ಹಬ್ಬಗಳೆಂದರೆ ಸಂಭ್ರಮ, ಹಬ್ಬಗಳೆಂದರೆ ಸಿಹಿ ತಿನಿಸು, ಸಿಹಿ ಅಡುಗೆ. ಪ್ರತೀ ಹಬ್ಬಕ್ಕೂ ಗಡದ್ದಾಗಿ ಸಿಹಿ ತಿನಿದು ಬಾರಿಸಿದರೆ ನಮ್ಮ ಆರೋಗ್ಯದ ಗತಿ ಏನು? ಸಿಕ್ಕಾಪಟ್ಟೆ ಸಕ್ಕರೆ ತಿನ್ನುವುದರಿಂದ (Sugar Side Effects) ನಮ್ಮ ದೇಹದ ಮೇಲಾಗುವ ಪರಿಣಾಮಗಳೇನು (What Happens When You Have Too Much Sugar) ಎನ್ನುವುದನ್ನು ತಿಳಿಯೋಣವೇ?
ಸಕ್ಕರೆ ಬೇಕು!
ಹೌದು, ನಮ್ಮ ದೇಹಕ್ಕೆ ಸಕ್ಕರೆಯೂ ಬೇಕು. ಸಕ್ಕರೆಯೆಂದರೆ ಒಂದು ತೆರನಾದ ಪಿಷ್ಟ. ಅದನ್ನು ವಿಘಟಿಸುವ ದೇಹ ಗ್ಲೂಕೋಸ್ ಆಗಿ ಪರಿವರ್ತಿಸಿ, ತನ್ನ ಶಕ್ತಿಯ ಅಗತ್ಯಗಳಿಗೆ ಬಳಸಿಕೊಳ್ಳುತ್ತದೆ. ಜೇನುತುಪ್ಪ, ಖರ್ಜೂರ, ಹಣ್ಣುಗಳು, ಡೈರಿ ಉತ್ಪನ್ನಗಳು ಮುಂತಾದ ಹಲವಾರು ಆಹಾರಗಳಲ್ಲಿ ಸಕ್ಕರೆ ತಾನಾಗಿಯೇ ಇರುತ್ತದೆ. ಇಂಥ ನೈಸರ್ಗಿಕ ಸಕ್ಕರೆಯಂಶ ನಮ್ಮ ದೇಹಕ್ಕೆ ಬೇಕು. ಮೆದುಳು, ನರವ್ಯೂಹಗಳು ಮತ್ತು ಕೆಂಪು ರಕ್ತಕಣಗಳಂಥವು ಸರಿಯಾಗಿ ಕೆಲಸ ಮಾಡಲು ಈ ನೈಸರ್ಗಿಕ ಸಕ್ಕರೆಯ ಅಗತ್ಯವಿದೆ.
ಆದರೆ ನಿಸರ್ಗದತ್ತವಾದ ಸಕ್ಕರೆ ಸತ್ವದ ಹೊರತಾಗಿ ಹೆಚ್ಚುವರಿ, ಅಂದರೆ ನಾವೇ ಸೇರಿಸಿದ ಸಕ್ಕರೆಯಂಶ ದೇಹಕ್ಕೇನೂ ಬೇಕೆಂದಿಲ್ಲ. ಹಾಗಾಗಿಯೇ ಸಿಹಿ ತಿನಿಸುಗಳ ಸೇವನೆಗೆ ಮಿತಿ ಬೇಕು ಎನ್ನುವುದು. ನೈಸರ್ಗಿಕ ಸಕ್ಕರೆಯಲ್ಲಿ ಇದ್ದಷ್ಟು ಸತ್ವಗಳು ನಾವೇ ಸೇರಿಸಿಕೊಳ್ಳುವ ಸಕ್ಕರೆಯಲ್ಲಿ ಅಥವಾ ಸಿಹಿ ತಿಂಡಿಯಲ್ಲಿ ದೊರೆಯುವುದಿಲ್ಲ. ತಜ್ಞರ ಪ್ರಕಾರ, ವಯಸ್ಕರು ದಿನವೊಂದಕ್ಕೆ 30 ಗ್ರಾಂಗಿಂತ ಹೆಚ್ಚಿನ ಸಕ್ಕರೆಯನ್ನು ತಿನ್ನಬಾರದು. ಮಕ್ಕಳಿಗೆ 25 ಗ್ರಾಂ ಒಳಗೇ ಸಾಕು. ಇದರಲ್ಲಿ ನಮ್ಮ ಆಹಾರದಲ್ಲಿರುವ ನೈಸರ್ಗಿಕ ಸಕ್ಕರೆಯನ್ನ ಸೇರಿಸಬೇಕಿಲ್ಲ
ಹೆಚ್ಚು ತಿಂದರೇನಾಗುತ್ತದೆ?
