ಇಂದಿನ ಜೀವನಪದ್ಧತಿ, ಬೇಕು ಬೇಕಾದ್ದೆಲ್ಲ ನಾಲಿಗೆಗೆ ರುಚಿಯೆನಿಸಿದ್ದನ್ನೇ ಬಯಸಿ ಬಯಸಿ ತಿನ್ನುವುದು, ಒತ್ತಡ, ಕುಳಿತೇ ಮಾಡುವ ಕೆಲಸ, ವ್ಯಾಯಾಮವಿಲ್ಲದ ಏಕತಾನತೆಯ ಜೀವನ, ಹೆಚ್ಚಿದ ಸ್ಕ್ರೀನ್‌ಟೈಮ್ ಸೇರಿದಂತೆ ನಾನಾ ಕಾರಣಗಳಿಂದ ಹಲವರಿಗೆ ಬೊಜ್ಜು ಸಾಮಾನ್ಯ. ಹೊಟ್ಟೆಯ ಸುತ್ತ, ಸೊಂಟದ ಸುತ್ತ ಸಂಗ್ರಹವಾದ ಬೊಜ್ಜಿನಿಂದ ಮುಕ್ತಿ (Weight Loss) ಸುಲಭಕ್ಕೆ ಸಾಧ್ಯವಿಲ್ಲ. ಹಿತಮಿತವಾದ ಆಹಾರ ಸೇವನೆ, ಸಕ್ಕರೆಯ ನಿಯಂತ್ರಣ, ನಿಯಮಿತ ವ್ಯಾಯಾಮ, ಶಿಸ್ತುಬದ್ಧ ಶೈಲಿಯ ಜೀವನ ಇತ್ಯಾದಿಗಳಿಂದ ಮತ್ತೆ ಬೊಜ್ಜನ್ನು ಕರಗಿಸಿ (health tips) ಬಳುಕುವ ಬಳ್ಳಿಯಂಥ ದೇಹ ಪಡೆಯಲು ಸಾಧ್ಯವಿದೆ. ಆದರೆ, ಇದನ್ನು ಪಡೆಯಲು, ಶಿಸ್ತು, ಸಂಯಮ ಅಷ್ಟೇ ಅಲ್ಲ, ಗುರಿಯೆಡೆಗೆ ನಡೆವ ಪರಿಶ್ರಮವೂ ಬೇಕಾಗುತ್ತದೆ. ಅದರಲ್ಲೂ ಹೊಟ್ಟೆಯಲ್ಲಿ ಸೇರಿಕೊಳ್ಳುವ ಬೊಜ್ಜನ್ನು ಕಡಿಮೆ ಮಾಡುವುದು ಎಂದರೆ ಅದು ಸುಲಭದ ಮಾತಲ್ಲ. ಯಾಕೆಂದರೆ ಇಲ್ಲಿ ಸಂಗ್ರಹವಾಗುವ ಕೊಬ್ಬು ಬಹಳ ಸಮಯದಿಂದ ಉಂಡ ಹೆಚ್ಚು ಕೊಬ್ಬಿನ ಆಹಾರ ಪದಾರ್ಥಗಳಿಂದ ಸಂಗ್ರಹವಾದುದೇ ಆಗಿರುತ್ತದೆ. ಸಕ್ಕರೆಯೂ ಅವುಗಳಲ್ಲಿ ಪ್ರಮುಖವಾದದ್ದು.
