ತೂಕ ಇಳಿಸಿಕೊಳ್ಳುವ ಕ್ರಿಯೆ (Weight Loss) ಯಾವಾಗಲೂ ಹೆಚ್ಚು ಶಿಸ್ತನ್ನೂ, ತಾಳ್ಮೆಯನ್ನೂ ಬೇಡುತ್ತದೆ. ನಿಯಮಿತ ವ್ಯಾಯಾಮದ ಜೊತೆಗೆ ನಿಗದಿತ ಆಹಾರ ಸೇವನೆಗೆ (Diet) ಸಾಕಷ್ಟು ಕ್ಷಮತೆಯೂ ಅಗತ್ಯ. ಸರಿಯಾದ ಪ್ರಮಾಣದ ಸರಿಯಾದ ಪೋಷಕಾಂಶಗಳ ಆಹಾರ ಸೇವನೆ ಎಂಬುದು ತಮಾಷೆಯ ವಿಷಯವಲ್ಲ. ಕಡಿಮೆ ಕ್ಯಾಲರಿಯಿರುವ ಪೋಷಕಾಂಶಯುಕ್ತ (Nutrients) ಆಹಾರ ಸೇವನೆಗೆ ಕೊಂಚ ಈ ಬಗೆಗಿನ ಜ್ಞಾನವೂ ಅಗತ್ಯ. ಯಾವದ ಬಗೆಯ ಆಹಾರ ಶೈಲಿಯನ್ನು ರೂಢಿಸಿಕೊಳ್ಳಬೇಕು ಎಂಬುದು ಎಲ್ಲರಿಗೂ ಆರಂಭದಲ್ಲಿ ಕೊಂಚ ಗೊಂದಲವನ್ನು ತರುವ ವಿಚಾರವೇ ಆಗಿದ್ದರೂ, ಕ್ರಮೇಣ ಇವುಗಳ ಬಗೆಗಿನ ಸರಿಯಾದ ಜ್ಞಾನ ಹಾಗೂ ತಿಳುವಳಿಕೆಯಿಂದ ಈ ಬಗೆಗಿನ ಹಾದಿ ಸುಗಮವಾಗುತ್ತದೆ. ಹೆಚ್ಚುಬದಲಾವಣೆ ಬೇಡದ, ಆದರೆ, ತಿನ್ನುತ್ತಿರುವ ಆಹಾರಕ್ರಮದಲ್ಲೇ ಕೊಂಚ ಬದಲಾವಣೆ ಮಾಡಿಕೊಂಡರೂ ನಾವು ತೆಗೆದುಕೊಳ್ಳುವ ಆಹಾರದ ಕ್ಯಾಲರಿಯ ಮೇಲೆ ಗಮನ ಇದ್ದರೆ ತೂಕ ಇಳಿಕೆಯ ಹಾದಿ ಸುಲಭವಾಗುತ್ತದೆ. ಆಹಾರ ಕ್ರಮ ಬದಲಾವಣೆಗೆ ಹೆಚ್ಚು ಸಮಯವಿಲ್ಲ, ಆದರೆ, ಸಣ್ಣಪುಟ್ಟ ಬದಲಾವಣೆಗಳನ್ನು ಹೇಗೆ ಮಾಡಬಹುದು ಎಂಬುದನ್ನು ನೀವು ಯೋಚಿಸುತ್ತಿದ್ದರೆ ಅಂಥವರಿಗೆ ಇಲ್ಲಿ ಉತ್ತರವಿದೆ. ಬನ್ನಿ, ನಾವು ನಿತ್ಯ ತಿನ್ನುವ ಆಹಾರದಲ್ಲಿ ಯಾವ ಬಗೆಗಿನ ಕೊಂಚ ಬದಲಾವಣೆಗಳನ್ನು ತರುವ ಮೂಲಕ (Weight Loss Tips) ಈ ದಾರಿಯನ್ನು ಸರಳವಾಗಿಸಬಹುದು ಎಂಬುದನ್ನು ನೋಡೋಣ.