ಸಿಕ್ಕಾಪಟ್ಟೆ ಸಕ್ಕರೆ ತಿನ್ನುವುದು ಅಲ್ಪಕಾಲೀನ ಮತ್ತು ದೀರ್ಘಕಾಲೀನ ಸಮಸ್ಯೆಗಳನ್ನು ತಂದೊಡ್ಡಬಲ್ಲದು. ಅತಿಯಾಗಿ ಸಿಹಿ ತಿಂದಾಗ ದೇಹದ ಶಕ್ತಿ ಹೆಚ್ಚುವ ಬದಲು, ಸುಸ್ತು, ಆಯಾಸ ಕಾಣಿಸಬಹುದು. ಮೂಡ್ ಬದಲಾವಣೆ, ಹೊಟ್ಟೆ ಉಬ್ಬರ, ಅಜೀರ್ಣ, ವಾಕರಿಕೆ ಇಂಥವು ಅಲ್ಪಕಾಲೀನ ಪರಿಣಾಮಗಳಾಗಿ ಕಾಣಿಸಿಕೊಳ್ಳಬಹುದು. ಆದರೆ ಹೆಚ್ಚು ಸಿಹಿ ತಿನ್ನುವುದನ್ನು ಮುಂದುವರಿಸಿದರೆ ದೀರ್ಘಕಾಲದಲ್ಲಿ ಪರಿಣಾಮಗಳು ಸಮಸ್ಯೆಗಳಾಗಿ ಮಾರ್ಪಡುವುದು ನಿಶ್ಚಿತ.
ಟೈಪ್-2 ಮಧುಮೇಹ
ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುವಾಗ ರಕ್ತದಲ್ಲಿ ಸಕ್ಕರೆಯ ಮಟ್ಟ ಏರದಂತೆ ನಿಯಂತ್ರಿಸಲು ನಮಗೆ ಇನ್ಸುಲಿನ್ ಎಂಬ ಚೋದಕ ಬೇಕು. ಇದನ್ನು ಉತ್ಪತ್ತಿ ಮಾಡುವುದು ನಮ್ಮ ಮೇದೋಜೀರಕ ಗ್ರಂಥಿ. ಆಹಾರದಲ್ಲಿರುವ ಸಕ್ಕರೆಯಂಶ ರಕ್ತಕ್ಕೆ ಸೇರುತ್ತಿದ್ದಂತೆ ಇನ್ಸುಲಿನ್ ಉತ್ಪತ್ತಿ ಮಾಡುವಂತೆ ಈ ಗ್ರಂಥಿಗೆ ಸಂದೇಶ ಹೋಗುತ್ತದೆ. ಆಗ ರಕ್ತದಲ್ಲಿ ಸಕ್ಕರೆ ಮಟ್ಟ ಏರದಂತೆ ನಿಯಂತ್ರಣವಾಗಿ, ಉಳಿದ ಅಂಗಾಂಗಗಳಿಗೆ ಶಕ್ತಿ ಪೂರೈಕೆಯಾಗುತ್ತದೆ. ಒಂದೊಮ್ಮೆ ದೇಹದ ಕೋಶಗಳು ಇನ್ಸುಲಿನ್‌ಗೆ ಸ್ಪಂದಿಸುವುದನ್ನು ನಿಲ್ಲಿಸಿದರೆ ಸಮಸ್ಯೆ ಶುರುವಾಗುತ್ತದೆ. ಹೆಚ್ಚೆಚ್ಚು ಸಿಹಿ ತಿಂದರೆ ನಮ್ಮ ಮೇದೋಜೀರಕ ಗ್ರಂಥಿ ಹೆಚ್ಚು ಕೆಲಸ ಮಾಡಬೇಕು, ಅತಿಯಾಗಿ ಉತ್ಪತ್ತಿಯಾಗುವ ಇನ್ಸುಲಿನ್‌ಗೆ ದೇಹ ಕೆಲವೊಮ್ಮೆ ಸ್ಪಂದಿಸದೇ (Insulin resistance) ಹೋಗಬಹುದು. ಇದೇ ಅವಸ್ಥೆಯನ್ನು ಟೈಪ್-೨ ಮಧುಮೇಹ ಎನ್ನುತ್ತೇವೆ.
