ಚಳಿಗಾಲದಲ್ಲಿ (winter) ತೂಕ ಇಳಿಸುವುದು (weight loss), ಫಿಟ್ ಆಗಿರುವುದು (fitness goal) ಅಷ್ಟು ಸುಲಭದ ಕೆಲಸವೇನಲ್ಲ. ಚಳಿಯಲ್ಲಿ ಮುದುರಿ ಮಲಗಿ, ಬೆಳಗ್ಗೆ ಬೇಗನೆ ಏಳುವುದು ಎಂದರೆ ಕೊಂಚ ಕಷ್ಟವೇ. ಬೆಚ್ಚನೆ ಹೊದಿಕೆಯೆಡೆಯಿಂದ ದೇಹವನ್ನು ಹೊರಗೆ ತೆಗೆದು ಜಡತ್ವವನ್ನು ಬಿಟ್ಟು ಉದಾಸೀನತೆಯ ವಿರುದ್ಧ ಹೋರಾಡಿ ಗೆದ್ದು ತಣ್ಣಗಿನ ಹವೆಯಲ್ಲಿ ಹೊರಗೆ ಹೋಗಿ ವಾಕ್ ಮಾಡುವುದು ಅಥವಾ ವ್ಯಾಯಾಮ ಮಾಡುವುದು ಎಂದರೆ ಅದೊಂದು ಸವಾಲೇ ಸರಿ. ಇಂಥ ಸಂದರ್ಭ ತೂಕ ಇಳಿಸಬೇಕೆನ್ನುವ ಮಂದಿಗೆ ಖಂಡಿತ ಈ ಬಗ್ಗೆ ಗಂಭೀರ ಪ್ರಯತ್ನ ಬೇಕೇ ಬೇಕಾಗುತ್ತದೆ. ಬಿಸಿಬಿಸಿಯಾಗಿ ಹೊರಗೆ ಹೊಟೇಲಿನಲ್ಲಿ ತಿನ್ನುವುದು, ಮನೆಯಲ್ಲೂ ಸಂಜೆಯ ಹೊತ್ತು ಬಿಸಿ ಬಿಸಿ ಪಕೋಡ, ಬಜ್ಜಿ ಬೋಂಡಾಗಳನ್ನು ತಿನ್ನುವುದು ಚಳಿಗಾಲದ ಅತ್ಯಂತ ಖುಷಿಯ ಕ್ಷಣಗಳಲ್ಲೊಂದು. ಹೀಗಿರುವಾಗ ಅದನ್ನು ಬಿಟ್ಟು ಊಟ ತಿಂಡಿಯ ಬಗ್ಗೆ ಸಿದ್ಧ ಮಾದರಿಯನ್ನು ಅನುಸರಿಸುತ್ತಿರುವುದು ಎಂದರೆ ಅದಕ್ಕಿಂತ ಕಷ್ಟ ಇನ್ನೊಂದಿಲ್ಲ. ಹಾಗಾದರೆ ಬನ್ನಿ, ಚಳಿಗಾಲದಲ್ಲಿ (Winter tips) ಸುಲಭವಾಗಿ ಆರೋಗ್ಯಕರ ಶೈಲಿಯಲ್ಲಿ ತೂಕದ ಕಾಳಜಿಯನ್ನು (Winter weight loss tips, weight loss guide) ಹೇಗೆ ವಹಿಸಬಹುದು ಎಂಬುದನ್ನು ನೋಡೋಣ.
1. ಚಳಿಗಾಲ ಬಂದ ತಕ್ಷಣ ಸೊಪ್ಪುಗಳೆಲ್ಲ ಭರಪೂರ ಮಾರುಕಟ್ಟೆಯಲ್ಲಿ ಸಿಗಲು ಆರಂಭಿಸುತ್ತವೆ. ಬಸಳೆ, ಪಾಲಕ್, ಹರಿವೆ, ಮೆಂತ್ಯ ಸೊಪ್ಪು, ಪುದಿನ, ಸಬ್ಬಸ್ಸಿಗೆ, ಹೀಗೆ ಹಲವು ಬಗೆಯ ಸೊಪ್ಪುಗಳು ತಾಜಾ ಆಗಿ ದೊರಕುತ್ತವೆ. ಮಾರುಕಟ್ಟೆಯಲ್ಲಿ ಚಳಿಗಾಲದಲ್ಲಿ ತಾಜಾ ಆಗಿ ದೊರಕುವ ಹಣ್ಣು, ತರಕಾರಿ ಸೊಪ್ಪುಗಳನ್ನು ಆಹಾರದಲ್ಲಿ ಯಥೇಚ್ಛವಾಗಿ ಬಳಸಿ.
2. ಚಳಿಗಾಲದಲ್ಲಿ ಖಾರವಾದ ಅಡುಗೆ ಉಣ್ಣಿ. ಈ ಸಮಯದಲ್ಲಿ ದೇಹಕ್ಕೆ ಉಷ್ಣತೆ ಹೆಚ್ಚು ಮಾಡುವ ಆಹಾರಗಳು ಉತ್ತಮ. ಮೆಣಸು ಹಾಕಿ ಮಾಡಿದ ಅಡುಗೆಗಳು ಈ ಸಮಯದಲ್ಲಿ ಸ್ವಲ್ಪ ಹೆಚ್ಚು ಖಾರವಿದ್ದರೂ ಏನೂ ಆಗದು. ಉಷ್ಣತೆ ದೇಹದಲ್ಲಿದ್ದರೆ, ತೂಕ ಇಳಿಸಲು ನೆರವಾಗುತ್ತದೆ.
