ಇಡೀ ಧಾನ್ಯಗಳನ್ನು ತಿನ್ನಬೇಕೆಂಬ (Benefits of Consuming Whole Foods) ಪ್ರಚಾರ ಇತ್ತೀಚಿನ ದಿನಗಳಲ್ಲಿ ಜೋರಾಗಿಯೇ ಇದೆ. ಇದರ ಜೊತೆಜೊತೆಗೆ, ಸಂಸ್ಕರಿಸದೆ ಇರುವ ಅಥವಾ ಅತಿ ಕಡಿಮೆ ಸಂಸ್ಕಾರಗೊಂಡಿರುವ ಆಹಾರಗಳೇ ಶ್ರೇಷ್ಠ ಎನ್ನುವ ಮಾತುಗಳೂ ಕೇಳುತ್ತಿವೆ. ಇವು ಕೇವಲ ಇಡೀ ಧಾನ್ಯಗಳೇ ಆಗಬೇಕೆಂದಿಲ್ಲ- ಸಂಸ್ಕಾರಗೊಳ್ಳದೆ ನೈಸರ್ಗಿಕವಾಗಿಯೇ ಇರುವ ಹಣ್ಣು-ಸೊಪ್ಪು-ತರಕಾರಿ ಮುಂತಾದ ಎಲ್ಲವಕ್ಕೂ ಅನ್ವಯ. ಸಾಮಾಜಿಕ ಮಾಧ್ಯಮಗಳ ಈ ಜಗತ್ತಿನಲ್ಲಿ ಯಾವುದು ಸತ್ಯ-ಯಾವುದು ಸುಳ್ಳು ಎಂಬುದನ್ನು ಗುರುತಿಸಲು ಕಷ್ಟವಾಗುವಷ್ಟು ಮಾಹಿತಿಗಳು ಸಂಚಿಕೆಯಾಗುತ್ತವೆ. ನಮ್ಮ ಆಹಾರದ ವಿಷಯದಲ್ಲೂ ಹಾಗೆಯೆ. ಇಡೀ ಧಾನ್ಯಗಳು ತಿನ್ನಬೇಕು…ಸರಿ, ಯಾಕೆ? ಏನಿದರ ಲಾಭಗಳು?
ಸತ್ವಗಳು ಹೆಚ್ಚು
ಆಹಾರಗಳ ವಿಷಯದಲ್ಲಿ ಮಾನವನ ಹಸ್ತಕ್ಷೇಪ ಹೆಚ್ಚಿದಷ್ಟೂ ಆಹಾರದ ಗುಣಮಟ್ಟ ಕ್ಷೀಣಿಸುತ್ತದೆ. ಇಡೀ ಧಾನ್ಯಗಳನ್ನು ಒಡೆದು, ಸಿಪ್ಪೆ ಸುಲಿದು, ಪುಡಿ ಮಾಡಿ, ಜರಡಿ ಹಿಡಿದು… ಇಂಥವೆಲ್ಲ ಮಾಡಿದಷ್ಟೂ ಅದರ ಸತ್ವ ಕಡಿಮೆಯಾಗುತ್ತದೆ. ಹಾಗಾಗಿ ಆದಷ್ಟೂ ಕಡಿಮೆ ಸಂಸ್ಕಾರಗೊಂಡ ಆಹಾರ ಸೇವಿಸುವುದು ಒಳ್ಳೆಯದು. ಇಡೀ ಧಾನ್ಯಗಳಲ್ಲಿ ಪೋಷಕಸತ್ವಗಳ ಸಾಂದ್ರತೆ ಹೆಚ್ಚು.
