ಮನುಕುಲಕ್ಕೆ ಉಗುರುಗಳ ಬಗೆಗಿನ ಮೋಹ ಈ ಕಾಲದ್ದಲ್ಲ. ರಾಮಾಯಣದ ದಿನಗಳಿಂದಲೂ ಉಗುರುಗಳ ಬಗ್ಗೆ ವಿಶೇಷ ಕಾಳಜಿಯುಳ್ಳವರು ಇದ್ದರೆಂದರೆ ತಪ್ಪಲ್ಲ. ತನ್ನ ಉಗುರುಗಳಿಂದಲೇ ಗುರುತಿಸಿಕೊಂಡಿದ್ದ ಶೂರ್ಪನಖಿಯನ್ನೊಮ್ಮೆ ಕೇಳಿ ನೋಡಿ. ಅಷ್ಟೊಂದು ಅಗಲವಾಗಿ ಉಗುರುಗಳನ್ನು ಬೆಳೆಸಿಕೊಳ್ಳುವುದಕ್ಕೆ ಆಕೆ ಹಾಕುತ್ತಿದ್ದ ನೀರು-ಗೊಬ್ಬರ ಏನೆಂಬುದು ನಮಗೀಗ ತಿಳಿಯದಿದ್ದರೂ ಒಂದಿಷ್ಟು ಕಾಳಜಿಯನ್ನಂತೂ ಆಕೆ ಮಾಡುತ್ತಿದ್ದಿರಬೇಕು. ಉಗುರುಗಳು ಆರೋಗ್ಯದ ಸೂಚಕ ಎನ್ನುತ್ತಾರೆ ಆರೋಗ್ಯ ತಜ್ಞರು. ಆದರೆ ಅವು ಸೊಬಗಿನ ಸೂಚಕವೂ ಹೌದೆನ್ನುತ್ತಾರೆ ಸೌಂದರ್ಯ ತಜ್ಞರು. ತಿಳಿ ಗುಲಾಬಿ ಬಣ್ಣದ ಕುಂದಿಲ್ಲದ ನಖಗಳು ಯಾವುದೇ ಕರಗಳಿಗೆ ಒಪ್ಪುವಂಥವು. ಉದ್ದನೆಯ ಉಗುರುಗಳು (Home remedies for long nails) ಇಷ್ಟವೆಂದಾದರೆ, ಅವುಗಳ ಎಡೆಯಲ್ಲಿ ಕಪ್ಪಾಗದಂತೆ, ಕೊಳೆ ಜಮೆಯಾಗದಂತೆ, ಉಗುರು ದುರ್ಬಲವಾಗಿ ಮುರಿಯದಂತೆ ಕಾಳಜಿ ಮಾಡಬೇಕಲ್ಲ.
ಅದಕ್ಕಾಗಿ ಮಾರುಕಟ್ಟೆಯಲ್ಲಿ ದೊರೆಯುವ ದುಬಾರಿ ಬೆಲೆಯ ವಸ್ತುಗಳನ್ನು, ಪ್ರಸಾದನಗಳನ್ನು ನೆಚ್ಚಿಕೊಳ್ಳಬೇಕೆಂದಿಲ್ಲ. ಕೃತಕ ಉಗುರುಗಳನ್ನು ಅಂಟಿಸಿಕೊಂಡು ಸುಳ್ಳೇ ತೃಪ್ತಿ ಪಡಬೇಕಾಗಿಯೂ ಇಲ್ಲ. ಬ್ಯೂಟಿ ಪಾರ್ಲರ್‌ಗೆ ಹೋಗಿ ಸಾವಿರಾರು ರೂಪಾಯಿ ವ್ಯಯಿಸಬೇಕೆಂದಿಲ್ಲ. ಹಾಗಾದರೆ ಸುಂದರವಾದ ನೀಳ ಉಗುರುಗಳನ್ನು ಹೊಂದುವ ಬಗೆಯೆಂತು? ಉಗುರಿನಿಂದ ಆಗುವ ಕೆಲಸಕ್ಕೆ ಕೊಡಲಿ ಬೇಕಂತಿಲ್ಲ! ನಖಗಳ ಆರೈಕೆಯನ್ನು ನೀವೇ ಮನೆಯಲ್ಲಿ ಮಾಡಿಕೊಳ್ಳಬಹುದು. ಕೆಲವು ಸರಳ ಉಪಾಯಗಳಿಂದ ಉಗುರುಗಳು ತ್ವರಿತವಾಗಿ ಬೆಳೆಯುವಂತೆ, ಮುರಿಯದಂತೆ ಸದೃಢವಾಗಿರುವಂತೆ ಮಾಡಬಹುದು. ಇದಕ್ಕಾಗಿ ಒಂದಿಷ್ಟು ಮನೆಮದ್ದುಗಳು ಇಲ್ಲಿವೆ.
