ದೇಹದಲ್ಲಿನ ರಾಸಾಯನಿಕ ಪ್ರಕ್ರಿಯೆಗಳಲ್ಲಿ ಉತ್ಪತ್ತಿಯಾಗುವ ಸಹಜ ತ್ಯಾಜ್ಯಗಳಲ್ಲಿ ಯೂರಿಕ ಆಮ್ಲ ಸಹ ಒಂದು. ಅದರಲ್ಲೂ ಪ್ಯೂರಿನ್‌ಗಳನ್ನು ಹೆಚ್ಚಾಗಿ ಹೊಂದಿರುವ ಮೀನು ಮತ್ತು ಮಾಂಸಗಳನ್ನು ಸೇವಿಸಿದಾಗ ನಡೆಯುವ ರಾಸಾಯನಿಕ ವಿಘಟನೆಯಲ್ಲಿ ಯೂರಿಕ್ ಆಮ್ಲ (uric acid) ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಹೀಗೆ ಉತ್ಪಾದನೆಯಾದ ತ್ಯಾಜ್ಯವು ರಕ್ತದೊಂದಿಗೆ ಸೇರಿ, ಮೂತ್ರಪಿಂಡಗಳ ಮೂಲಕ ದೇಹದಿಂದ ಹೊರಗೆ ಹೋಗುತ್ತದೆ. ಹೀಗೆ ಮೂತ್ರಪಿಂಡ ಸೇರುವ ಯೂರಿಕ್ ಆಮ್ಲದ ತ್ಯಾಜ್ಯವೇ ಅತಿಯಾದರೆ ದೇಹದ ಹಲವೆಡೆಗಳಲ್ಲಿ ಸಮಸ್ಯೆಗಳು ತಲೆದೋರುತ್ತವೆ.
ಇತ್ತೀಚಿನ ವರ್ಷಗಳಲ್ಲಿ ಈ ಸಮಸ್ಯೆ ಸಾಮಾನ್ಯವಾಗಿದೆ. ಐವರಲ್ಲಿ ಒಬ್ಬರಿಗೆ ಎಂಬಂತೆ ದೇಹದಲ್ಲಿ ಯೂರಿಕ್ ಆಮ್ಲದ (uric acid) ಮಟ್ಟ ಹೆಚ್ಚು ಎಂಬ ವರದಿಗಳು ಬರುತ್ತಿವೆ. ಆರಂಭದ ದಿನಗಳಲ್ಲಿ ದೇಹದಲ್ಲಿ ಯೂರಿಕ್ ಆಮ್ಲದ ಸಾಂದ್ರತೆ ಹೆಚ್ಚಿದ್ದರೆ ಸಮಸ್ಯೆ ಎನಿಸುವುದಿಲ್ಲ. ಇದೇ ಮುಂದುವರಿದರೆ ಕ್ರಮೇಣ ಸಮಸ್ಯೆಗಳಿಗೆ ಮೂಲವಾಗುತ್ತದೆ. ಕೀಲುಗಳಲ್ಲಿ, ಗಂಟುಗಳಲ್ಲಿ ನೋವು, ಸಂಧಿವಾತ, ಮೂತ್ರಪಿಂಡದಲ್ಲಿ ಕಲ್ಲು ಮುಂತಾದ ಸಮಸ್ಯೆಗಳಿಗೆ ಎಡೆಯಾಗುತ್ತದೆ. ಹಾಗಾಗಿ ದೇಹ ಆರೋಗ್ಯವಾಗಿರಬೇಕೆಂದರೆ ಶರೀರದಲ್ಲಿ ತ್ಯಾಜ್ಯ ಉಳಿಯಬಾರದು. ನೈಸರ್ಗಿಕವಾಗಿ ಯೂರಿಕ್ ಆಮ್ಲ ಕಡಿಮೆ ಮಾಡುವಂಥ ಕೆಲವು ಕ್ರಮಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಪ್ಯೂರಿನ್‌ಯುಕ್ತ ಆಹಾರ ಕಡಿಮೆ ಮಾಡಿ
ಕೆಂಬಣ್ಣದ ಮಾಂಸ, ಶೆಲ್ ಫಿಶ್‌ನಂಥ ಮೀನುಗಳು, ಚಿಕನ್, ಅಂಗಾಂಗಗಳ ಮಾಂಸ ಇತ್ಯಾದಿಗಳಲ್ಲಿ ಪ್ಯೂರಿನ್ ಅಂಶ ಅತಿ ಹೆಚ್ಚು. ಇವುಗಳ ವಿಘಟನೆಯಲ್ಲಿ ಹೆಚ್ಚಿನ ಪ್ರಮಾಣದ ಯೂರಿಕ್ ಆಮ್ಲ ಬಿಡುಗಡೆಯಾಗುತ್ತದೆ. ಹಾಗಾಗಿ ಪ್ಯೂರಿನ್ ಹೆಚ್ಚಿರುವಂಥ ಯಾವುದೇ ಆಹಾರಗಳಿಂದ ದೂರ ಇರಿ ಅಥವಾ ಕಡಿಮೆ ಮಾಡಿ.