ಪಚನಕಾರಿ
ಹೊಟ್ಟೆಯಲ್ಲಿರುವ ಬ್ಯಾಕ್ಟೀರಿಯಗಳಿಗೆ ನಾವು ಎಂಥಾ ಆಹಾರ ನೀಡುತ್ತೇವೆ ಎಂಬುದು ಮುಖ್ಯ. ಒಳ್ಳೆಯ ಆಹಾರ ನೀಡಿದಷ್ಟೂ ಹೊಟ್ಟೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯಗಳ ಪ್ರಮಾಣ ವೃದ್ಧಿಸುತ್ತದೆ. ಇಡೀ ಧಾನ್ಯಗಳು ಮತ್ತು ನಾರಿನಂಶವಿರುವ ಆಹಾರಗಳು ಹೊಟ್ಟೆಯಲ್ಲಿನ ಉತ್ತಮ ಬ್ಯಾಕ್ಟೀರಿಯಗಳ ಹೆಚ್ಚಳಕ್ಕೆ ಅಗತ್ಯವಾಗಿ ಬೇಕು. ಇದರಿಂದ ಜೀರ್ಣಾಂಗಗಳ ಸರ್ವ ಸಮಸ್ಯೆಗಳೂ ಪರಿಹಾರವಾಗುತ್ತವೆ.
ಮಾನಸಿಕ ಆರೋಗ್ಯ ಹೆಚ್ಚಳ
ನಾವು ತಿನ್ನುವ ಆಹಾರಕ್ಕೂ ನಮ್ಮ ವ್ಯಕ್ತಿತ್ವಕ್ಕೂ ಒಂದಿಲ್ಲೊಂದು ರೀತಿಯಲ್ಲಿ ಸಂಬಂಧವಿದೆ ಎನ್ನುತ್ತವೆ ಅಧ್ಯಯನಗಳು. ಅದರಲ್ಲೂ, ಸ್ವಚ್ಛ, ತಾಜಾ ಆಹಾರಗಳು, ಒಮೇಗಾ ೩ ಕೊಬ್ಬಿನಾಮ್ಲ, ನಾರು, ಖನಿಜಗಳು, ಸಂಕೀರ್ಣ ಪಿಷ್ಟಗಳೆಲ್ಲ ಹೆಚ್ಚಿರುವಂಥ ಆಹಾರಗಳು ನಮ್ಮ ನರಮಂಡಲ ಮತ್ತು ಮೆದುಳಿನ ಕ್ಷಮತೆಯನ್ನು ನಿಶ್ಚಿತವಾಗಿ ಹೆಚ್ಚಿಸಬಲ್ಲವು. ಹಾಗಾಗಿ ಇಡೀ ಧಾನ್ಯಗಳ ಜೊತೆಗೆ ಬೀಜಗಳು, ಕಾಯಿಗಳು, ತರಕಾರಿ-ಹಣ್ಣುಗಳನ್ನು ಸೇರಿಸಿಕೊಳ್ಳುವುದು ಸೂಕ್ತ.
ಮಧುಮೇಹಿಗಳಿಗೆ ಲಾಭ
ಸುಲಭವಾಗಿ ರಕ್ತ ಸೇರುವಂಥ ಆಹಾರಕ್ಕಿಂತ ನಿಧಾನಗತಿಯಲ್ಲಿ ಜೀರ್ಣವಾಗಿ ರಕ್ತ ಸೇರುವಂಥ ಆಹಾರಗಳು ಮಧುಮೇಹಿಗಳಿಗೆ ಬೇಕು. ಈ ನಿಟ್ಟಿನಲ್ಲಿ ಇಡೀ ಧಾನ್ಯಗಳು ನಿರ್ಣಾಯಕ ಕೆಲಸ ಮಾಡುತ್ತವೆ. ಇದರಲ್ಲಿರುವ ನಾರು ಮತ್ತು ಸಂಕೀರ್ಣ ಪಿಷ್ಟಗಳು ತ್ವರಿತವಾಗಿ ಕೆಲಸ ಮಾಡದೆ, ನಿಧಾನವಾಗಿ ಶಕ್ತಿಯನ್ನು ದೇಹಕ್ಕೆ ನೀಡುತ್ತವೆ. ಈ ಮೂಲಕ ಇನ್‌ಸುಲಿನ್ ಪ್ರತಿರೋಧಕತೆ ತಲೆದೋರದಂತೆ ಮಾಡುವಲ್ಲಿ ಸಹಾಯಹಸ್ತ ಚಾಚುತ್ತವೆ.
