ಬಾಲ್ಯದಲ್ಲಿ ಮಕ್ಕಳನ್ನು ಸೋಂಕುಗಳು (Tips For Children’s Health) ಬೇಗ ಕಾಡುತ್ತವೆ. ಇನ್ನೂ ಪೂರ್ಣವಾಗಿ ಬೆಳೆಯದ ಪ್ರತಿರೋಧಕ ಶಕ್ತಿಯೇ ಇದಕ್ಕೆ ಕಾರಣ. ಅದರಲ್ಲೂ ಸರಿಯಾಗಿ ಉಣ್ಣದ, ತಿನ್ನದ ಮಕ್ಕಳ ಪ್ರತಿರೋಧಕ ಶಕ್ತಿ ಇನ್ನೂ ದುರ್ಬಲವಾಗಿದ್ದು, ʻಹುಷಾರಿಲ್ಲʼ ಎನ್ನುವ ದೂರು ಪದೇಪದೆ ಕೇಳುವಂತಾಗುತ್ತದೆ. ಈಗಿನ ಸುಡುವಂಥ ಬೇಸಿಗೆಯ ದಿನಗಳಲ್ಲಂತೂ ನೀರು, ಆಹಾರದ ಸೊಂಕುಗಳು ಸಾಮಾನ್ಯ. ಅನಾರೋಗ್ಯ ಕಾಡುವಾಗ ಅದನ್ನು ಗುಣಪಡಿಸುವುದಕ್ಕೆ ವೈದ್ಯರು ಮತ್ತು ಔಷಧಿಯ ನೆರವು ದೊರೆಯುತ್ತದೆ. ಆದರೆ ಹೊಟ್ಟೆನೋವು, ಜ್ವರ, ಕೆಮ್ಮು ಮುಂತಾದ ಲಕ್ಷಣಗಳು ಗುಣವಾದ ಮೇಲೆ ನಂತರ ಸುಸ್ತು, ನಿಶ್ಶಕ್ತಿ ಕಳೆಯುವುದಕ್ಕೆ ಇನ್ನೂ ನಾಲ್ಕಾರು ದಿನಗಳು ಬೇಕಾಗಬಹುದು. ಅನಾರೋಗ್ಯದ ದಿನಗಳಲ್ಲಿ ಮತ್ತು ನಂತರದ ಚೇತರಿಕೆಯಲ್ಲಿ ಮಕ್ಕಳ ಆರೈಕೆಗೆ ಏನೆಲ್ಲಾ ಮಾಡಬಹುದು? ಯಾವುದೆಲ್ಲ ಕ್ರಮಗಳು ಅವರ ಚೇತರಿಕೆ ಹಾದಿಯನ್ನು ಸುಗಮಗೊಳಿಸುತ್ತವೆ? ಕಾಡುತ್ತಿರುವ ಅನಾರೋಗ್ಯಕ್ಕೆ ಔಷಧಿ ಇದಲ್ಲ. ಆದರೆ ಚೇತರಿಕೆಯನ್ನು ಶೀಘ್ರ ಮತ್ತು ಸುಗಮ ಮಾಡಲು ಈ ಕ್ರಮಗಳು ಉಪಯುಕ್ತ.
ನೀರು
ಅನಾರೋಗ್ಯದ ದಿನಗಳಲ್ಲಿ ದೇಹಕ್ಕೆ ಹೆಚ್ಚಿನ ಪ್ರಮಾಣದ ನೀರು ಒದಗಿಸುವುದು ಮಹತ್ವದ್ದು. ಇದರಿಂದ ದೇಹ ಬಳಲದಂತೆ, ನಿಶ್ಶಕ್ತಿ ಕಾಡದಂತೆ ಮಾಡಬಹುದು. ಇದಕ್ಕೆ ಕೇವಲ ನೀರನ್ನೇ ನೆಚ್ಚಿಕೊಳ್ಳಬೇಕೆಂದಿಲ್ಲ. ಎಳನೀರು, ಒಆರೆಸ್, ಎಲೆಕ್ಟ್ರೊಲೈಟ್ಗಳು, ತರಕಾರಿಗಳ ಬ್ರಾತ್, ಬೇಳೆಯ ಸೂಪುಗಳು, ಕಾಳು ಮತ್ತು ತರಕಾರಿ- ಈ ಎರಡನ್ನೂ ಸೇರಿಸಿ ಬೇಯಿಸಿದ ಕಟ್ಟು ಮುಂತಾದ ಯಾವುದನ್ನೂ ನೀಡಬಹುದು. ಇದರಿಂದ ದೇಹಕ್ಕೆ ಬೇಕಾದ ನೀರಿನಂಶದ ಜೊತೆಗೆ ಅಗತ್ಯವಾದ ಪೋಷಣೆಯೂ ದೊರೆಯುತ್ತದೆ.
