ತೂಕ ಇಳಿಸಿಕೊಳ್ಳುವ ಆಸೆ ಯಾರಿಗಿರುವುದಿಲ್ಲ ಹೇಳಿ. ಬಳುಕುವ ಬಳ್ಳಿಯಂಥಾ ದೇಹ ತಮ್ಮದಾಗಬೇಕು ಎಂದು ಯುವತಿಯರು ಬಯಸಿದರೆ, ಕಟ್ಟುಮಸ್ತಾದ ಮಾಂಸಖಂಡಗಳಿರುವ ಫಿಟ್ ದೇಹ ತಮ್ಮದಾಗಿರಲಿ ಎಂದು ಬಯಸುವ ಸರದಿ ಯುವಕರದ್ದು. ಸರಿಯಾದ ವ್ಯಾಯಾಮದ ಮೂಲಕ ತೂಕ ಇಳಿಸಿಕೊಳ್ಳುವ ಮಾರ್ಗ ಎಲ್ಲರಿಗೂ ತಿಳಿದಿದ್ದರೂ, ಸುಲಭವಾಗಿ ಇಳಿಸಿಕೊಳ್ಳುವ ಮಾರ್ಗ ಹೇಗೆ ಎಂಬ ಕುತೂಹಲ ಎಲ್ಲರಿಗೂ ಇದ್ದದ್ದೇ. ಆದರೆ, ಇಂದು ಬೆರಳ ತುದಿಯ ಸ್ಪರ್ಶಕ್ಕೇ ಬಂದು ಬೀಳುವ ಸಾವಿರಾರು ಮಾಹಿತಿಗಳು ನಮ್ಮನ್ನು ಸರಿಯಾದ ದಿಕ್ಕಿನತ್ತ ಕೊಂಡೊಯ್ಯುತ್ತಿದೆಯಾ ಎಂಬ ಸಂಶಯ ಮಾತ್ರ ಯಾವಾಗಲೂ ನಮ್ಮ ನೆತ್ತಿಯ ಮೇಲೆ ತೂಗುಗತ್ತಿಯಂತೆ ತೂಗುತ್ತಿರುತ್ತದೆ. ನೂರಾರು ಮಾದರಿಯ ಡಯಟ್, ಥರಹೇವಾರಿ ಪ್ರಾಡಕ್ಟ್‌ಗಳು, ಹಾಗೂ ವರ್ಕೌಟ್‌ಗಳು ನಮ್ಮ ಹಾದಿ ತಪ್ಪಿಸುತ್ತಲೇ ಇರುತ್ತವೆ. ಹಾಗಾಗಿ ತೂಕ ಇಳಿಸಿಕೊಳ್ಳುವ ಮಂದಿ ಅಡ್ಡದಾರಿ ಹಿಡಿವ ಬದಲು ಸರಿಯಾದ ಹಾದಿಯಲ್ಲಿ ಸಾಗುವ ಬಗೆಗಿನ ಎಚ್ಚರ ಇರಬೇಕು.
೧. ತೂಕ ಇಳಿಸಿಕೊಳ್ಳುವುದು ಎಂದರೆ ಕಡಿಮೆ ತಿನ್ನುವುದಲ್ಲ. ಸರಿಯಾದ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ತಿನುವುದು. ಆರೋಗ್ಯಕರ ಆಹಾರಕ್ಕೆ ಪರ್ಯಾಯ ಯಾವುದೂ ಇಲ್ಲ. ವ್ಯಾಯಾಮ ಮಾಡುತ್ತಿದ್ದರೂ ಸರಿಯಾದ ಆಹಾರ ಸೇವಿಸುತ್ತಿಲ್ಲ ಎಂದರೆ ತೂಕ ಇಳಿಯುವುದಿಲ್ಲ. ಅಥವಾ ಒಮ್ಮೆಲೆ ಇಳಿದರೂ, ಮತ್ತೆ ಸರಿಯಾಗಿ ಇಳಿಕೆಯಾಗಲಿಕ್ಕಿಲ್ಲ. ಹಾಗಾಗಿ ಸರಿಯಾದ ಆಹಾರ ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳುತ್ತಿದ್ದರಷ್ಟೆ ನಮ್ಮ ಒಟ್ಟಾರೆ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣುವುದರ ಜೊತೆಗೆ ತೂಕವನ್ನೂ ಹಿತಮಿತವಾಗಿ ಇಳಿಸಿಕೊಳ್ಳಬಹುದು.