ತೂಕ ನಿರ್ವಹಣೆ
ಇಡೀ ಧಾನ್ಯಗಳಲ್ಲಿ ಸತ್ವ ಹೆಚ್ಚಾದರೂ ಕ್ಯಾಲರಿ ಕಡಿಮೆ. ಜೊತೆಗೆ ಆಗಾಗ ಹಸಿವಾಗುವುದನ್ನು ನಿಯಂತ್ರಿಸಿ, ಪದೇಪದೆತಿನ್ನುವ ಅಗತ್ಯವನ್ನು ಮುಂದೂಡುತ್ತವೆ. ಇದರಲ್ಲಿರುವ ನಾರಿನಂಶವು, ಜೀರ್ಣಾಂಗಗಳನ್ನು ಸುಸ್ಥಿತಿಯಲ್ಲಿ ಇರಿಸಿ ದೇಹದ ಚಯಾಪಚಯವನ್ನು ಚುರುಕು ಮಾಡುತ್ತದೆ. ಇದರಿಂದ ತೂಕ ಇಳಿಸುವ ಉದ್ದೇಶವಿದ್ದವರಿಗೆ ಅನುಕೂಲ.
ಉರಿಯೂತ ಶಮನ
ಸಂಸ್ಕಾರಗೊಳ್ಳದ ಆಹಾರಗಳಿಂದ ಉರಿಯೂತ ಶಮನ ಮಾಡಿಕೊಳ್ಳಬಹುದು ಎನ್ನುತ್ತವೆ ಅಧ್ಯಯನಗಳು.ಉರಿಯೂತದಿಂದಾಗುವ ಸಮಸ್ಯೆಗಳು ಅಷ್ಟಿಷ್ಟೇ ಅಲ್ಲ, ಮಧುಮೇಹ, ಹೃದಯದ ಸಮಸ್ಯೆಗಳು, ಕೀಲುನೋವು, ಕ್ಯಾನ್ಸರ್‌ನಂಥ ಭಯಾನಕ ಸಮಸ್ಯೆಗಳೆಲ್ಲ ಅಮರಿಕೊಳ್ಳುತ್ತವೆ. ಹಾಗಾಗಿ ಇಡೀ ಧಾನ್ಯಗಳು, ಬೀಜಗಳು, ಸಂಸ್ಕಾರ ಮುಕ್ತ ಹಣ್ಣು-ತರಕಾರಿಗಳು ಮುಂತಾದವುಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹಕ್ಕೆ ಅಗತ್ಯವಾಗಿ ಬೇಕು.
ನಗುವ ಹೃದಯ
ಉತ್ಕರ್ಷಣ ನಿರೋಧಕಗಳು ಮತ್ತು ಒಮೇಗಾ ೩ ಕೊಬ್ಬಿನಾಮ್ಲವಿರುವ ಆಹಾರಗಳಿಂದ ಹೃದಯವನ್ನು ಕ್ಷೇಮವಾಗಿಇರಿಸಿಕೊಳ್ಳಬಹುದು. ದೇಹದಲ್ಲಿ ಕೊಬ್ಬು ಜಮೆಯಾಗದಂತೆ, ರಕ್ತದೊತ್ತಡ ಏರಿಳಿತವಾಗದಂತೆ ನೋಡಿಕೊಳ್ಳುವಂಥವು ಇಡೀ ಆಹಾರಗಳು. ಇದಕ್ಕಾಗಿ ಸಿರಿಧಾನ್ಯಗಳು, ಇಡೀ ಧಾನ್ಯಗಳು, ಬೀಜಗಳು, ಕೊಬ್ಬಿನ ಮೀನುಗಳು, ಬೆಣ್ಣೆಹಣ್ಣು ಮುಂತಾದವು ಹೃದಯದ ಯೋಗಕ್ಷೇಮವನ್ನು ನೋಡಿಕೊಳ್ಳುತ್ತವೆ.
ಇದನ್ನೂ ಓದಿ: Winter Health Tips: ಚಳಿಗಾಲದಲ್ಲಿ ದೇಹದಂತೆಯೇ ಮೆದುಳೂ ಬೆಚ್ಚಗಿರಲಿ