Site icon Vistara News

Vitamin A: ವಿಟಮಿನ್‌ ಎ ಕೊರತೆಯಾದರೆ ಏನಾಗುತ್ತದೆ?

Vitamin A

ನಮ್ಮ ದೇಹ ಸರಿಯಾಗಿ ಕೆಲಸ ಮಾಡುವುದಕ್ಕೆ ಹಲವಾರು ಜೀವಸತ್ವಗಳು ಅಗತ್ಯ ಪ್ರಮಾಣದಲ್ಲಿ ಶರೀರಕ್ಕೆ ದೊರೆಯಬೇಕು. ಅವುಗಳಲ್ಲಿ ವಿಟಮಿನ್‌ ಎ ಸಹ ಒಂದು. ಇದು ದೃಷ್ಟಿ ಚುರುಕಾಗಿ ಇರುವುದಕ್ಕೆ, ಪ್ರತಿರೋಧಕ ಶಕ್ತಿಗೆ ಮತ್ತು ಚರ್ಮ, ಕೂದಲುಗಳ ಆರೋಗ್ಯಕ್ಕೆ ಅಗತ್ಯ. ಮಾತ್ರವಲ್ಲ, ಶ್ವಾಸಕೋಶಗಳು, ಯಕೃತ್‌, ಕರುಳು ಮತ್ತು ಮೂತ್ರನಾಳಗಳ ಒಳಪದರವನ್ನು ಸರಿಯಾಗಿಡುವುದಕ್ಕೆ ಎ ಜೀವಸತ್ವ ಬೇಕು. ಒಂದೊಮ್ಮೆ ವಿಟಮಿನ್‌ ಎ (Vitamin A) ಕೊರತೆಯಾದರೆ ಏನಾಗುತ್ತದೆ? ಕೊರತೆಯ ಲಕ್ಷಣಗಳೇನು? ಎ ಜೀವಸತ್ವವನ್ನು ನೇರವಾಗಿ ಪಡೆಯುವುದಕ್ಕಾಗದು ನಮಗೆ. ಇದನ್ನು ಹೊಂದಿರುವ ಆಹಾರಗಳನ್ನು ತೆಗೆದುಕೊಳ್ಳಬೇಕು ನಾವು. ಕೋಶಗಳ ಬೆಳವಣಿಗೆಯಲ್ಲಿ, ಚಯಾಪಚಯ ಸರಿಯಾಗಿರುವುದಕ್ಕೆ, ರೊಗನಿರೋಧಕ ಶಕ್ತಿಗೆ ಬಲ ತುಂಬಲು ಮತ್ತು ಪ್ರಜನನ ವ್ಯವಸ್ಥೆ ಸರಿಯಾಗಿರುವುದಕ್ಕೆ ವಿಟಮಿನ್‌ ಎ ಸಮರ್ಪಕವಾಗಿ ದೊರೆಯುವುದು ಮುಖ್ಯ. ಕಣ್ಣಿಗೆ ಸಾಕಷ್ಟು ತೇವ ಒದಗಿಸಿಕೊಡುವಂಥ ಸಣ್ಣ ಕೆಲಸವೂ ಮುಖ್ಯವೇ. ಈ ಸಣ್ಣ ಕೆಲಸಗಳು ಸರಿಯಾಗಿ ನಡೆಯದಿದ್ದರೆ, ದೃಷ್ಟಿ ಮಾಂದ್ಯತೆ ಕಾಡಬಹುದು.

ಮಹತ್ವವೇನು?

