ನಾವು ತಿಂದಿದ್ದೆಲ್ಲಾ ಪಚನವಾಗಿ, ದೇಹದೊಳಗೆ ಹೀರಲ್ಪಡುತ್ತವೆ ಎಂದು ತಿಳಿದಿದ್ದರೆ… ತಪ್ಪು! ಏನೇ ತಿಂದರೂ ಅದರಲ್ಲಿ ದೇಹಕ್ಕೆ ಬೇಡದ್ದು ತ್ಯಾಜ್ಯವಾಗಲೇಬೇಕು. ಅಂಥ ತ್ಯಾಜ್ಯಗಳಲ್ಲಿ ಯೂರಿಕ್ ಆಮ್ಲ ಸಹ ಒಂದು. ಅದರಲ್ಲೂ ಪ್ಯೂರಿನ್‌ಗಳನ್ನು ಹೊಂದಿರುವ ಆಹಾರಗಳನ್ನು ಸೇವಿಸಿದಾಗ ನಡೆಯುವ ವಿಘಟನೆಯಲ್ಲಿ ಯೂರಿಕ್ ಆಮ್ಲ (Uric Acid) ಪ್ರಧಾನವಾಗಿ ಉತ್ಪತ್ತಿಯಾಗುತ್ತದೆ. ಈ ತ್ಯಾಜ್ಯವು ರಕ್ತದೊಂದಿಗೆ ಸೇರಿ, ಮೂತ್ರಪಿಂಡಗಳ ಮೂಲಕ ದೇಹದಿಂದ ಹೊರಗೆ ಹೋಗುತ್ತದೆ. ಆದರೆ ಈ ಯೂರಿಕ್ ಆಮ್ಲದ ತ್ಯಾಜ್ಯದ ಪ್ರಮಾಣ ಅತಿಯಾದರೆ ಗೌಟ್ ಆರ್ಥರೈಟಿಸ್‌ಗೆ ಮೂಲವಾಗುತ್ತದೆ. ಯೂರಿಕ್ ಆಮ್ಲ ನಮ್ಮ ಶರೀರಕ್ಕೆ ಬೇಕು. ಆದರೆ ಅದೇ ಹೆಚ್ಚಾದರೆ ಏನಾಗುತ್ತದೆ ದೇಹದಲ್ಲಿ? ಆರಂಭದ ದಿನಗಳಲ್ಲಿ ದೇಹದಲ್ಲಿ ಯೂರಿಕ್ ಆಮ್ಲದ ಸಾಂದ್ರತೆ ಹೆಚ್ಚಿದ್ದರೆ ಸಮಸ್ಯೆ ಎನಿಸುವುದಿಲ್ಲ. ಇದೇ ಮುಂದುವರಿದರೆ ಕ್ರಮೇಣ ಸಮಸ್ಯೆಗಳಿಗೆ ಮೂಲವಾಗುತ್ತದೆ. ಕೀಲುಗಳಲ್ಲಿ, ಗಂಟುಗಳಲ್ಲಿ ನೋವು, ಸಂಧಿವಾತ, ಹೃದಯದ ತೊಂದರೆಗಳು, ಮೂತ್ರಪಿಂಡದಲ್ಲಿ ಕಲ್ಲು ಮುಂತಾದ ಸಮಸ್ಯೆಗಳಿಗೆ ಎಡೆಯಾಗುತ್ತದೆ. ಹಾಗಾಗಿ ದೇಹ ಆರೋಗ್ಯವಾಗಿರಬೇಕೆಂದರೆ ಶರೀರದಲ್ಲಿ ತ್ಯಾಜ್ಯ ಉಳಿಯಬಾರದು.
ಲಕ್ಷಣಗಳೇನು?
ಅದನ್ನು ರಕ್ತ ಪರೀಕ್ಷೆಯಿಂದ ಪತ್ತೆ ಮಾಡಬಹುದು. ಕೀಲುಗಳಲ್ಲಿ ಬಿಗಿಯುವ ಅನುಭವವಿದ್ದರೆ, ಮೂತ್ರ ವಿಸರ್ಜನೆಯ ವೇಳೆಗೆ ನೋವಿದ್ದರೆ ವೈದ್ಯರನ್ನು ಕಾಣುವುದು ಸೂಕ್ತ. ಕೆಂಬಣ್ಣದ ಮಾಂಸ, ಶೆಲ್ ಫಿಶ್‌ನಂಥ ಮೀನುಗಳು, ಚಿಕನ್, ಅಂಗಾಂಗಗಳ ಮಾಂಸ ಇತ್ಯಾದಿಗಳಲ್ಲಿ ಪ್ಯೂರಿನ್ ಅಂಶ ಅತಿ ಹೆಚ್ಚು. ಇವುಗಳ ವಿಘಟನೆಯಲ್ಲಿ ಹೆಚ್ಚಿನ ಪ್ರಮಾಣದ ಯೂರಿಕ್ ಆಮ್ಲ ಬಿಡುಗಡೆಯಾಗುತ್ತದೆ. ಹಾಗಾಗಿ ಪ್ಯೂರಿನ್ ಹೆಚ್ಚಿರುವಂಥ ಯಾವುದೇ ಆಹಾರಗಳಿಂದ ದೂರ ಇರಿ ಅಥವಾ ಕಡಿಮೆ ಮಾಡಿ. ಜೊತೆಗೆ, ದೇಹದಲ್ಲಿನ ಎಲ್ಲಾ ತ್ಯಾಜ್ಯಗಳನ್ನು ಹೊರಹಾಕುವಲ್ಲಿ ನೀರು ಮಹತ್ವದ ಪಾತ್ರ ವಹಿಸುತ್ತದೆ. ದೇಹಕ್ಕೆ ಸಾಕಷ್ಟು ನೀರು ದೊರೆಯುವುದರಿಂದ ಮೂತ್ರಪಿಂಡಗಳ ಕೆಲಸವೂ ಸುಗಮವಾಗುತ್ತದೆ. ತ್ಯಾಜ್ಯವೂ ಹೊರಹೋಗುತ್ತದೆ.
