Site icon Vistara News

Thyroid Health Formulas: ನಿಮ್ಮ ಥೈರಾಯ್ಡ್‌ ನಿಮ್ಮ ಕೈಯಲ್ಲಿ! ಥೈರಾಯ್ಡ್‌ ಆರೋಗ್ಯಕ್ಕೆ ಇಲ್ಲಿವೆ ಆರು ಸೂತ್ರಗಳು

Thyroid problem

ಥೈರಾಯ್ಡ್‌ ನಮ್ಮ ದೇಹದ ಅತ್ಯಂತ ಮುಖ್ಯವಾದ ಹಾಗೂ ಅಷ್ಟೇ ನಿರ್ಲಕ್ಷ್ಯಕ್ಕೆ ಒಳಗಾದ ಗ್ರಂಥಿಗಳಲ್ಲಿ ಒಂದು. ಚಿಟ್ಟೆಯ ಆಕಾರದಲ್ಲಿರುವ ಥೈರಾಯ್ಡ್‌ ಗ್ರಂಥಿ ನಮ್ಮ ದೇಹದಲ್ಲಿ ಹಲವು ಕೆಲಸಗಳನ್ನು ನಿರ್ವಹಿಸುತ್ತದೆ. ಮುಖ್ಯವಾಗಿ ನಮ್ಮ ಒಳ್ಳೆಯ ನಿದ್ದೆಗೆ, ತೂಕ ಸಮತೋಲನದಲ್ಲಿ ಇಟ್ಟುಕೊಳ್ಳಲು, ಖಿನ್ನತೆ ಹಾಗೂ ಉದ್ವೇಗದಂತಹ ಮಾನಸಿಕ ಸಮಸ್ಯೆಗಳು ಬರದಂತೆ ಇರಲು ಥೈರಾಯ್ಡ್‌ ಪಾತ್ರವೂ ದೊಡ್ಡದು. ನಮ್ಮ ರಕ್ತದ ಪರೀಕ್ಷೆ ನಡೆಸಿ ಥೈರಾಯ್ಡ್‌ ಸಮಸ್ಯೆಯಿದೆಯೇ ಎಂದು ನೋಡಲಾಗಿ ಅದಕ್ಕೆ ಸಂಬಂಧಿಸಿದ ಔಷಧವನ್ನು ನೀಡಲಾಗುತ್ತದೆ. ಆದರೆ, ನಮ್ಮ ಆಹಾರ ಕ್ರಮ, ಸೇವಿಸಬೇಕಾದ ಆಹಾರದ ಬಗ್ಗೆ ಅಷ್ಟಾಗಿ ಯಾರೂ ಗಮನ ಹರಿಸುವುದಿಲ್ಲ. ಥೈರಾಯ್ಡ್‌ಗ್ರಂಥಿಯ ಆರೋಗ್ಯಕ್ಕೆ ನಾವು ತೆಗೆದುಕೊಳ್ಳುವ ಆಹಾರವೂ ಅಷ್ಟೇ ಮುಖ್ಯ. ಥೈರಾಯ್ಡ್‌ ಗ್ರಂಥಿಯ ಆರೋಗ್ಯಕ್ಕೆ ಪೂರಕವಾದ ಪೋಷಕಾಂಶಗಳು ಸುಲಭವಾಗಿ ನಾವು ಸೇವಿಸುವ ಆಹಾರಗಳಲ್ಲಿ ದೊರೆಯುತ್ತದೆ. ಆದರೆ, ಅವುಗಳನ್ನು ಸೇವಿಸಬೇಕಾದ್ದು ನಮ್ಮ ಕರ್ತವ್ಯ ಅಷ್ಟೇ. ಬನ್ನಿ, ನಮ್ಮ ಥೈರಾಯ್ಡ್‌ ಆರೋಗ್ಯವಾಗಿರಬೇಕೆಂದರೆ ನಾವು (Thyroid Health Formulas) ಗಮನಿಸಬೇಕಾದ ಅಂಶಗಳೇನು ನೋಡೋಣ.