ಬೊಜ್ಜು
ಈಗ ಆರೇಳು ವರ್ಷಗಳ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ವಿಶ್ವದಲ್ಲಿ 100 ಕೋಟಿಗೂ ಅಧಿಕ ಮಂದಿ ಬೊಜ್ಜಿನಿಂದಲೇ (Obesity) ನಾನಾ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಸಂಸ್ಕರಿಸಿದ ಆಹಾರಗಳಿಂದ (ಜ್ಯೂಸ್, ಸೋಡಾ, ಕೇಕ್ ಇತ್ಯಾದಿ) ದೇಹ ಸೇರುವ ಸಕ್ಕರೆಯಿಂದಲೇ ಬೊಜ್ಜಿಗೆ ತೊತ್ತಾದವರು. ಅತಿಯಾಗಿ ಸಕ್ಕರೆ ತಿನ್ನುವುದರಿಂದ ದೇಹಕ್ಕೆ ಬೇಕಾಗಿದ್ದಕ್ಕಿಂತ ಹೆಚ್ಚೇ ಕ್ಯಾಲರಿ ದೊರೆಯುತ್ತದೆ; ಆದರೆ ಇವೆಲ್ಲವೂ ಪೋಷಕಾಂಶವಿಲ್ಲದ ಸತ್ವಹೀನ ಕ್ಯಾಲರಿಗಳು. ಹಾಗಾಗಿ ಪೋಷಕಾಂಶಗಳ ಕೊರತೆಯಾಗುತ್ತಿದ್ದಂತೆ ಇನ್ನಷ್ಟು ತಿನ್ನಬೇಕೆಂಬ ಬಯಕೆ ದೇಹಕ್ಕೆ ಮೂಡುತ್ತದೆ. ತೂಕ ಹೆಚ್ಚಲು ಇಷ್ಟು ಸಾಲದೇ?
ಹೃದಯದ ತೊಂದರೆಗಳು
ಸಕ್ಕರೆಭರಿತ ಆಹಾರಗಳು ಬೊಜ್ಜು ಹೆಚ್ಚಿಸುವುದು ಮಾತ್ರವಲ್ಲ, ದೇಹದಲ್ಲಿ ಟ್ರೈಗ್ಲಿಸರೈಡ್ ಅಂಶವನ್ನು ಹೆಚ್ಚಿಸುತ್ತವೆ. ಇದೇ ಮುಂದುವರಿದು ರಕ್ತನಾಳಗಳಲ್ಲಿ ಕೊಬ್ಬು ಜಮೆಯಾಗುತ್ತದೆ; ರಕ್ತದೊತ್ತಡ ಏರುತ್ತದೆ. ಮಧುಮೇಹದ ಜೊತೆಗೆ ಇವಿಷ್ಟು ಸಮಸ್ಯೆಗಳು ಸಾಕು ಹೃದಯವನ್ನು ಸಂಕಷ್ಟಕ್ಕೆ ಈಡು ಮಾಡಲು. ಇದರಿಂದ ಹೃದಯದ ತೊಂದರೆಗಳು ಮಾತ್ರವಲ್ಲ. ಪಾರ್ಶ್ವವಾಯುವಿನ ಭೀತಿಯೂ ಎದುರಾಗುತ್ತದೆ.
