ಪ್ರತಿಯೊಬ್ಬರ ಉದ್ದವನ್ನು ವಂಶವಾಹಿಗಳು ನಿರ್ಧರಿಸುತ್ತವೆ ಎಂಬುದು ಸತ್ಯ. ಶೇಕಡಾ ೮೦ರಷ್ಟು ಇದು ವಂಶವಾಹಿಗಳನ್ನು ಅವಲಂಬಿಸಿದೆ ಎಂಬುದು ನಿಜವಾದರೂ, ಇನ್ನುಳಿದ ಶೇಕಡಾ ೨೦ ನಮ್ಮ ಕೈಯಲ್ಲೇ ಇದೆ. ಮಕ್ಕಳು ಬೆಳೆಯುವ ವಯಸ್ಸಿನಲ್ಲಿ ಅವರಿಗೆ ಯಾವ ಆಹಾರವನ್ನು ಕೊಟ್ಟೆವು, ಬೆಳವಣಿಗೆಗೆ ಬೇಕಾದಷ್ಟು ಪೋಷಣೆಯನ್ನು ಅವು ಹೊಂದಿವೆಯಾ ಎಂಬುದೂ ಬಹಳ ಮುಖ್ಯವಾಗುತ್ತವೆ ಎನ್ನುತ್ತದೆ ಸಂಶೋಧನೆ.
ವಂಶವಾಹಿಗಳ ಮುಖಾಂತರ ಬಂದದ್ದನ್ನು ನಾವು ಬದಲಾಯಿಸುವುದು ಸಾಧ್ಯವಿಲ್ಲವಾದರೂ, ಬೆಳವಣಿಗೆಗೆ ಪೂರಕ ವಾತಾವರಣ ಒದಗಿಸುವುದು ಬಹಳ ಅಗತ್ಯ. ಮಕ್ಕಳ ಅಕ್ಕರೆಯ ಚಿಪ್ಸ್, ಚಾಕೋಲೇಟ್, ಕುಕ್ಕೀಸ್, ಪಿಜ್ಜಾ, ಫ್ರೆಂಚ್ ಫ್ರೈಸ್, ಬರ್ಗರ್ ನಂತಹ ಜಂಕ್‌ಗಳನ್ನು ಆದಷ್ಟು ಕಡಿಮೆ ಮಾಡುತ್ತಾ, ಬೆಳೆಯುವ ಮಕ್ಕಳಿಗೆ ಕೊಡಬಹುದಾದ ಆಹಾರಗಳು ಯಾವುವು ಎಂಬುದನ್ನು ನೋಡೋಣ.
೧. ಮೊಟ್ಟೆ: ಮೊಟ್ಟೆಗಳು ದೇಹಕ್ಕೆ ಬೇಕಾದ ಪ್ರೊಟೀನನ್ನು ಭರಪೂರ ನೀಡುತ್ತವೆ. ಬೆಳಗ್ಗಿನ ಉಪಹಾರಕ್ಕೆ ಆಮ್ಲೆಟ್ ಮಾಡುವ ಮೂಲಕವೋ, ಮೊಟ್ಟೆಯ ಬಿಳಿ ಭಾಗ ಮಕ್ಕಳ ಆಹಾರದಲ್ಲಿ ದಿನನಿತ್ಯ ಸೇರಿಸಿದರೆ, ನಿಗದಿತ ಪ್ರೊಟೀನಿನ ಅವಶ್ಯಕತೆಯನ್ನು ತಲುಪುವುದು ಸುಲಭವಾಗುತ್ತದೆ. ಸಾಧಾರಣ ಊಟ ಉಪಚಾರದಿಂದ ಬೆಳೆದ ಮಕ್ಕಳಿಗೂ ಪ್ರೊಟೀನನ್ನು ಗಮನದಲ್ಲಿಟ್ಟುಕೊಂಡು ಆಹಾರ ನೀಡಿದ ಮಕ್ಕಳಿಗೂ ಬೆಳವಣಿಗೆಯಲ್ಲಿ ವ್ಯತ್ಯಾಸವಿದೆ. ಹಾಗಾಗಿ ಬೆಳೆಯುವ ಮಕ್ಕಳಿಗೆ ಪ್ರೊಟೀನ್ ಶ್ರೀಮಂತವಾಗಿರುವ ಮೊಟ್ಟೆ ನೀಡುವುದು ಒಳ್ಳೆಯದು.
