ಸದ್ಯದ ಯುವಜನರನ್ನು ಕಾಡುವ ಬಹುದೊಡ್ಡ ಸಮಸ್ಯೆ ಎಂದರೆ, ಸಣ್ಣ ವಯಸ್ಸಿನಲ್ಲಿಯೇ ಕೂದಲು ಹಣ್ಣಾಗುವುದು. ಮೂವತ್ತು ವರ್ಷವಾಗುವ ಮೊದಲೇ ಅಲ್ಲಲ್ಲಿ ಇಣುಕುವ ಬಿಳಿಕೂದಲು, ಮೂವತ್ತು ದಾಟುತ್ತಿದ್ದಂತೆಯೇ ದುಪ್ಪಟ್ಟಾಗುತ್ತದೆ. ನಾಲ್ಕೈದು ವರ್ಷಗಳೊಳಗಾಗಿ, ತಲೆಯ ಅರ್ಧಕ್ಕಿಂತ ಹೆಚ್ಚು ಕೂದಲು ಬೆಳ್ಳಗಾಗಿರುತ್ತದೆ. ಸಾಲ್ಟ್ ಅಂಡ್ ಪೆಪ್ಪರ್ ಲುಕ್ ಎಂದು ಹೇಳಿಕೊಂಡು ಟ್ರೆಂಡ್ ಜೊತೆ ಫ್ಯಾಷನ್ ಹೆಸರಿನಲ್ಲಿ ಸುತ್ತಾಡಿದರೂ, ಆತ್ಮವಿಶ್ವಾಸಕ್ಕೆ ಅಲ್ಲಿ ಸಣ್ಣ ಪೆಟ್ಟು ಬಿದ್ದಿರುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಬಗೆಬಗೆಯ ಬಣ್ಣಗಳ ಸಹಾಯದಿಂದ ಕಾಲಕ್ಕೆ ತಕ್ಕಂತೆ ಕೂದಲ ಶೃಂಗಾರ ಮಾಡಿಸಿಕೊಂಡರೂ, ಕೃತಕ ರಸಾಯನಿಕಗಳನ್ನು ಪದೇ ಪದೇ ಕೂದಲಿಗೆ ಸೋಕಿಸಿಕೊಳ್ಲೂವ ಕಾರಣದಿಂದಲೋ, ಆಗಾಗ ಪಾರ್ಲರಿಗೆ ಎಡತಾಕಿ ಕೂದಲ ಮೇಲೆ ವಿಪರೀತ ರಾಸಾಯನಿಕಗಳ ಬಳಕೆಯಿಂದಲೋ, ಕೂದಲು (Ways to Prevent Gray Hair) ಇನ್ನಷ್ಟು ಹದಗೆಡುತ್ತದೆ. ಸಮಸ್ಯೆ ವಿಕೋಪಕ್ಕೆ ಹೋಗುತ್ತದೆ.
ಎಲ್ಲ ಸಮಸ್ಯೆಗಳಿಗೂ ಉತ್ತರವಿದೆ
ಪ್ರಕೃತಿಯಲ್ಲಿ ನಮ್ಮ ಎಲ್ಲ ಸಮಸ್ಯೆಗಳಿಗೂ ಉತ್ತರವಿದೆ. ಆದರೆ, ಅವನ್ನು ನಿಯಮಿತವಾಗಿ ಬಳಸುವ ತಾಳ್ಮೆ ನಮಗೆ ಇರಬೇಕು ಅಷ್ಟೇ. ಜೊತೆಗೆ ಪ್ರಕೃತಿಗೆ ವಿರುದ್ಧವಾಗಿ ಹೋಗದೆ, ಪ್ರಕೃತಿದತ್ತ ವಿಧಾನಗಳನ್ನು ಅಪ್ಪಿಕೊಂಡರೆ ಸಮಸ್ಯೆಗಳು, ಅಡ್ಡ ಪರಿಣಾಮಗಳು ಇರದು. ಬನ್ನಿ, ಯಾವೆಲ್ಲ ಆಹಾರಗಳ ಸೇವನೆಯಿಂದ, ಸಣ್ಣ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವುದರಿಂದ ಪಾರಾಗಬಹುದು ಎಂಬುದನ್ನು ನೋಡೋಣ.
