ವಿಧವಿಧದ ಪಾಸ್ತಾ, ಸಲಾಡ್, ಸ್ಯಾಂಡ್‌ವಿಚ್‌ಗಳ ಪ್ರಿಯರಿಗೆ ʻಪೆಸ್ತೊʼ (pesto) ಎಂಬ ಶಬ್ದ ಚಿರಪರಿಚಿತ. ಘಮಘಮಿಸುವ ಈ ಹಸಿರು ಬಣ್ಣದ ಸಾಸ್ ಮೂಲತಃ ಇಟಲಿ ದೇಶದಿಂದ ಬಂದಿದ್ದು. ಈಗಲೂ ಭಾರತೀಯ ಅಡುಗೆಗಳಿಗಿಂತ ಪಶ್ಚಿಮ ದೇಶಗಳ ಅಡುಗೆಗಳಿಗೇ ಇದು ಹೆಚ್ಚು ಹೊಂದಿಕೊಳ್ಳುವಂಥದ್ದು. ಗ್ರಿಲ್ ಮಾಡಿದ ತರಕಾರಿಗಳು, ಯಾವುದೇ ರೀತಿಯ ಪಾಸ್ತಾ (pasta), ಸ್ಯಾಂಡ್‌ವಿಚ್, ಮುಖ್ಯವಾಗಿ ಸಾಲ್ಮನ್, ಶ್ರಿಂಪ್‌ನಂಥ ಮತ್ಸ್ಯಾಹಾರಗಳಿಗೆ ಇದು ಹೇಳಿ ಮಾಡಿಸಿದ ಸಂಗಾತಿ. ಡಿಪ್ (dip) ಆಗಿಯೂ ಬಳಕೆಯಲ್ಲಿದೆ. ಮಕ್ಕಳಿಗೆ ಪರಮಪ್ರಿಯವಾಗುವ ಇದು ದೊಡ್ಡವರ ಬಾಯಲ್ಲೂ ನೀರೂರಿಸುತ್ತದೆ. ಈ ʻಪೆಸ್ತೊʼ ಎನ್ನುವ ರುಚಿಕಟ್ಟಾದ ಪರಿಮಳಯುಕ್ತ ಸಾಸ್ ಬಗ್ಗೆ ಒಂದಿಷ್ಟು ತಿಳಿಯೋಣ.
ಸತ್ವಭರಿತ
ಇದು ರುಚಿ, ಪರಿಮಳವನ್ನು ಮಾತ್ರವೇ ಹೊಂದಿದ್ದಲ್ಲ, ಪೋಷಕಾಂಶಗಳನ್ನೂ ಹೊಂದಿದೆ. ಇದರ ಪ್ರಧಾನ ವಸ್ತು ಎಂದರೆ ತಾಜಾ ಬೆಸಿಲ್ ಎಲೆಗಳು. ಗಾಢವಾದ ಪರಿಮಳ, ರುಚಿ ಮತ್ತು ಹಸಿರು ಬಣ್ಣಕ್ಕೆ ಈ ಎಲೆಗಳೇ ಕಾರಣ. ಬೆಸಿಲ್‌ನಲ್ಲಿ ವಿಟಮಿನ್ ಎ ಮತ್ತು ಕೆ ಸಾಂದ್ರವಾಗಿದ್ದು, ಕಬ್ಬಿಣ, ಕ್ಯಾಲ್ಶಿಯಂ ಹೆಚ್ಚಿದೆ. ಈ ಸಾಸ್‌ಗೆ ಉಪಯೋಗಿಸುವ ಬೆಳ್ಳುಳ್ಳಿಯಲ್ಲಿನ ಅಲ್ಲಿಸಿನ್ ಅಂಶವೂ ದೇಹದ ಆರೋಗ್ಯ ವೃದ್ಧಿಗೆ ಮಹತ್ವದ್ದು
ಒಳ್ಳೆಯ ಕೊಬ್ಬು
ಪೆಸ್ತೊ ಸಾಸ್‌ಗೆ ಬೇಕಾಗುವ ಇನ್ನೊಂದು ವಸ್ತುವೆಂದರೆ ಆಲಿವ್ ಎಣ್ಣೆ. ಈ ತೈಲದಲ್ಲಿ ಒಮೇಗಾ 3 ಕೊಬ್ಬಿನಾಮ್ಲ ಹೇರಳವಾಗಿದೆ. ಜೊತೆಗೆ ಬಳಸಲಾಗುವ ಪೈನ್ ಬೀಜಗಳಲ್ಲೂ ಉತ್ತಮ ಕೊಬ್ಬಿನ ಅಂಶವಿದೆ. ಇವೆಲ್ಲವೂ ಮಾನೊಅನ್‌ಸ್ಯಾಚುರೇಟೆಡ್ ಕೊಬ್ಬುಗಳಾಗಿದ್ದು, ಇದರಿಂದ ಹೃದಯದ ಆರೋಗ್ಯ ಕಾಪಾಡಲು ನೆರವು ದೊರೆಯುತ್ತದೆ.
ಉತ್ಕರ್ಷಣ ನಿರೋಧಕಗಳು
ಬೆಸಿಲ್, ಬೆಳ್ಳುಳ್ಳಿ, ಆಲಿವ್ ಎಣ್ಣೆ- ಎಲ್ಲದರಲ್ಲೂ ಉತ್ಕರ್ಷಣ ನಿರೋಧಕಗಳು ಸಾಂದ್ರವಾಗಿವೆ. ಇದರಿಂದ ಶರೀರದಲ್ಲಿ ಉರಿಯೂತ ಕಡಿಮೆಯಾಗುತ್ತದೆ. ಮಾರಕ ರೋಗಗಳನ್ನು ತರಬಲ್ಲ ಮುಕ್ತ ಕಣಗಳನ್ನು ನಿರ್ಬಂಧಿಸುವಲ್ಲೂ ಇವು ಪ್ರಮುಖ ಪಾತ್ರ ವಹಿಸುತ್ತವೆ.