ಹಣ್ಣು ಮತ್ತು ತರಕಾರಿಗಳು
ಅವರ ಅನಾರೋಗ್ಯ ಗುಣವಾಗುವುದಕ್ಕೆ ಪೂರಕವಾದ ಹಣ್ಣು-ತರಕಾರಿಗಳು ಯಾವುದು ಎಂಬ ಬಗ್ಗೆ ವೈದ್ಯರಲ್ಲಿ ಮಾಹಿತಿ ಪಡೆಯಿರಿ. ಉದಾ, ಹೊಟ್ಟೆನೋವು, ಡಯರಿಯಾದಂಥ ಸಮಸ್ಯೆಯಲ್ಲಿ ದಾಳಿಂಬೆ, ಮಜ್ಜಿಗೆಯಂಥವು ಬೇಗ ಗುಣವಾಗಲು ನೆರವಾಗುತ್ತವೆ. ವಾಂತಿ ಕಾಡಿಸುತ್ತಿದ್ದಾಗ ಶುದ್ಧ ಬೂದುಗುಂಬಳ ಕಾಯಿಯ ರಸಕ್ಕೆ ಚಿಟಿಕೆ ಉಪ್ಪು, ಕೊಂಚ ಸಕ್ಕರೆ ಹಾಕಿ ಕುಡಿಯಲು ನೀಡಿದರೆ ಹಿತವಾಗುತ್ತದೆ. ಇಂಥವು ಅನಾರೋಗ್ಯದಿಂದ ಶೀಘ್ರ ಚೇತರಿಕೆಗೆ ಸಹಕಾರಿ. ಈ ಬಗ್ಗೆ ವೈದ್ಯರು ಅಥವಾ ಆಹಾರ ತಜ್ಞರಲ್ಲಿ ಕೇಳಿದರೆ ಸೂಕ್ತ.
ಆದ್ಯತೆ ನೀಡಿ
ಅನಾರೋಗ್ಯದಲ್ಲಿ ತಿನ್ನುವುದೇ ಬೇಡ ಎನ್ನುವ ಮಕ್ಕಳಿಗೆ ತಿನ್ನಿಸುವುದೇ ಸಾಹಸವಾಗಬಹುದು. ಹಾಗಾಗಿ ಮಕ್ಕಳ ಬಾಯಿ ರುಚಿಗೆ ಆದ್ಯತೆ ನೀಡಿ. ಇದರರ್ಥ ಶೀತ-ಕೆಮ್ಮಿನಲ್ಲಿ ಅವರು ಆಸೆಪಟ್ಟರೆಂದು ಐಸ್ಕ್ರೀಮ್ ತಿನ್ನಿಸುವುದಲ್ಲ. ಬದಲಿಗೆ, ಆರೋಗ್ಯಕರ ಸ್ಮೂದಿಗಳನ್ನು ನೀಡಿದರೆ ಹಸಿವೆಯೂ ಇಂಗುತ್ತದೆ, ಬಾಯಿಯ ರುಚಿಯೂ ತಣಿಯಬಹುದು. ಸಿಹಿಯನ್ನು ಇಷ್ಟಪಡುವ ಮಕ್ಕಳಿಗೆ ಚಾಕಲೇಟ್ನಂಥ ಜಂಕ್ಗಳ ಬದಲು ಖರ್ಜೂರ, ಅಂಜೂರ, ಒಣದ್ರಾಕ್ಷಿಗಳಂಥ ಪೌಷ್ಟಿಕ ಆಹಾರಗಳು, ಅಕ್ಕಿ ಅಥವಾ ಗೋದಿ ನುಚ್ಚಿನ ಪಾಯಸದಂಥವು ಇಷ್ಟವಾಗಬಹುದು. ಉಪ್ಪು-ಖಾರ ಇಷ್ಟಪಡುವ ಮಕ್ಕಳಿಗೆ ಮಸಾಲ ಆಮ್ಲೆಟ್, ಸೋಯಾ ಚಂಕ್ ಭುರ್ಜಿ, ಹುರಿದ ಬೀಜಗಳಂಥವು ಚೇತರಿಕೆಯನ್ನು ಸುಗಮವಾಗಿಸುತ್ತವೆ.