ಆಯುರ್ವೇದ ಸಹಕಾರಿ
ಕೆಲವು ಸರಳ ಕ್ರಮಗಳು ಮತ್ತು ಆಯುರ್ವೇದದ ಉಪಾಯಗಳು ಯೂರಿಕ್ ಆಮ್ಲ ಕಡಿಮೆ ಮಾಡುವಲ್ಲಿ ನೆರವಾಗುತ್ತವೆ. ಉದಾ, ತ್ರಿಫಲ ಚೂರ್ಣ ಎಂದೇ ಕರೆಸಿಕೊಳ್ಳುವ ನೆಲ್ಲಿಕಾಯಿ, ತಾರೆಕಾಯಿ ಮತ್ತು ಅಳಲೆಕಾಯಿ ಎಂಬ ಮೂರು ಫಲಗಳ ಮಿಶ್ರಣವು, ದೇಹದ ಚಯಾಪಚಯ ಹೆಚ್ಚಿಸಿ, ತ್ಯಾಜ್ಯವನ್ನು ಹೊರಗೆಸೆಯುವಲ್ಲಿ ಸಾಮರ್ಥವಾಗಿ ಕೆಲಸ ಮಾಡುತ್ತದೆ. ಇದಲ್ಲದೆ, ಅಮೃತಬಳ್ಳಿ, ಬೇವು ಮುಂತಾದ ಮೂಲಿಕೆಗಳ ಕೂಡಾ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡುವಲ್ಲಿ ಉಪಯುಕ್ತ ಎನಿಸಿವೆ.
ನಿಂಬೆರಸದ ನೀರು
ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರಹಾಕುವಲ್ಲಿ ನಿಂಬೆ ನೀರು ಸಹ ಒಳ್ಳೆಯ ಉಪಾಯ. ಬೆಳಗಿನ ಹೊತ್ತು ಇದನ್ನು ಡಿಟಾಕ್ಸ್ ಪೇಯದಂತೆ ಸೇವಿಸಬಹುದು. ಯೂರಿಕ್ ಆಮ್ಲ ಹೆಚ್ಚಿದ್ದರಿಂದ ಕಿಡ್ನಿಯಲ್ಲಿ ಉಂಟಾಗುವ ಹರಳುಗಳನ್ನು ಕರಗಿಸಲು ಇದು ಸಹಕಾರಿ. ಬೆಚ್ಚಗಿನ ನೀರಿಗೆ ಕೆಲವು ಹನಿ ನಿಂಬೆರಸವನ್ನು ಸೇರಿಸಿ ಬೆಳಗಿನ ಹೊತ್ತು ಕುಡಿಯುವುದು ಸಹಾಯವಾಗಬಹುದು.
ಮೆಂತೆ ನೀರು
ರಾತ್ರಿ ಮಲಗುವಾಗ ಒಂದು ಚಮಚ ಮೆಂತೆಯನ್ನು ನೀರಿಗೆ ಹಾಕಿ. ಬೆಳಗಿನ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿ. ಇದರಿಂದ ಯೂರಿಕ್ ಆಮ್ಲದ ಮಟ್ಟವನ್ನು ಸುಧಾರಿಸುವುದರ ಜೊತೆಗೆ, ಇದರಿಂದಾಗುವ ಉರಿಯೂತವನ್ನೂ ಕಡಿಮೆ ಮಾಡಬಹುದು.
ಆಪಲ್ ಸೈಡರ್ ವಿನೆಗರ್
ಒಂದಿಡೀ ಗ್ಲಾಸ್ ನೀರಿಗೆ ಒಂದು ದೊಡ್ಡ ಚಮಚ ಆಪಲ್ ಸೈಡರ್ ವಿನೇಗರ್ ಮಿಶ್ರ ಮಾಡಿಕೊಂಡು ಬೆಳಗಿನ ಹೊತ್ತು ಸೇವಿಸಬಹುದು. ಇದು ಕೀಲುಗಳಲ್ಲಿ ಜಮೆಯಾಗಿರುವ ಯೂರಿಕ್ ಆಮ್ಲವನ್ನು ಕರಗಿಸಲು ಸಹಾಯ ಮಾಡುತ್ತದೆ. ಇದಕ್ಕಿರುವ ಉತ್ಕರ್ಷಣ ನಿರೋಧದ ಗುಣದಿಂದ ಕೀಲುಗಳಲ್ಲಿರುವ ನೋವು ಸಹ ಕಡಿಮೆಯಾಗುತ್ತದೆ.
ಶುಂಠಿ ಕಷಾಯ
ಶುಂಠಿಯನ್ನು ನೀರಲ್ಲಿ ಕುದಿಸಿ, ಶೋಧಿಸಿ ಬೆಳಗಿನ ಹೊತ್ತು ಕುಡಿಯಬಹುದು. ಇದರಿಂದ ದೇಹದಲ್ಲಿನ ಉರಿಯೂತ ಕಡಿಮೆಯಾಗುತ್ತದೆ. ಜೊತೆಗೆ, ಜಮೆಯಾಗಿ ಕುಳಿತ ಯೂರಿಕ್ ಆಮ್ಲವನ್ನೂ ಹೊರಹಾಕುತ್ತದೆ ಶುಂಠಿ. ಇವುಗಳ ಜೊತೆಗೆ, ನಮ್ಮ ಪ್ರತಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ.