ಚಳಿಗಾಲ ಬಂತೆಂದರೆ ಸಾಕು, ಮಾರುಕಟ್ಟೆ ತುಂಬ ಹಸಿರು ತರಕಾರಿಗಳು ತುಂಬುತ್ತವೆ. ಈಗಷ್ಟೇ ಗದ್ದೆಯಿಂದ ಕಿತ್ತು ತಂದಿದ್ದೇ ಎಂಬಷ್ಟು ತಾಜಾ ತಾಜಾ ಸೊಪ್ಪುಗಳು, ತರಕಾರಿಗಳು ಗ್ರಾಹಕರನ್ನು ಸೆಳೆಯುತ್ತವೆ. ಇವುಗಳಲ್ಲಿ ಪ್ರಮುಖವಾಗಿ ನಿಲ್ಲುವುದು ಕ್ಯಾರೆಟ್. ಚಳಿಗಾಲದಲ್ಲಿ ಯಥೇಚ್ಛವಾಗಿ ಸಿಗುವ ತಾಜಾ ಕೆಂಪನೆಯ, ಕೇಸರಿಯ ಕ್ಯಾರೆಟ್ಟುಗಳು ಹಸಿಯಾಗಿಯೂ, ಬೇಯಿಸಿಯೂ ನಾನಾ ಬಗೆಗಳಲ್ಲಿ ಬಳಸಲು ಯೋಗ್ಯವಾಗುವ ತರಕಾರಿ. ಇನ್ನು ಪೋಷಕಾಂಶಗಳ ವಿಚಾರಕ್ಕೆ ಬಂದರೂ ಸಮೃದ್ಧ ತರಕಾರಿ ಇದು. ಸಲಾಡ್‌ಗಳು, ಸಿಹಿತಿಂಡಿಗಳಲ್ಲಿಯೂ ಬಳಸಬಹುದಾದ ಕ್ಯಾರೆಟ್ಟನ್ನು ಕೆಜಿಗಟ್ಟಲೆ ಮನೆಗೆ ತೆಗೆದುಕೊಂಡು ಬಂದರೂ ಬಹಳ ಸಾರಿ ಇದನ್ನು ನಿತ್ಯವೂ ಹೇಗೆ ವೆರೈಟಿಯಾಗಿ ಬಳಸುವುದು ಎಂಬ ಸಂದಿಗ್ಧತೆಯೂ ಆಗುವುದುಂಟು. ಹಾಗಾದರೆ, ಅಂಥವರಿಗೆ ವೆರೈಟಿ (Benefits of Carrots) ಐಡಿಯಾಗಳು ಇಲ್ಲಿವೆ!
ಕ್ಯಾರೆಟ್ ಫ್ರೈಸ್
ಆಲೂಗಡ್ಡೆಯ ಫ್ರೆಂಚ್ ಫ್ರೈಸ್ ಗೊತ್ತು, ಆದರಿದೇನಿದು ಕ್ಯಾರೆಟ್ ಫ್ರೈಸ್ ಅಂತ ಅನಿಸಿದರೆ, ಒಮ್ಮೆಯಾದರೂ ಟ್ರೈ ಮಾಡಿ ನೀವು ನೋಡಲೇಬೇಕು. ಚಳಿಗಾಲದ ಸಂಜೆಗಳಲ್ಲಿ ಬಿಸಿಬಿಸಿ ಚಹಾ ಹೀರುತ್ತಾ ಏನಾದರೂ ಗರಮಾಗರಂ ತಿನ್ನಬೇಕೆಂದು ಅನಿಸಿದರೆ ಇದನ್ನು ಟ್ರೈ ಮಾಡಬಹುದು. ಇದನ್ನು ಹೇಗೆ ಮಾಡುವುದಪ್ಪಾ ಎಂದು ತಲೆಕೆಡಿಸುವ ಅಗತ್ಯವಿಲ್ಲ. ಕ್ಯಾರೆಟ್ ಸಿಪ್ಪೆ ತೆಗೆದು ಉದ್ದುದ್ದಕ್ಕೆ ಫ್ರೆಂಚ್ ಫ್ರೈಸ್‌ಗೆ ಕಟ್ ಮಾಡುವಂತೆ ಕತ್ತರಿಸಿಟ್ಟು ಅದಕ್ಕೆ ಆಲಿವ್ ಎಣ್ಣೆಯನ್ನು ಸವರಿಡಬೇಕು. ಸ್ವಲ್ಪ ಮರಗೆಣಸಿನ ಪುಡಿ, ಬೆಳ್ಳುಳ್ಳಿ ಹಾಗೂ ಈರುಳ್ಳಿ ಪುಡಿ, ಮೆಣಸಿನ ಪುಡಿ, ರುಚಿಗೆ ಉಪ್ಪು, ಸ್ವಲೊ ಮೊಸರು, ಅರ್ಧ ನಿಂಬೆಹಣ್ಣನ್ನು ಹಿಂಡಿ ಮಿಕ್ಸ್ ಮಾಡಿ. ಇದರಲ್ಲಿ ಕ್ಯಾರೆಟ್ಟನ್ನು ಹೊರಳಿಸಿ ತೆಗೆದು 400 ಡಿಗ್ರಿ ಫ್ಯಾರೆನ್‌ಹೀಟ್‌ನಲ್ಲಿ ಸುಮಾರು 15 ನಿಮಿಷ ಬೇಕ್ ಮಾಡಿ, ಮತ್ತೆ ತಿರುಗಿಸಿ, 10 ನಿಮಿಷ ಬೇಕ್ ಮಾಡಿ ಸಾಸ್ ಜೊತೆ ತಿಂದರೆ ಬಲು ರುಚಿ. ಕ್ಯಾರೆಟ್ಟಿನಲ್ಲೂ ಇಂಥದ್ದು ಸಾಧ್ಯವಾ ಅನಿಸದೆ ಇರದು.