ಇರುಳುಗಣ್ಣು ಅಥವಾ ರಾತ್ರಿ ಕುರುಡಿಗೆ ಇರುವಂಥ ಕಾರಣಗಳಲ್ಲಿ ವಿಟಮಿನ್‌ ಎ ಕೊರತೆಯೂ ಒಂದು. ರೆಟಿನಾ ಆರೋಗ್ಯ ಚೆನ್ನಾಗಿರುವಲ್ಲಿ ಎ ಜೀವಸತ್ವ ಬಹಳಷ್ಟು ಶ್ರಮಿಸುತ್ತದೆ. ಕಣ್ಣುಗಳ ತೇವವನ್ನು ಕಾಪಾಡುವುದರ ಜೊತೆಗೆ, ದೃಷ್ಟಿ ಚುರುಕಾಗಿರುವುದಕ್ಕೆ ಬೇಕಾದ ಪಿಗ್ಮೆಂಟ್‌ಗಳ ಉತ್ಪತ್ತಿಗೂ ಎ ಜೀವಸತ್ವ ಬೇಕು. ನಮ್ಮ ಶ್ವಾಸಕೋಶ, ಯಕೃತ್‌, ಸಣ್ಣ ಮತ್ತು ದೊಡ್ಡ ಕರುಳುಗಳು ಹಾಗೂ ಮೂತ್ರನಾಳಗಳ ಒಳ ಪದರಗಳು ಚೆನ್ನಾಗಿದ್ದರಷ್ಟೇ ಈ ಅಂಗಗಳು ಸರಿಯಾಗಿ ಕೆಲಸ ಮಾಡಬಲ್ಲವು. ಇ ಅಂಗಗಳ ಒಳಪದರವನ್ನು ಸಮರ್ಪಕವಾಗಿ ಇಡುವಲ್ಲಿ ವಿಟಮಿನ್‌ ಎ ಗೆ ಕೆಲಸವಿದೆ. ಚರ್ಮಕ್ಕೆ ಬೇಕಾದ ಪೋಷಣೆಯನ್ನು ಒದಗಿಸುವುದಕ್ಕೆ ಎ ಜೀವಸತ್ವ ಅಗತ್ಯ. ತ್ವಚೆಗೆ ಅಗತ್ಯವಾದ ಕೊಲಾಜಿನ್‌ ಉತ್ಪಾದನೆಗೆ ಪ್ರಚೋದನೆ ನೀಡುವುದೇ ಅಲ್ಲದೆ, ಚರ್ಮದ ಸ್ವಾಸ್ಥ್ಯ ಕಾಪಾಡುತ್ತದೆ. ತ್ವಚೆಯ ಮೇಲಿನ ಸೂಕ್ಷ್ಮ ಸುಕ್ಕುಗಳನ್ನು ಹೋಗಲಾಡಿಸಿ, ಹೊಳಪು, ತಾರುಣ್ಯ ಮರಳಿಸುತ್ತದೆ. ಕೂದಲಿನ ದೇಖರೇಖಿಯಲ್ಲಿ ವಿಟಮಿನ್‌ ಎ ಬಹಳಷ್ಟು ಉಪಕಾರ ಮಾಡಬಲ್ಲದು. ಹಾಗಾಗಿ ಸೌಂದರ್ಯ ಕ್ಷೇತ್ರದಲ್ಲೂ ವಿಟಮಿನ್‌ ಎ ಸಾಕಷ್ಟು ಮಹತ್ವ ಗಳಿಸಿದಂಥ ಪೋಷಕಸತ್ವ. ಹಲವು ರೀತಿಯ ಕ್ಯಾನ್ಸರ್‌ಗಳ ವಿರುದ್ಧ ಇದು ರಕ್ಷಾಕವಚವನ್ನು ನಿರ್ಮಿಸಬಲ್ಲದು. ಎ ಜೀವಸತ್ವದ ವಿವಿಧ ರೂಪಗಳಾದ ರೆಟಿನಾಲ್‌, ಕೆರೋಟಿನಾಯ್ಡ್‌, ಬೀಟಾ ಕ್ಯಾರೊಟಿನ್‌ನಂಥ ಅಂಶಗಳನ್ನು ಉತ್ಕರ್ಷಣ ನಿರೋಧಕಗಳೆಂದು ಕರೆಯಲಾಗುತ್ತದೆ. ಇವು ದೇಹವನ್ನು ಉರಿಯೂತದಿಂದ ರಕ್ಷಿಸುವುದೇ ಅಲ್ಲದೆ, ಕ್ಯಾನ್ಸರ್‌ನಂಥ ಮಾರಕ ರೋಗಗಳಿಂದ ಶರೀರವನ್ನು ಕಾಪಾಡಬಲ್ಲ ಸಾಮರ್ಥ್ಯ ಹೊಂದಿವೆ.

ಕೊರತೆಯ ಲಕ್ಷಣಗಳೇನು?

