ಋತುಮಾನಕ್ಕೆ ಸೂಕ್ತವಾದ ಆಹಾರಗಳ ಬಗ್ಗೆ ಆಗಾಗ ಮಾತುಗಳನ್ನು ಕೇಳುತ್ತೇವೆ. ಯಾವುದು ಬೇಕು, ಯಾವುದು ಬೇಡ, ಯಾವುದು ಸರಿ ಅಥವಾ ಸರಿಯಲ್ಲ ಎನ್ನುವುದಕ್ಕೆ ಸಮರ್ಪಕವಾದ ತೀರ್ಪು ಕೊಡುವುದು ಕೆಲವೊಮ್ಮೆ ಕಷ್ಟವೇ. ಆದರೂ ಚಳಿಗಾಲದಲ್ಲಿ ಸೇವಿಸಿದರೆ ಅನುಕೂಲ ಹೆಚ್ಚು ಎನ್ನುವಂಥ ಕೆಲವು ಆಹಾರಗಳನ್ನು ತಜ್ಞರು ಗುರುತಿಸಿದ್ದಾರೆ. ಅಂಥ ಕೆಲವು ಆಹಾರಗಳ ಮಾಹಿತಿಯಿದು.
ಅಂಟು
ಸಾಮಾನ್ಯವಾಗಿ ಅಕೇಶಿಯದಂಥ ಮರಗಳು ಸ್ರವಿಸಿದ ಗೋಂದಿನಂಥ ವಸ್ತುವೇ ಈ ತಿನ್ನಬಲ್ಲ ಅಂಟು. ಇದನ್ನು ಹಲವು ರೀತಿಯ ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಲಾಡು, ಕರದಂಟು, ಕೆಲವು ಹಲ್ವಾಗಳು ಮುಂತಾದ ಜನಪ್ರಿಯ ತಿನಿಸುಗಳ ಹೊರತಾಗಿ, ಮಕ್ಕಳಿಗೆ ಮತ್ತು ಬಾಣಂತಿಯರಿಗೆ ಇದನ್ನು ಪುಷ್ಟಿವರ್ಧಕವಾಗಿ ನೀಡಲಾಗುತ್ತದೆ. ಚಳಿಯ ದಿನಗಳಲ್ಲಿ ದೇಹದ ಉಷ್ಣತೆಯನ್ನು ಹೆಚ್ಚಿಸಲು ಇದು ನೆರವಾಗುತ್ತದೆ. ಜೊತೆಗೆ ನಾರಿನಂಶವೂ ಇರುವುದರಿಂದ ಜೀರ್ಣಾಂಗಗಳ ಆರೋಗ್ಯ ಕಾಪಾಡುವಲ್ಲಿ ಸಹಾಯಕ. ಚಳಿಗಾಲದಲ್ಲಿ ದೈಹಿಕ ಚಟುವಟಿಕೆ ಕಡಿಮೆಯೇ ಇರುವುದರಿಂದ, ನೀರು ಮತ್ತು ನಾರು ಹೊಟ್ಟೆಯ ಆರೋಗ್ಯ ಕಾಪಾಡುವಲ್ಲಿ ಮಹತ್ವವೆನಿಸುತ್ತವೆ.
ಇದರಲ್ಲಿರುವ ಸೂಕ್ಷ್ಮ ಪೋಷಕಾಂಶಗಳು ಮತ್ತು ಖನಿಜಗಳು ನಮ್ಮ ಕೀಲುಗಳ ಆರೋಗ್ಯ ಹೆಚ್ಚಿಸುವಲ್ಲಿ ನೆರವು ನೀಡುತ್ತವೆ. ಇದರಲ್ಲಿ ಪಿಷ್ಟ ಮಾತ್ರವಲ್ಲ, ಕ್ಯಾಲ್ಶಿಯಂ ಮತ್ತು ಮೆಗ್ನೀಶಿಯಂ ಅಂಶಗಳೂ ಹೇರಳವಾಗಿದ್ದು, ಮೂಳೆಗಳನ್ನೂ ಬಲಪಡಿಸುತ್ತವೆ. ಅಂಟಿನಲ್ಲಿ ಉತ್ಕರ್ಷಣ ನಿರೋಧಕಗಳು ಭರಪೂರ ಇವೆ. ಇದರಿಂದ ದೇಹದಲ್ಲಿ ಚಳಿಗಾಲದಲ್ಲಿ ಹೆಚ್ಚಬಹುದಾದ ಉರಿಯೂತವನ್ನು ಶಮನ ಮಾಡುವುದಕ್ಕೆ ಇದು ಸಹಕಾರಿ.
ಬೆಳ್ಳುಳ್ಳಿ ಸೊಪ್ಪು
ಈರುಳ್ಳಿ ಸೊಪ್ಪು ಹೆಚ್ಚಿನವರಿಗೆ ಪರಿಚಿತ. ಆದರೆ ಬೆಳ್ಳುಳ್ಳಿಯ ಸೊಪ್ಪು…! ಹೌದು, ಬೆಳ್ಳುಳ್ಳಿ ಗಡ್ಡೆಯಾಗಿ ಬಲಿಯುವ ಮುನ್ನವೇ ತೆಗೆಯಲಾದ ಕಡ್ಡಿಯಂಥ ಸೊಪ್ಪಿದು. ನೋಡುವುದಕ್ಕೆ ಈರುಳ್ಳಿ ಸೊಪ್ಪಿನಂತೆಯೇ ಗೋಚರಿಸುವ ಬೆಳ್ಳುಳ್ಳಿ ಸೊಪ್ಪು ಆರೋಗ್ಯಕ್ಕೆ ಅತ್ಯಂತ ಉತ್ತಮವಾದದ್ದು. ಹಲವು ರೀತಿಯ ಸೂಪ್‌ಗಳು, ಡಿಪ್, ಪಾಸ್ತಾ, ಸ್ಯಾಂಡ್‌ವಿಚ್, ಫ್ರೈಡ್‌ರೈಸ್‌ಗಳಿಗೆ ಇವುಗಳನ್ನು ಬಳಸಲಾಗುತ್ತದೆ. ಇವಿಷ್ಟೇ ಅಲ್ಲ, ಈರುಳ್ಳಿ ಹೂವಿನಂತೆಯೇ ಕೊಂಚ ಘಾಟು ಮಿಶ್ರಿತ ಪರಿಮಳದ ಈ ಸೊಪ್ಪನ್ನು ನಿಮ್ಮಿಷ್ಟದ ಯಾವುದೇ ಅಡುಗೆಗೂ ಬಳಸಿಕೊಳ್ಳಬಹುದು.
