Site icon Vistara News

Year Ender 2023: ಈ ವರ್ಷ ಚರ್ಚೆಗೆ ಬಂದ ಮಕ್ಕಳ ಅನಾರೋಗ್ಯಕರ ಅಭ್ಯಾಸಗಳಿವು

Distracted Kid Using Mobile Phone While Having Breakfast

ಆಡುವ ಮಕ್ಕಳ ಜೀವ ಅಂಗಳದಲ್ಲಿ ಎಂಬ ಮಾತಿದೆ. ಸದಾ ಕಾಲ ಆಟದತ್ತಲೇ ಗಮನವಿರುವ ಮಕ್ಕಳಿಗೆ ಬೇರಾವುದರ ಬಗ್ಗೆಯೂ ಗಮನವೇ ಇರುವುದಿಲ್ಲ ಎಂಬರ್ಥದ ಮಾತಿದು. ಆದರೆ ಅಂಗಳಕ್ಕಿಳಿದು ಆಡುವ ಮನಸ್ಥಿತಿಯೇ ಮಕ್ಕಳಲ್ಲಿ ಕಡಿಮೆಯಾಗುತ್ತಿರುವುದು ಇತ್ತೀಚಿನ ವರ್ಷಗಳ ವಾಸ್ತವ. ಹೀಗೆ ದೈಹಿಕವಾಗಿ ಸಕ್ರಿಯರಾಗಿಲ್ಲದ, ಸದಾ ಒಂದಿಲ್ಲೊಂದು ಮೆಲ್ಲುತ್ತಿರುವ ಅಥವಾ ಫೋನ್‌ ಪರದೆಗೇ ಅಂಟಿಕೊಂಡಿರುವ ಮಕ್ಕಳಿಗೆ ಆಗುತ್ತಿರುವ ತೊಂದರೆಗಳಿಗೆ ಹಲವು ಮುಖಗಳು ತೋರುತ್ತಿವೆ. ಈಗ ಕಳೆದುಹೋಗುತ್ತಿರುವ 2023ನೇ ವರ್ಷದಲ್ಲಿ (Year Ender 2023) ಮಕ್ಕಳಲ್ಲಿ ಕಂಡುಬಂದ ಅನಾರೋಗ್ಯಕರ ಪ್ರವೃತ್ತಿಗಳೇನು?

ಎಳೆಯ ವಯಸ್ಸಿನಲ್ಲಿ ಬೆಳೆಸಿಕೊಳ್ಳುವ ಅಭ್ಯಾಸಗಳು ಬದುಕಿನ ಕಡೆಯವರೆಗೂ ಪರಿಣಾಮ ಬೀರುತ್ತದೆ ಎನ್ನುವುದು ತಿಳಿಯದ ವಿಷಯವೇನಲ್ಲ. ಅದರಲ್ಲೂ ಆಹಾರದ ಅಭ್ಯಾಸಗಳು ಬಾಲ್ಯಾವಸ್ಥೆಯಿಂದಲೇ ಶಿಸ್ತಿನಲ್ಲಿ ಇರಬೇಕಾದ್ದು ಅಗತ್ಯ. ಅದಿಲ್ಲದಿದ್ದರೆ, ಬದುಕಿನ ಮುಂದಿನ ಹಂತಗಳಲ್ಲಿ ನಾನಾ ರೀತಿಯ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ ಮಕ್ಕಳಿದ್ದಾಗ ಬೆಳಗಿನ ತಿಂಡಿ ತಿನ್ನದ, ಕರಿದ ಅಥವಾ ಸಿಹಿ ತಿಂಡಿಗಳನ್ನು ಹೆಚ್ಚಾಗಿ ತಿನ್ನುವ ಮಕ್ಕಳು ಪ್ರೌಢಾವಸ್ಥೆಯಲ್ಲಿ ಜೀವನಶೈಲಿಯ ರೋಗಗಳನ್ನು ಎದುರಿಸಬೇಕಾಗುತ್ತದೆ ಎನ್ನುತ್ತವೆ ಅಧ್ಯಯನಗಳು. ಈ ಎಲ್ಲಾ ಕಾರಣಗಳಿಂದ ಮಕ್ಕಳ ಅಭ್ಯಾಸಗಳು ಕೆಲವೊಮ್ಮೆ ಪಾಲಕರ ಚಿಂತೆಗೆ ಕಾರಣವಾಗುತ್ತವೆ.