೨. ಹಾಲು ಹಾಗೂ ಹಾಲಿನ ಉತ್ಪನ್ನಗಳು: ಹಾಲಿನಲ್ಲಿ ಕ್ಯಾಲ್ಶಿಯಂ ಇದೆ. ಮಕ್ಕಳ ಎಲುಬನ್ನು ಗಟ್ಟಿಯಾಗಿಸಿ ಮಕ್ಕಳ ಬಲವರ್ಧನೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಚೀಸ್, ಮೊಸರು, ಮಜ್ಜಿಗೆ, ಇವೆಲ್ಲವನ್ನು ಮಕ್ಕಳಿಗೆ ಕೊಡಬಹುದು. ಪ್ರತಿನಿತ್ಯ ಹಾಲು ಕುಡಿಯುವ ಅಭ್ಯಾಸವೂ ಒಳ್ಳೆಯದು.
೩. ಸೋಯಾಬೀನ್: ಸೋಯಾಬೀನ್‌ನಲ್ಲಿ ಹೇರಳವಾಗಿ ಪ್ರೊಟೀನ್ ಇದೆ. ಎಲುಬಿನ ಆರೋಗ್ಯಕ್ಕೆ ಪೂರಕವಾದ ಪೋಷಕಾಂಶಗಳು ಇದರಲ್ಲಿವೆ. ಸೋಯಾಬೀನ್‌ನನ್ನು ಅಡುಗೆಗಳಲ್ಲಿ ಬಳಸುವ ಮೂಲಕ, ಹೊಸ ರೆಸಿಪಿಗಳ ಮೂಲಕ ಮಕ್ಕಳು ಇದನ್ನು ಟ್ರೈ ಮಾಡಬಹುದು.
೪. ಚಿಕನ್: ಚಿಕನ್ ಮಕ್ಕಳಿಗೆ ಒಳ್ಳೆಯದು. ಚಿಕನ್‌ನಲ್ಲಿ ಪ್ರೊಟೀನ್ ಹಾಗೂ ವಿಟಮಿನ್ ಬಿ ಹೇರಳವಾಗಿದ್ದು, ಮಕ್ಕಳ ಬೆಳವಣಿಗೆಗೆ ಪೂರಕವಾದ ಪೋಷಕಾಂಶಗಳಿವೆ.
೫. ಹಸಿರು ಸೊಪ್ಪು: ಹಸಿರು ಸೊಪ್ಪು ಮಕ್ಕಳಿಗೆ ಶಕ್ತಿ ಸಾಮರ್ಥ್ಯ ನೀಡುವುದಲ್ಲದೆ, ಇದರಲ್ಲಿ ಅತ್ಯಧಿಕ ಮಟ್ಟದಲ್ಲಿ ಕ್ಯಾಲ್ಶಿಯಂ ಇದೆ. ಮಕ್ಕಳಲ್ಲಿ ಎಲುಬಿನ ರಚನೆ, ಅದನ್ನು ದೃಢವಾಗಿಸುವ ಬೆಳವಣಿಗೆ ಸುಮಾರು ೧೦ನೇ ವಯಸ್ಸಿನಲ್ಲಿ ಹೆಚ್ಚು ಆಗುವುದರಿಂದ ಅಂಥ ಸಮಯದಲ್ಲಿ ಆರೋಗ್ಯಕರವಾದ ಇಂಥ ಆಹಾರದ ಅವಶ್ಯಕತೆ ಹೆಚ್ಚಿರುತ್ತದೆ. ಬಸಳೆ, ಪಾಲಕ್, ದಂಟು, ಬ್ರೊಕೋಲಿ, ಕ್ಯಾಬೇಜ್‌ನಂತಹ ಸೊಪ್ಪು ತರಕಾರಿಗಳು ಅವುಗಳ ಕೊರತೆಯನ್ನು ನೀಗಿಸುತ್ತದೆ.
