ಆಹಾರವನ್ನು ಸರಿಯಾದ ಕ್ರಮದಲ್ಲಿ ಶೇಖರಿಸಿಡುವುದೇ ನಾವು ಅಷ್ಟಾಗಿ ಗಮನ ಕೊಡದ ವಿಚಾರ. ಅಂಗಡಿಯಿಂದ ಕೊಂಡು ತಂದ ಮೇಲೆ ಒಡೆದ ಪ್ಯಾಕೆಟ್ಟುಗಳನ್ನು ಬಳಸಿ ಹಾಗೆಯೇ ಬಿಡುವುದು, ಡಬ್ಬಗಳಲ್ಲಿ ತುಂಬಿಸದೇ ಇಡುವುದು, ಸರಿಯಾದ ಡಬ್ಬದಲ್ಲಿ ಹಾಕದಿರುವುದು, ಮುಚ್ಚಳ ಸರಿಯಾಗಿ ಭದ್ರಪಡಿಸದೇ ಇರುವುದು ಅಥವಾ ಈಗ ಒಡೆದ ಪ್ಯಾಕೆಟ್ಟನ್ನು ಅಡುಗೆ ಕೋಣೆಯಲ್ಲಿ ಬಹಳ ಗಂಟೆಗಳ ಕಾಲ ಹಾಗೆಯೇ ಬಿಟ್ಟಿರುವುದು ಇತ್ಯಾದಿ ಇತ್ಯಾದಿ ತಪ್ಪುಗಳು ನಿತ್ಯವೂ ಆಗುತ್ತಲೇ ಇರುತ್ತವೆ. ಇದನ್ನು ಗಂಭೀರವಾಗಿ ನಾವು ಪರಿಗಣಿಸದೇ ಇರುವುದೇ ಆಹಾರ ವಸ್ತುಗಳು ಬಹುಬೇಗನೆ ಕೆಡುವುದು, ಹುಳ ಹಿಡಿಯುವುದು ಇತ್ಯಾದಿಗಳಿಗೆ ಆಹ್ವಾನ ನೀಡುತ್ತದೆ. ಆದರೆ ಸರಿಯಾಗಿ ಶೇಖರಿಸುವ ವಿಧಾನ ಕಲಿತುಕೊಂಡರೆ (Health Tips) ಆಹಾರದ ಬಾಳಿಕೆ ಹೆಚ್ಚಾಗುತ್ತದೆ.
ಈ ಸಂಗತಿ ಮುಖ್ಯ
ಇದು ಕೇವಲ ಆಹಾರ ಧಾನ್ಯಗಳು, ಬೇಳೆಕಾಳುಗಳ ವಿಚಾರಕ್ಕೆ ಮಾತ್ರ ಸಂಬಂಧಿಸಿದ್ದಲ್ಲ, ತರಕಾರಿ ಹಣ್ಣುಗಳ ಶೇಖರಣೆಯ ವಿಚಾರಕ್ಕೂ ಸಂಬಂಧಿಸಿದ್ದೂ ಹೌದು. ಕೊಯ್ದ ಮೇಲೂ ಹಣ್ಣು ತರಕಾರಿಗಳು ಹಣ್ಣಾಗುವ, ಬೆಳೆಯುವ, ಮಾಗುವ ಪ್ರಕ್ರಿಯೆಯಲ್ಲಿ ಇರುವುದರಿಂದ ನಾವು ಇವುಗಳನ್ನು ಸರಿಯಾದ ಕ್ರಮದಲ್ಲಿ ಶೇಖರಿಸದಿದ್ದಲ್ಲಿ ಖಂಡಿತ ಬಹುಬೇಗನೆ ಹಾಳಾಗುತ್ತದೆ. ಅದರಲ್ಲೂ, ಕೆಲವು ಹಣ್ಣು ತರಕಾರಿಗಳನ್ನು ಬೇರೆಯದರ ಜೊತೆಗೆ ಸೇರಿಸಿ ಇಟ್ಟಿದ್ದಕ್ಕಾಗಿ ಬಹುಬೇಗನೆ ಕೆಡುತ್ತದೆ. ಹಲವು ಸಂಶೋಧನೆಗಳು, ತರಕಾರಿ ಹಾಗೂ ಹಣ್ಣುಗಳನ್ನು ಜೊತೆಯಾಗಿ ಶೇಖರಿಸಿಡುವುದರಿಂದ ಅತ್ಯಂತ ಹೆಚ್ಚು ಈಥೈಲೀನ್ ಗ್ಯಾಸ್ ಅನ್ನು ಉತ್ಪತ್ತಿ ಮಾಡುವುದರಿಂದ ಅವುಗಳನ್ನು ಒಟ್ಟಿಗೆ ಶೇಖರಿಸಿಡಬಾರದು ಎಂದೂ ಹೇಳಿವೆ. ಈ ಗ್ಯಾಸ್ ಹಣ್ಣಾಗುವ ಪ್ರಕ್ರಿಯೆಯನ್ನು ಇನ್ನಷ್ಟು ತೀವ್ರಗೊಳಿಸುತ್ತವೆ. ಹಾಗಾಗಿ, ಹೆಚ್ಚು ಕಾಲ ಕೆಡದೆ ಇಡಲು ಯಾವೆಲ್ಲ ಹಣ್ಣು ತರಕಾರಿಗಳನ್ನು ಜೊತೆಯಾಗಿ ಶೇಖರಿಸಿಡುವ ತಪ್ಪನ್ನು ಮಾಡಬಾರದು ಎಂಬುದನ್ನು ನೋಡೋಣ.
