Site icon Vistara News

Tulsi Tea Benefits: ನಿತ್ಯವೂ ತುಳಸಿ ಚಹಾ ಕುಡಿಯುವುದರಿಂದ ಏನೆಲ್ಲ ಲಾಭಗಳಿವೆ ಗೊತ್ತೇ?

Tulsi Tea Benefits

ತುಳಸಿ ಗಿಡಕ್ಕೆ ನಮ್ಮ ಮನೆಗಳಲ್ಲಿ ವಿಶೇಷ ಸ್ಥಾನವಿದೆ. ತುಳಸಿಯನ್ನು ದೇವರಂತೆ ಪೂಜಿಸುವ ನಾವು, ಆಯುರ್ವೇದದಲ್ಲಿ ಹೇಳಿರುವಂತೆ ತುಳಸಿಯ ಲಾಭಗಳನ್ನೂ ಪಡೆಯುತ್ತೇವೆ. ನಿತ್ಯವೂ ದೇವರಿಗೆ ಅರ್ಪಿಸುವ ತುಳಸಿಯ ಎಲೆಗಳಲ್ಲಿ ಎಂಥಾ ಶಕ್ತಿಯಿದೆ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ. ಮಳೆಗಾಲ ಬಂದರಂತೂ ಕಾಡುವ ಶೀತ, ಕೆಮ್ಮು ನೆಗಡಿ ಸಮಸ್ಯೆಗಳಿಗೆಲ್ಲ ತುಳಸಿ ರಾಮ ಬಾಣದಂತೆ ಕೆಲಸ ಮಾಡುವ ನಮ್ಮ ಮನೆಯಂಗಳದ ತುಳಸಿಯ ಆರೋಗ್ಯದ ಲಾಭಗಳ ಬಗ್ಗೆ ಕೆಲವೊಮ್ಮೆ ನಮಗೆ ಅವಜ್ಞೆಯಿದೆ. ಶೀತ, ನೆಗಡಿಯಾದಾಗ ವೈದ್ಯರನ್ನು ಎಡತಾಕುವ ನಾವು ನಿತ್ಯವೂ ಕೆಲವು ಅಭ್ಯಾಸಗಳನ್ನು ಮಾಡಿಕೊಂಡರೆ ಹಲವು ಸಮಸ್ಯೆಗಳಿಂದ ಪಾರಾಗಬಹುದು. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿಕೊಂಡು ಈ ಎಲ್ಲ ಸಮಸ್ಯೆಗಳು ನಮ್ಮ ಹತ್ತಿರ ಸುಳಿಯದಂತೆ ನಮ್ಮನ್ನು ನಾವು ಕಾಪಾಡಬಹುದು. ಬನ್ನಿ, ಕೇವಲ ಒಂದು ತುಳಸಿ ಚಹಾ ಮಾಡಿಕೊಂಡು ನಿತ್ಯವೂ ಕುಡಿಯುವುದರಿಂದ ಯಾವೆಲ್ಲ ಲಾಭಗಳಿವೆ (Tulsi Tea Benefits) ಎಂಬುದನ್ನು ನೋಡೋಣ. ತುಳಸಿ ನಿಮ್ಮ ಮನೆಯಂಗಳದಲ್ಲಿ ಬೇಕಾದಷ್ಟು ಬೇಕಾಬಿಟ್ಟಿಯಾಗಿ ಬೆಳೆದುಕೊಂಡಿದೆ ಎಂದಾದರೆ, ತುಳಸಿಯ ಒಂದೆರಡು ಎಲೆಯನ್ನು ನಿತ್ಯವೂ ಬಾಯಲ್ಲಿ ಹಾಕಿ ಜಗಿಯಬಹುದು. ತುಳಸಿ ಗಿಡ ಇಲ್ಲ ಎಂದಾದಲ್ಲಿ, ಒಣಗಿದ ತುಳಸಿ ಎಲೆಯ ಪುಡಿಯನ್ನು ತರಿಸಿಕೊಳ್ಳಬಹುದು. ಅಥವಾ ಮನೆಯಂಗಳದ ಗಿಡದಿಂದ ನಿತ್ಯವೂ ತುಳಸೀ ಎಲೆಯನ್ನು ಕೊಯ್ದು ಚಹಾ ಮಾಡಿಕೊಂಡು (ನೀರಿನಲ್ಲಿ ಕುದಿಸಿ ಸೋಸಿಕೊಂಡು) ಕುಡಿಯಬಹುದು.