ನೆಲ್ಲಿಕಾಯಿ
ನೆಲ್ಲಿಕಾಯಿಯ ಆರೋಗ್ಯದ ಲಾಭಗಳು ನಮಗೆಲ್ಲರಿಗೂ ಗೊತ್ತು. ಹೆಚ್ಚು ಸಿ ವಿಟಮಿನ್ ಇರುವ ಆಹಾರಗಳ ಪೈಕಿ ನೆಲ್ಲಿಕಾಯಿಗೆ ಅಗ್ರಸ್ಥಾನ. ನೆಲ್ಲಿಕಾಯಿಯ ಸೇವನೆಯಿಂದ ನಮ್ಮ ಕೂದಲ ಆರೋಗ್ಯಕ್ಕೂ ಲಾಭಗಳಿವೆ. ಕೂದಲ ನೈಸರ್ಗಿಕ ಪಿಗ್‌ಮೆಂಟ್‌ಗಳನ್ನು ಹಾಗೆಯೇ ಇರಿಸಲು ಸಹಾಯ ಮಾಡುವ ಆಹಾರವಿದು. ಬೆಳಗ್ಗೆ ನಿತ್ಯವೂ 15 ಎಂಎಲ್‌ನಷ್ಟು ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಕೂದಲ ಆರೋಗ್ಯದಲ್ಲಿ ಗಣನೀಯ ಲಾಭ ಕಾಣಬಹುದು.
ಕಾಲೊಂಜಿ ಬೀಜಗಳು
ಕಪ್ಪನೆಯ ಕಾಲೊಂಜಿ ಬೀಜಗಳಿಂದ ಕೂದಲ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ. ಇದು ಕೂದಲ ಬುಡದಲ್ಲಿ ರಕ್ತ ಪರಿಚಲನೆಯನ್ನು ಉದ್ದೀಪಿಸುತ್ತದೆ. ಅಷ್ಟೇ ಅಲ್ಲ, ಕೂದಲು ಬೆಳ್ಳಗಾಗುವುದನ್ನೂ ಮುಂದೂಡುತ್ತದೆ. ವಾರಕ್ಕೆರಡು ಬಾರಿ ಕಾಲೊಂಜಿ ಬೀಜಗಳ ಮಾಸ್ಕ್ ಮಾಡಿ ಕೂದಲಿಗೆ ಹಚ್ಚುವ ಮೂಲಕ ಉತ್ತಮ ಲಾಭ ಪಡೆಯಬಹುದು.
ಕರಿಬೇವು
ಕರಿಬೇವು ಕೂದಲಲ್ಲಿ ಮೆಲನಿನ್ ಉತ್ಪಾದನೆಯನ್ನು ಪ್ರಚೋದಿಸುವ ಕಾರಣ ಕೂದಲು ಕಪ್ಪಾಗಿಡುವಲ್ಲಿ ಸಹಾಯ ಮಾಡುತ್ತದೆ. ಬಾಲನೆರೆಯಂತಹ ಸಮಸ್ಯೆಯಿದ್ದರೆ ಖಂಡಿತವಾಗಿಯೂ ಕರಿಬೇವು ರಾಮಬಾಣ. ಇದು ಬಹುಬೇಗನೆ ಕೂದಲು ಬೆಳ್ಳಗಾಗುವುದನ್ನೂ ತಡೆಯುತ್ತದೆ. ಇದರ ಸೇವನೆ, ಕರಿಬೇವಿನ ಎಣ್ಣೆಯಿಂದಲೂ ಲಾಭ ಪಡೆಯಬಹುದು. ನಿತ್ಯವೂ ಮೂರ್ನಾಲ್ಕು ಕರಿಬೇವನ್ನು ಹಾಗೆಯೇ ಸೇಔಇಸುವ ಮೂಲಕವೂ ಲಾಭ ಪಡೆಯಬಹುದು.
ಗೋಧಿಹುಲ್ಲು
ಕೂದಲಿಗೆ ಗೋಧಿ ಹುಲ್ಲೂ ಅತ್ಯಂತ ಒಳ್ಳೆಯದು. ಇದು ಕೂದಲ ಬುಡಕ್ಕೆ ಪೋಷಣೆ ನೀಡುತ್ತದೆ. ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕುತ್ತದೆ. ಬೆಳಗ್ಗೆದ್ದ ಕೂಡಲೇ ಗೋಧಿಹುಲ್ಲಿನ ಜ್ಯೂಸ್ ಕುಡಿಯುವ ಮೂಲಕ ಇದರ ಲಾಭ ಪಡೆಯಬಹುದು.
ಕರಿಎಳ್ಳು
ಕೂದಲ ಆರೋಗ್ಯಕ್ಕೆ ಕರಿಎಳ್ಳು ಉತ್ತಮ ಆಹಾರ. ಎಳ್ಳಿನ ಸೇವನೆಯಿಂದ ಕೂದಲು ಬೆಳ್ಳಾಗುಗುವುದು ನಿಧಾನವಾಗುತ್ತದೆ. ನಿತ್ಯವೂ ಒಂದು ಚಮಚ ಕರಿಎಳ್ಳು ಸೇವನೆ ಮಾಡುವುದರಿಂದ ಹಾಗೂ ಆಗಾಗ ಎಳ್ಳೆಣ್ಣೆಯನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡುವ ಮೂಲಕ ಇದರ ಲಾಭ ಪಡೆಯಬಹುದು.