3. ಚಳಿಗಾಲದಲ್ಲಿ ಮಾರುಕಟ್ಟೆಗೆ ಬರುವ ಹಣ್ಣುಗಳನ್ನು ತಿನ್ನಿ. ಕಿತ್ತಳೆ, ಸೇಬು ಸೇರಿದಂತೆ ಚಳಿಗಾಲದಲ್ಲಿ ಲಭ್ಯವಿರುವ ತಾಜಾ ಹಣ್ಣುಗಳು ಒಳ್ಳೆಯದು. ತೂಕ ಇಳಿಸಲು, ಹಣ್ಣುಗಳ ರಸ ಹಿಂಡಿ ಕುಡಿಯುವ ಬದಲು, ಹಣ್ಣುಗಳನ್ನು ಹಾಗೆಯೇ ತಿನ್ನಿ. ಹಣ್ಣಿನಲ್ಲಿರುವ ನಾರಿನಂಶ ತೂಕ ಇಳಿಕೆಗೆ ನೆರವಾಗುತ್ತದೆ.
4. ಒಂದೇ ಜಾಗದಲ್ಲಿ ಬೆಚ್ಚಗೆ ಕೂರುವುದು ಚಳಿಗಾಲದಲ್ಲಿ ಹಿತವಾಗಿ ಅನಿಸಿದರೂ, ಒಂದೇ ಜಾಗದಲ್ಲಿ ಕೂತಿರಬೇಡಿ. ಆಗಾಗ ಆದಷ್ಟೂ ಓಡಾಡುತ್ತಿರಿ. ಸಮಯ ಮಾಡಿಕೊಂಡು ನಿತ್ಯವೂ ಓಡಿ, ಜಾಗ್ ಮಾಡಿ. ಕಡೇ ಪಕ್ಷ ವಾಕಿಂಗ್‌ಗೆ ಪ್ರತಿದಿನವೂ ಹೋಗಿ ಬನ್ನಿ. ಮನೆಯಲ್ಲೇ ವ್ಯಾಯಾಮಗಳನ್ನಾದರೂ ಮಾಡಿ. ಯೋಗ ಮಾಡಿ. ನಿತ್ಯವೂ ಶಿಸ್ತಾಗಿ ಮಾಡುವುದು ಬಹಳ ಮುಖ್ಯ.
5. ಚಳಿಗಾಲದಲ್ಲಿ ಕೊಬ್ಬಿನ ಅಂಶವಿರುವ ಆಹಾರ ಸೇವನೆ ಮಾಡಬೇಡಿ. ಯಾಕೆಂದರೆ, ದೇಹಕ್ಕೆ ಚಳಿಗಾಲದಲ್ಲಿ ಕೊಬ್ಬು ಕರಗಿಸುವುದು ಬಹಳ ಕಷ್ಟ. ಒಳ್ಳೆಯ ಕೊಬ್ಬು ದೇಹಕ್ಕೆ ಎಷ್ಟು ಬೇಕೋ ಅಷ್ಟಿರಲಿ. ಆದರೆ, ಜಂಕ್ ಇತ್ಯಾದಿಗಳನ್ನು ಅತಿಯಾಗಿ ತಿನ್ನಬೇಡಿ.
6. ಸಕ್ಕರೆಯನ್ನು ಕಡಿಮೆ ಮಾಡಿ. ಸಕ್ಕರೆಯನ್ನು ಬಿಟ್ಟರೆ ದೇಹದ ತೂಕ ಇಳಿಕೆಯಲ್ಲಿ ಸಾಕಷ್ಟು ಪ್ರಗತಿ ಕಾಣುತ್ತದೆ. ಹಾಗಾಗಿ ನೈಸರ್ಗಿಕವಾಗಿ ಆಹಾರದ ಮೂಲಕ ಹೋಗುವ ಸಕ್ಕರೆಯ ಅಂಶ ಬಿಟ್ಟರೆ, ಪ್ರತ್ಯೇಕವಾಗಿ ಸಕ್ಕರೆ ಸೇರಿಸಿ ತಿನ್ನುವುದನ್ನು ಬಿಡಿ.
7. ತೂಕ ಇಳಿಸಬೇಕೆನ್ನುವ ಗಡಿಬಿಡಿಯಲ್ಲಿ, ಮಧ್ಯಾಹ್ನದೂಟವನ್ನೇ ಬಿಡುವುದು ಅಥವಾ ಬೆಳಗ್ಗಿನ ಉಪಹಾರ, ರಾತ್ರಿಯೂಟ ಮಾಡದಿರುವುದು ಇತ್ಯಾದಿ ಮಾಡಬೇಡಿ. ಇದರಿಂದ ಅಡ್ಡ ಪರಿಣಾಮಗಳು ಹೆಚ್ಚಾಗುತ್ತವೆ.
8. ಬೆಳಗ್ಗೆ ಎದ್ದ ಕೂಡಲೇ ಬಿಸಿ ನೀರು ಕುಡಿಯುವುದನ್ನು ರೂಢಿಸಿಕೊಳ್ಳಿ. ಅತಿಯಾದ ಬಿಸಿ ಅಲ್ಲ. ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ದೇಹ ಜೀರ್ಣಕ್ರಿಯೆಯನ್ನು ಚುರುಕಾಗಿಸುತ್ತದೆ. ಬಿಸಿ ನೀರಿಗೆ ಕೊಂಚ ನಿಂಬೆರಸ ಹಾಗೂ ಜೇನುತುಪ್ಪ ಸೇರಿಸಿಯೂ ಕುಡಿಯಬಹುದು.
ಇದನ್ನೂ ಓದಿ: Winter Tips |ಚಳಿಗಾಲದಲ್ಲಿ ಮೊಸರು ಮಾಡುವುದು ಕಷ್ಟವೇ? ಇಲ್ಲಿವೆ ಸಪ್ತಸೂತ್ರಗಳು!