ಕೂದಲು ಉದುರುವುದು, ಚರ್ಮದ ತೊಂದರೆಗಳು ಶೀಘ್ರವಾಗಿ ಗಮನಕ್ಕೆ ಬರುವಂಥವು. ತೇವ ಕಳೆದುಕೊಂಡಿದ್ದರಿಂದ ಚರ್ಮದಲ್ಲಿ ತುರಿಕೆ, ಶುಷ್ಕತೆ ಸಾಮಾನ್ಯ. ಮಕ್ಕಳಲ್ಲಿ ವಿಟಮಿನ್‌ ಎ ಕೊರತೆ ಇದ್ದರೆ ಬೆಳವಣಿಗೆ ಕುಂಠಿತವಾಗಬಹುದು. ಮಾನಸಿಕ ಬೆಳವಣಿಗೆಗೂ ಅಡಚಣೆಯಾಗಬಹುದು. ಸಂತಾನೋತ್ಪತ್ತಿಯಲ್ಲಿ ತೊಂದರೆಯಾಗಬಹುದು. ದೃಷ್ಟಿಯ ಸಮಸ್ಯೆಗಳು ಕಾಣಬಹುದು. ಶ್ವಾಸನಾಳಕ್ಕೆ ಪದೇಪದೆ ಸೋಂಕು ಉಂಟಾಗಬಹುದು.

ಸರಿಪಡಿಸಬಹುದೇ?

ಹೌದು, ವಿಟಮಿನ್‌ ಎ ಕೊರತೆಯನ್ನು ಸರಿಪಡಿಸಬಹುದು. ಒಂದೊಮ್ಮೆ ಕೊರತೆಯ ಲಕ್ಷಣಗಳು ತೀವ್ರವಾಗಿದ್ದರೆ, ವೈದ್ಯರು ಮೊದಲಿಗೆ ಪೂರಕಗಳ ಸೇವನೆಗೆ ಸೂಚಿಸುತ್ತಾರೆ. ನಂತರ ಅದನ್ನು ಸಮತೋಲಿತ ಆಹಾರದ ಮೂಲಕವೇ ಕಾಪಾಡಿಕೊಳ್ಳಬಹುದು. ಹಾಗೆಂದು ವೈದ್ಯರ ಸೂಚನೆಯಿಲ್ಲದೇ ಪೂರಕಗಳ ಸೇವನೆ ಸೂಕ್ತವಲ್ಲ. ಇಂಥ ಯಾವುದೇ ಸತ್ವಗಳು ದೇಹದಲ್ಲಿ ಅಗತ್ಯಕ್ಕಿಂತ ಅತಿಯಾಗಿ ಸೇರಿದರೂ ಸಮಸ್ಯೆಗಳನ್ನು ಸೃಷ್ಟಿಸುತ್ತವೆ.

ಇದನ್ನೂ ಓದಿ: Benefits of Poppy Seeds: ಗಸೆಗಸೆ ನಿದ್ದೆಗಷ್ಟೇ ಅಲ್ಲ, ಪೌಷ್ಟಿಕಾಂಶಗಳ ಆಗರವೂ ಹೌದು!

ಯಾವೆಲ್ಲ ಆಹಾರಗಳು?

ಕುಂಬಳಕಾಯಿ, ಕ್ಯಾರೆಟ್‌, ಗೆಣಸು, ಕೆಂಪು ಕ್ಯಾಪ್ಸಿಕಂ, ಪಾಲಕ್‌ನಂಥ ಸೊಪ್ಪುಗಳು, ಏಪ್ರಿಕಾಟ್‌, ಮಾವಿನ ಹಣ್ಣು, ಕಿತ್ತಳೆ ಹಣ್ಣು, ಪಪ್ಪಾಯಿ, ಕಲ್ಲಂಗಡಿ ಮುಂತಾದ ಹಣ್ಣು-ತರಕಾರಿಗಳಿಂದ ದೊರೆಯುತ್ತವೆ. ರೆಟಿನಾಲ್‌, ಕೆರೋಟಿನಾಯ್ಡ್‌, ಬೀಟಾ ಕ್ಯಾರೊಟಿನ್‌ನಂಥ ಅಂಶಗಳಿರುವ ಎಲ್ಲ ಹಣ್ಣು-ತರಕಾರಿಗಳು ದೇಹಕ್ಕೆ ವಿಟಮಿನ್‌ ಎ ಪೂರೈಕೆ ಮಾಡುತ್ತವೆ. ಮುಖ್ಯವಾಗಿ ಹಳದಿ, ತಿಳಿ ಹಸಿರು ಮತ್ತು ಕಿತ್ತಳೆಬಣ್ಣದ ಆಹಾರಗಳಲ್ಲಿ ಎ ಜೀವಸತ್ವ ಹೇರಳವಾಗಿ ದೊರೆಯುತ್ತದೆ.

Exit mobile version