೨. ಯುವ ಜನರಲ್ಲಿ ಹೆಚ್ಚು ಟ್ರೆಂಡ್ ಆಗಿರುವ ಫ್ಯಾಟ್ ಬರ್ನರ್‌ಗಳು ಹಣವನ್ನು ಪೋಲು ಮಾಡಲು ದಾರಿಗಳಷ್ಟೇ. ಇವುಗಳಿಂದ ಕೊಂಚವೂ ಆರೋಗ್ಯಕ್ಕೆ ಉಪಯೋಗವಿಲ್ಲ. ನಿಜವಾಗಿ ಸರಿಯಾಗಿ ತೂಕ ಇಳಿಸಿಕೊಳ್ಳಬೇಕೆಂದರೆ ಉತ್ತಮ ಸಮತೋಲಿತ ಆಹಾರದ ವಿನಃ ಯಾಔಉದೇಪರ್ಯಾಯ ಮಾರ್ಗಗಳಿಲ್ಲ. ನಿಮ್ಮಕೊಬ್ಬನ್ನು ಕೆಲವೇ ದಿನಗಳಲ್ಲಿ ಪೂರ್ತಿ ಕರಗಿಸಿ ಉತ್ತಮ ಶೇಪ್ ನಿಮ್ಮದಾಗಿಸಿಕೊಳ್ಳಿ ಎಂಬ ಜಾಹಿರಾತುಗಳು ಆಕರ್ಷಿಸುವುದೇನೋ ನಿಜ, ಆದರೆ, ಇವೆಲ್ಲ ನಿಮ್ಮ ಹಸಿವನ್ನು ತಡೆಹಿಡಿವಂತೆ ಮಾಡಿ ಉಪವಾಸದಲ್ಲಿ ಕೆಡವಿ ತೂಕ ಇಳಿವಂತೆ ಮಾಡುತ್ತದೆ. ಆದರೆ, ಇದು ಶಾಶ್ವತ ಪರಿಹಾರ ನೀಡುವುದಿಲ್ಲ.
ಇದನ್ನೂ ಓದಿ: Weight Loss : ದಿಢೀರ್ ತೂಕ ಇಳಿಕೆ ಅಪಾಯಕಾರಿಯೆ?
೩. ತೂಕ ಇಳಿಸಿಕೊಳ್ಳಲು ಕಾರ್ಬೋಹೈಡ್ರೇಟ್ ಒಳ್ಳೆಯದಲ್ಲ, ಕಾರ್ಬೋಹೈಡ್ರೇಟ್ ಹೆಚ್ಚಿರುವ ಆಹಾರವನ್ನು ತ್ಯಜಿಸಬೇಕು ಎಂಬ ನಂಬಿಕೆಯನ್ನು ಮೊದಲು ಬಿಟ್ಟುಬಿಟಬೇಕು. ಯಾಕೆಂದರೆ, ಸರಿಯಾದ ಸಮತೋಲಿತ ಆಹಾರದಲ್ಲಿ ಕಾರ್ಬೋಹೈಡ್ರೇಟ್ ಕೂಡಾ ಅಗತ್ಯವಿದೆ. ದೇಹಕ್ಕೆ ಶಕ್ತಿ ಪೂರೈಕೆ ಮಾಡುವಲ್ಲಿ ಇವುಗಳ ಪಾತ್ರ ತುಂಬಾ ದೊಡ್ಡದು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಪೂರ್ತಿಯಾಗಿ ಕಾರ್ಬೋಹೈಡ್ರೇಟ್ ತ್ಯಜಿಸಿದರೆ, ತೀವ್ರ ಆಯಾಸವಾದಂತಾಗಿ ನಂತರ ಹೆಚ್ಚು ತಿನ್ನಬೇಕೆನಿಸುತ್ತದೆ. ಇದರಿಂದ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಕಷ್ಟವಾಗಬಹುದು. ಚಪಾತಿ, ರೊಟ್ಟಿ, ಅನ್ನ, ದೋಸೆ, ಪರಾಠಾ, ಬ್ರೆಡ್ ಹೀಗೆ ಎಲ್ಲ ಬಗೆಯ ಆಹಾರವನ್ನೂ ಧಾರಾಳವಾಗಿ ಸೇವಿಸಿ. ಇವೆಲ್ಲವನ್ನು ತಿನ್ನುವ ಜೊತೆಗೂ ತೂಕ ಇಳಿಸಿಕೊಳ್ಳಲು ಸಾಧ್ಯವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ.