ಬಹಳಷ್ಟು ಮಂದಿ ಸಕ್ಕರೆಯನ್ನು ಕಡಿಮೆ ಮಾಡಿ ಎಂದಾಗ ಚಿಂತೆಗೀಡಾಗುವುದು ಸಹಜ. ಒಂದು ಚಹಾ, ಒಂದು ಕಾಫಿ, ಆಗಾಗ ಜಿಹ್ವೆಯ ಚಪಲಕ್ಕೆ ಅಂತ ಒಂದಿಷ್ಟು ಸಿಹಿ ಹೊಟ್ಟೆ ಸೇರುವುದು ಎಲ್ಲರ ಬದುಕಿನ ಅವಿಭಾಜ್ಯ ಅಂಗ. ಸಿಹಿ ಪ್ರಿಯರಿಗಂತೂ ಸಿಹಿ ಬಿಡಿ ಎಂದರೆ ಆಕಾಶವೇ ತಲೆಕಳಚಿ ಬಿದ್ದಂತಾಗುವುದು ಸಹಜ. ಆದರೆ, ನಮ್ಮ ಏರುವ ತೂಕಕ್ಕೆ ಮೂಲ ಕಾರಣವೂ ಈ ಸಿಹಿಯೇ ಎಂದರೆ ಸತ್ಯ ಕಹಿಯಾದರೂ ಒಪ್ಪಲೇಬೇಕು. ನಾವು ತಿಂದ ಹೆಚ್ಚು ಸಕ್ಕರೆಯ ಪ್ರಮಾಣವು ಕೊಬ್ಬಿನ ರೂಪದಲ್ಲಿ ಯಾವಾಗಲೂ ಹೊಟ್ಟೆ ಹಾಗೂ ಹೃದಯದ ಅಕ್ಕಪಕ್ಕ ಸಂಗ್ರಹವಾಗುವುದರಿಂದ ಇದು ಅನಾರೋಗ್ಯಕರ. ಹಾಗಾಗಿ ಮಧುಮೇಹ ಇರಲಿ ಇಲ್ಲದಿರಲಿ, ಸಕ್ಕರೆಯ ನಿಯಂತ್ರಣ ಅತ್ಯಂತ ಅಗತ್ಯ ಹಾಗೂ ಇದರ ಮೂಲಕವಷ್ಟೇ ಬೊಜ್ಜು ಕರಗಿಸುವಲ್ಲಿ ನಾವು ಸಫಲತೆ ಸಾಧಿಸಬಹುದು.
ಹಾಗಾದರೆ, ಸಕ್ಕರೆಯನ್ನು ಬಿಡುವುದು ಹೇಗೆ ಎಂಬ ಸಮಸ್ಯೆ ಹಲವರದ್ದು. ಆರೋಗ್ಯಕರವಾದ ಸಕ್ಕರೆ ಯಾವುದು ಎಂಬ ಶೋಧವನ್ನೂ ನಾವು ನಡೆಸುತ್ತೇವೆ. ನೈಸರ್ಗಿಕವಿರಲಿ ಅಲ್ಲದಿರಲಿ ಸಕ್ಕರೆ, ಆರೋಗ್ಯಕರವಲ್ಲ ನಿಜವೇ ಆದರೂ, ಸಕ್ಕರೆಗಿಂತ ನೈಸರ್ಗಿಕ ಸಿಹಿಯ ಇತರ ಮೂಲಗಳನ್ನು ಕೆಲವಕ್ಕಾದರೂ ಬಳಸಿ ನಮ್ಮನ್ನು ನಾವು ಸಂತೈಸಿಕೊಳ್ಳಬಹುದು. ಹಾಗಾದರೆ ಬನ್ನಿ, ಆಗಾಗ ಸಕ್ಕರೆಯ ಬದಲಿಗೆ ಯಾವ ಸಿಹಿಯನ್ನು ನಾವು ಬಳಸಬಹುದು ಎಂಬುದನ್ನು ನೋಡೋಣ.
1. ಜೇನುತುಪ್ಪ: ಎಲ್ಲರಿಗೂ ಗೊತ್ತಿರುವ ಹಾಗೆ ಜೇನುತುಪ್ಪ ಆರೋಗ್ಯಕರ. ಹಾಗಂತ ಇದನ್ನೇ ಎಲ್ಲದಕ್ಕೂ ಸುರಿಸುರಿದು ತಿನ್ನುತ್ತಿರುವುದು ಒಳ್ಳೆಯದಲ್ಲ. ಹಿತಮಿತವಾಗಿ ಕೆಲವಕ್ಕೆ ಜೇನುತುಪ್ಪ ಬಳಸಬಹುದು. ಸಪ್ಪೆ ಎನಿಸುವ ಜ್ಯೂಸ್‌ಗೆ ಯಾಔಆಗಲಾದರೊಮ್ಮೆ ಒಂದೆರಡು ಚಮಚ ಜೇನುತುಪ್ಪ ಸೇರಿಸಿ ಹೀರಬಹುದು. ಆದರೆ, ನಿತ್ಯವೂ ಅಲ್ಲ.
