Site icon Vistara News

Vitamin C Foods: ವಿಟಮಿನ್‌ ಸಿ ಪಡೆಯಲು ಕಿತ್ತಳೆ, ನಿಂಬೆ, ನೆಲ್ಲಿಕಾಯಿಯೇ ಆಗಬೇಕಿಲ್ಲ, ಇವುಗಳಲ್ಲೂ ಇದೆ!

vitamin c foods

ದೇಹ ಸರಿಯಾಗಿ ಕೆಲಸ ಮಾಡಲು ಬೇಕಾಗುವ ಪೋಷಕಾಂಶಗಳ ಪೈಕಿ ವಿಟಮಿನ್‌ ಸಿ (vitamin c) ಕೂಡಾ ಬಹಳ ಮುಖ್ಯ. ಈ ವಿಟಮಿನ್‌ ಸಿಯಿಂದ ದೇಹಕ್ಕೆ ಹಲವು ಲಾಭಗಳಿವೆ. ಇದು ಅತ್ಯಂತ ಬಲಿಷ್ಠ ಆಂಟಿ ಆಕ್ಸಿಡೆಂಟ್‌ (anti oxidants) ಆಗಿದ್ದು, ಹಲವು ರೋಗಗಳನ್ನು ಬರದಂತೆ ದೇಹವನ್ನು ರಕ್ಷಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು (immunity) ಹೆಚ್ಚಿಸುತ್ತದೆ. ಚರ್ಮವನ್ನು ಹೊಳಪಿನಿಂದ ಕಂಗೊಳಿಸುವಂತೆ ಮಾಡುತ್ತದೆ. ಕಿತ್ತಳೆ (orange) ಸೇರಿದಂತೆ ಸಿಟ್ರಸ್‌ ಹಣ್ಣುಗಳು (citrus fruits) ವಿಟಮಿನ್‌ ಸಿ ಹೇರಳವಾಗಿ ಹೊಂದಿರುವಂಥವುಗಳು ಎಂಬುದು ಸಾಮಾನ್ಯವಾಗಿ ಬಹುತೇಕ ಎಲ್ಲರಿಗೂ ತಿಳಿದಿರುವಂಥದ್ದೇ. ಪ್ರತಿ ಪುರುಷರಿಗೆ ದಿನವೊಂದಕ್ಕೆ 90 ಮಿಲಿಗ್ರಾಂ ಹಾಗೂ ಮಹಿಳೆಯರಿಗೆ 75 ಮಿಲಿಗ್ರಾಂಗಳಷ್ಟು ಸಿ ವಿಟಮಿನ್‌ನ ಅವಶ್ಯಕತೆ ಇದೆ. ಒಂದು ಸಾಧಾರಣ ಗಾತ್ರದ ಕಿತ್ತಳೆಯಲ್ಲಿ 70 ಮಿಲಿಗ್ರಾಂಗಳಷ್ಟು ಸಿ ವಿಟಮಿನ್‌ ಇದೆ. ಹಾಗಾದರೆ, ಸಿಟ್ರಸ್‌ ಹಣ್ಣುಗಳನ್ನು ಹೊರತುಪಡಿಸಿದರೆ ಯಾವೆಲ್ಲ ಮೂಲಗಳಲ್ಲಿ (vitamin c foods) ಈ ಹಣ್ಣುಗಳಷ್ಟೇ ಸಿ ವಿಟಮಿನ್‌ ಅನ್ನು ಪಡೆಯಬಹುದು ಎಂಬುದನ್ನು ನೋಡೋಣ.

1. ಕಿವಿ: ಕಿವಿ ಹಣ್ಣಿನಲ್ಲೂ ಹೇರಳವಾಗಿ ವಿಟಮಿನ್‌ ಸಿ ಇದೆ. ಎರಡು ಕಿವಿ ಹಣ್ಣು ತಿಂದರೆ 137 ಮಿಲಿಗ್ರಾಂಗಳಷ್ಟು ವಿಟಮಿನ್‌ ಸಿ ದೊರೆಯುತ್ತದೆ. ಅಷ್ಟೇ ಅಲ್ಲ, ಕಿವಿಯಲ್ಲಿ ನಾರಿನಂಶ ಹೇರಳವಾಗಿದ್ದು, ಜೀರ್ಣಕ್ರಿಯೆ ಸಂಬಂಧೀ ಸಮಸ್ಯೆಗಳೂ ಕೂಡಾ ಇದರಿಂದ ದೂರವಾಗುತ್ತದೆ. ಹೃದಯದ ಆರೋಗ್ಯ ಹಾಗೂ ರಕ್ತದೊತ್ತಡಕ್ಕೂ ಇದು ಬಹಳ ಒಳ್ಳೆಯದು.

