ಮದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲೂ ಅತ್ಯಂತ ಪ್ರಮುಖ ಘಟ್ಟ. ಮಹಿಳೆಯಿರಲಿ, ಪುರುಷನಿರಲಿ, ತನ್ನ ಮದುವೆಯ ದಿನ ಚೆನ್ನಾಗಿ ಕಾಣಬೇಕೆಂಬುದು ಸಾಮಾನ್ಯವಾಗಿ ಪ್ರತಿಯೊಬ್ಬರ ಬಯಕೆ. ಆದರೆ, ಮಹಿಳೆಯರಿಗೆ ಸಹಜವಾಗಿಯೇ ಈ ಬಯಕೆ ಇನ್ನೂ ಹೆಚ್ಚು. ಅದಕ್ಕಾಗಿ, ಬಹಳ ತಿಂಗಳುಗಳ ಮೊದಲಿನಿಂದಲೇ ಅವರ ಪ್ರಯತ್ನ ಸಾಗುತ್ತದೆ. ಚರ್ಮ ಫಳಫಳಿಸುವಂತೆ ಕಾಣಲು ಸಾಕಷ್ಟು ಬಾರಿ ಬ್ಯೂಟಿ ಪಾರ್ಲರ್ ಮೊರೆ ಹೋಗುವುದು ಸಾಮಾನ್ಯ. ಮದುವೆಯ ದಿನ ಮೇಕಪ್‌ಗಾಗಿ ಹೆಚ್ಚು ಗಮನ ನೀಡುವುದೂ ಕೂಡಾ ಸಾಮಾನ್ಯವೇ ಆಗಿದೆ. ಇವೆಲ್ಲವುಗಳ ಪರಿಣಾಮ ಮದುವೆಯ ದಿನ ಕಾಣುವುದು ನಿಜವೇ ಆದರೂ, ಪ್ರತಿಯೊಬ್ಬರೂ ಮದುವೆಗೆ ಮುಂಚೆಯೇ ತಮ್ಮ ಆಹಾರದಲ್ಲಿ (Skin Care Foods) ಮಾರ್ಪಾಡುಗಳನ್ನು ಮಾಡಿಕೊಂಡರೂ ಕೂಡಾ ಅದ್ಭುತವಾಗಿ ಕಂಗೊಳಿಸಬಹುದು.
ಮದುವೆ ಹತ್ತಿರ ಬಂದರೂ ಜಂಕ್ ತಿನ್ನುವುದನ್ನು ಬಿಡದೆ ಇದ್ದರೆ, ಚಿಪ್ಸ್ ಪ್ಯಾಕೆಟ್ ನಿತ್ಯವೂ ಖಾಲಿ ಮಾಡುವುದನ್ನು ಬಿಡದೇ ಇದ್ದರೆ ಖಂಡಿತವಾಗಿಯೂ ಮದುವೆಗೆ ಎರಡು ದಿನ ಮೊದಲು ದೊಡ್ಡದೊಂದು ಮೊಡವೆ ಎದ್ದು ನಿಮ್ಮನ್ನು ಬೇಸರಕ್ಕೆ ದೂಡದೆ ಇರದು. ಇಂಥದ್ದರಿಂದ ದೂರ ಇರಬೇಕಾದರೆ, ನಾವು ತಿನ್ನುವ ಆಹಾರವೇ ನಮ್ಮ ಚರ್ಮದ ಸೌಂದರ್ಯದ ಹಾಗೂ ಆರೋಗ್ಯದ ಗುಟ್ಟಾಗಿರುವುದರಿಂದ, ಚರ್ಮ ತಾಜಾ ಆಗಿ ಫಳಫಳಿಸಲು ಉತ್ತಮ ಆಹಾರ ಸೇವನೆಯೂ ಮುಖ್ಯ. ಬನ್ನಿ, ಚರ್ಮದ ಆರೋಗ್ಯ ಹೆಚ್ಚಿಸುವ ಮೂಲಕ ಒಳಗಿನಿಂದಲೇ ಚರ್ಮವನ್ನು ಆರೋಗ್ಯಯುತವಾಗಿ ಕಂಗೊಳಿಸುವಂತೆ ಮಾಡಲು ಮದುಮಗಳು ಏನೆಲ್ಲ ತಿಂದರೆ ಒಳ್ಳೆಯದು ಎಂಬುದನ್ನು ನೋಡೋಣ.
ಬಸಳೆ
ಬಸಳೆ ಒಂದು ಸೂಪರ್ ಫುಡ್. ಇದರಲ್ಲಿ ವಿಟಮಿನ್ ಎ ಹಾಗೂ ಸಿ ಇರುವುದರಿಂದ ಚರ್ಮದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಬಸಳೆಯನ್ನು ವಾರದಲ್ಲಿ ಎರಡು ಮೂರು ಬಾರಿಯಾದರೂ ಬಳಸಿ, ಸೂಪ್, ಸಲಾಡ್, ಸ್ಮೂದಿ, ಪಲ್ಯಗಳಲ್ಲಿ ಬಳಸಿ. ತಾಜಾ, ನುಣುಪಾದ ಕಂಗೊಳಿಸುವ ಚರ್ಮ ನಿಮ್ಮದಾಗುತ್ತದೆ.