ಆಲಿವ್ ಎಣ್ಣೆ
ಉಗುರು, ಚರ್ಮ, ಕೂದಲುಗಳ ಆರೋಗ್ಯಕ್ಕೆ ಅಗತ್ಯವಾದ ಬಹಳಷ್ಟು ಪೋಷಕಾಂಶಗಳು ಆಲಿವ್ ಎಣ್ಣೆಯಲ್ಲಿವೆ. ಅವು ಉಗುರುಗಳನ್ನು ಬಲಗೊಳಿಸಿ, ಅಗತ್ಯವಾದ ತೇವವನ್ನು ನೀಡುತ್ತವೆ. ಬಿಸಿ ನೀರಿನ ಪಾತ್ರೆಯಲ್ಲಿ ಆಲಿವ್ ಎಣ್ಣೆಯ ಬಟ್ಟಲನ್ನು ಕೆಲಕಾಲ ಇರಿಸಿ, ಎಣ್ಣೆಯನ್ನು ಬೆಚ್ಚಗೆ ಮಾಡಿ. ಈ ಬೆಚ್ಚಗಿನ ಎಣ್ಣೆಯಲ್ಲಿ ೧೫ ನಿಮಿಷಗಳ ಕಾಲ ಬೆರಳುಗಳನ್ನು ನೆನೆಸಿಡಿ. ಹಲವು ರೀತಿಯ ಸೂಕ್ಷ್ಮ ಪೋಷಕಾಂಶಗಳು, ವಿಟಮಿನ್‌ಗಳು ಮತ್ತು ಉತ್ತಮ ಕೊಬ್ಬಿನಿಂದ ಕೂಡಿದ ಎಣ್ಣೆಯಲ್ಲಿ ಉಗುರುಗಳನ್ನು ನೆನೆಸಿಡುವುದರಿಂದ ನಖಗಳು ಉದ್ದವಾಗಿ ನಳನಳಿಸುತ್ತವೆ. ಆಗ ಶೂರ್ಪನಖ, ಶಾರ್ಪ್-ನಖ ಯಾವುದನ್ನು ಮಾಡಿಕೊಳ್ಳುವುದೂ ಕಷ್ಟವಲ್ಲ.
ನಿಂಬೆ ರಸ
ಪಾನಕ ಮಾಡುವುದಕ್ಕೆ ಮಾತ್ರವೇ ನಿಂಬೆಹಣ್ನಿನ ರಸ ಬಳಕೆಯಾಗುವುದಲ್ಲ. ಅದಕ್ಕೆ ಹಲವು ರೀತಿಯ ಉಪಯೋಗಗಳಿವೆ. ಉಗುರುಗಳ ಸ್ವಾಸ್ಥ್ಯಕ್ಕೂ ನಿಂಬೆ ರಸ ಮದ್ದಿನಂತೆ ಕೆಲಸ ಮಾಡುತ್ತದೆ. ನಿಂಬೆ ರಸದಲ್ಲಿರುವ ಆಮ್ಲೀಯ ಅಂಶವು ನಖಗಳ ಮೇಲಿನ ಕಲೆಗಳನ್ನು ತೆಗೆದು ಶುಚಿ ಮಾಡುತ್ತದೆ. ಉಗುರಿನ ಬೆಳಗಣಿಗೆಗೆ ಪೌಷ್ಟಿಕ ಆಹಾರದ ಮೂಲಕ ಗ್ರಾಸ ಉದಗಿಸಬೇಕಷ್ಟೆ. ಬೆಳವಣಿಗೆಗೆ ಗೊಬ್ಬರ ಬೇಕೆಂಬ ಕಾರಣಕ್ಕೆ ಎಡೆಯಲ್ಲಿನ ಕೊಳೆ ತುಂಬಿಸಿಕೊಂಡರೆ ಉಪಯೋಗವಿಲ್ಲ! ಅಂಥ ಕೊಳೆಗಳನ್ನೆಲ್ಲ ತೆಗೆಯುವುದಕ್ಕೆ ನಿಂಬೆ ರಸ ಸಹಕಾರಿ. ಬೆಚ್ಚಗಿನ ನೀರಿಗೆ ಕೆಲವು ಹನಿ ನಿಂಬೆ ರಸವನ್ನು ಬೆರೆಸಿ, ಅದರಲ್ಲಿ ಬೆರಳುಗಳನ್ನು ನೆನೆಸಿ, ಮೃದುವಾಗಿ ಉಜ್ಜಿ ಕೊಳೆ ತೆಗೆಯಿರಿ.
