ನೀರಿನ ವಿಷಯ ಪ್ರಸ್ತಾಪ (Water for Health) ಆಗುತ್ತಿದ್ದಂತೆ, ದಿನಕ್ಕೆಂಟು ಗ್ಲಾಸ್ ನೀರು ಕುಡಿಯಿರಿ ಎಂಬ ಸಲಹೆ ಎಲ್ಲೆಡೆಯಿಂದ ಹರಿದು ಬರುತ್ತದೆ. ಎಲ್ಲರ ದೇಹವೂ ಒಂದೇ ತೆರನಾಗಿ ಇರುವುದಿಲ್ಲ ಎಂದಾದರೆ, ಎಲ್ಲರಿಗೂ ಅಷ್ಟೇ ಪ್ರಮಾಣದಲ್ಲಿ ನೀರು ಕುಡಿಯುವುದು ಸಾಕಾದೀತೇ ಅಥವಾ ಬೇಕಾದೀತೆ? ನಮ್ಮ ದೇಹಕ್ಕೆಷ್ಟು ನೀರು ಅಗತ್ಯ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳುವುದು ಹೇಗೆ? ಬಾಯಾರಿದಾಗ ನೀರು ಕುಡಿಯುತ್ತೇವೆ ಎಂಬು ಸರಳ ತತ್ವವೇ ಆದರು, ಎಲ್ಲ ಸಾರಿಯೂ ಇವಿಷ್ಟೇ ಮಾಡಿದರೆ ಸಾಕಾಗುವುದಿಲ್ಲ. ನಮ್ಮ ದೈಹಿಕ ಚಟುವಟಿಕೆ, ವಾತಾವರಣ, ಋತುಮಾನ, ತಿಂದ ಆಹಾರ… ಹೀಗೆ ಹಲವು ವಿಷಯಗಳ ಮೇಲೆ ನಮ್ಮ ನೀರಿನ ಅಗತ್ಯವೆಷ್ಟು ಎಂಬುದು ನಿರ್ಧಾರವಾಗಬೇಕಲ್ಲವೇ? ನಮಗೆಷ್ಟು ನೀರು ಬೇಕು ಮತ್ತು ಸಾಕು ಎಂಬುದನ್ನು ಅರ್ಥ ಮಾಡಿಕೊಳ್ಳಲು ಇಲ್ಲಿದೆ ಉಪಯುಕ್ತ ಮಾಹಿತಿ.
ಪರಿಣಾಮ ಬೀರುವುದು ಯಾವುದು?
ನಮ್ಮ ದೈನಂದಿನ ನೀರಿನ ಅಗತ್ಯವೆಷ್ಟು ಎನ್ನುವುದು ಹಲವು ವಿಷಯಗಳನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ ಹೇಳುವುದಾದರೆ, ಎತ್ತರದ ಪ್ರದೇಶದಲ್ಲಿ ಇರುವವರು, ದೈಹಿಕವಾಗಿ ಕಠಿಣ ಕೆಲಸಗಳನ್ನು ಮಾಡುವವರು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು. ಇದಲ್ಲದೆ, ದೇಹದಲ್ಲಿ ದೊಡ್ಡದಾಗಿರುವವರು, ಸ್ನಾಯುಗಳನ್ನು ಹೆಚ್ಚು ಬೆಳೆಸಿಕೊಂಡವರಿಗೆ ಅಧಿಕ ನೀರು ಬೇಕು. ಫಿಟ್‌ನೆಟ್ ತರಬೇತಿಯಲ್ಲಿ ಇದ್ದರೆ, ಉಷ್ಣತೆ ಮತ್ತು ತೇವಾಂಶ ಹೆಚ್ಚಿರುವ ವಾತಾವರಣದಲ್ಲಿದ್ದರೆ ನೀರಿನ ಆವಶ್ಯಕತೆ ಹೆಚ್ಚಿರುತ್ತದೆ. ಎತ್ತರದ ಪ್ರದೇಶದಲ್ಲಿ ಉಸಿರಾಟ ತೀವ್ರವಾಗಿದ್ದು, ಮೂತ್ರದ ಉತ್ಪಾದನೆಯೂ ಹೆಚ್ಚಾಗಿರುತ್ತದೆ. ಹಾಗಾಗಿ ನೀರು ಹೆಚ್ಚು ಬೇಕು. ಜ್ವರ, ವಾಂತಿ, ಅತಿಸಾರದಂಥ ಆರೋಗ್ಯ ಏರುಪೇರಿನಲ್ಲಿ ನೀರು ಕುಡಿದಷ್ಟಕ್ಕೂ ಬೇಕು. ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ತಿಂದಿದ್ದರೆ, ಅಧಿಕ ಪ್ರೊಟೀನ್ ತಿಂದರೆ ಹೆಚ್ಚು ನೀರನ್ನು ದೇಹಕ್ಕೆ ಒದಗಿಸಲೇಬೇಕು. ಗರ್ಭಿಣಿಯರು ತಮ್ಮ ಮತ್ತು ಶಿಶುವಿನ ಆರೋಗ್ಯಕ್ಕಾಗಿ ಹೆಚ್ಚಿನ ನೀರು ಕುಡಿಯುವುದು ಮುಖ್ಯ. ಹಾಲುಣಿಸುವ ತಾಯಂದಿರಿಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬೇಕು.
ಯಾರಿಗೆ ಮತ್ತು ಎಂಥ ಹವಾಮಾನಗಳಲ್ಲಿ ಹೆಚ್ಚಿನ ನೀರು ಬೇಕು ಎಂಬುದನ್ನು ತಿಳಿದಾಗಿದೆ. ಈ ಹೆಚ್ಚಿನ ನೀರು ಎಂದರೇನು? ದಿನಕ್ಕೆ ಎಂಟು ಗ್ಲಾಸ್‌ಗಳ ದ್ರವಾಹಾರಕ್ಕೆ ಮೇಲ್ಪಟ್ಟವನ್ನು ಹೀಗೆಂದು ಕರೆಯಬಹುದು. ಅದರಲ್ಲಿ ನೀರು, ಹಾಲು, ಮಜ್ಜಿಗೆ, ಎಳನೀರು, ಕಾಫಿ, ಚಹಾ, ಸೂಪ್, ಹಣ್ಣಿನ ರಸ, ನಿಂಬೆ ಚಹಾ ಅಥವಾ ಕಷಾಯದಂಥವು ಮತ್ತು ಸಕ್ಕರೆ ರಹಿತವಾದ ಯಾವುದೇ ಆರೋಗ್ಯಕರ ಪೇಯಗಳನ್ನು ಈ ಎಂಟು ಗ್ಲಾಸ್‌ಗಳ ಲೆಕ್ಕಕ್ಕೆ ಸೇರಿಸಬಹುದು. ಹಾಗಾಗಿ ದಿನಕ್ಕೆ ಅದಷ್ಟು ದ್ರವಾಹಾರವನ್ನು ತೆಗೆದುಕೊಳ್ಳುವುದು ಖಂಡಿತ ಕಷ್ಟವಲ್ಲ. ಈಗ ಹೆಚ್ಚಿನ ನೀರು ಎಂದರೆ, ಈ ಎಂಟು ಗ್ಲಾಸ್‌ಗಳ ಲೆಕ್ಕಕ್ಕಿಂತ ಅಧಿಕ. ಅತಿ ಕಡಿಮೆ ದೈಹಿಕ ಚಟುವಟಿಕೆಯಿದ್ದು, ವಾತಾವರಣವೂ ಹದವಾಗಿದ್ದಾಗ, ಹೆಚ್ಚು ಹಣ್ಣು, ಪಾನಕ, ಮಜ್ಜಿಗೆಯಂಥವನ್ನು ಕುಡಿಯುತ್ತಿದ್ದಾಗ ನೀರು ಕೊಂಚ ಕಡಿಮೆಯೇ ಸಾಕು ದೇಹಕ್ಕೆ. ದಿನದ ಲೆಕ್ಕಕ್ಕೆ ಹೇಳುವುದಾದರೂ, ನಿತ್ಯವೂ 3 ಲೀ. ನೀರನ್ನೇ ಕುಡಿಯಬೇಕಾದ ಅಗತ್ಯವಿಲ್ಲ. ತಿನ್ನುವ ಆಹಾರಗಳು ರಸಭರಿತವಾಗಿದ್ದರೆ, ಮಜ್ಜಿಗೆ, ಎಳನೀರು, ಸ್ಮೂದಿ ಮುಂತಾದ ಆರೋಗ್ಯಕರ ಪೇಯಗಳನ್ನು ಸಾಕಷ್ಟು ಸೇವಿಸುವವರು ನೀವಾದರೆ- 1.5ರಿಂದ 1.8 ಲೀ. ನಷ್ಟು ನೀರು ಕುಡಿಯುವುದು ಸಾಕಾಗುತ್ತದೆ. ಉಳಿದಷ್ಟು ಆಹಾರದಿಂದಲೇ ಒದಗುತ್ತದೆ. ನೀರು ಕುಡಿಯುವುದನ್ನು ಮರೆಯಂತೆ ಮಾಡುವುದು ಹೇಗೆ?
ಬಾಟಲಿ ಇರಿಸಿಕೊಳ್ಳಿ
ಚೆಂದದ ನೀರಿನ ಬಾಟಲಿಯೊಂದನ್ನು ಇದಕ್ಕಾಗಿ ಇರಿಸಿಕೊಳ್ಳಿ. ಅದರಲ್ಲೂ ತಾಮ್ರದ, ಗಾಜಿನ, ಪಿಂಗಾಣಿಯಂಥ ನೀರಿನ ಬಾಟಲಿ/ ಪಾತ್ರೆಗಳು ಹೆಚ್ಚಿನ ಉತ್ಸಾಹವನ್ನು ತುಂಬುತ್ತವೆ. ಈ ಬಾಟಲಿಗಳ ಅಳತೆ ತಿಳಿಯುವುದರಿಂದ ದಿನಕ್ಕೆ ಎಷ್ಟು ಬಾರಿ ಅದನ್ನು ಮರುಪೂರಣ ಮಾಡಿದ್ದೀರಿ ಎನ್ನುವುದರ ಮೇಲೆ ಕುಡಿದ ನೀರಿದ ಪ್ರಮಾಣವನ್ನು ಸುಲಭದಲ್ಲಿ ಲೆಕ್ಕ ಹಾಕಬಹುದು.
Ginger Benefits: ಮಳೆಗಾಲದ ಸೋಂಕುಗಳಿಗೆ ಬೇಕು ಶುಂಠಿಯೆಂಬ ಮದ್ದು!ಇದನ್ನೂ ಓದಿ:
ಅಲರಾಂ
ನಿತ್ಯದ ಜಂಜಾಟದಲ್ಲಿ ನೀರಿನ ಬಾಟಲಿಯನ್ನು ಇಟ್ಟುಕೊಳ್ಳುವುದೂ ಕೆಲಸ ಮಾಡುವುದಿಲ್ಲ ಎಂದಾದರೆ ತಾಸಿಗೊಮ್ಮೆ ನೀರು ಕುಡಿಯುವ ಅಲರಾಂ ಇಟ್ಟುಕೊಳ್ಳಿ. ಅದು ಕಿರುಚುವ ಹೊತ್ತಿಗೆ ನೀರು ಗುಟುಕರಿಸಬೇಕು ಎನ್ನುವುದು ನಿಶ್ಚಿತವಾಗಿ ನೆನಪಾಗುತ್ತದೆ.