ್ನೀಶಿಯಂ ಮತ್ತು ಸತುವಿನ ಕೊರತೆಯು ಮಾನಸಿಕ ಒತ್ತಡವನ್ನು ಹೆಚ್ಚಿಸಬಲ್ಲದು. ಈ ಕೊರತೆಯನ್ನು ಸುಲಭವಾಗಿ ನೀಗಿಸುವುದು ಬೀಜಗಳು. ಗೋಡಂಬಿಯಲ್ಲಿ ಅಧಿಕ ಪ್ರಮಾಣದಲ್ಲಿ ಜಿಂಕ್ ಅಂಶವಿದೆ. ಚಿಯಾ ಮತ್ತು ಕುಂಬಳಕಾಯಿ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಗ್ನೀಶಿಯಂ ಅಂಶವಿದೆ. ಹಾಗಾಗಿ ಹಲವು ರೀತಿಯ ಬೀಜಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಒತ್ತಡ ಕಡಿಮೆ ಮಾಡುವಲ್ಲಿ ಮಹತ್ವದ್ದೆನಿಸುತ್ತದೆ.
ಫೋಲೇಟ್
ಹಸಿರು ಸೊಪ್ಪು ಮತ್ತು ತರಕಾರಿಗಳಲ್ಲಿ ಫೋಲೇಟ್ ಅಂಶ ಧಾರಾಳವಾಗಿರುತ್ತದೆ. ಮೆದುಳಿನ ಸಂವಾಹಕಗಳು ಸರಿಯಾಗಿ ಕೆಲಸ ಮಾಡುವಲ್ಲಿ ಫೋಲೇಟ್‌ಗಳು ಮಹತ್ವದ ಪಾತ್ರ ವಹಿಸುತ್ತವೆ. ಮೂಡ್ ಸುಧಾರಿಸಿ, ಮೆದುಳಿನ ಕ್ಷಮತೆ ಹೆಚ್ಚಿಸುವಲ್ಲಿ ಫೋಲೇಟ್ ಮತ್ತು ಫಾಲಿಕ್ ಆಮ್ಲಗಳು ಹೆಚ್ಚಿರುವ ಆಹಾರಗಳು ಅಗತ್ಯ.
ಇದನ್ನೂ ಓದಿ: Health Tips For Kidney: ಕಿಡ್ನಿಯ ಆರೋಗ್ಯಕ್ಕೆ ಯಾವೆಲ್ಲ ಆಹಾರಗಳು ಒಳ್ಳೆಯದು?