Site icon Vistara News

West Nile fever : ಕೇರಳದಲ್ಲಿ ವೆಸ್ಟ್‌ ನೈಲ್ ಭೀತಿ; ಮೈಸೂರು ಗಡಿಭಾಗದಲ್ಲಿ ಆರೋಗ್ಯ ಇಲಾಖೆ ಅಲರ್ಟ್‌

West Nile fever Health department on alert

ಮೈಸೂರು: ನಿಫಾ, ಕೋವಿಡ್, ಹಕ್ಕಿ ಜ್ವರ, ಹಂದಿ ಜ್ವರ ಬಳಿಕ ಈಗ ವೆಸ್ಟ್ ನೈಲ್ ಜ್ವರದ ಭೀತಿ ಹೆಚ್ಚಾಗಿದೆ. ನೆರೆಯ ಕೇರಳದಲ್ಲಿ ವೆಸ್ಟ್‌ ನೈಲ್ ಜ್ವರ (West Nile fever) ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕೇರಳದ ಗಡಿ ಹಂಚಿಕೊಂಡಿರುವ ಮೈಸೂರು ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ (Health department) ಅಲರ್ಟ್ ಆಗಿದೆ.

ಎಚ್‌ಡಿ ಕೋಟೆ ತಾಲೂಕಿನ ಡಿ.ಬಿ ಕುಪ್ಪೆ ಸೇರಿದಂತೆ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಚೆಕ್ ಪೋಸ್ಟ್‌ಗಳಲ್ಲಿ ತೀವ್ರ ನಿಗಾವಹಿಸಲಾಗಿದೆ. ಗಡಿ ಭಾಗದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ತಪಾಸಣೆಯೊಂದಿಗೆ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಈ ಹಿಂದೆ ಕೋವಿಡ್, ಹಂದಿಜ್ವರ, ನಿಫಾ ವೈರಸ್‌ ಕೇರಳದಲ್ಲಿ ಕಾಣಿಸಿಕೊಂಡು ನಂತರ ಕರ್ನಾಟಕಕ್ಕೂ ಹರಡಿತ್ತು. ಹೀಗಾಗಿ ಕೇರಳ ಗಡಿ ಮೂಲಕ ಮೈಸೂರಿಗೆ ಪ್ರವೇಶ ಪಡೆಯುವ ರೋಗಿಗಳಿಂದ ರಾಜ್ಯಕ್ಕೂ ಹರಡುವ ಸಾಧ್ಯತೆ ಇದೆ. ಹೀಗಾಗಿ ಹೆಚ್ಚಿನ ಮುಂಜಾಗ್ರತೆಯನ್ನು ವಹಿಸಲಾಗುತ್ತಿದೆ.

ಎಚ್‌ಡಿ ಕೋಟೆಯ ಗಡಿ ಭಾಗದಲ್ಲಿ ಹಲವರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಜ್ವರ, ತಲೆನೋವು, ಶೀತದಿಂದ ಬಳಲುತ್ತಿದ್ದಾರೆ. ಹೀಗಾಗಿ ಎಚ್‌ಡಿಕೋಟೆಯ ತಾಲೂಕು ಆರೋಗ್ಯಾಧಿಕಾರಿಗಳು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಸ್ಯಾಂಪಲ್ ರವಾನಿಸಿದ್ದಾರೆ.

ಜನರಲ್ಲಿ ವೆಸ್ಟ್‌ ನೈಲ್‌ ಜ್ವರದ ಕುರಿತು ಜಾಗೃತಿ ಮೂಡಿಸುತ್ತಿರುವ ಆರೋಗ್ಯಾಧಿಕಾರಿಗಳು

ಈ ಬಗ್ಗೆ ಮೈಸೂರು ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಪಿ.ಸಿ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ. ಈಗಾಗಲೇ ಆರೋಗ್ಯ ಇಲಾಖೆಯು ಕಾಡಂಚಿನ ಗ್ರಾಮದ ಮನೆ – ಮನೆಗೆ ತೆರಳಿ ಮಾಹಿತಿ ನೀಡುತ್ತಿದ್ದೇವೆ. ಸಾಮಾನ್ಯ ಜ್ವರಕ್ಕೆ ನೀಡುವಂತೆ ವೆಸ್ಟ್ ನೈಲ್ ಜ್ವರಕ್ಕೂ ಚಿಕಿತ್ಸೆ ನೀಡಲಾಗುತ್ತದೆ.

