ದೀಪಾವಳಿಯಿಂದ ಪ್ರಾರಂಭವಾಗಿ ಯುಗಾದಿಯವರೆಗೂ ಭರಪೂರ ತಿಂದಿದ್ದಾಗಿದೆ. ಪಾರ್ಟಿ ಮಾಡುವುದಕ್ಕೆ, ತಿನ್ನುವುದಕ್ಕೆ ಕಾರಣಗಳು ಏನೇ ಇರಬಹುದು… ತೂಕ ಮಾತ್ರ ಈ ಯಾವ ಕಾರಣಗಳನ್ನೂ ಕೇಳುವುದಿಲ್ಲ. ತನ್ನಷ್ಟಕ್ಕೆ ಏರುತ್ತದೆ! ಮೂರು ತಿಂಗಳಲ್ಲಿ ಏರಿದ ತೂಕವನ್ನು ಇಳಿಸಲು (Weight Loss Tips) ಆರು ತಿಂಗಳು ಒದ್ದಾಡಿದರೂ ಸಾಕಾಗುವುದಿಲ್ಲ. ಅದರಲ್ಲೂ ಹೊಸ ವರ್ಷದ ನಿರ್ಣಯವೆಂದು ಒಂದಿಷ್ಟು ದಿನ ಜಿಮ್, ವಾಕಿಂಗ್ ಪಾರ್ಕ್‌ಗಳಿಗೆ ಎಡತಾಕಿ, ಬಿಟ್ಟುಬಿಟ್ಟರೆ ಕೆಲಸ ಇನ್ನೂ ಕೆಡುತ್ತದೆ. ಆಗ ಗಮನ ಹೋಗುವುದು ತ್ವರಿತವಾಗಿ ತೂಕ ಇಳಿಸುವ ಉಪಾಯಗಳ ಮೇಲೆ! ತೂಕ ಏರುವುದಕ್ಕೆ ಬೇಕಾಗುವಷ್ಟು ಸಮಯದಲ್ಲಿ, ಏರಿದ ತೂಕವನ್ನು ಇಳಿಸಲು ಸಾಧ್ಯವೇ ಇಲ್ಲ. ಕೆಲವರಿಗೆ ಹಲವಾರು ವಾರಗಳು ಬೇಕಾದಬಹುದು; ಹಲವರಿಗೆ ಕೆಲವಾರು ತಿಂಗಳುಗಳು ಅಥವಾ ವರ್ಷಗಳೇ ಬೇಕಾಗಬಹುದು- ಕ್ರಮಬದ್ಧವಾಗಿ ತೂಕ ಇಳಿಸಲು. ಇಷ್ಟರ ನಡುವೆ ಫಾಸ್ಟ್‌ಟ್ರಾಕ್‌ನಲ್ಲಿ ತೂಕ ಇಳಿಸುವ ಉಪಾಯಗಳತ್ತ ಕಣ್ಣಾಡಿಸುತ್ತೇವೆ. ಹಾಗೆಲ್ಲಾ ತೂಕವನ್ನು ಸಿಕ್ಕಾಪಟ್ಟೆ ಏರಿಳಿತ ಮಾಡುವುದು ಸರಿಯೇ? ಇದರಿಂದ ಅಡ್ಡ ಪರಿಣಾಮಗಳು (Weight Loss Tips) ಏನೂ ಇಲ್ಲವೇ?
ಖಂಡಿತ ದುಷ್ಪರಿಣಾಮಗಳಿವೆ. ಕ್ರಮಬದ್ಧವಾಗಿ ತೂಕ ಇಳಿಸುವ ಕ್ರಿಯೆಯಲ್ಲೇ ಗಂಭೀರವಾಗಿ ತೊಡಗಿಸಿಕೊಂಡವರು, ವಾರವೊಂದಕ್ಕೆ ಅರ್ಧ ಕೆ.ಜಿ- ಹೆಚ್ಚೆಂದರೆ ಒಂದು ಕೆ.ಜಿ. ತೂಕ ಇಳಿಸುವುದು ಸಾಧ್ಯ. ಇದನ್ನೂ ಕಾಯ್ದುಕೊಂಡು ಮುನ್ನಡೆಯುವುದು ಸುಲಭದ ಕೆಲಸವಲ್ಲ. ಹಾಗಿರುವಾಗ ಇದಕ್ಕಿಂತ ವಿಪರೀತ ಪ್ರಮಾಣದಲ್ಲಿ ತೂಕ ಇಳಿಸುವ ಕೆಲಸ ತೊಂದರೆಗಳನ್ನು ತಂದೀತು, ಜೋಕೆ! ತೊಂದರೆ ಅಂದರೆ… ಏನಾಗುತ್ತದೆ?