೪. ಕೇವಲ ನಡೆಯುವುದು ಅಥವಾ ವಾಕಿಂಗ್‌ನಿಂದಲೂ ನೀವು ತೂಕ ಇಳಿಸಿಕೊಳ್ಳಬಹುದು! ಬಹಳಷ್ಟು ಮಂದಿ ಜಿಮ್ ಸೇರುವುದರಿಂದ, ಓಡುವುದರಿಂದ, ಭಾರ ಎತ್ತುವ ಮತ್ತಿತರ ಕಷ್ಟಕರ ವ್ಯಾಯಾಮಗಳ ಮೂಲಕವಷ್ಟೇ ತೂಕ ಇಳಿಸಬಹುದು ಎಂದು ತಪ್ಪು ತಿಳಿದಿರುತ್ತಾರೆ. ಆದರೆ, ಕೇವಲ ನಡೆಯುವುದು ಎಷ್ಟು ಒಳ್ಳೆಯ ವ್ಯಾಯಾಮ ಎಂಬುದೇ ನಮಗೆ ಗೊತ್ತಿರುವುದಿಲ್ಲ. ಯಾವುದೇ ಖರ್ಚು ಮಾಡದೆ, ಮನಸ್ಸಿಗೆ ಉಲ್ಲಾಸವನ್ನು ನೀಡುವ ಅತ್ಯುತ್ತಮ ವ್ಯಾಯಾಮ ಎಂದರೆ ಅದು ನಡೆಯುವುದು.
ತೂಕ ಇಳಿಸಿಕೊಳ್ಳುವುದು ಕಷ್ಟವೇನಲ್ಲ. ಮನಸ್ಸು ಮಾಡಿದರೆ, ಜೀವನದಲ್ಲಿ ಶಿಸ್ತು ಪಾಲಿಸುತ್ತಾ ಬಂದರೆ, ತೂಕ ಸುಲಭವಾಗಿ ಇಳಿಸಿಕೊಳ್ಳಬಹುದು. ಆದರೆ, ಈಗ ಲಭ್ಯವಿರುವ ಸಾವಿರಾರು ಮಾಹಿತಿಗಳಿಂದ ಸರಿಯಾದ ಮಾಹಿತಿಯನ್ನು ಪಡೆದು ಸರಿಯಾದ ಹಾದಿಯಲ್ಲಿ ನಡೆಯುವಲ್ಲಿ ಮಾತ್ರ ಎಡವುತ್ತೇವೆ. ನಮ್ಮ ಜೀವನಶೈಲಿಗೆ ಹೊಂದುವ ಕೆಲವು ಸರಳ ವಿಧಾನಗಳನ್ನು ಶಿಸ್ತುಬದ್ಧವಾಗಿ ಪಾಲಿಸುತ್ತಾ ಬಂದಲ್ಲಿ ತೂಕ ಇಳಿಸಿಕೊಂಡು ಆರೋಗ್ಯಕರ ಜೀವನವನ್ನು ನಡೆಸಬಹುದು ಎಂಬುದನ್ನು ನೆನಪಿಡಿ.
ಇದನ್ನೂ ಓದಿ: Health Tips | ತೂಕ ಇಳಿಸಿ, ಹಸಿವು ನಿಯಂತ್ರಿಸಲು ಬೇಕು ಮಸಾಲೆ ಚಹಾ!