ವೆಸ್ಟ್‌ ನೈಲ್‌ ಜ್ವರದ ಲಕ್ಷಣಗಳಿವು

1) ದಿಢೀರ್‌ ಜ್ವರ ಬರುವುದು
2) ವಿಪರೀತ ಮೈ-ಕೈ ನೋವು, ತಲೆನೋವು ಕಾಣಿಸಿಕೊಳ್ಳುವುದು
3) ದೇಹದ ಮೇಲೆ ದದ್ದುಗಳು ಕಾಣಿಸಿಕೊಳ್ಳುವುದು
4) ಕೆಲವೊಮ್ಮೆ ವಾಂತಿ ಆಗಲಿದೆ. ಇವು ವೆಸ್ಟ್ ನೈಲ್ ಜ್ವರದ ಲಕ್ಷಣಗಳಾಗಿವೆ. ಸಾಮಾನ್ಯವಾಗಿ ಈ ವೈರಸ್‌ ಸೊಳ್ಳೆಗಳಿಂದ ಹರಡುತ್ತದೆ. ಸೋಂಕಿತ ಪಕ್ಷಿಗಳನ್ನು ತಿನ್ನುವಾಗ ಸೋಂಕಿಗೆ ಒಳಗಾಗುತ್ತವೆ. ಅವು ಮನುಷ್ಯನನ್ನು ಕಚ್ಚಿದಾಗ ಈ ವೆಸ್ಟ್‌ ಬೈಲ್‌ ಜ್ವರ ಕಾಣಿಸಿಕೊಳ್ಳುತ್ತದೆ.

ಈ ರೀತಿಯ ಲಕ್ಷಣಗಳು ಕಂಡು ಬಂದರೆ ಕೂಡಲೇ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ವೆಸ್ಟ್ ನೈಲ್ ಜ್ವರ ಮಾರಣಾಂತಿಕವಲ್ಲ. ಹಾಗಾಗಿ ಜನರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ, ಆದರೆ ಎಚ್ಚರಿಕೆಯಿಂದ ಇರಬೇಕು.

ಇದನ್ನೂ ಓದಿ: Uttara Kannada News: ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರ ವಹಿಸಿ: ಡಿಸಿ ಮಾನಕರ್‌

ಮೈಸೂರಿನಲ್ಲಿ ಕಾಲರಾ ಅಟ್ಟಹಾಸ; ಕಲುಷಿತ ನೀರು ಕುಡಿದು 114 ಜನಕ್ಕೆ ಕಾಯಿಲೆ!

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ವಿಧಾನಸಭೆ ಕ್ಷೇತ್ರವಾದ ವರುಣದಲ್ಲಿ (Varuna) ಶುದ್ಧ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದ್ದು, ತಗಡೂರು ಗ್ರಾಮದಲ್ಲಿ ಇದರಿಂದ ಜನ ಕಾಲರಾಗೆ ತುತ್ತಾಗುತ್ತಿದ್ದಾರೆ. ತಗಡೂರು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ, ಕಲುಷಿತ ನೀರು ಸೇವಿಸಿದ ಕಾರಣ 25 ಗ್ರಾಮಸ್ಥರು ಸೇರಿ 114 ಮಂದಿ ಕಾಲರಾ (Cholera) ಕಾಯಿಲೆಯಿಂದ ಬಳಲುತ್ತಿದ್ದಾರೆ. ವಾಂತಿ-ಭೇದಿಯಿಂದ ಜನ ತತ್ತರಿಸಿ ಹೋಗಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.