1. ಚಪಾತಿ, ರೋಟಿ ಇತ್ಯಾದಿಗಳನ್ನು ಮಾಡುವಾಗ ಗೋಧಿ ಹಿಟ್ಟು ಅಥವಾ ಮೈದಾದ ಬದಲಾಗಿ ಸಿರಿಧಾನ್ಯಗಳ ಹಿಟ್ಟು, ಜೋಳ, ರಾಗಿ ಹಿಟ್ಟನ್ನು ಸೇರಿಸಿಕೊಳ್ಳಿ. ಮಲ್ಟಿಗ್ರೈನ್ ಹಿಟ್ಟು ಕೂಡಾ ಮಾರುಕಟ್ಟೆಯಲ್ಲಿ ಲಭ್ಯವಿರುವುದರಿಂದ ಅದನ್ನೂ ಬಳಸಬಹುದು. ಅದಕ್ಕೆ ರಾಗಿ, ಅಥವಾ ಜೋಳವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇರಿಸಿಕೊಳ್ಳಬಹುದು. ಇವುಗಳನ್ನು ನಾರಿನಂಶ ಹೆಚ್ಚಿರುವುದರಿಂದ ಹಾಗೂ ಪೋಷಕಾಂಶಗಳಿಂದ ಸಮೃದ್ಧವಾಗಿರುವುದರಿಂದ ಇವು ತೂಕ ಇಳಿಕೆಗೆ ಪೂರಕ. ಇದೇ ಹಿಟ್ಟನ್ನು ನೀರಿನಲ್ಲಿ ಕಲಸಿಕೊಂಡು ದೋಸೆ ಹಿಟ್ಟಿನ ಹದಕ್ಕೆ ಮಾಡಿಕೊಂಡು ದೋಸೆಯನ್ನೂ ಹೊಯ್ದು ತಿನ್ನಬಹುದು.
2. ಬೆಳ್ತಿಗೆ ಅಕ್ಕಿ ಹಲವು ಬಗೆಯ ಸಂಸ್ಕರಣ ಪ್ರಕ್ರಿಯೆಗೆ ಒಳಪಡುವುದರಿಂದ ಇದರಲ್ಲಿ ಸಾಕಷ್ಟು ಬಗೆಯ ಪೋಷಕಾಂಶಗಳೂ, ನಾರಿನಂಶವೂ ನಷ್ಟವಾಗುತ್ತದೆ. ಹಾಗಾಗಿ, ಬೆಳ್ತಿಗೆಯ ಬದಲು ಕುಚ್ಲಕ್ಕಿ ಅನ್ನ ಉಣ್ಣಿ. ಇದು ಹೆಚ್ಚು ಹೊತ್ತಿನವರೆಗೆ ನಿಮ್ಮ ಹಸಿವನ್ನು ಕಡಿಮೆಗೊಳಿಸುವುದಲ್ಲದೆ, ಜೀರ್ಣಕ್ರಿಯೆಯೂ ಚುರುಕಾಗುತ್ತದೆ. ಕುಚ್ಲಕ್ಕಿಯಲ್ಲಿ ಕಡಿಮೆ ಗ್ಲಿಸೆಮಿಕ್ ಇಂಡೆಕ್ಸ್ ಇರುವುದರಿಂದ ಮಧುಮೇಹಿಗಳಿಗೂ ಇದು ಒಳ್ಳೆಯದು, ತೂಕ ಇಳಿಸಿಕೊಳ್ಳುವ ಮಂದಿಗೂ ಉತ್ತಮ.
3. ಬೆಳಗ್ಗಿನ ಹೊತ್ತು ಕಾರ್ನ್ ಫ್ಲೇಕ್ಸ್ ಮತ್ತಿತರ ಸಂಸ್ಕರಿಸಿದ ರೆಡಿ ಟು ಈಟ್ ಆಹಾರಗಳನ್ನು ಹೊಟ್ಟೆಗಿಳಿಸುವ ರೂಢಿಯಿದ್ದರೆ ಬಿಟ್ಟುಬಿಡಿ. ಬದಲಾಗಿ ಓಟ್ಸ್ ಬೇಯಿಸಿಕೊಂಡು ತಿನ್ನಿ.
4. ಆದಷ್ಟೂ ಸಕ್ಕರೆಯ ಬಳಕೆ ಕಡಿಮೆ ಮಾಡಿ. ಸಕ್ಕರೆಯಿಂದ ಬಹಳಷ್ಟು ಆರೋಗ್ಯದ ತೊಂದರೆಗಳೂ ಹಿಂಬಾಲಿಸುತ್ತವೆ. ಸಕ್ಕರೆಯಿಲ್ಲದೆ ಕೆಲವೆಡೆ ಕಷ್ಟವಾಗುತ್ತದೆ ಎಂದಾದರೆ ಅಲ್ಲಿ ಬೆಲ್ಲ, ಜೇನುತುಪ್ಪ, ಖರ್ಜೂರದಂತಹ ಪರ್ಯಾಯಗಳನ್ನು ಬಳಸಿ.