ಸಂರಕ್ಷಕಗಳು ಕಡಿಮೆ
ಮನೆಯಲ್ಲಿ ಪೆಸ್ತೊ ಸಾಸ್ ಮಾಡಿಕೊಳ್ಳುವುದು ಕಷ್ಟವಲ್ಲ. ಇದರಿಂದ ಕೃತಕ ಬಣ್ಣ, ಸಂರಕ್ಷಕಗಳನ್ನೆಲ್ಲಾ ದೂರ ಮಾಡಿ, ಸತ್ವಯುತ ಆಹಾರ ಸೇವಿಸಲು ಸಾಧ್ಯವಾಗುತ್ತದೆ. ಮಾತ್ರವಲ್ಲ, ಇದರಲ್ಲಿ ಉಪಯೋಗಿಸಲಾಗುವ ಪರ್ಮೇಸಿಯನ್ ಚೀಸ್ ಕಡಿಮೆ ಪ್ರಮಾಣದಲ್ಲಿ ಸೇರಿಸುವುದರಿಂದ, ಲೋಫ್ಯಾಟ್ ಸಾಸ್ ಮಾಡಲು ಸಾಧ್ಯವಾಗುತ್ತದೆ
ಮಾಡುವುದು ಹೇಗೆ?
ಹಲವು ರೀತಿಯ ಪೆಸ್ತೊ ಸಾಸ್‌ಗಳು ಬಳಕೆಯಲ್ಲಿವೆ. ಇಲ್ಲಿ ಪರಂಪರಾಗತವಾದ ಬೆಸಿಲ್ ಪೆಸ್ತೊ ಸಾಸ್ ಮಾಡುವ ವಿಧಾನವನ್ನು ವಿವರಿಸಲಾಗಿದೆ.
ಬೇಕಾಗುವ ವಸ್ತುಗಳು
ತಾಜಾ ಬೆಸಿಲ್ ಸೊಪ್ಪು- 2 ಕಪ್, ಹುರಿದ ಪೈನ್ ಬೀಜಗಳು- 1/2 ಕಪ್, ಬೆಳ್ಳುಳ್ಳಿ ಎಸಳು 6-8, ತುರಿದ ಪರ್ಮೇಸಿಯನ್ ಚೀಸ್ 1/4 ಕಪ್, ಶುದ್ಧ ಆಲಿವ್ ಎಣ್ಣೆ 1/4 ಕಪ್, ಉಪ್ಪು ಮತ್ತು ಕಾಳು ಮೆಣಸು ರುಚಿಗೆ ತಕ್ಕಷ್ಟು.
ವಿಧಾನ
ಬೆಸಿಲ್ ಸೊಪ್ಪು, ಪೈನ್ ಬೀಜಗಳು, ಬೆಳ್ಳುಳ್ಳಿ, ಉಪ್ಪು, ಕಾಳು ಮೆಣಸು ಮತ್ತು ಚೀಸ್- ಇವಿಷ್ಟನ್ನೂ ಮಿಕ್ಸಿಗೆ ಹಾಕಿ. ಮಿಕ್ಸಿ ಓಡುತ್ತಿರುವಾಗಲೇ ಮುಚ್ಚಳ ತೆಗೆದು ಸ್ವಲ್ಪವಾಗಿಯೇ ಆಲಿವ್ ಎಣ್ಣೆ ಸೇರಿಸುತ್ತಾ ಬನ್ನಿ. ಎಲ್ಲವೂ ಸೇರಿ ಸಾಸ್ ಹದಕ್ಕೆ ಬರುತ್ತಿದ್ದಂತೆ, ಅದನ್ನು ಬೇಕಾದ ಪಾತ್ರೆಗೆ ಹಾಕಿಕೊಳ್ಳಿ. ಇದನ್ನು ಫ್ರಿಜ್‌ನಲ್ಲಿ ನಾಲ್ಕಾರು ದಿನಗಳವರೆಗೆ ಕೆಡದಂತೆ ಇರಿಸಿಕೊಳ್ಳಬಹುದು.
ಪಾಲಕ್ ಸೊಪ್ಪು, ಟೊಮೆಟೊ, ಅವಕಾಡೊ, ಕೆಂಪು ಕ್ಯಾಪ್ಸಿಕಂ ಅಥವಾ ಕೊತ್ತಂಬರಿ ಸೊಪ್ಪುಗಳಲ್ಲಿ ಯಾವುದನ್ನಾದರೂ ಬೆಸಿಲ್ ಬದಲಿಗೆ ಬಳಸಿಕೊಳ್ಳಬಹುದು. ಹಾಗೆಯೇ ಪೈನ್ ಬೀಜಗಳ ಬದಲು ಬಾದಾಮಿ, ವಾಲ್‌ನಟ್, ಕುಂಬಳಕಾಯಿ ಬೀಜ ಅಥವಾ ಗೋಡಂಬಿಯಲ್ಲಿ ಯಾವುದನ್ನಾದರೂ ಪ್ರಯೋಗಿಸಬಹುದು.
ಇದನ್ನೂ ಓದಿ: Medicinal Leaves: Medicinal Leaves With Their Health Benefits