ಕ್ಯಾರೆಟ್ ಹಲ್ವಾ
ಚಳಿಗಾಲದಲ್ಲಿ ಕ್ಯಾರೆಟ್ ಹಲ್ವಾ ಒಮ್ಮೆಯಾದರೂ ಮಾಡದಿದ್ದರೆ ಅದು ಚಳಿಗಾಲ ಅಂದುಕೊಳ್ಳುವುದಾದರೂ ಹೇಗೆ. ಹಾಗಾಗಿ, ಚಳಿಗಾಲವೂ ಕ್ಯಾರೆಟ್ ಹಲ್ವಾವೂ ಚಡ್ಡಿ ದೋಸ್ತುಗಳ ಹಾಗೆಯೇ ಕೈಕೈ ಹಿಡಿದು ಸಾಗಲು ನಾವು ಬಿಡಬೇಕು. ಬಿಸಿ ಬಿಸಿ ಹಲ್ವಾ ತಿನ್ನಬೇಕು. ಬಿಸಿ ಹಲ್ವಾದ ಮೇಲೆ ಕರಗುತ್ತಿರುವ ಐಸ್‌ಕ್ರೀಂ ಇಟ್ಟರಂತೂ ಮೈಬಿಸಿಯೇರದೆ ಇರದು! ಅಂದಹಾಗೆ, ಹಲ್ವಾ ಮಾಡೋದು ಹೇಳಿಕೊಡಬೇಕಾಗೇನೂ ಇಲ್ಲ ತಾನೇ!
ಕ್ಯಾರೆಟ್ ಸೂಪ್
ನಾವು ಡಯಟ್ ಪ್ರಿಯರಪ್ಪಾ, ನಮಗೆ ಕ್ಯಾರೆಟ್‌ನ ಫ್ರೈಗಳ ಸಹವಾಸವೂ ಬೇಡ, ಸಿಹಿಯಾಗಿರುವ ಹಲ್ವಾ ಸಹವಾಸವೂ ಬೇಡ, ನಮಗೇನಿದ್ದರೂ ಕೇವಲ ಆರೋಗ್ಯಕರವಾದ್ದು, ಕ್ಯಾಲರಿ ರಹಿಸತವೇನಾದರೂ ಇದ್ದರೆ ಹೇಳ್ರಪ್ಪಾ ಅನ್ನೋವ್ರಿಗೆ ಬೆಸ್ಟ್ ಕ್ಯಾರೆಟ್ ಸೂಪ್. ದಿನವೂ ಸಂಜೆಯ ಹೊತ್ತು ಬಿಸಿಬಿಸಿ ಕ್ಯಾರೆಟ್ ಸೂಪ್ ಮಾಡಿ ಹೀರಿದರೆ, ರುಚಿಕರವಾಗಿಯೂ, ತೂಕವೂ ನಿಮ್ಮ ಹಿಡಿತದಲ್ಲಿಯೂ ಇರುವುದು ಖಚಿತ.
ಕ್ಯಾರೆಟ್ ಉಪ್ಪಿನಕಾಯಿ
ಕ್ಯಾರೆಟ್ ಧಾರಾಳವಾಗಿ ಸಿಗುವ ಕಾಲದಲ್ಲಿ ಕೆಜಿಗಟ್ಟಲೆ ಕ್ಯಾರೆಟ್ ತಂದು, ಅಯ್ಯೋ ಈಗೇನು ಮಾಡುವುದು ಅಂದುಕೊಳ್ಳುವ ಮಂದಿ ಉಪ್ಪಿನಕಾಯಿ ಹಾಕಿಡುವುದು ಬೆಸ್ಟ್ ಐಡಿಯಾ. ಕೆಲಕಾಲ ಕೆಡದೆ ಇರುವ ಇದು ದಿನವೂ ಒಂದೇ ಬಗೆಯ ಉಪ್ಪಿನಕಾಯಿ ತಿಂದು ಬೋರ್ ಬಂದವರಿಗೆ ಊಟದ ಜೊತೆ ತಿನ್ನಲೂ ಹೊಸ ಬದಲಾವಣೆ ಸಿಗುತ್ತದೆ.
ಕ್ಯಾರೆಟ್ ಪುಲಾವ್
ತುರಿದ ಕ್ಯಾರೆಟ್ ಹಾಕಿ ಕ್ಯಾರೆಟ್ ಪುಲಾವ್ ಮಾಡಿ ನೋಡಿದ್ದೀರಾ? ಮಾಡಿಲ್ಲದಿದ್ದರೆ, ಕ್ಯಾರೆಟ್ ಸೀಸನ್ನಿನ ಚಳಿಗಾಲದಲ್ಲೇ ಒಂದು ಟ್ರೈ ಮಾಡಿ ನೋಡಿ. ಒಂದು ಸಾದಾ ದಾಲ್ ಮಾಡಿಟ್ಟರೆ, ಕ್ಯಾರೆಟ್ ಪುಲಾವ್ ಮಧ್ಯಾಹ್ನದೂಟಕ್ಕೆ ದಾಲ್ ಜೊತೆ ತಿನ್ನಲು ಬಹಳ ರುಚಿ.
ಇದನ್ನೂ ಓದಿ: Bone Health: ಮೂಳೆಗಳನ್ನು ದುರ್ಬಲಗೊಳಿಸುವ ಈ ಅಭ್ಯಾಸ ಬಿಡಿ!