Site icon Vistara News

Skincare tips in winter : ಈ ಸಮಯ ತ್ವಚೆ ಶುಷ್ಕಮಯ! ಎಚ್ಚರ ವಹಿಸಿದರೆ ಆನಂದಮಯ!

Winter skin care

ಚಳಿಗಾಲವೆಂದರೆ ಚರ್ಮ ಬಿರಿಯುವ ಕಾಲವೂ ಹೌದು (Skincare tips in winter). ತ್ವಚೆಯೆಲ್ಲ ಒಣಗಿದಂತಾಗಿ, ಹುರುಪೆಯೆದ್ದು, ತುರಿಸಿ ಕೆಂಪಾಗಿ, ಉರಿಯೇಳುವ ದಿನಗಳಿವು. ಇದಕ್ಕೆ ಸೂಕ್ತವಾದ ಆರೈಕೆ ಅಗತ್ಯ. ಹಾಗಿಲ್ಲದಿದ್ದರೆ ಚಳಿಗಾಲದಲ್ಲಿ ಚರ್ಮದ ಸಮಸ್ಯೆ (Skincare tips in winter) ಗಂಟು ಬೀಳುವುದು ಖಚಿತ. ಹಾಗಾದರೆ ಹವಾಮಾನ ಬದಲಾಗುತ್ತಿರುವಾಗ, ಅದರಲ್ಲೂ ಶುಷ್ಕ ವಾತಾವರಣದಲ್ಲಿ ಚರ್ಮದ ದೇಖರೇಖಿ ಹೇಗಿರಬೇಕು? ಏನೆಲ್ಲಾ ಮಾಡಬೇಕು ಎಂಬ ಮಾಹಿತಿಯಿದು.

ಆಹಾರ ಹೇಗಿರಬೇಕು?

ಚಳಿಯೆಂದು ನಾವು ಮೊದಲು ಮಾಡುವ ಕೆಲಸವೆಂದರೆ ಸರಿಯಾಗಿ ನೀರು ಕುಡಿಯದಿರುವುದು. ಚಳಿಗಾಲದಲ್ಲಿ ದೇಹಕ್ಕೆ ಕಡಿಮೆ ನೀರು ಸಾಗುತ್ತದೆ ಎಂದೇನಿಲ್ಲವಲ್ಲ. ಎಂದಿಗೂ ಕುಡಿಯುವಷ್ಟೇ ಈ ಕಾಲದಲ್ಲೂ ಬೇಕು. ನೀರು ಕಡಿಮೆಯಾದರೆ ಆಗುವ ಹಲವು ಸಮಸ್ಯೆಗಳ ಪೈಕಿ ಚರ್ಮ ಒಣಗುವುದೂ ಒಂದು. ಜೊತೆಗೆ ದೇಹದಲ್ಲಿನ ಕಶ್ಮಲಗಳನ್ನೆಲ್ಲ ಹೊರಗಟ್ಟದಿದ್ದರೆ, ಪರಿಣಾಮ ಚರ್ಮದ ಮೇಲೂ ಕಾಣಿಸಿಕೊಳ್ಳುತ್ತದೆ.

ಪೋಷಕಾಂಶಗಳು?

ಚಳಿಗಾಲದಲ್ಲಿ ಲಭ್ಯವಿರುವ ಹಣ್ಣುಗಳನ್ನು ತಪ್ಪದೆ ಸೇವಿಸಬೇಕು. ಜೊತೆಗೆ, ಹಸಿರು ತರಕಾರಿಗಳು, ಇನ್ನಷ್ಟು ಹಣ್ಣುಗಳು, ಮೊಳಕೆ ಕಟ್ಟಿದ ಕಾಳುಗಳು, ಕೊಬ್ಬಿನ ಮೀನುಗಳು, ಹೆಚ್ಚು ನಾರು ಮತ್ತು ಪ್ರೊಟೀನ್‌ ಸೇವನೆ ಇತ್ಯಾದಿಗಳಿಂದ ಚರ್ಮವನ್ನು ಕಾಂತಿಯುಕ್ತವಾಗಿ ಇರಿಸಿಕೊಳ್ಳುವುದು ಸಾಧ್ಯ. ಸ್ನಾನ ಮಾಡುವಾಗ ಸಿಕ್ಕಾಪಟ್ಟೆ ಬಿಸಿ ನೀರನ್ನು ಚರ್ಮಕ್ಕೆ ಸುರಿದುಕೊಂಡರೆ, ತ್ವಚೆಯಲ್ಲಿರುವ ನೈಸರ್ಗಿಕ ತೈಲದಂಶವೆಲ್ಲ ಹೋಗಿ, ಇನ್ನಷ್ಟು ಒಣಗುತ್ತದೆ. ಹಾಗಾಗಿ ಉಗುರು ಬೆಚ್ಚಗಿನ ನೀರು ಸೂಕ್ತ.