ಉಸಿರಾಟ ಸುಗಮ

ತುಳಸೀ ಚಹಾವನ್ನು ನಿತ್ಯವೂ ಸೇವಿಸುವುದರಿಂದ ಉಸಿರಾಟದ, ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಉತ್ತಮ ಪರಿಹಾರ ದೊರೆಯುತ್ತದೆ. ಕಫ ಕಟ್ಟಿಕೊಳ್ಳುವ ಸಮಸ್ಯೆ ಇರುವವರಿಗೆ, ಬಹುಬೇಗನೆ ಶೀತ, ನೆಗಡಿಯಂತಹ ಸಮಸ್ಯೆಯಾಗುವ ಮಂದಿಗೆ, ಅಸ್ತಮಾ ತೊಂದರೆ ಇರುವವರಿಗೆ ತುಳಸೀ ಚಹಾ ಉತ್ತಮ. ಇದು ದೇಹದಲ್ಲಿ ರೋಗನಿರೋಧಕತೆಯನ್ನು ಹೆಚ್ಚಿಸಿ, ಕಟ್ಟಿಕೊಂಡ ಕಫವನ್ನು ಕರಗಿಸುವಲ್ಲಿ ನೆರವಾಗುವ ಮೂಲಕ ಉಸಿರಾಟವನ್ನು ಸುಗಮವಾಗುವಂತೆ ಮಾಡುತ್ತದೆ.

ಮಾನಸಿಕ ಒತ್ತಡ ಕಡಿಮೆ

ಕೆಲವು ಸಂಶೋಧನೆಗಳ ಪ್ರಕಾರ ತುಳಸಿಯ ಚಹಾ ಕುಡಿಯುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ತುಳಸಿ ಚಹಾ ಕಾರ್ಟಿಸೋಲ್‌ ಹಾರ್ಮೋನಿನ ಸಮತೋಲನಕ್ಕೆ ಸಹಾಯ ಮಾಡುವುದರಿಂದ ಒತ್ತಡ, ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳಿಗೂ ಕೊಂಚ ಮಟ್ಟಿನ ಪರಿಹಾರ ನೀಡುತ್ತದೆ.

ಸಕ್ಕರೆ ಪ್ರಮಾಣ ನಿಯಂತ್ರಿಸುತ್ತದೆ

ನಿತ್ಯವೂ ಕುಡಿಯುವ ಹಾಲು ಹಾಕಿದ ಚಹಾ ಕಾಫಿಗಿಂತ ತುಳಸಿ ಚಹಾ ಒಳ್ಳೆಯದು. ಇದು ದೇಹದಲ್ಲಿನ ಸಕ್ಕರೆಯ ಪ್ರಮಾಣವನ್ನು ಸಮತೋಲನಕ್ಕೆ ತರುವಲ್ಲಿಯೂ ನೆರವಾಗುತ್ತದೆ. ಹಾಗಾಗಿ ಇದು ಮಧುಮೇಹಿಗಳಿಗೆ ಬಹಳ ಒಳ್ಳೆಯದು.