ಫ್ಯಾಟಿ ಲಿವರ್
ದೇಹದಲ್ಲಿ ಖರ್ಚಾಗದೆ ಉಳಿಯುವ ಶಕ್ತಿಯೆಲ್ಲಾ ಜಮೆಯಾಗುವುದು ಕೊಬ್ಬಿನ ರೂಪದಲ್ಲಿ. ಇಂಥ ಹೆಚ್ಚುವರಿ ಕೊಬ್ಬು ಜಮೆಯಾಗುವುದು ಯಕೃತ್ತಿನಲ್ಲಿ. ಆಗಿಂದಾಗ ಈ ಕೊಬ್ಬು ಖಾಲಿಯಾಗುತ್ತಿದ್ದರೆ ಹೆಚ್ಚಿನ ಜಮಾವಣೆ ಇರುವುದಿಲ್ಲ. ಆದರೆ ಅನಗತ್ಯ ಕ್ಯಾಲರಿಗಳು ಹೆಚ್ಚಾಗಿ ಕೊಬ್ಬು ಹೆಚ್ಚೆಚ್ಚು ದಾಸ್ತಾನಾಗುವುದಕ್ಕೆ ಪ್ರಾರಂಭವಾದರೆ, ಯಕೃತ್‌ನಲ್ಲಿದ್ದ ಆರೋಗ್ಯಪೂರ್ಣ ಕೋಶಗಳು ನಾಶವಾಗಿ ಈ ಕೊಬ್ಬಿನ ಕೋಶಗಳೇ ತುಂಬಲಾರಂಭಿಸುತ್ತವೆ. ಫ್ಯಾಟಿ ಲಿವರ್ ಕಾಡುವುದು ಹೀಗೆ. ಮದ್ಯಪಾನ ಮಾಡದೆಯೂ ಯಕೃತ್ತಿನ ಕೊಬ್ಬು ಇತ್ತೀಚೆಗೆ ಬಹಳಷ್ಟು ಜನರನ್ನು ಕಾಡಲು ಇದುವೇ ಕಾರಣ.
ಅತಿಯಾದ ಸಿಹಿಯಿಂದ ಹಲ್ಲು ಮತ್ತು ಬಾಯಿಯ ಆರೋಗ್ಯವೂ ಕ್ರಮೇಣ ನಶಿಸುತ್ತದೆ. ಅತಿ ಸಿಹಿ ಉತ್ಪತ್ತಿ ಮಾಡುವ ಆಮ್ಲಗಳಿಗೆ ಹಲ್ಲುಗಳ ಎನಾಮಲ್ ನಾಶವಾಗಿ, ಕುಳಿಗಳು ಬೀಳುತ್ತವೆ. ಒಸಡುಗಳ ಮೇಲೂ ಇದು ಪರಿಣಾಮ ಬೀರುತ್ತದೆ. ಹಾಗಾಗಿ ದೇಹಕ್ಕೆ ಅಗತ್ಯವಾದ ಸಕ್ಕರೆಯಂಶವನ್ನು ನೈಸರ್ಗಿಕ ತಿನಿಸುಗಳಿಂದ ಒದಗಿಸುವುದು ಕ್ಷೇಮವೇ ಹೊರತು ನಾವೇ ಬೆಲ್ಲ/ ಸಕ್ಕರೆ ಸುರಿದು ಮಾಡಿದ ಸಿಹಿತಿಂಡಿಗಳಿಂದ ಅಲ್ಲ. ಇದರರ್ಥ ಸಿಹಿ ತಿನ್ನುವುದನ್ನು ಸಂಪೂರ್ಣ ನಿಲ್ಲಿಸಬೇಕೆಂದಲ್ಲ. ಆದರೆ ತಿನ್ನುವ ಪ್ರಮಾಣದ ಮೇಲೆ ಖಂಡಿತವಾಗಿ ಮಿತಿ ಇರಲೇಬೇಕು.
ಇದನ್ನೂ ಓದಿ: Different Types of Seeds with Health Benefits: ಆರೋಗ್ಯ ವೃದ್ಧಿಗೆ ಬೇಕಾದ ಪೌಷ್ಟಿಕ ಬೀಜಗಳಿವು