ಜಡ ಜೀವನ

ಮಕ್ಕಳಲ್ಲೂ ಬೊಜ್ಜಿನ ಸಮಸ್ಯೆ ಕಾಡುತ್ತಿದೆ. ಕಾರಣ, ಶಾಲೆಯಲ್ಲಿ ಕೂತು ಕಳೆಯುವುದು ಅನಿವಾರ್ಯ. ಅಲ್ಲಿಯೂ ಆಟದ ಬಿಡುವಿನಲ್ಲಿ ಆಡದಿರುವ ಮಕ್ಕಳು ಎಷ್ಟೋ ಮಂದಿ. ಇನ್ನು ಮನೆಗೆ ಮರಳಿದ ಮೇಲೂ ಆಟಕ್ಕೆ ಹೋಗದ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಟಿವಿ, ಮೊಬೈಲ್‌, ಟ್ಯಾಬ್ಲೆಟ್‌ ಅಥವಾ ಲ್ಯಾಪ್‌ಟಾಪ್‌ ಮುಂದೆ ಹೊತ್ತು ಕಳೆಯುವ ಮಕ್ಕಳ ಸಂಖ್ಯೆ ಮಿತಿಮೀರುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ಮಕ್ಕಳಲ್ಲಿನ ಅತಿತೂಕ, ಬೊಜ್ಜಿನ ಸಮಸ್ಯೆಗಳು ಪಾಲಕರ ಆತಂಕಕಕ್ಕೆ ಕಾರಣವಾಗಿವೆ.

ಅನಾರೋಗ್ಯಕರ ಆಹಾರಾಭ್ಯಾಸಗಳು

ಚಿತ್ರಮಂದಿರದಲ್ಲಿ ಕೂತು ಶೇಂಗಾ, ಪಾಪ್‌ಕಾರ್ನ್‌ ಮೆಲ್ಲುವುದು ಹಳೆಯ ಅಭ್ಯಾಸ. ಇತ್ತೀಚಿನ ದಿನಗಳಲ್ಲಿ ಆ ಜಾಗವನ್ನು ಫ್ರೆಂಚ್‌ ಫ್ರೈಸ್‌, ಸಮೋಸಾ ಮುಂತಾದವು ಆಕ್ರಮಿಸಿವೆ. ಇದೀಗ ಮನೆಗೊಳಗಿನ ಸ್ಕ್ರೀನ್‌ ಸಮಯಕ್ಕೂ ಅನ್ವಯವಾಗುತ್ತಿದೆ. ಒಮ್ಮೆ ಪರದೆಯ ಎದುರು ಕೂತ ಮಕ್ಕಳು ಏನನ್ನು ಮತ್ತು ಎಷ್ಟು ತಿನ್ನುತ್ತಾರೆ ಎಂಬ ಪರಿವೆಯೇ ಇರುವುದಿಲ್ಲ. ಈ ಎಲ್ಲಾ ಕಾರಣಗಳಿಗಾಗಿ ಎಳವೆಯಲ್ಲಿ ಟೈಪ್‌-2 ಮಧುಮೇಹ ಗಂಟುಬೀಳುತ್ತಿದೆ.