ತಗಡೂರು ಗ್ರಾಮವು ನಂಜನಗೂಡು ತಾಲೂಕಿಗೆ ಸೇರಿದರೂ ವರುಣ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ತಗಡೂರು ಗ್ರಾಮ ಪಂಚಾಯಿತಿಯ 1, 2 ಹಾಗೂ 3ನೇ ವಾಸಿಸುತ್ತಿರುವ ಜನರು ಕಾಲರಾಗೆ ತುತ್ತಾಗಿದ್ದಾರೆ. 114 ರೋಗಿಗಳಲ್ಲಿ ಐವರ ಸ್ಥಿತಿ ಗಂಭೀರವಾದ ಕಾರಣ ಅವರನ್ನು ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದವರಿಗೆ ತಗಡೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರ ಮಧ್ಯೆಯೇ, ಕಾಲರಾ ಹರಡಲು ಅಧಿಕಾರಿಗಳ ನಿರ್ಲಕ್ಷ್ಯವೇ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

12 ಕೈ ಪಂಪ್‌ಗಳಿದ್ದರೂ ಪ್ರಯೋಜನ ಇಲ್ಲ

ಗ್ರಾಮದಲ್ಲಿ 12 ಕೈ ಪಂಪ್‌ಗಳಿದ್ದು, ನಾಲ್ಕು ಕೈಪಂಪ್‌ಗಳ ನೀರು ಕುಡಿಯಲು ಯೋಗ್ಯವಿಲ್ಲ. ಆತಂಕಕಾರಿ ವರದಿ ಇದ್ದರೂ ತಗಡೂರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಎಚ್ಚೆತ್ತುಕೊಂಡು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ಹಾಗಾಗಿ, ಕಲುಷಿತ ನೀರು ಸೇವಿಸಿ ನೂರಾರು ಜನ ಅಸ್ವಸ್ಥರಾಗಿದ್ದಾರೆ. ಇದರಿಂದಾಗಿ ಗ್ರಾಮಸ್ಥರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಕಿಡಿ ಕಾರುತ್ತಿದ್ದಾರೆ.

ಜನಾಕ್ರೋಶದ ಬಳಿಕ ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳು.

ದಿಢೀರ್‌ ಕ್ರಮಕ್ಕೆ ಮುಂದಾದ ಅಧಿಕಾರಿಗಳು

ಗ್ರಾಮದಲ್ಲಿ ನೂರಾರು ಜನ ಕಾಲರಾಗೆ ತುತ್ತಾಗಿರುವ ಸುದ್ದಿ ತಿಳಿಯುತ್ತಲೇ ಅಧಿಕಾರಿಗಳ ದಂಡೇ ಗ್ರಾಮಕ್ಕೆ ತೆರಳಿದೆ. ಗ್ರಾಮಕ್ಕೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಕುಮಾರಸ್ವಾಮಿ, ನಂಜನಗೂಡು ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು, ಜಿಲ್ಲಾ ಕಾಲರಾ ವೈದ್ಯಾಧಿಕಾರಿ ಡಾ. ಪುಟ್ಟತಾಯಮ್ಮ, ತಾಲೂಕು ವೈದ್ಯಾಧಿಕಾರಿ ಡಾ. ಈಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಗ್ರಾಮದಲ್ಲಿರುವ ಸಾರ್ವಜನಿಕರಿಗೆ ಕೂಡ ಪ್ರತಿರೋಧಕ ಚುಚ್ಚುಮದ್ದು ನೀಡಲಾಗುತ್ತಿದೆ. ಪ್ರತಿ ಮನೆ ಮನೆಗೆ ಒಆರ್‌ಎಸ್ ಪೌಡರ್ ವಿತರಣೆ ಮಾಡಲಾಗಿದೆ. ಮನೆಯಲ್ಲಿ ಬಿಸಿ ನೀರು ಸೇವನೆ ಮಾಡಲು ಪ್ರತ್ಯೇಕವಾಗಿ ಕುಡಿಯುವ ನೀರಿನ ಟ್ಯಾಂಕ್ ವ್ಯವಸ್ಥೆ ಮಾಡಲಾಗಿದೆ.

ಗ್ರಾಮದಲ್ಲಿ ಅಧಿಕಾರಿಗಳು ಬೀಡು ಬಿಟ್ಟಿದ್ದು, ದಿನಕ್ಕೆ ಮೂರು ಬಾರಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಜತೆಗೂಡಿ ವೈದ್ಯಾಧಿಕಾರಿಗಳು ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ. ಇಷ್ಟಾದರೂ ಪಿಡಿಒ ದಿವಾಕರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ನಾಪತ್ತೆಯಾಗಿದ್ದು, ಸಂಬಂಧಪಟ್ಟ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version