೬. ಕ್ಯಾರೆಟ್: ಬೀಟಾ ಕ್ಯಾರೊಟಿನ್ ಹೆಚ್ಚಿರುವ ಹಾಗೂ ದೇಹಕ್ಕೆ ಭರಪೂರ ವಿಟಮಿನ್ ಎ ನೀಡಬಲ್ಲ ಆಹಾರವಿದು. ಹಸಿ ಕ್ಯಾರೆಟ್ ತಿನ್ನುವುದು ಇನ್ನೂ ಉತ್ತಮ. ಹಸಿ ಕ್ಯಾರೆಟ್‌ನ ಜ್ಯೂಸ್, ಸಲಾಡ್ ಮೂಲಕ ತಿನ್ನುವುದರಿಂದ ದೇಹ ಕ್ಯಾಲ್ಶಿಯಂನ್ನು ಇನ್ನೂ ಪಕ್ವವಾಗಿ ಹೀರಿಕೊಳ್ಳಲು ಇದು ಅನುವು ಮಾಡುತ್ತದೆ.
೭. ಹಣ್ಣುಗಳು: ಆಹಾರದಲ್ಲಿ ತರಕಾರಿಗಳಷ್ಟೇ ಹಣ್ಣುಗಳ ಪಾತ್ರ ದೊಡ್ಡದು. ಹಣ್ಣುಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವುದಲ್ಲದೆ, ದೇಹಕ್ಕೆ ಬೇಕಾದ ಎಲ್ಲ ಪೋಷಕಾಂಶಗಳನ್ನೂ ಒದಗಿಸುತ್ತದೆ. ದಿನನಿತ್ಯ ವಿವಿಧ ಬಣ್ಣಗಳ ಒಂದೆರಡು ಬಗೆಯ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು.
೮. ಧಾನ್ಯಗಳು: ಆಹಾರದಲ್ಲಿ ಧಾನ್ಯಗಳ ಬಳಕೆ ಬಹುಮುಖ್ಯ. ಇದೂ ಕೂಡಾ ಮಕ್ಕಳ ಬೆಳವಣಿಗೆಯಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ.
೯. ಬೀಜಗಳು: ಕ್ಯಾಲ್ಶಿಯಂ, ವಿಟಮಿನ್‌ಗಳ ಜೊತೆಗೆ ದೇಹಕ್ಕೆ ಆರೋಗ್ಯಕರವಾದ ಕೊಬ್ಬಿನ ಅವಶ್ಯಕತೆಯೂ ಬಹಳವಿದೆ. ಬೀಜಗಳು ಈ ನಿಟ್ಟಿನಲ್ಲಿ ಉತ್ತಮವಾಗಿ ಕೆಲಸ ಮಾಡುತ್ತವೆ. ಮಕ್ಕಳ ಸರ್ವತೋಮುಖ ಬೆಳವಣಿಕೆಯಲ್ಲಿ ಒಣಹಣ್ಣುಗಳು ಹಾಗೂ ವಿವಿಧ ಬೀಜಗಳು ಬಹಳ ಅಗತ್ಯ.
೧೦. ಬೇಳೆಕಾಳುಗಳು: ಬೇಳೆಕಾಳುಗಳ ಅಗತ್ಯವನ್ನು ಪ್ರತ್ಯೇಕವಾಗಿ ವಿವರಿಸಿ ಹೇಳಬೇಕಾಗಿಲ್ಲ. ದೇಹಕ್ಕೆ ಬೇಕಾದ ಪ್ರೊಟೀನ್ ಅವಶ್ಯಕತೆಗಳನ್ನು ಮೊಳಕೆ ಬರಿಸಿದ ಕಾಳುಗಳು ನೀಗಿಸುತ್ತವೆ. ಮೊಟ್ಟೆ ತಿನ್ನಲಾಗದ, ಸಸ್ಯಾಹಾರಿಗಳು, ಬೇಳೆಕಾಳುಗಳ ಮೂಲಕವಾದರೂ ದಿನನಿತ್ಯ ಪ್ರೋಟೀನನ್ನು ಮಕ್ಕಳಿಗೆ ನೀಡಬಹುದು.
ಇದನ್ನೂ ಓದಿ | ಜಿಎಸ್‌ಟಿಗೆ ಮುನ್ನವೂ ಆಹಾರ ಧಾನ್ಯಗಳಿಗೆ ತೆರಿಗೆ ಇತ್ತು: ನಿರ್ಮಲಾ ಪ್ರತಿಪಾದನೆ