ಪೋಷಕಾಂಶ
ನೆನಪಿಡಿ, ಅನಾರೋಗ್ಯದ ಚೇತರಿಕೆಯಲ್ಲಿ ಆಹಾರದ ಮೂಲಕ ದೇಹ ಸೇರುವ ಪೋಷಕಾಂಶಗಳು ಮಹತ್ವದ ಪಾತ್ರ ವಹಿಸುತ್ತವೆ. ಹಾಗಾಗಿ ಕಾರ್ಬ್-ಪ್ರೊಟೀನ್-ನಾರು-ನೀರು-ಖನಿಜಗಳ ಸೂತ್ರವನ್ನು ಎಂದಿಗೂ ತಪ್ಪಿಸಬೇಡಿ. ಇದರಿಂದ ಸುಸ್ತು, ಆಯಾಸ, ಮಾಂಸಖಂಡಗಳಲ್ಲಿನ ಜಡತೆ, ಕೀಲುಗಳ ನೋವು ಮುಂತಾದ ಕಿರಿಕಿರಿಗಳನ್ನು ಬೇಗನೇ ದಾಟಬಹುದು. ಬಾಲ್ಯ ಜೀವನದ ಲವಲವಿಕೆಯ ಲಯಕ್ಕೆ ಶೀಘ್ರ ಮರಳಬಹುದು.
ನಿದ್ದೆ-ಆಟ
ಆಡುವ ಮಕ್ಕಳ ಜೀವ ಅಂಗಳದಲ್ಲಿ ಎಂಬ ಮಾತಿದೆ. ಅನಾರೋಗ್ಯ ತೀವ್ರವಾಗಿ ಏಳುವುದಕ್ಕಾಗದು ಎನ್ನುವವರೆಗೆ ಮಕ್ಕಳು ಸಾಮಾನ್ಯ ಮಲಗುವುದಿಲ್ಲ. ಆದರೆ ಒಮ್ಮೆ ಮಲಗುವ ಹಂತಕ್ಕೆ ಬಂದರೆ ಹೆಚ್ಚಿನ ನಿಗಾ ವಹಿಸಿ. ಶೀಘ್ರ ವೈದ್ಯರ ನೆರವು ಪಡೆಯಿರಿ. ಅನಾರೋಗ್ಯ ಪೀಡಿತ ಮಕ್ಕಳು ದಿನಕ್ಕೆ 12-14 ತಾಸುಗಳ ನಿದ್ದೆ ಮಾಡಿದರೆಂದರೆ ಶೀಘ್ರ ಚೇತರಿಸಿಕೊಳ್ಳುತ್ತಾರೆ. ಇಂಥ ಹೊತ್ತಿನಲ್ಲಿ ಸ್ಕ್ರೀನ್ ಟೈಮ್ ತಪ್ಪಿಸಿದರೆ ನಿದ್ದೆಗೆ ತೊಂದರೆಯಾಗುವುದನ್ನೂ ತಪ್ಪಿಸಬಹುದು. ಬದಲಿಗೆ ಪಾಡ್ಕಾಸ್ಟ್ಗಳನ್ನು ಕೇಳಬಹುದು; ಪುಸ್ತಕ ಓದಬಹುದು. ಜ್ವರ ತಗ್ಗಿದ ಹೊತ್ತಿಗೆ ಮನೆಯೊಳಗೇ ಬೇರೇನಾದರೂ ಚಟುವಟಿಕೆಗಳನ್ನು ಮಾಡಬಹುದು.
ಇದನ್ನೂ ಓದಿ: Vitamin B12: ನಮ್ಮ ಹಲವು ಸಮಸ್ಯೆಗಳಿಗೆ ವಿಟಮಿನ್ ಬಿ12 ಕೊರತೆಯೇ ಕಾರಣ!