ಸಕ್ಕರೆಯೂ ಕಷ್ಟ
ಇದೀಗ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಸಮಸ್ಯೆಗಳನ್ನು ತರುವಂಥ ಆಹಾರಗಳಿವು. ಸಕ್ಕರೆಯಲ್ಲಿರುವಂಥ ಫ್ರಕ್ಟೋಸ್ ಅಂಶ ವಿಘಟನೆಯಾಗುವಾಗ ಪ್ಯೂರಿನ್‌ಗಳು ಬಿಡುಗಡೆಯಾಗುತ್ತವೆ. ಆ ಪ್ಯೂರಿನ್‌ಗಳು… ಮತ್ತದೇ ಚಕ್ರ! ಅತ್ಯಂತ ಸಿಹಿಯಾದ ಹಣ್ಣುಗಳ ಮೇಲೂ ವೈದ್ಯರು ನಿರ್ಬಂಧ ಹೇರಬಹುದು. ಸಕ್ಕರೆಭರಿತ ಪಾನೀಯಗಳು, ಸೋಡಾ, ಸಿಹಿ ತಿಂಡಿಗಳ ಮೇಲೆ ಸ್ವಲ್ಪ ನಿಯಂತ್ರಣವಿದ್ದರೆ ಯೂರಿಕ್ ಆಮ್ಲದ ಸಮಸ್ಯೆಯನ್ನು ತಹಬಂದಿಗೆ ತರುವುದು ಸುಲಭವಾಗುತ್ತದೆ
ಆಲ್ಕೋಹಾಲ್… ಬೇಡ!
ಆಲ್ಕೋಹಾಲ್ ಸೇವನೆಯಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು ಸಹಜ ವಿದ್ಯಮಾನ. ಅದರಲ್ಲೂ ಬಿಯರ್‌ನಂಥವು ಹೆಚ್ಚಿನ ಪ್ರಮಾಣದ ಪ್ಯೂರಿನ್‌ಗಳನ್ನು ಹೊಂದಿದ್ದು, ಯೂರಿಕ್ ಆಮ್ಲ ಹೆಚ್ಚಾಗಲು ತಮ್ಮ ಯಥೇಚ್ಛ ಕೊಡುಗೆಯನ್ನು ನೀಡುತ್ತವೆ. ಇದಲ್ಲದೆ, ನ್ಯೂಕ್ಲಿಯೊಟೈಡ್ಸ್ ಗಳು ಪಚನವಾಗುವುದನ್ನು ಮದ್ಯ ನಿಧಾನ ಮಾಡುತ್ತದೆ. ಈ ನ್ಯೂಕ್ಲಿಯೋಟೈಡ್‌ಗಳು ದೇಹದಲ್ಲಿ ಉಳಿದರೆ ಯೂರಿಕ್ ಆಮ್ಲವಾಗಿ ಪರಿವರ್ತನೆ ಹೊಂದುತ್ತವೆ.