ಬೆಳ್ಳುಳ್ಳಿಯಲ್ಲಿರುವ ಅಲ್ಲಿಸಿನ್ ಅಂಶವು ಪ್ರಬಲವಾದ ಉತ್ಕರ್ಷಣ ನಿರೋಧಕ ಎಂದೇ ಪ್ರಸಿದ್ಧ. ಈ ಎಳೆಯ ಬೆಳ್ಳುಳ್ಳಿ ಅಥವಾ ಬೆಳ್ಳುಳ್ಳಿ ಸೊಪ್ಪಿನಲ್ಲಿ ಅಲ್ಲಿಸಿನ್ ಅಂಶ ಇನ್ನಷ್ಟು ಸಾಂದ್ರವಾಗಿದೆ. ಚಳಿಗಾಲದ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಈ ಸತ್ವವು ಉತ್ತರವಾಗಬಲ್ಲದು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ನೆಗಡಿ-ಕೆಮ್ಮು-ಗಂಟಲುನೋವಿನಂಥ ತೊಂದರೆಗಳಿಂದ ಉಪಶಮನಕ್ಕೆ ಇದು ಉಪಯುಕ್ತ. ಕೊಲೆಸ್ಟ್ರಾಲ್ ಕಡಿತ ಮಾಡುವುದರಿಂದ ಹಿಡಿದು ಕ್ಯಾನ್ಸರ್‌ನಂಥ ಮಾರಕ ರೋಗಗಳನ್ನು ತಡೆಗಟ್ಟುವ ಸಾಮರ್ಥ್ಯ ಅಲ್ಲಿಸಿನ್‌ಗಿದೆ ಎಂದೂ ಹೇಳಲಾಗುತ್ತದೆ.
ಟರ್ನಿಪ್ ಗಡ್ಡೆ
ಚಳಿಗಾಲದಲ್ಲಿ ಸಹಜವಾಗಿಯೇ ಗಡ್ಡೆ-ಗೆಣಸುಗಳು ಹೆಚ್ಚು. ನೋಡುವುದಕ್ಕೆ ಬೀಟ್‌ರೂಟ್‌ನಂತೆಯೇ ಕಾಣುವ ಈ ಗಡ್ಡೆಯ ಸೇವನೆಯಿಂದ ಲಾಭಗಳು ಬಹಳಷ್ಟಿವೆ. ಕ್ಯಾಲರಿ ಕಡಿಮೆಯಿದ್ದು ಭರಪೂರ ಸತ್ವಗಳು ನೀಡುವ ಸಾಮರ್ಥ್ಯ ಟರ್ನಿಪ್‌ನದ್ದು. ಅಲ್ಪ ಪ್ರಮಾಣದಲ್ಲಿ ಒಮೇಗಾ 3 ಕೊಬ್ಬಿನಾಮ್ಲವೂ ಇದರಲ್ಲಿ ಇರುವುದರಿಂದ, ಚಳಿಗಾಲಕ್ಕೆ ಅಗತ್ಯವಾದ ಒಳ್ಳೆಯ ಕೊಬ್ಬನ್ನೂ ಇದು ದೇಹಕ್ಕೆ ನೀಡುತ್ತದೆ.
ವಿಟಮಿನ್ ಸಿ, ಇ, ಕೆ, ಬಿ ಮತ್ತು ಬೀಟಾ ಕ್ಯಾರೊಟಿನ್ನಂಥ ಉತ್ಕರ್ಷಣ ನಿರೋಧಕ ಜೀವಸತ್ವಗಳು, ಕ್ಯಾಲ್ಶಿಯಂ, ಮೆಗ್ನೀಶಿಯಂನಂಥ ಖನಿಜಗಳು ಟರ್ನಿಪ್ ಗಡ್ಡೆಯಲ್ಲಿವೆ. ನಾರುಭರಿತ ಈ ಗಡ್ಡೆಯ ಸೇವನೆಯು ನಮ್ಮ ಜೀರ್ಣಾಂಗಗಳ ಪಾಲಿಗೆ ವರದಾನವಾಗಬಲ್ಲದು. ಈ ಗಡ್ಡೆಯ ಸೇವನೆಯಿಂದ ಹೃದಯದ ಆರೋಗ್ಯ ಸುಧಾರಿಸಿ, ಮೂಳೆಗಳು ಬಲಗೊಳ್ಳುತ್ತವೆ. ಇವೆಲ್ಲವೂ ಚಳಿಗಾಲದಕ್ಕೆ ಅಗತ್ಯವಾಗಿ ಬೇಕಾದಂಥ ಅಂಶಗಳು.
ಇದನ್ನೂ ಓದಿ: Health Care Of Women After Thirty: ಮೂವತ್ತರ ನಂತರ ಮಹಿಳೆಯರ ಆರೋಗ್ಯ ಕಾಳಜಿ ಹೀಗಿರಲಿ