ಈರುಳ್ಳಿ ಹಾಗೂ ಆಲೂಗಡ್ಡೆ
ಇವೆರಡನ್ನೂ ಫ್ರಿಡ್ಜ್‌ನಲ್ಲಿ ಇಡದ ಕಾರಣ ಬಹುತೇಕರು ತಮ್ಮ ಅಡುಗೆ ಕೋಣೆಯಲ್ಲಿ ಜೊತೆಯಾಗಿರಿಸುವುದುದೇ ಹೆಚ್ಚು. ಆದರೆ, ಇವೆರಡನ್ನೂ ಜೊತೆಯಾಗಿರಿಸಿದರೆ, ಈಥೈಲೀನ್ ಗ್ಯಾಸ್ ಉತ್ಪತ್ತಿಯಾಗಿ ಬಹುಬೇಗನೆ ಆಲೂಗಡ್ಡೆಯಲ್ಲಿ ಮೊಳಕೆಗಳೇಳುತ್ತವೆ. ಜೊತೆಗೆ ಬೇಗನೆ ಕೊಳೆತುಹೋಗುವುದೂ ಹೆಚ್ಚು.
ಟೊಮೆಟೋ ಹಾಗೂ ಸೌತೆಕಾಯಿ
ಟೊಮೆಟೋ ಹಾಗೂ ಸೌತೆಕಾಯಿಯನ್ನು ಜೊತೆಯಾಗಿ ಇಡಬೇಡಿ. ಈ ಎರಡೂ ತರಕಾರಿಗಳ ಮಾಗುವಿಕೆ ಅಥವಾ ಹಣ್ಣಾಗುವಿಕೆ ಪ್ರಕ್ರಿಯೆ ಒಂದರ ಮೇಲೆ ಮತ್ತೊಂದರ ಪ್ರಭಾವ ಬೀರುವ ಸಂಭವ ಹೆಚ್ಚಿರುವುರಿಂದ ಬಹುಬೇಗನೆ ಎರಡೂ ಹಾಳಾಗಬಹುದು. ಸೌತೆಕಾಯಿ ಹೆಚ್ಚು ತೇವಾಂಶದ ತರಕಾರಿಯಾದ್ದರಿಂದ ಇದರಿಂದಾಗಿ ಟೊಮೇಟೋ ಬಹುಬೇಗನೆ ಹಾಳಾಗಬಹುದು. ಸೌತೆಕಾಯಿಯನ್ನು ಫ್ರಿಡ್ಜ್‌ನಲ್ಲೂ, ಟೊಮೆಟೋವನ್ನು ಹೊರಗೂ ಇಡಬಹುದು.
ಸೇಬು ಹಾಗೂ ಕ್ಯಾರೆಟ್
ಕ್ಯಾರೆಟ್ ಹಾಗೂ ಸೇಬು ಹಣ್ಣನ್ನು ಜೊತೆಯಾಗಿಸಲು ಹೊರಡಬೇಡಿ. ಸೇಬು ಈಥೈಲೀನ್ ಗ್ಯಾಸ್ ಬಿಡುಗಡೆ ಮಾಡುವ ಮೂಲಕ ಕ್ಯಾರೆಟ್ಟನ್ನು ಬಹುಬೇಗನೆ ಹಾಳಾಗುವಂತೆ ಮಾಡಬಹುದು. ಕ್ಯಾರೆಟ್ ತನ್ನ ಕ್ರಿಸ್ಪೀನೆಸ್ ಕಳೆದುಕೊಂಡು ಮೆತ್ತಗಾಗಿ ಹಾಳಾಗುತ್ತದೆ.
ಪೀಚ್ ಹಾಗೂ ಬಾಳೆಹಣ್ಣು
ಪೀಚ್ ಹಣ್ಣು ಹಾಗೂ ಬಾಳೆಹಣ್ಣನ್ನು ಜೊತೆಯಾಗಿ ಇಟ್ಟರೆ ಪೀಚ್ ಹಣ್ಣು ಬಹುಬೇಗನೆ ಮೆತ್ತಗಾಗಿ ಹಣ್ಣಾಗಿ ಹಾಳುತ್ತದೆ. ಇವೆರಡನ್ನೂ ಪ್ರತ್ಯೇಕವಾಗಿ ಇಡಬೇಕು.
ಬ್ಲೂಬೆರ್ರಿ ಹಾಗೂ ಸ್ಟ್ರಾಬೆರ್ರಿ
ಈ ಎರಡೂ ಬಗೆಯ ಬೆರ್ರಿಗಳು ಒಂದೇ ಬಗೆಯದ್ದಾದ್ದರಿಂದ ಜೊತೆಗೇ ಇಟ್ಟರೆ ಏನೂ ಆಗದು ಎಂದು ಅಂದುಕೊಂಡರೆ ಅದು ಸುಳ್ಳಾದೀತು. ಇವೆರಡನ್ನೂ ಜೊತೆಗಿಟ್ಟರೆ ಬ್ಲೂಬೆರ್ರಿ ಸ್ಟ್ರಾಬೆರ್ರಿಯ ಹೊಡೆತಕ್ಕೆ ಮೆತ್ತಗಾಗಿ, ಅಪ್ಪಚ್ಚಿಯಾಗಿ ಹಾಳಾಗಿಬಿಡುತ್ತದೆ.
ಇದನ್ನೂ ಓದಿ: Healthy Cooking Tips: ರಾಜ್ಮಾ, ಚೆನ್ನಾದಂತಹ ಕಾಳುಗಳ ಅಡುಗೆಯಿಂದ ಹೊಟ್ಟೆಯುಬ್ಬರವೇ? ಹೀಗೆ ಮಾಡಿ!