ಹೆರಿಗೆ ಅನ್ನುವುದು ಮಹಿಳೆಯರ ಬದುಕಿನಲ್ಲಿ ಬಂದು ಹೋಗುವ ಒಂದು ಅಮೂಲ್ಯ ಅಧ್ಯಾಯ. ಹುಡುಗಿಯಾಗಿದ್ದವಳು ತಾಯಿಯಾಗಿ ಬಡ್ತಿ ಪಡೆವ ಮರುಜನ್ಮ ಇದು. ನೋವಿನ ಮೂಲಕ ಹೊಸತೊಂದು ಜೀವಕ್ಕೆ ಜನ್ಮ ನೀಡುವ ಪ್ರಕೃತಿ ಸಹಜ ಕ್ರಿಯೆ ಇದು. ಇಂಥ ಭಾವನಾತ್ಮಕ ಅಂಶಗಳ ಜತೆಗೇ ಅದು ಕೆಲವೊಂದು ವಾಸ್ತವಿಕ ಸಂಕಟಗಳನ್ನೂ ಹೊತ್ತು ತರುತ್ತದೆ. ಅದರಲ್ಲಿ ಹೆರಿಗೆ ನಂತರದ ಬೆನ್ನು ನೋವು ಕೂಡಾ ಒಂದು.
ಸಿಸೇರಿಯನ್ ಆದ ಮಹಿಳೆಯರಲ್ಲಿ ಬೆನ್ನು ನೋವಿನ ಸಮಸ್ಯೆ ಸ್ವಲ್ಪ ಹೆಚ್ಚಿರುತ್ತದೆ. ಸಿಸೇರಿಯನ್ ಸಂದರ್ಭ ಕೊಡುವ ಅನಸ್ತೇಶಿಯಾದ ಅಡ್ಡ ಪರಿಣಾಮ ಇದು ಎಂಬುದು ಬಹುತೇಕರ ನಂಬಿಕೆ. ಆದರೆ ಇದು ತಪ್ಪು ಕಲ್ಪನೆ. ಹಾಗಾದರೆ, ಮಹಿಳೆಯರನ್ನು ಬಹಳವಾಗಿ ಕಾಡುವ ಈ ಬೆನ್ನುನೋವಿಗೆ ನಿಜವಾದ ಕಾರಣ ಏನು ಹಾಗೂ ಇದು ಶಾಶ್ವತವಾಗಿ ಉಳಿಯದಂತೆ ಆರಂಭದಲ್ಲೇ ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎಂಬುದನ್ನು ತಿಳಿಯೋಣ.
ಮಹಿಳೆ ಗರ್ಭಿಣಿಯಾದಾಗ ಸಹಜವಾಗಿ ಆಕೆಯ ದೇಹದಲ್ಲಿ ಕೆಲವು ಬದಲಾವಣೆಗಳಾಗುತ್ತದೆ. ದೇಹದ ಕೆಲ ಭಾಗಗಳಲ್ಲಿ ಮುಖ್ಯವಾಗಿ ತನ್ನ ಸೊಂಟದ ಸುತ್ತ ಹಾಗೂ ಬೆನ್ನಿನ ಕೆಳಭಾಗದಲ್ಲಿ ಭಾರ ಹೆಚ್ಚಾಗುತ್ತದೆ. ಹೊಟ್ಟೆಯೊಳಗೆ ಮಗುವಿನ ಬೆಳವಣಿಗೆಯಾಗುತ್ತಿರುವುದರಿಂದ ಸೊಂಟದ ಮೇಲಿನ ಭಾರ ಹೆಚ್ಚಿ ನೋವಿಗೆ ಕಾರಣವಾಗುತ್ತದೆ. ಹೆರಿಗೆಯ ನಂತರ ಈ ಬೆನ್ನು ನೋವು ಹೆಚ್ಚಾಗಲು ಪ್ರಮುಖ ಕಾರಣಗಳಿವೆ.