ಕಿತ್ತಳೆ ಹಣ್ಣು
ನಖಗಳ ರಂಗೇರಿಸುವುದಕ್ಕೆ ಮತ್ತು ತ್ವರಿತ ಬೆಳವಣಿಗೆಗೆ ಕಿತ್ತಳೆಹಣ್ಣನ್ನೂ ಬಳಸಬಹುದು. ತಾಜಾ ಕಿತ್ತಳೆ ರಸ, ಸಿಪ್ಪೆಯ ತುರಿ, ಕೆಲವು ಹನಿ ತೆಂಗಿನ ಎಣ್ಣೆ ಮತ್ತು ಅಲಿವ್ ಎಣ್ಣೆಗಳನ್ನು ಮಿಶ್ರ ಮಾಡಿ. ಇದರಲ್ಲಿ ಬೆರಳ ತುದಿಗಳನ್ನು ೧೦ ನಿಮಿಷಗಳ ಕಾಲ ನೆನೆಸಿ. ನಂತರ ಬೆಚ್ಚಗಿನ ನೀರಿನಲ್ಲಿ ಸೋಪು ಹಾಕದೆ ತೊಳೆಯಿರಿ.
ಬೆಳ್ಳುಳ್ಳಿ
ಹಸಿ ಬೆಳ್ಳುಳ್ಳಿಯ ವಾಸನೆ ಬಹಳ ಮಂದಿಗೆ ಅಸಹನೀಯ. ಹಾಗೆಂದು ಅದನ್ನು ದೂರ ಮಾಡುವ ಹಾಗೆಯೇ ಇಲ್ಲ. ಆರೋಗ್ಯಕ್ಕೆ ಬಹಳಷ್ಟು ರೀತಿಯಲ್ಲಿ ನೆರವಾಗುವ ಬೆಳ್ಳುಳ್ಳಿ, ಉಗುರುಗಳ ಬೆಳವಣಿಗೆಯಲ್ಲೂ ನೆರವಾಗುತ್ತದೆ. ಬೆಳ್ಳುಳ್ಳಿಯನ್ನು ಪೇಸ್ಟ್ ಮಾಡಿ, ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ, ಉಗುರುಗಳಿಗೆ ಮಸಾಜ್ ಮಾಡಿ. ೧೦ ನಿಮಿಷಗಳ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದರಿಂದ ಉಗುರು ಬೆಳೆಯುವುದರ ಜೊತೆಗೆ ಬಲಶಾಲಿಯೂ ಆಗುತ್ತದೆ.
ಆಹಾರಗಳು
ಹೆಚ್ಚು ಬಯೋಟಿನ್ ಇರುವಂಥ ಆಹಾರಗಳು ಉಗುರುಗಳಿಗೆ ಅಗತ್ಯವಿದೆ. ಮೊಟ್ಟೆ, ಬೀಜಗಳು, ಕಾಯಿಗಳು ಮತ್ತು ಬೆಣ್ಣೆ ಹಣ್ಣಿನಲ್ಲಿ ಬಯೋಟಿನ್ ಅಂಶ ಸಾಂದ್ರವಾಗಿದೆ. ಬಯೋಟಿನ್ ಎಂಬುದೊಂದಿ ತೆರನಾದ ಬಿ-ವಿಟಮಿನ್. ಇದು ಉಗುರುಗಳ ಯೋಗಕ್ಷೇಮದ ಹೊಣೆಯನ್ನು ಹೊತ್ತಿರುವಂಥದ್ದು. ಈ ಎಲ್ಲವುಗಳ ಮೂಲಕ ನೀಳ ನಖದವರಾಗಿ ರಾರಾಜಿಸಬಹುದು.
ಇದನ್ನೂ ಓದಿ: Health Care Of Women After Thirty: ಮೂವತ್ತರ ನಂತರ ಮಹಿಳೆಯರ ಆರೋಗ್ಯ ಕಾಳಜಿ ಹೀಗಿರಲಿ