ಚಯಾಪಚಯ ಕ್ರಿಯೆ ಕುಸಿಯುತ್ತದೆ
ತೂಕ ಇಳಿಸುವುದಕ್ಕೆ ಯದ್ವಾತದ್ವಾ ಪ್ರಯತ್ನಿಸಿದರೆ ದೇಹದ ಚಯಾಪಚಯ ಕ್ರಿಯೆಯಲ್ಲಿ ತೊಂದರೆ ಉಂಟಾಗುತ್ತದೆ. ಒಮ್ಮೆ ಈ ಪ್ರಕ್ರಿಯೆಯಲ್ಲಿ ತೊಂದರೆ ಉಂಟಾದರೆ, ಅದು ದೇಹದ ಮೇಲೆ ನಾನಾ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಮಾತ್ರವಲ್ಲ, ಇಳಿಸಿದ ತೂಕವನ್ನು ಕಾಯ್ದುಕೊಳ್ಳುವುದೂ ಕಷ್ಟವಾಗುತ್ತದೆ. ಅತಿಯಾಗಿ, ತಳಹದಿಯಿಲ್ಲದ ಡಯೆಟ್ ಮಾಡಿದರೆ ದೇಹಕ್ಕೆ ಅಗತ್ಯವಾಗುವ ಪೋಷಕಾಂಶಗಳ ಕೊರತೆಯಾಗಿ, ಶರೀರ ನಿಶ್ಶಕ್ತಿಯಿಂದ ಬಳಲಬಹುದು. ಬೇಕಾದ ಸತ್ವಗಳ ಕೊರತೆ ಉಂಟಾಗಿ ಹೊಸ ಸಮಸ್ಯೆಗಳು ಕಾಣಬಹುದು.
ಕ್ಷಿಪ್ರ ತೂಕ ಇಳಿಕೆಗಾಗಿ ಕೆಲವು ಆಹಾರಗಳನ್ನು ಇದ್ದಕ್ಕಿದ್ದಂತೆ ನಿಲ್ಲಿಸಿದ್ದೀರಿ ಎಂದಾದರೆ, ಅವುಗಳನ್ನು ದೀರ್ಘಕಾಲದವರೆಗೆ ನಿಲ್ಲಿಸುವುದು ಸಾಧ್ಯವಾಗುವುದಿಲ್ಲ. ಅಂತಹ ಆಹಾರಗಳನ್ನು ಮರಳಿ ಆರಂಭಿಸಿದ ಕೂಡಲೇ ತೂಕವೂ ಏರತೊಡಗುತ್ತದೆ. ಉದಾ, ಸಿಹಿ ತಿಂಡಿಗಳನ್ನು ಸಂಪೂರ್ಣ ನಿಲ್ಲಿಸುವ ಬದಲು, ಪ್ರಮಾಣ ಕಡಿತ ಮಾಡುವುದು ಹೆಚ್ಚು ಸಹಕಾರಿ.
ಕೊಬ್ಬು ಕರಗಿಸಿ
ತೂಕ ಇಳಿಸುವುದೆಂದರೆ ದೇಹದಲ್ಲಿರುವ ಕೊಬ್ಬಿನ ಭಾಗವನ್ನು ಕರಗಿಸುವುದು, ಮಾಂಸಖಂಡಗಳನ್ನಲ್ಲ. ಕೊಬ್ಬು ಕಡಿಮೆ ಮಾಡುವುದರ ಜೊತೆಗೆ ಸ್ನಾಯುಗಳನ್ನು ಸಶಕ್ತ ಮಾಡುವುದು. ಅಂದರೆ, ದೇಹಕ್ಕೆ ಅಗತ್ಯವಾದ ಪ್ರೊಟೀನ್ ಒದಗಿಸಿ. ಸ್ನಾಯುಗಳನ್ನು ಹುರಿಗೊಳಿಸಲು ಸರಿಯಾದ ವ್ಯಾಯಾಮ ಮಾಡಿ. ಆಗ ಮಾತ್ರವೇ ಕರಗಿಸಿದ ತೂಕವನ್ನು ಹೆಚ್ಚಿನ ದಿನಗಳವರೆಗೆ ಕಾಯ್ದುಕೊಳ್ಳುವುದು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಧಿಡೀರ್ ಇಳಿದದ್ದು, ಹಾಗೆಯೇ ಏರಲೂಬಹುದು.