2. ಬೆಲ್ಲ: ಬೆಲ್ಲ ಕಬ್ಬಿಣಾಂಶವನ್ನು ಸಾಕಷ್ಟು ಹೊಂದಿರುವ ಆಹಾರ. ನಮ್ಮ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುವ ಶಕ್ತಿ ಇದಕ್ಕಿದೆ. ಹಾಗಾಗಿ ಬೆಲ್ಲವನ್ನು ನಮ್ಮ ಆಹಾರದಲ್ಲಿ ಬಳಸಬಹುದು. ಆದರೆ ಇದಕ್ಕೂ ಮಿತಿಯಿದೆ. ಚಹಾಕ್ಕೆ ಸಕ್ಕರೆಯ ಬದಲು ಬೆಲ್ಲ ಉಪಯೋಗಿಸಿಯೋ ಅಥವಾ ಕೊಂಚ ಪ್ರಪಾಣದಲ್ಲಿ ಸಕ್ಕರೆಯ ಬದಲು ಬೆಲ್ಲ ಬಳಸಬಹುದು.
ಇದನ್ನೂ ಓದಿ: Weight Loss: ವೇಗವಾಗಿ ತೂಕ ಇಳಿಸುವ ಶಾರ್ಟ್‌ಕಟ್ ಇದೆಯೇ? ಇಲ್ಲಿವೆ ಟಿಪ್ಸ್!
3. ತೆಂಗಿನಕಾಯಿ ಸಕ್ಕರೆ: ಇದೇನಿದು ಎಂದು ಆಶ್ಚರ್ಯವಾದರೆ ಇಲ್ಲಿ ಕೇಳಿ. ತೆಂಗಿನಕಾಯಿ ಹೂವಿನಿಂದ ತೆಗೆಯುವ ಸಕ್ಕರೆ ಇದಾಗಿದ್ದು, ಮಾರುಕಟ್ಟೆಯಲ್ಲಿಯೂ ಲಭ್ಯವಿದೆ. ಇದು ಸಕ್ಕರೆಗೆ ಅತ್ಯುತ್ತಮ ಪರಿಹಾರ. ಸಕ್ಕರೆಯ ಬದಲಿಗೆ ಕೆಲವು ಆಹಾರಗಳಿಗೆ ಇದು ಬಳಸಬಹುದು.
4. ಖರ್ಜೂರ: ಎಲ್ಲರಿಗೂ ತಿಳಿದಿರುವ ಇನ್ನೊಂದು ಸಿಹಿಯಾದ ನೈಸರ್ಗಿಕ ಆಹಾರವಿದು. ಕೇಕ್, ಕುಕ್ಕೀಸ್, ಸ್ಮೂದಿ, ಎನರ್ಜಿ ಬಾರ್ ಮತ್ತಿತರ ತಿನಿಸುಗಳನ್ನು ಸಕ್ಕರೆ ಹಾಕದೆ ಮಾಡುವಾಗ ಬಳಸಬಹುದಾದ ಪರ್ಯಾಯವಿದು. ಇದರಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿ ಇರುವುದರಿಂದ ಇದನ್ನು ಆಹಾರದಲ್ಲಿ ಕೆಲವೊಮ್ಮೆ ಬಳಸಬಹುದು.
5. ಮೇಪಲ್ ಸಿರಪ್: ಮೇಪಲ್ ಮರಗಳಿಂದ ತಯಾರಿಸುವ ನೈಸರ್ಗಿಕ ಸಕ್ಕರೆಯಿದು. ವಿದೇಶಗಳಲ್ಲಿ, ಚಳಿಪ್ರದೇಶಗಳಲ್ಲಿ ಈ ಮರಗಳು ಹೆಚ್ಚಿರುವ ಜಾಗಗಳಲ್ಲಿ ಈ ಸಕ್ಕರೆಯೂ ಸುಲಭವಾಗಿ ಲಭ್ಯವಿರುತ್ತದೆ. ಕೇಕ್, ಸ್ಮೂದಿಗಳು, ಸಲಾಡ್ ಮತ್ತಿತರ ಆಹಾರಗಳಲ್ಲಿ ಸಕ್ಕರೆಯ ಬದಲು ಇದನ್ನು ಬಳಸಬಹುದು.
ಇದನ್ನೂ ಓದಿ: Heath Tips For Weight Loss: ತೂಕ ಇಳಿಸುವ ಪ್ರಯತ್ನವೇ? ಹೀಗೆ ಮಾಡಿ