ಇದನ್ನೂ ಓದಿ: ಬಾಯಿಗೆ ಖಾರವಾದ್ರೂ ಹಲವು ಕಾಯಿಲೆ ಗಳಿಂದ ಪಾರು ಮಾಡುವ ಮಸಾಲೆ ಕಿಂಗ್ ಕರಿಮೆಣಸು
ಗರ್ಭಿಣಿ ಆಗಿದ್ದಾಗ ೯ ತಿಂಗಳ ಕಾಲ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ನಡೆಯುತ್ತವೆ. ಹೊಟ್ಟೆಯನ್ನು ಆಧರಿಸಿಕೊಳ್ಳುವ ಹೊತ್ತಿನಲ್ಲಿ ಬೆನ್ನಿನ ಮೇಲೆ ಹೆಚ್ಚು ಭಾರ ಬಿದ್ದು ಆ ಭಾಗ ದುರ್ಬಲವಾಗುತ್ತದೆ. ಆದರೆ ಒಮ್ಮೆ ಮಗು ಜನಿಸಿದ ನಂತರ ಮಗುವಿನ ಕಾಳಜಿ, ತಾಯಿಯಾದ ಸಂಭ್ರಮದ ಆರಂಭದ ದಿನಗಳಲ್ಲಿ ತಾಯಿಯ ದೇಹದ ಒಳಗೆ ಆಗುವ/ಆದ ಬದಲಾವಣೆಗಳಿಗೆ ಹೆಚ್ಚಾಗಿ ಗಮನ ನೀಡಲಾಗುವುದಿಲ್ಲ. ಇದ್ದಕ್ಕಿದ್ದಂತೆ ಹೆಚ್ಚಿದ ಜವಾಬ್ದಾರಿ, ಮಗುವಿನ ಲಾಲನೆ ಪಾಲನೆಗಳಲ್ಲಿ ತಾಯಿಗೆ ನಿಜವಾಗಿ ಸಿಗಬೇಕಾದ ವಿಶ್ರಾಂತಿ ಸಿಗುವುದಿಲ್ಲ. ದುರ್ಬಲವಾದ ಬೆನ್ನಿಗೆ ಬೇಕಾದ ಕಾಳಜಿಯೂ ದೊರೆಯುವುದಿಲ್ಲ. ಹೀಗಾಗಿ ಈ ಬೆನ್ನುನೋವಿನ ಸಮಸ್ಯೆ ಶಾಶ್ವತ ಸಮಸ್ಯೆಯಾಗಿ ಹಲವರನ್ನು ಕಾಡುತ್ತದೆ.
ಮಗುವಿಗೆ ಪದೇಪದೆ ಗಂಟೆಗಟ್ಟಲೆ ಹಾಲುಣಿಸುವುದು, ರಾತ್ರಿಯ ಹೊತ್ತು ಆಗಾಗ ಏಳುವುದು ಮತ್ತಿತರ ಕಾರಣಗಳಿಂದ ಕುಳಿತಿರಬೇಕಾದ ಸಂದರ್ಭ ಆಕೆಗೆ ಹೆಚ್ಚು ಇರುವುದರಿಂದ ಇದು ಬೆನ್ನು ನೋವು ಉಲ್ಬಣಿಸಲು ಕಾರಣವಾಗುತ್ತದೆ.
ಮಗುವಿಗೆ ಹಾಲುಣಿಸುವ ಸಂದರ್ಭ ಸಪೋರ್ಟ್‌ಗಾಗಿ ಸೊಂಟದ ಸುತ್ತ ದಿಂಬು ಬಳಸಬಹುದು. ಆಗ ಬೆನ್ನಿನ ಮೇಲೆ ಹೆಚ್ಚು ಭಾರ ಬೀಳುವುದಿಲ್ಲ. ಬಾಣಂತಿ ಮಲಗಿಕೊಂಡೇ ಇರಬೇಕು ಎಂಬುದು ಹಳೇ ನಂಬಿಕೆ. ಸಿಸೇರಿಯನ್ ಆದ ಮಹಿಳೆಯರು ೧೫ ದಿನಗಳ ನಂತರ ಬೆಲ್ಟ್ ಧರಿಸಲು ಆರಂಭಿಸಬಹುದು. ಇದರಿಂದ ಬೆನ್ನಿನ ಕೆಳ ಭಾಗ ಹಾಗೂ ಸೊಂಟಕ್ಕೆ ಆಧಾರ ದೊರಕುತ್ತದೆ. ಆಕೆ ಸಣ್ಣಪುಟ್ಟ ನಿಂತು ಮಾಡಬಹುದಾದ ಕೆಲಸಗಳು, ವಾಕಿಂಗ್ ಇತ್ಯಾದಿಗಳನ್ನು ೧೫ ದಿನಗಳ ನಂತರ ಆರಂಭಿಸಬಹುದು.
ಹೆಚ್ಚು ಹೊತ್ತು ನಿಲ್ಲುವುದು, ತಪ್ಪಾದ ಭಂಗಿಯಲ್ಲಿ ಕೂರುವುದು, ಮಗುವನ್ನು ತಪ್ಪುತಪ್ಪಾಗಿ ಹಿಡಿಯುವುದು ಕೂಡಾ ಇದಕ್ಕೆ ಕಾರಣವಿರಬಹುದು. ಹಾಗಾಗಿ ಇವೆಲ್ಲವುಗಳ ಬಗ್ಗೆಯೂ ಗಮನವಿರಲಿ.
ಒಂದು ನಿಗದಿತ ಸಮಯ ಪ್ರತಿನಿತ್ಯ ಬಾಣಂತಿ ಸರಳವಾದ ವ್ಯಾಯಾಮ, ವಾಕಿಂಗ್, ಯೋಗ ಮಾಡುವ ಮೂಲಕ ಬೆನ್ನು ನೋವಿನ ಸಮಸ್ಯೆಗೆ ತಕ್ಕಮಟ್ಟಿನ ಪರಿಹಾರ ಕಂಡುಕೊಳ್ಳಬಹುದು.
ಇದನ್ನೂ ಓದಿ: ದೇಶದ ಕಾಲು ಭಾಗ ಗರ್ಭಪಾತಗಳು ಮನೆಯಲ್ಲೇ ನಡೆಯುತ್ತವೆ!