ನಿದ್ರಾಹೀನತೆ

ಮಕ್ಕಳ ನಿದ್ದೆಯೆಂದರೆ ಸಾಮಾನ್ಯವಾಗಿ ಗಾಢವಾದದ್ದು. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಪರೀತ ತೊಡಗಿಸಿಕೊಂಡಿರುವ ಮಕ್ಕಳು ತಮ್ಮ ನಿದ್ದೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಬೆಳೆಯುವ ವಯಸ್ಸಿನಲ್ಲಿ ದೇಹಕ್ಕೆ ಸಾಕಷ್ಟು ವಿಶ್ರಾಂತಿ ದೊರೆಯದೆ ಹೋಗುವುದರ ಅಡ್ಡ ಪರಿಣಾಮಗಳು ಸಿಕ್ಕಾಪಟ್ಟೆ ಇವೆ. ಚಟಿವಟಿಕೆ ಇಲ್ಲದೆ, ತಿನ್ನುವ ವಿಷಯದಲ್ಲಿ ನಿಗಾ ಇಲ್ಲದೆ, ನಿದ್ದೆಯೂ ಸಾಲದೆ ಹೋದಾಗ ಮಕ್ಕಳ ಆರೋಗ್ಯದ ಮೇಲಿನ ಪರಿಣಾಮಗಳು ಅತ್ಯಂತ ಗಂಭೀರವಾಗುತ್ತಿವೆ.

ಒತ್ತಡ

ಲೋಕದ ಪರಿವೆಯನ್ನೇ ಮಾಡದೆ, ಚಿಟ್ಟೆಯಂತೆ ಹಾರಾಡಿಕೊಂಡಿರಬೇಕಾದ ಮಕ್ಕಳು ಒತ್ತಡಕ್ಕೆ ಈಡಾಗುತ್ತಿದ್ದಾರೆ; ಇದಕ್ಕಿಂತ ಆತಂಕಕಾರಿಯೆಂದರೆ ಖಿನ್ನತೆಗೆ ಜಾರುತ್ತಿದ್ದಾರೆ. ಇವೆಲ್ಲ ಹೆಚ್ಚಿರುವ ಗೆಜೆಟ್‌ ವ್ಯಸನದ ದುಷ್ಪರಿಣಾಮಗಳು. ಈ ಒತ್ತಡ ನಿವಾರಣೆಗೆ ಬಹಳ ಮಕ್ಕಳು ತಮ್ಮಿಷ್ಟದ ತಿನಿಸುಗಳಲ್ಲಿ ಸಮಾಧಾನ ಹುಡುಕಲು ಯತ್ನಿಸುತ್ತಾರೆ. ಬೇಡದ್ದನ್ನೆಲ್ಲಾ ಮೆಲ್ಲುವ ಈ ಅಭ್ಯಾಸದಿಂದ ಮಕ್ಕಳ ಸುತ್ತಲಿನ ವಿಷವೃತ್ತ ಮುಂದುವರಿಯುತ್ತದೆ.

ಕೌಟುಂಬಿಕ ಸಮಯ ನಷ್ಟ

ಸಾಮಾನ್ಯವಾಗಿ ಊಟ-ತಿಂಡಿಗಳ ಸಮಯವನ್ನು ಒಟ್ಟಾಗಿ ಕಳೆಯುವ ಪದ್ಧತಿ ಬಹಳಷ್ಟು ಕುಟುಂಬಗಳಲ್ಲಿತ್ತು. ಆದರೀಗ ಎಲ್ಲವೂ ಏರುಪೇರಾಗುತ್ತಿದೆ. ಮಕ್ಕಳ ಊಟ-ತಿಂಡಿಗೆ ಸಮಯವೆಂಬುದೇ ಇರುವುದಿಲ್ಲ. ಯಾವಾಗಲೋ ಅನಿಯಮಿತವಾಗಿ ಒಂದಿಷ್ಟು ತಿಂದರೆ ಮುಗಿಯಿತು. ಇದರಿಂದ ಕುಟುಂಬದ ಸದಸ್ಯರ ನಡುವಿನ ಬಾಂಧವ್ಯವೂ ಕಡಿಮೆಯಾಗುತ್ತಿದೆ. ಎಲ್ಲರ ನಡುವೆ ಇದ್ದೂ ಒಂಟಿಯಾಗುತ್ತಿದ್ದಾರೆ.

ಇದನ್ನೂ ಓದಿ: Health Tips for Winter: ಚಳಿಗಾಲದಲ್ಲಿ ನ್ಯುಮೋನಿಯಾ, ಶ್ವಾಸಕೋಶದ ಸಮಸ್ಯೆಗಳಿಂದ ದೂರ ಇರಲು ಹೀಗೆ ಮಾಡಿ…

Exit mobile version