ಜೀವನಶೈಲಿ

ಚಳಿಗಾಲದಲ್ಲಿ ಬಿಸಿ ಕಾಫಿ, ಚಹಾಗಳನ್ನು ಹೀರುವ ಬಯಕೆ ಸಹಜ. ಆದರೆ ಕೆಫೇನ್‌ ಮತ್ತು ಆಲ್ಕೋಹಾಲ್‌ ಸೇವನೆ ಹೆಚ್ಚಿದಂತೆ ಚರ್ಮದ ಮೇಲಿನ ಸುಕ್ಕುಗಳೂ ಹೆಚ್ಚುತ್ತಾ ಹೋಗುತ್ತವೆ. ಚಳಿಗಾಲದಲ್ಲಿ ಬಿಸಿಲಿಗೆ ಒಡ್ಡಿಕೊಳ್ಳುವ ಆಸೆಯಲ್ಲೂ ತಪ್ಪಿಲ್ಲ. ಆದರೆ ತೀಕ್ಷ್ಣ ಬಿಸಿಲಿಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ ಚರ್ಮದ ನೆರಿಗೆಗಳು ಹೆಚ್ಚುತ್ತವೆ. ಇವೆಲ್ಲವುಗಳ ಜೊತೆ ಮಾನಸಿಕ ಒತ್ತಡವೂ ಸೇರಿಬಿಟ್ಟರೆ, ಚರ್ಮದ ಅವಸ್ಥೆ ಹರೋಹರ! ನಿದ್ದೆ ಮತ್ತು ವ್ಯಾಯಾಮಗಳು ಸಹ ತ್ವಚೆಯ ಆರೋಗ್ಯ ಕಾಪಾಡುವಲ್ಲಿ ನೆರವಾಗುತ್ತವೆ.

ಇದನ್ನೂ ಓದಿ : Winter Fashion 2023 : ಚಳಿಗಾಲದಲ್ಲಿ ಜೆನ್‌ ಜಿ ಹುಡುಗಿಯರ ಮನ ಸೆಳೆದ ವುಲ್ಲನ್‌ ಕ್ರಾಪ್‌ ಟಾಪ್ಸ್