ನಮ್ಮ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಪೋಷಕಾಂಶಗಳು ಬೇಕು. ಸೂಕ್ತ ಪ್ರಮಾಣದಲ್ಲಿ ಪಿಷ್ಟ, ಪ್ರೊಟೀನ್, ನಾರು, ಖನಿಜ ಮತ್ತು ಜೀವಸತ್ವಗಳು ದೇಹದ ಕಾರ್ಯಕ್ಷಮತೆಗೆ ಅಗತ್ಯ. ಕ್ಯಾಲರಿಗಳನ್ನು ಕಡಿತ ಮಾಡುವಾಗ ಇಂಥ ಅಮೂಲ್ಯ ಸತ್ವಗಳು ದೇಹಕ್ಕೆ ಕೊರತೆಯಾಗಬಾರದು. ಕೇವಲ ಅನಗತ್ಯ ಕ್ಯಾಲರಿಗಳಿಗಷ್ಟೇ ಕತ್ತರಿ ಹಾಕಬೇಕು. ಅಗತ್ಯವಾಗ ಪೋಷಕತತ್ವಗಳು ಯಾವುದೇ ಕಡಿಮೆಯಾದರೂ ದೇಹ ದುರ್ಬಲವಾಗುತ್ತದೆ ಮತ್ತು ರೋಗನಿರೋಧಕ ಶಕ್ತಿ ಕುಂಠಿತಗೊಳ್ಳುತ್ತದೆ. ಸುಸ್ತು, ಆಯಾಸ, ಮಲಬದ್ಧತೆ, ಕೂದಲು ಉದುರುವುದು- ಹೀಗೆ ನಾನಾ ರೀತಿಯಲ್ಲಿ ದೇಹ ತನ್ನ ಕಷ್ಟವನ್ನು ನಮ್ಮೊಂದಿಗೆ ಹೇಳಲು ತೊಡಗುತ್ತದೆ.
ಅತಿಯಾದ, ಅವೈಜ್ಞಾನಿಕ ಡಯೆಟ್‌ನಿಂದ ಅನೋರೆಕ್ಸಿಯ ಅಥವಾ ನಿರ್ಜಲೀಕರಣದಂಥ ಸಮಸ್ಯೆ ಕಾಡಬಹುದು. ಇದು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಹಾಗಾಗಿ ತೂಕ ಇಳಿಸುವುದೆಂದರೆ ಸರ್ಕಸ್ ಅಲ್ಲ; ಅದು ಆರೋಗ್ಯಕರ ದೇಹ ಮತ್ತು ಮನಸ್ಸುಗಳತ್ತ ನಾವು ಇಡುವ ಸುಸ್ಥಿರ ಹೆಜ್ಜೆ. ಧಿಡೀರ್ ತೂಕ ಇಳಿಸುವ ಮೋಹಕ್ಕೆ ಬೀಳದೆ, ಇಡೀ ಪ್ರಕ್ರಿಯೆಯನ್ನು ನಿಧಾನವಾಗಿ ಮತ್ತು ನಿರ್ಣಾಯಕವಾಗಿ ಕೈಗೆತ್ತಿಕೊಳ್ಳಿ.
ಇದನ್ನೂ ಓದಿ: Brain Exercise: ಚುರುಕಾಗಿರಬೇಕೇ? ದೇಹಕ್ಕೆ ವ್ಯಾಯಾಮ ಮಾಡಿದರೆ ಸಾಲದು, ಮೆದುಳಿಗೂ ಮಾಡಿ!