ಮಧುಮೇಹ ನಿಯಂತ್ರಣದಲ್ಲಿರಲಿ
ದೇಹದಲ್ಲಿ ಇನ್ಸುಲಿನ್ ಪ್ರತಿರೋಧವಿದ್ದರೆ ಅದು ಸಹ ಯೂರಿಕ್ ಆಮ್ಲದ ಸಾಂದ್ರತೆ ಹೆಚ್ಚುವುದಕ್ಕೆ ಕಾರಣವಾಗುತ್ತದೆ. ಹಾಗಾಗಿ ಮಧುಮೇಹ ನಿಯಂತ್ರಣದಲ್ಲಿ ಇಲ್ಲದಿದ್ದರೆ, ಉಳಿದೆಲ್ಲಾ ಸಮಸ್ಯೆಗಳ ಜೊತೆಗೆ ಯೂರಿಕ್ ಆಮ್ಲಕ್ಕೆ ಸಂಬಂಧಿಸಿದ ತೊಂದರೆಗಳೂ ಗಂಟುಬೀಳುತ್ತವೆ.
ನಾರಿನಂಶ ಹೆಚ್ಚು ಬೇಕು
ಈವರೆಗೆ ಯಾವುದು ಬೇಡ ಎನ್ನುವದನ್ನೇ ನೋಡುತ್ತಾ ಬಂದಾಯಿತು. ಇದೀಗ ಯಾವುದು ಬೇಕು ಎಂಬುದೂ ತಿಳಿಯಬೇಕಲ್ಲ. ನಾರಿನಂಶ ಹೇರಳವಾಗಿರುವ ಆಹಾರಗಳ ಸೇವನೆ ಲಾಭದಾಯಕ. ಇವು ದೀರ್ಘಕಾಲದವರೆಗೆ ಹೊಟ್ಟೆ ತುಂಬಿಸಿಟ್ಟು, ಹಸಿವನ್ನು ಕಡಿಮೆ ಮಾಡುತ್ತವೆ. ಜೊತೆಗೆ ದೇಹದಿಂದ ತ್ಯಾಜ್ಯವನ್ನೂ ನಿವಾರಿಸುತ್ತವೆ. ಇದರಿಂದ ಯೂರಿಕ್ ಆಮ್ಲದ ಅಂಶ ಶರೀರದಲ್ಲಿ ಕಡಿಮೆಯಾಗುತ್ತದೆ
ತ್ರಿಫಲ
ನೆಲ್ಲಿಕಾಯಿ, ತಾರೆಕಾಯಿ ಮತ್ತು ಅಳಲೆಕಾಯಿ ಅಥವಾ ಆಮಲಕಿ, ವಿಭೀತಕಿ ಮತ್ತು ಹರೀತಕಿ ಎಂಬ ಮೂರು ಫಲಗಳ ಮಿಶ್ರಣವಿದು. ದೇಹದ ಚಯಾಪಚಯ ಹೆಚ್ಚಿಸಿ, ತ್ಯಾಜ್ಯವನ್ನು ಹೊರಗೆಸೆಯುವಲ್ಲಿ ತ್ರಿಫಲದ ಸಾಮರ್ಥ್ಯ ಅನನ್ಯ. ಇದಲ್ಲದೆ, ಅಮೃತಬಳ್ಳಿ, ಬೇವು ಮುಂತಾದ ಮೂಲಿಕೆಗಳ ಕೂಡಾ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡುವಲ್ಲಿ ಉಪಯುಕ್ತ ಎನಿಸಿವೆ.
ನೀರು ಬೇಕು
ದೇಹದಲ್ಲಿನ ಎಲ್ಲಾ ತ್ಯಾಜ್ಯಗಳನ್ನು ಹೊರಹಾಕುವಲ್ಲಿ ನೀರು ಮಹತ್ವದ ಪಾತ್ರ ವಹಿಸುತ್ತದೆ. ದೇಹಕ್ಕೆ ಸಾಕಷ್ಟು ನೀರು ದೊರೆಯುವುದರಿಂದ ಮೂತ್ರಪಿಂಡಗಳ ಕೆಲಸವೂ ಸುಗಮವಾಗುತ್ತದೆ. ತ್ಯಾಜ್ಯವೂ ಹೊರಹೋಗುತ್ತದೆ.
ಇದನ್ನೂ ಓದಿ: Health Tips: ಶೀತ, ನೆಗಡಿಯಾದಾಗ ಈ ಎಲ್ಲ ಹಣ್ಣುಗಳಿಂದ ದೂರವಿರುವುದು ಒಳ್ಳೆಯದು!