ಅಯೋಡಿನ್‌ ನಿರ್ಲಕ್ಷಿಸಬೇಡಿ

ಥೈರಾಯ್ಡ್‌ ಹಾರ್ಮೋನ್‌ ಥೈರಾಕ್ಸಿನ್‌ ಉತ್ಪಾದನೆಗೆ ಅಯೋಡಿನ್‌ ಬೇಕೇ ಬೇಕು. ಆದರೆ, ಈ ಅಯೋಡಿನ್‌ ಕಡಿಮೆಯೂ ಆಗಬಾರದು. ಹೆಚ್ಚೂ ಆಗಬಾರದು. ಹೆಚ್ಚಾದರೆ, ಗಾಯಟೆರ್‌ ಎಂಬ ಸಮಸ್ಯೆ ಬಂದೀತು. ಅಯೋಡಿನ್‌ ಕಡಿಮೆಯಾಗದಂತೆ ಅಯೋಡಿನ್‌ ಹೆಚಿರುವ ಆಹಾರಗಳಾದ ಸೀವೀಡ್‌ಗಳು, ಅಯೋಡೈಸ್ಡ್‌ ಉಪ್ಪು, ಮೀನು ಮತ್ತಿತರ ಸೀಫುಡ್‌ ಸೇವಿಸಬಹುದು. ಸೀವೀಡ್‌ಗಳ ಸೇವನೆಯಿಂದ ಹಲವು ಬಗೆಯ ಖನಿಜಾಂಶಗಳನ್ನು ನಾವು ಪಡೆಯಬಹುದು. ಕೆಲ್ಪ್‌, ನೊರಿ, ಕೊಂಬು ಮತ್ತಿತರ ಸೀವೀಡ್‌ಗಳು ಥೈರಾಯ್ಡ್‌ಗೆ ಬಹಳ ಒಳ್ಳೆಯದು. ಇವುಗಳು ರೈಬೋಫ್ಲೇವಿನ್‌ ಎಂಬ ಬಿ ವಿಟಮಿನ್‌ ಬಗೆಯನ್ನೂ ಹೊಂದಿದ್ದು, ಇವು ಖಿನ್ನತೆ ಹಾಗೂ ಉದ್ವೇಗದ ಸಮಸ್ಯೆಗಳಿಗೂ ಬಹಳ ಸಹಕಾರಿ.

ಪ್ರೊಟೀನ್‌ ಹೆಚ್ಚು ಸೇವಿಸಿ

ಥೈರಾಯ್ಡ್‌ ಹಾರ್ಮೋನನ್ನು ದೇಹದ ಎಲ್ಲ ಅಂಗಾಂಶಗಳಿಗೆ ಸಾಗಿಸುವ ಕೆಲಸ ಮಾಡುವುದು ಪ್ರೊಟೀನ್‌. ಹೀಗಾಗಿ ಥೈರಾಯ್ಡ್‌ನ ಆರೋಗ್ಯದಲ್ಲಿ ಪ್ರೊಟೀನ್‌ನ ಪಾತ್ರ ಮಹತ್ವದ್ದು. ಮೊಟ್ಟೆ, ಬೀಜಗಳು, ಮೀನು, ಪನೀರ್‌, ಟೋಫು, ಬೇಳೆಕಾಳುಗಳು ಇತ್ಯಾದಿಗಳನ್ನು ಸೇವಿಸುವ ಮೂಲಕ ಪ್ರೊಟೀನ್‌ ದೇಹಕ್ಕೆ ಸದಾ ಲಭ್ಯವಾಗುವಂತೆ ನೋಡಿಕೊಳ್ಳಿ.

ಇವುಗಳಿಂದ ದೂರವಿರಿ

ನಿಮಗೆ ಥೈರಾಯ್ಡ್‌ ಸಮಸ್ಯೆ ಇದ್ದರೆ ಗಾಯೆಟ್ರೋಜೆನ್‌ಗಳಿಂದ ದೂರವಿರಿ. ಅಂದರೆ ಗಾಯೆಟ್ರೋಜೆನ್‌ ಎಂಬ ರಾಸಾಯಿಕಗಳು ಅಯೋಡಿನ್‌ ಹೀರುವಿಕೆಗೆ ಅಡ್ಡಗಾಲು ಹಾಕುತ್ತವೆ. ಇದು ಬ್ರೊಕೋಲಿ, ಕ್ಯಾಬೇಜ್‌, ಹೂಕೋಸು, ಟರ್ನಿಪ್‌, ನೆಲಗಡಲೆ, ಮೂಲಂಗಿ, ಸೋಯಾಬೀನ್‌, ಬಸಳೆಯಂತಹುಗಳಲ್ಲಿ ಇವೆ. ಇವುಗಳನ್ನು ಆದಷ್ಟೂ ಹಸಿಯಾಘಿ ತಿನ್ನದಿರಿ. ಬೇಯಿಸಿ ತಿನ್ನಲಡ್ಡಿಯಿಲ್ಲ. ಯಾಕೆಂದರೆ ಬೇಯಿಸಿದಾಗ ಇವುಗಳ ಗಾಯೆಟ್ರೋಜೆನ್‌ ಕ್ರಿಯಾಶೀಲತೆ ಕಳೆದುಕೊಳ್ಳುತ್ತದೆ.

ಮೊಸರು, ಮಜ್ಜಿಗೆ ಸೇವಿಸಿ

ನಿಮ್ಮ ಜೀರ್ಣಾಂಗವ್ಯೂಹದ ಆರೋಗ್ಯ ಹೆಚ್ಚು ನೋಡಿಕೊಳ್ಳಿ. ಮುಖ್ಯವಾಗಿ ಪ್ರೊಬಯಾಟಿಕ್‌ಗಳನ್ನು ಸೇವಿಸಿ. ಮೊಸರು, ಮಜ್ಜಿಗೆ ಸೇವಿಸಿ. ಬೆಳ್ಳುಳ್ಳಿಯನ್ನೂ ಹೆಚ್ಚು ಸೇವಿಸಿ.

ಕೊಬ್ಬು ಮರೆಯಬೇಡಿ

ಕೊಬ್ಬುಯುಕ್ತ ಆಹಾರ ಸೇವಿಸಿ. ಹಾರ್ಮೋನಿನ ಸಮತೋಲನಕ್ಕೆ ಒಳ್ಳೆಯ ಕೊಬ್ಬು ಬೇಕೇಬೇಕು. ಆದರೆ ಹೆಚ್ಚಾಗಬಾರದು ಅಷ್ಟೇ. ದೇಸೀ ತುಪ್ಪ, ಚೀಸ್‌, ಬೆಣ್ಣೆ, ತೆಂಗಿನೆಣ್ಣೆ, ಹಾಲು, ಫ್ಲ್ಯಾಕ್‌ಸೀಡ್‌, ಸಿಯಾ ಸೀಡ್‌ ಇತ್ಯಾದಿಗಳನ್ನು ಸೇವಿಸಿ.

ಇದನ್ನೂ ಓದಿ: Vitamin D Deficiency: ನೀವು ಸಂತೋಷವಾಗಿಲ್ಲವೇ? ವಿಟಮಿನ್‌ ಡಿ ಕೊರತೆಯೂ ಇದಕ್ಕೆ ಕಾರಣವಿರಬಹುದು!

ಸಕ್ಕರೆ ಸೇವನೆಯ ಬಗ್ಗೆ ನಿಗಾ ಇಡಿ

ಥೈರಾಯ್ಡ್‌ಗೂ ಸಕ್ಕರೆಗೂ ಅಷ್ಟಾಗಿ ಆಗಿಬರದು. ಇನ್ಸುಲಿನ್‌ ಮಟ್ಟದಲ್ಲಿ ವ್ಯತ್ಯಾಸವಾದರೆ ಥೈರಾಯ್ಡ್‌ ಗ್ರಂಥಿ ಆರೋಗ್ಯವಾಗಿರದು. ಇವಲ್ಲದೆ, ನಿತ್ಯವೂ ವ್ಯಾಯಾಮ, ನಡಿಗೆ, ಚುರುಕಾಗಿರುವುದು ಅತ್ಯಂತ ಮುಖ್ಯ. ಒಳ್ಳೆಯ ಆಹಾರ ಸೇವನೆ ಅತ್ಯಗತ್ಯ. ಸಂಸ್ಕರಿಸಿದ ಆಹಾರಗಳನ್ನು ದೂರವಿಡಿ. ಎಲ್ಲ ಪೋಷಕಾಂಶಗಳೂ ದೇಹಕ್ಕೆ ಲಭಿಸುವಂತೆ ಆಹಾರಕ್ರಮ ರೂಪಿಸಿ. ಆಗ ನಿಮ್ಮ ಥೈರಾಯ್ಡ್‌ ಗ್ರಂಥಿ ಆರೋಗ್ಯವಾಗಿರುತ್ತದೆ.

Exit mobile version