ಬಾಯಿಯ ಆರೋಗ್ಯ ಚೆನ್ನಾಗಿರುತ್ತದೆ

ತುಳಸಿ ಚಹಾವನ್ನು ಸೇವಿಸುವುದರಿಂದ ಬಾಯಿಯ ಆರೋಗ್ಯ ಚೆನ್ನಾಗಿರುತ್ತದೆ. ತುಳಸಿಯು ಬ್ಯಾಕ್ಟೀರಿಯಾಗಳನ್ನು ಓಡಿಸುವ ಕೆಲಸ ಮಾಡುವುದರಿಂದ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳ ವಿರುದ್ಧವೂ ಕೆಲಸ ಮಾಡುತ್ತದೆ. ಬಾಯಿಯನ್ನು, ಹಲ್ಲುಗಳನ್ನು ಸ್ವಚ್ಛವಾಗಿಡುತ್ತದೆ. ಮೌತ್‌ ಫ್ರೆಶ್ನರ್‌ನಂತೆ ಕೆಲಸ ಮಾಡುತ್ತದೆ. ಬಾಯಿಯ ದುರ್ವಾಸನೆಗೂ ಇದು ಒಳ್ಳೆಯದು.

ಸಂಧಿವಾತಕ್ಕೆ ಪರಿಹಾರ

ಸಂಧಿವಾತದಂತಹ ಸಮಸ್ಯೆ ಇರುವ ಮಂದಿಗೆ ತುಳಸಿ ಚಹಾ ಒಳ್ಳೆಯದು. ತುಳಸಿಯಲ್ಲಿರುವ ಯುಗೆನಾಳ್‌ ಎಂಬ ಎಣ್ಣೆಯಂಶದಲ್ಲಿ ಇನ್‌ಫ್ಲಮೇಟರಿ ಗುಣಗಳಿರುವುದರಿಂದ ಇದು ಜೀರ್ಣಾಂಗವ್ಯೂಹ ಹಾಗೂ ದೇಹದ ಗಂಟುಗಳ ಆರೋಗ್ಯದಲ್ಲಿ ಸಹಾಯ ಮಾಡುತ್ತದೆ.

ಇದನ್ನೂ ಓದಿ: Mosquito Repellent Plants: ನಿಮಗೆ ಗೊತ್ತೆ? ಈ 5 ಬಗೆಯ ಗಿಡಗಳು ಸೊಳ್ಳೆಗಳನ್ನು ಓಡಿಸುತ್ತವೆ!

ಕಫ ನೀರಾಗುತ್ತದೆ

ತುಳಸಿಯ ಜೊತೆಗೆ ಶುಂಠಿ, ಕರಿಮೆಣಸು, ವೀಳ್ಯದೆಲೆ ಇತ್ಯಾದಿಗಳನ್ನೂ ಸೇರಿಸಿ ನೀರಿನಲ್ಲಿ ಕುದಿಸಿ ಸೋಸಿಕೊಂಡು ಕಷಾಯ ಮಾಡಿಕೊಂಡು ಕುಡಿದರೆ ಎದೆಯಲಲಿ ಕಟ್ಟಿಕೊಂಡ ಕಫ ನೀರಾಗುತ್ತದೆ. ಒಣಕೆಮ್ಮು, ಕಫದ ಜೊತೆಗೆ ಬರುವ ಕೆಮ್ಮು, ಗಂಟಲು ಕೆರೆತ/ನೋವು ಇತ್ಯಾದಿಗಳಿಗೂ ದಿವ್ಯೌಷಧವಾಗಿ ಕೆಲಸ ಮಾಡುತ್ತದೆ.

ಹೆಚ್ಚು ಸೇವನೆ ಒಳ್ಳೆಯದಲ್ಲ

ತುಳಸಿ ಸ್ವಲ್ಪ ಅಸಿಡಿಕ್‌ ಗುಣವನ್ನೂ ಹೊಂದಿರುವುದರಿಂದ ಹೆಚ್ಚು ಸೇವನೆ ಒಳ್ಳೆಯದಲ್ಲ. ದಿನಕ್ಕೊಮ್ಮೆ ಕುಡಿಯುವುದಕ್ಕೆ ಅಡ್ಡಿಯಿಲ್ಲ. ದಿನಕ್ಕೊಂದೆರಡು ಎಲೆ ಜಗಿಯುವುದರಿಂದ ಸಮಸ್ಯೆ ಬಾರದು. ಆದರೆ ಅತಿಯಾದರೆ ಒಳ್ಳೆಯದಲ್ಲ ಎಂಬುದನ್ನು ನೆನಪಿಡಿ.

Exit mobile version