ಸಿಟ್ರಸ್ ಹಣ್ಣುಗಳು
ಹಣ್ಣುಗಳನ್ನು ಯಥೇಚ್ಛವಾಗಿ ಸೇವಿಸಿ. ಮುಖ್ಯವಾಗಿ ಸಿಟ್ರಸ್ ಹಣ್ಣುಗಳನ್ನು ಅಂದರೆ, ಕಿತ್ತಳೆ, ಮುಸಂಬಿ, ಕಿವಿ ಇತ್ಯಾದಿ ಹಣ್ಣುಗಳನ್ನು ತಿನ್ನಿ. ಲೆಮನೇಡ್ ಕುಡಿಯಿರಿ. ಇದರಲ್ಲಿರುವ ಸಿ ವಿಟಮಿನ್ ಚರ್ಮದಲ್ಲಿ ಕೊಲಾಜೆನ್ ಉತ್ಪಾದನೆಯನ್ನು ಪ್ರಚೋದಿಸುತ್ತದೆ. ಚರ್ಮ ಫಳಫಳಿಸುತ್ತದೆ.
ಸಿಹಿ ಕುಂಬಳಕಾಯಿ ಬೀಜ
ಒಣಬೀಜಗಳನ್ನು ಆಹಾರದಲ್ಲಿ ಸೇರಿಸಿ. ಸಲಾಡ್ ಜೊತೆ ಅಲಂಕರಿಸಿ ತಿನ್ನಬಹುದು. ಮುಖ್ಯವಾಗಿ ಸಿಹಿಕುಂಬಳಕಾಯಿ ಬೀಜದಲ್ಲಿ ಝಿಂಕ್ ಹೇರಳವಾಗಿದ್ದು ಇದು ಚರ್ಮವನ್ನು ಹೊಸದಾಗಿ ಕಾಣುವಂತೆ ಮಾಡುತ್ತದೆ. ಹೊಸ ಅಂಗಾಂಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಕೆಫಿನ್ ಬಿಡಿ
ಚಾಕೋಲೇಟ್ ಸಿಕ್ಕಾಪಟ್ಟೆ ತಿನ್ನೋದು, ಚಹಾ ಕಾಫಿ ಕುಡಿಯೋದು ಇತ್ಯಾದಿ ಕೆಫಿನ್‌ಯುಕ್ತ ಆಹಾರಗಳನ್ನು ಬಿಡಿ. ಗ್ರೀನ್ ಟೀ ಸೇವಿಸಿ. ಇದು ದೇಹವನ್ನು ಡಿಟಾಕ್ಸ್ ಮಾಡುವುದರಿಂದ ಚರ್ಮವನ್ನು ಸಹಜವಾಗಿ ಯೌವನದಿಂದ ಹೊಳೆಯುವಂತೆ ಮಾಡುತ್ತದೆ.
ಸಾಲ್ಮನ್
ಮೀನು ಚರ್ಮದ ಆರೋಗ್ಯಕ್ಕೆ ಒಳ್ಳೆಯದು. ಸಾಲ್ಮನ್‌ನಲ್ಲಿ ಒಮೆಗಾ ೩ ಫ್ಯಾಟಿ ಆಸಿಡ್ ಹೇರಳವಾಗಿದ್ದು, ಇದು ಚರ್ಮವನ್ನು ಒಳಗಿನಿಂದಲೇ ಪೋಷಣೆ ಮಾಡುತ್ತದೆ. ಚರ್ಮ ನಯವಾಗಿ, ಸುಕ್ಕುರಹಿತವಾಗಿ ಫಳಫಳನೆ ಹೊಳೆಯುತ್ತದೆ. ಮದುವೆಯ ದಿನ ಒಳಗಿನಿಂದ ಕಾಂತಿ ಇಮ್ಮಡಿಸುವ ಮೂಲಕ ನೀವು ಸೊಗಸಾಗಿ, ಲಕ್ಷಣವಾಗಿ ಕಂಗೊಳಿಸುವಿರಿ.
ಇವೆಲ್ಲವುಗಳ ಜೊತೆಗೆ, ಉತ್ತಮ ಆಹಾರ, ಸೂರ್ಯನ ಬಿಸಿಲಿನಿಂದ ರಕ್ಷಿಸಲು ಎಸ್‌ಪಿಎಫ್ ೫೦+ ಸನ್ ಪ್ರೊಟೆಕ್ಷನ್ ಕ್ರೀಮ್ ಹಚ್ಚಿಕೊಳ್ಳುವುದು, ಮುಖವನ್ನು ಶುಚಿಯಾಗಿ ಇಟ್ಟುಕೊಳ್ಳುವುದು, ಹೆಚ್ಚು ನೀರು ಕುಡಿಯುವುದು, ನಿಯಮಿತ ವ್ಯಾಯಾಮ ಮಾಡುವುದು, ಖುಷಿಯಾಗಿ ಇರುವುದು, ಹೊರಗಿನ ತಿನಿಸುಗಳನ್ನು ತಿನ್ನದೆ, ಮನೆಯ ಆರೋಗ್ಯಪೂರ್ಣ ಆಹಾರಗಳ ಸೇವನೆ, ಎಣ್ಣೆತಿಂಡಿ ಕಡಿಮೆ ಮಾಡುವುದು ಇತ್ಯಾದಿಗಳ ಬಗ್ಗೆಯೂ ಎಚ್ಚರಿಕೆ ವಹಿಸಿ ಪಾಲನೆ ಮಾಡಿದರೆ, ಖಂಡಿತವಾಗಿಯೂ ಸೌಂದರ್ಯ, ಆರೋಗ್ಯ ಎರಡೂ ದ್ವಿಗುಣಗೊಳ್ಳುವುದರಲ್ಲಿ ಯಾವ ಅನುಮಾನವೂ ಇಲ್ಲ!
ಇದನ್ನೂ ಓದಿ: Men’s Health After 40: 40ರ ನಂತರ ಪುರುಷರ ಆರೋಗ್ಯ ಕಾಳಜಿ ಹೀಗಿರಲಿ