2. ಪಪ್ಪಾಯಿ: ಪಪ್ಪಾಯಿಯಲ್ಲಿ ಹಲವಾರು ಪೋಷಕಾಂಶಗಳು ಸಮೃದ್ಧವಾಗಿವೆ. ಇದು ಆಂಟಿ ಆಕ್ಸಿಡೆಂಟ್‌ಗಳಿಂದ ಭರಪೂರವಾಗಿ ತುಂಬಿದ್ದು ಹಲವು ರೋಗಗಳಿಂದ ನಮ್ಮನ್ನು ಕಾಪಾಡುತ್ತದೆ. ಒಂದು ಕಪ್‌ ಪಪ್ಪಾಯಿಯಲ್ಲಿ ೮೮ ಮಿಲಿಗ್ರಾಂಗಳಷ್ಟು ವಿಟಮಿನ್‌ ಸಿ ಇದೆಯಂತೆ.

3. ಪೇರಳೆ (ಸೀಬೆ): ಸೀಬೆ ಹಣ್ಣು ಕೂಡಾ ತನ್ನಲ್ಲಿ ಬಗೆಬಗೆಯ ಪೋಷಕಾಂಶಗಳನ್ನು ಇಟ್ಟುಕೊಂಡಿರುವ ಒಂದು ಸಮೃದ್ಧ ಹಣ್ಣು. ಒಂದೇ ಒಂದು ಸೀಬೆ ಹಣ್ಣಿನಲ್ಲಿ 126 ಮಿಲಿಗ್ರಾಂಗಳಷ್ಟು ವಿಟಮಿನ್‌ ಸಿ ಇದೆಯಂತೆ. ಹಾಗಾಗಿ ದಿನದಲ್ಲಿ ಒಂದು ಸೀಬೆಹಣ್ಣು ತಿಂದರೂ, ಆ ದಿನದ ವಿಟಮಿನ್‌ ಸಿಯ ಪಾಲನ್ನು ನಾವು ದೇಹಕ್ಕೆ ನೀಡಿದಂತಾಗುತ್ತದೆ. ಅಷ್ಟೇ ಅಲ್ಲ, ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಇರುವ ಮಂದಿಯೂ ಕೂಡಾ ಸಕ್ಕರೆಯ ಮಟ್ಟ ಏರಿಕೆಯಾಗುವ ಭಯವಿಲ್ಲದೆ ಇದನ್ನು ತಿನ್ನಬಹುದು. ಹೃದಯದ ಸಮಸ್ಯೆಯಿರುವ ಮಂದಿಯೂ ಕೂಡಾ, ಭಯವಿಲ್ಲದೆ ತಿನ್ನಬಹುದಾದ ಹಣ್ಣಿದು. ತೂಕ ಇಳಿಕೆಗೆ, ಜೀರ್ಣಕ್ರಿಯೆ ವೃದ್ಧಿಗೂ ಇದು ಸಹಕಾರಿ.

ಇದನ್ನೂ ಓದಿ: Vitamin B12: ವಿಟಮಿನ್‌ ಬಿ12 ಬಗ್ಗೆ ಈ ಸಂಗತಿ ತಿಳಿದಿರಲಿ

4. ಅನನಾಸು: ಅನನಾಸಿನಲ್ಲಿ ಜೀರ್ಣಕಾರಿ ಕಿಣ್ವಗಳಿದ್ದು, ಇದು ಜೀರ್ಣಕ್ರಿಯೆಯನ್ನು ಚುರುಕಾಗಿಸುವುದಷ್ಟೇ ಅಲ್ಲ, ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ವಿಟಮಿನ್‌ ಬಿ6, ಪೊಟಾಶಿಯಂ, ಕಾಪರ್‌, ಹಾಗೂ ಥೈಮೀನ್‌ಗಳಿಂದ ಇದು ಸಮೃದ್ಧವಾಗಿದೆ. ಒಂದು ಕಪ್‌ ಕತ್ತರಿಸಿದ ಅನನಾಸಿನ ತುಂಡುಗಳಲ್ಲಿ 79 ಮಿಲಿಗ್ರಾಂ ವಿಟಮಿನ್‌ ಸಿ ಇದೆಯಂತೆ.

5. ದೊಣ್ಣೆ ಮೆಣಸು: ದೊಣ್ಣೆ ಮೆಣಸು ಅಥವಾ ಕ್ಯಾಪ್ಸಿಕಂ ವಿಟಮಿನ್‌ ಸಿ ಹೇರಳವಾಗಿರುವ ತರಕಾರಿ. ಸಾಮಾನ್ಯ ಗಾತ್ರದ ಕೆಂಪು ಬಣ್ಣದ ದೊಣ್ಣೆ ಮೆಣಸಿನಲ್ಲಿ 152 ಮಿಲಿ ಗ್ರಾಂಗಳಷ್ಟು ವಿಟಮಿನ್‌ ಸಿ ಇದೆಯಂತೆ. ಹಾಗಾಗಿ, ಆಗಾಗ ಈ ಕ್ಯಾಪ್ಸಿಕಂಗಳನ್ನೂ ನಿಮ್ಮ ಆಹಾರದಲ್ಲಿ ಸೇರಿಸಿ.

ಇದನ್ನೂ ಓದಿ: Vitamin D: ದೇಹಕ್ಕೆ ಬೇಕಾದ ವಿಟಮಿನ್‌ ಡಿ ಪಡೆಯುವುದು ಹೇಗೆ?

Exit mobile version