ಕ್ರೀಮುಗಳು

ಅತಿಯಾದ ಒಣ ಚರ್ಮಕ್ಕೆ ಸಾಂದ್ರವಾದ ಮ್ಯಾಯಿಶ್ಚರೈಸರ್‌ ಅಗತ್ಯ. ಇಲ್ಲದಿದ್ದರೆ ಒಣಚರ್ಮ ಬೆನ್ನು ಬೀಳುತ್ತದೆ. ಸಾಮಾನ್ಯ ಚರ್ಮಕ್ಕೆ ತೀರಾ ಜಿಡ್ಡಿಲ್ಲದ ಕ್ರೀಮುಗಳು ಸಾಕು. ಚರ್ಮದ ತೇವ ಕಾಪಾಡಿಕೊಳ್ಳುವುದಕ್ಕೆ ಇದು ಅಗತ್ಯ. ಸನ್‌ ಸ್ಕ್ರೀನ್‌ ಎಂದರೆ ಬೇಸಿಗೆಯಲ್ಲಿ ಮಾತ್ರ ಎಂಬ ಭಾವನೆ ಹಲವರಲ್ಲಿರುತ್ತದೆ. ಆದರೆ ಚಳಿಗಾಲದ ಬಿಸಿಲಿಗೂ ಸನ್‌ಬ್ಲಾಕ್‌ ಬೇಕು. ಇದರಿಂದ ಚರ್ಮ ಕಪ್ಪಾಗಿ, ಸುಕ್ಕಾಗುವುದನ್ನು ತಡೆಯಬಹುದು
ನಿಮ್ಮ ಚರ್ಮಕ್ಕೆ ಹೊಂದುವಂಥ ಒಳ್ಳೆಯ ಕ್ಲೆನ್ಸರ್‌ ಆಯ್ಕೆ ಮಾಡಿಕೊಳ್ಳಿ. ತ್ವಚೆಯ ಸೂಕ್ಷ್ಮ ರಂಧ್ರಗಳು ತೆರೆಯದಿದ್ದರೆ, ಹಚ್ಚಿರುವ ಕ್ರೀಮುಗಳು ಚರ್ಮದ ಒಳಗೆ ತಲುಪುವುದೇ ಇಲ್ಲ. ಜೊತೆಗೆ ವಿಟಮಿನ್‌ ಸಿ, ಇ, ರೆಟಿನೋಲ್‌ನಂಥ ಕ್ರೀಮುಗಳನ್ನು ಬಳಸುತ್ತಿದ್ದರೆ, ಅದನ್ನು ಮುಂದುವರೆಸಿ. ಇಂಥ ಆರೈಕೆಗಳಿಂದ ಚರ್ಮದ ಹೊಳಪು ಕಾಪಾಡಿಕೊಳ್ಳಬಹುದು. ಆದರೆ ಸ್ಕ್ರಬ್‌ಗಳನ್ನು ಬಳಸುವಾಗ ಎಚ್ಚರವಿರಲಿ. ವಾರಕ್ಕೊಮ್ಮೆ ಇವುಗಳನ್ನು ಉಪಯೋಗಿಸಿದರೆ ಸಾಕಾಗುತ್ತದೆ. ಹೆಚ್ಚುಹೆಚ್ಚಾಗಿ ಸ್ಕ್ರಬ್‌ ಬಳಸಿದರೆ, ತ್ವಚೆಗೆ ಉಪಯೋಗಕ್ಕಿಂತ ಹಾನಿಯ ಸಾಧ್ಯತೆಯೇ ಹೆಚ್ಚು.

ಪ್ರಯೋಗಗಳೇ… ಜೋಕೆ!

ಮಾರುಕಟ್ಟೆಯಲ್ಲಿ ಚಳಿಗಾಲಕ್ಕೆಂದೇ ದೊರೆಯುವ ಹೊಸ ಡೀಪ್‌ ಮ್ಯಾಯಿಶ್ಚರೈಸರ್‌ ತರುವ ಮುನ್ನ ಅದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ಈಗಿನ ಕ್ರೀಮುಗಳು ಶುಷ್ಕತೆಯನ್ನು ತೊಡೆಯುತ್ತಿಲ್ಲ ಎಂದಾದರೆ ವೈದ್ಯರಲ್ಲಿ ಕೇಳಿ, ಗೂಗಲ್‌ನಲ್ಲಿ ಅಲ್ಲ. ನಿಮ್ಮದೇ ಏನೇನೊ ಪ್ರಯೋಗಗಳನ್ನು ಮಾಡುವ ಮುನ್ನ ಜಾಗ್ರತೆ. ಯಾವ್ಯಾವುದೋ ಮಾಸ್ಕ್‌ ಅಥವಾ ಫೇಶಿಯಲ್‌ಗಳನ್ನು ಬಳಸುವಾಗಲೂ ಎಚ್ಚರವಿರಲಿ. ಯಾವುದೇ ಕಾರಣಕ್ಕೂ ಮೇಕಪ್‌ ತೆಗೆಯದೆ ರಾತ್ರಿ ಮಲಗಬೇಡಿ. ಇದು ಚರ್ಮಕ್ಕೆ ಸಿಕ್ಕಾಪಟ್ಟೆ ಹಾನಿ ಮಾಡುತ್ತದೆ.

Exit mobile version