ಇದನ್ನೂ ಓದಿ: Mono Diet: ಏಕಾಹಾರ ಪದ್ಧತಿಯೆಂಬ ಶಾರ್ಟ್‌ಕಟ್: ದಿಢೀರ್ ತೂಕ ಇಳಿಕೆ ಒಳ್ಳೆಯದೇ?
5. ಆಗಾಗ, ಕರಿದ ತಿಂಡಿಗಳು, ಪ್ಯಾಕೇಜ್ಡ್ ಚಿಪ್ಸ್‌ನಂತಹ ತಿನಿಸುಗಳನ್ನು ತಿನ್ನುವ ಅಭ್ಯಾಸವಿದ್ದರೆ ಅದಕ್ಕೆ ಎಲ್ಲಕ್ಕಿಂತ ಮೊದಲು ಕಡಿವಾಣ ಹಾಕಿ. ಮಖಾನಾ, ಒಳಬೀಜಗಳನ್ನು ನೆನೆಸಿ ತಿನ್ನುವುದು ಇತ್ಯಾದಿ ಅಭ್ಯಾಸಗಳನ್ನು ಇದಕ್ಕೆ ಪರ್ಯಾಯವಾಗಿ ರೂಢಿಸಿಕೊಳ್ಳಿ. ಮನೆಯಲ್ಲೇ ಮಾಡಿದ ಮಸಾಲೆಗಳನ್ನು ಹಾಕಿದ ಕೆಲವು ಆರೋಗ್ಯಕರ ಕುರುಕಲನ್ನು ಆಗೀಗೊಮ್ಮೆ ಬಾಯಿ ಚಪಲಕ್ಕೆ ತಿನ್ನಬಹುದು.
6. ಸಾಸ್, ಕೆಚಪ್ ಇತ್ಯಾದಿಗಳ ಬಳಕೆ ಕಡಿಮೆ ಮಾಡಿ. ಬದಲಾಗಿ ಮನೆಯಲ್ಲೇ ಮಾಡಿದ ಚಟ್ನಿ, ಚಟ್ನಿಪುಡಿಗಳನ್ನು ಬಳಕೆ ಮಾಡಿ.
7. ಕಾರ್ಬೋನೇಟೆಡ್ ಪಾನೀಯಗಳು ಅಥವಾ ಪ್ಯಾಕೇಜ್ಡ್ ಜ್ಯೂಸ್‌ಗಳನ್ನು ಕುಡಿಯುವುದನ್ನು ಬಿಡಿ. ಬದಲಾಗಿ ಮನೆಯಲ್ಲೇ ಮಾಡಿದ ಮಜ್ಜಿಗೆ, ಸಕ್ಕರೆ ಸೇರಿಸದ ಹಣ್ಣಿನ ರಸ ಇತ್ಯಾದಿಗಳನ್ನು ಕುಡಿಯುವುದನ್ನು ರೂಢಿಸಿಕೊಳ್ಳಿ.
8. ಆಗಾಗ ಚಹಾ, ಕಾಫಿ ಹೀರಿಕೊಳ್ಳುವ ಅಭ್ಯಾಸವಿದ್ದರೆ ಅದಕ್ಕೆ ಕಡಿವಾಣ ಹಾಕಿ. ಆ ಮೂಲಕ ನೀವು ಹೆಚ್ಚು ಸಕ್ಕರೆಯನ್ನು ಉಪಯೋಗಿಸುವುದೂ ತಪ್ಪುತ್ತದೆ. ಸಾಮಾನ್ಯ ಚಹಾ ಕಾಫಿಯ ಬದಲಾಗಿ ಹರ್ಬಲ್ ಚಹಾ ಕುಡಿಯುವುದನ್ನು ರೂಢಿಸಿಕೊಳ್ಳಿ. ಆ ಮೂಲಕ ನೀರು ಹೆಚ್ಚಾಗಿ ಕುಡಿಯಿರಿ.
ಇದನ್ನೂ ಓದಿ: Weight Loss: ತೂಕ ಇಳಿಕೆಯ ಪ್ರಯಾಣದಲ್ಲಿ ಮಾಡಬಾರದ ಮೂರು ತಪ್ಪುಗಳು!