ನಿಮ್ಮಿಷ್ಟದ ಯಾವುದೋ ಆಹಾರ ತಿಂದಿದ್ದೀರಿ. ಕೆಲ ಸಮಯದ ನಂತರ ನೋಡಿದರೆ ನಿಮ್ಮ ಹಲ್ಲುಗಳು ಎಂದಿನಷ್ಟು ಬೆಳ್ಳಗಿಲ್ಲದೆ, ನೀವು ಸೇವಿಸಿದ ಆಹಾರದ ಬಣ್ಣವನ್ನು ಹೊತ್ತು ನಿಂತಂತೆ ಕಾಣುತ್ತಿವೆಯೇ? ಇದರಲ್ಲಿ ಅಚ್ಚರಿಯೇನಿಲ್ಲ. ಚಹಾ, ಕಾಫಿ, ಕೆಂಪು ವೈನ್, ಕೆಲವು ಬೆರ್ರಿಗಳು, ಫ್ರೂಟ್ ಜ್ಯೂಸ್‌ಗಳಂಥವು ಕೆಲವೊಮ್ಮೆ ಹಲ್ಲಿನ ಬಣ್ಣಗೆಡಿಸುತ್ತವೆ. (ಗುಟ್ಕಾ ತಿನ್ನುವವರು ಅಥವಾ ಧೂಮಪಾನಿಗಳಾದರಂತೂ ಹಲ್ಲುಗಳ ಬಣ್ಣ ಹಾಳಾಗುವುದು ನಿಶ್ಚಿತ) ನಿಯಮಿತವಾಗಿ ದಂತ ವೈದ್ಯರಲ್ಲಿ ಹೋಗಿ ಹಲ್ಲುಗಳನ್ನು ಶುಚಿ ಮಾಡಿಸುವಾಗ ಅದಕ್ಕೆ ಬಿಳಿ ಬಣ್ಣವನ್ನೂ ವೈದ್ಯರು ಬರಿಸಿಕೊಡುವುದು ಮಾಮೂಲಿ. ಕ್ಲಿನಿಕ್‌ಗಳಲ್ಲಿ ಮಾಡಿಸಿಕೊಳ್ಳುವ ಇಂಥ ಚಿಕಿತ್ಸೆಗಳು ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತವೆ. ಇದಲ್ಲದೆ, ಹಲ್ಲುಗಳು ಬಣ್ಣಗೆಡದಂತೆ ಕಾಪಾಡಿಕೊಳ್ಳಲು ಕೆಲವರು ಬಿಳಿಯಾಗಿಸುವ ಟೂತ್‌ಪೇಸ್ಟ್ ಸಹ ಉಪಯೋಗಿಸುತ್ತಾರೆ. ವೈಟ್ನಿಂಗ್ ಪೇಸ್ಟ್‌ಗಳನ್ನು ಉಪಯೋಗಿಸುವುದು ಸಹ ಹಲ್ಲುಗಳನ್ನು ಬಿಳಿಯಾಗಿಸುವಲ್ಲಿ ನೆರವಾಗುತ್ತದೆ. ಆದರೆ ಅತಿಯಾಗಿ ವೈಟ್ನಿಂಗ್ ಪೇಸ್ಟ್‌ಗಳನ್ನು ಉಪಯೋಗಿಸಿದರೆ ಹಲ್ಲುಗಳ ಸಂವೇದನೆ ಹೆಚ್ಚುತ್ತದೆ, ಬಿಸಿ ತಿಂದರೂ ಕಷ್ಟ, ತಣ್ಣಗಿರುವುದನ್ನೂ ಬಾಯಿಗೆ ಹಾಕಲಾಗದು, ಹಲ್ಲುಗಳಲ್ಲಿನ ʻಝುಂʼ ಅನುಭವ ಹೆಚ್ಚುತ್ತದೆ ಎಂದು ಕೆಲವರು ದೂರುವುದಿದೆ. ಹಾಗಾದರೆ ಹಲ್ಲುಗಳನ್ನು ಬಿಳಿಯಾಗಿಸಲೆಂದು ವೈಟ್ನಿಂಗ್ ಟೂತ್‌ಪೇಸ್ಟ್‌ಗಳನ್ನು ಉಪಯೋಗಿಸುವುದು ತಪ್ಪೇ? ಇದರಿಂದ (Whitening Toothpaste) ಹಲ್ಲುಗಳಿಗೆ ಹಾನಿಯಾಗುತ್ತದೆಯೇ?
ಏನು ಹಾಗೆಂದರೆ?
ಹಲ್ಲುಗಳ ಮೇಲ್ಮೈಯಲ್ಲಿರುವ ಕಲೆಗಳನ್ನು ತೆಗೆಯುವುದಕ್ಕೆಂದೇ ನಿರ್ಮಿಸಲಾದ ವಿಶೇಷ ಟೂತ್‌ಪೇಸ್ಟ್‌ಗಳಿವು. ಈ ಮೂಲಕ ಹಲ್ಲುಗಳ ನೈಸರ್ಗಿಕ ಬಿಳುಪನ್ನು ಕಾಪಾಡಿ, ದಂತಪಂಕ್ತಿಗಳ ಒಟ್ಟಾರೆ ಸೌಂದರ್ಯವನ್ನು ವೃದ್ಧಿಸುವುದಕ್ಕೆ ಇವುಗಳನ್ನು ಬಳಕೆ ಮಾಡಲಾಗುತ್ತದೆ. ಇದಕ್ಕಾಗಿ ಕೆಲವು ರಾಸಾಯನಿಕಗಳನ್ನು ಬಳಕೆ ಮಾಡಲಾಗುತ್ತದೆ. ಸಿಲಿಕಾ, ಕ್ಯಾಲ್ಸಿಯಂ ಕಾರ್ಬೊನೇಟ್ ಅಥವಾ ಬೇಕಿಂಗ್ ಸೋಡಾದಂಥ ಲಘುವಾದ ಅಪಘರ್ಷಕಗಳನ್ನು ಇವು ಹೊಂದಿರುತ್ತವೆ. ಈ ರಾಸಾಯನಿಕಗಳು ಸಾಮಾನ್ಯವಾಗಿ ಹಲ್ಲುಗಳ ಎನಾಮಲ್‌ಗೆ ಹಾನಿ ಮಾಡದೆಯೇ ಮೇಲ್ಮೈಯನ್ನು ಶುಚಿ ಮಾಡುತ್ತವೆ. ಹಲ್ಲುಗಳಿಗೆ ತಮ್ಮ ನೈಸರ್ಗಿಕ ಬಣ್ಣ, ಹೊಳಪು ಹೊಂದಲು ನೆರವಾಗುತ್ತವೆ.
ಆದರೆ, ಕೆಲವೊಂದು ಟೂತ್‌ಪೇಸ್ಟ್‌ಗಳಲ್ಲಿ ಬ್ಲೀಚಿಂಗ್ ಏಜೆಂಟ್‌ಗಳನ್ನು ಬಳಸಲಾಗುತ್ತದೆ. ಹೈಡ್ರೋಜೆನ್ ಪೆರಾಕ್ಸೈಡ್ ಅಥವಾ ಕಾರ್ಬಮೈಡ್ ಪೆರಾಕ್ಸೈಡ್ ಅಂಥವನ್ನು ಬಳಸಲಾಗುತ್ತದೆ. ಇವುಗಳು ಅಪಘರ್ಷಣ ಮಾಡದೆಯೇ, ರಾಸಾಯನಿಕ ಮಾರ್ಗದಿಂದ ಕಲೆಗಳನ್ನು ತೆಗೆಯುತ್ತವೆ. ಅಂದರೆ ಹಲ್ಲಿನ ಎನಾಮನ್ ಕವಚವನ್ನು ಭೇದಿಸಿ ಕೆಲಸ ಮಾಡುತ್ತವೆ. ಅದರಲ್ಲೂ ಪಪೈನ್, ಬ್ರೋಮೆಲಿನ್‌ನಂಥ ಕಿಣ್ವಗಳನ್ನು ಟೂತ್‌ಪೇಸ್ಟ್‌ಗಳಿಗೆ ಸೇರಿಸಿದರೆ ಹಲ್ಲುಗಳ ಮೇಲೆ ತೀವ್ರ ಪರಿಣಾಮವನ್ನೇ ಬೀರುತ್ತದೆ. ಇವೆಲ್ಲವುಗಳಿಂದ ಹಲ್ಲು ಸ್ವಚ್ಛವಾಗಿ, ಬೆಳ್ಳಗೆ ಹೊಳೆಯುವುದು ನಿಜವಾದರೂ, ನಿಯಮಿತವಾಗಿ ಉಪಯೋಗಿಸುತ್ತಿದ್ದರೆ ಹಲ್ಲುಗಳು ಸಂಕಷ್ಟಕ್ಕೆ ಈಡಾಗಬಹುದು. ವೈಟ್ನಿಂಗ್ ಟೂತ್‌ಪೇಸ್ಟ್‌ಗಳನ್ನು ಸದಾ ಬಳಸುವುದರಿಂದ ಆಗುವ ಅಡ್ಡ ಪರಿಣಾಮಗಳೇನು?
ಸಂವೇದನೆ ಹೆಚ್ಚು
ಈ ವೈಟ್ನಿಂಗ್ ಪೇಸ್ಟ್‌ಗಳಲ್ಲಿ ಅಪಘರ್ಷಕಗಳಿದ್ದರೂ, ಬ್ಲೀಚಿಂಗ್ ಅಂಶಗಳಿದ್ದರೂ- ಇವು ಹಲ್ಲುಗಳ ಸಂವೇದನೆಯನ್ನು ಹೆಚ್ಚಿಸುತ್ತವೆ. ಹಲ್ಲುಗಳಲ್ಲಿ ʻಝುಂʼ ಎನ್ನುವ ಅನುಭವ, ತಣ್ಣಗಿನ ವಸ್ತುಗಳನ್ನು ಕುಡಿದರೆ ಚುಚ್ಚಿದಂತಾಗುವುದು, ಬಿಸಿ ಕುಡಿಯುವುದಕ್ಕೂ ಕಷ್ಟವಾಗುವುದು- ಇಂಥ ಅನುಭವಗಳು ತೊಂದರೆ ಕೊಡುತ್ತವೆ.
ಒಸಡುಗಳ ಕಿರಿಕಿರಿ
ಪೆರಾಕ್ಸೈಡ್ ಹೊಂದಿರುವ ಜೆಲ್‌ಗಳನ್ನು ಉಪಯೋಗಿಸಿದಾಗ ಒಸಡುಗಳಲ್ಲಿ ಕಿರಿಕಿರಿ ಉಂಟಾಗುವ ಸಾಧ್ಯತೆ ಹೆಚ್ಚು. ಈ ಜೆಲ್‌ಗಳನ್ನು ಉಪಯೋಗಿಸುವ ರೀತಿ ತಪ್ಪಾದರೂ ತೊಂದರೆಯಾಗಬಹುದು. ಇವುಗಳನ್ನು ಬಳಸುವುದಕ್ಕೆ ನೀಡಿರುವ ಮಾರ್ಗಸೂಚಿಯನ್ನು ಸರಿಯಾಗಿ ಅನುಸರಿಸಿದರೆ ಈ ಕಿರಿಕಿರಿಯನ್ನು ಕಡಿಮೆ ಮಾಡಬಹುದು. ಆದರೆ ಈಗಾಗಲೇ ಒಸಡುಗಳ ಸಮಸ್ಯೆ ಇದ್ದರೆ ಇಂಥವುಗಳ ಬಳಕೆ ಯೋಗ್ಯವಲ್ಲ.
ಇದನ್ನೂ ಓದಿ: Microplastics: ನಮಗೆ ಗೊತ್ತೇ ಆಗದಂತೆ ನಮ್ಮ ದೇಹ ಸೇರುತ್ತಿದೆ ಅಪಾಯಕಾರಿ ಪ್ಲಾಸ್ಟಿಕ್!
ಎನಾಮಲ್ ಹಾಳು
ಯಾವುದೇ ರೀತಿಯ ವೈಟ್ನರ್‌ಗಳನ್ನಾದರೂ ಸದಾ ಉಪಯೋಗಿಸುವುದಲ್ಲ. ಅಪರೂಪಕ್ಕೆ ಉಪಯೋಗಿಸುವುದಕ್ಕೆ ತೊಂದರೆಯಿಲ್ಲ. ಪದೇಪದೆ ಉಪಯೋಗಿಸುತ್ತಿದ್ದರೆ, ಹಲ್ಲುಗಳ ಮೇಲ್ಮೈ ಮಾತ್ರವಲ್ಲ ಕ್ರಮೇಣ ಎನಾಮಲ್‌ನ ರಕ್ಷಾ ಕವಚವೂ ಸವೆಯತೊಡಗುತ್ತದೆ. ಒಂದೊಮ್ಮೆ ಪದೇಪದೆ ಉಪಯೋಗಿಸುವ ಅನಿವಾರ್ಯತೆ ಇದೆಯೆಂದಾದರೆ, ಇದಕ್ಕಾಗಿ ಕಡಿಮೆ ತೀವ್ರತೆಯ ವೈಟ್ನರ್‌ಗಳನ್ನು ಆಯ್ದುಕೊಳ್ಳುವುದು ಸೂಕ್ತ.